ದಂಡಂ ದಶಗುಣಂ

 ದಂಡಂ ದಶಗುಣಂ





ಥಂಡಾಪಾನಿ ಎಂದು ಉತ್ತರ ಭಾರತೀಯರಿಂದ ಕರೆಸಿಕೊಳ್ಳುವ ದಂಡಪಾಣಿಗಳು ನಿಮಗೂ ಗೊತ್ತಿರಬಹುದು. ದಂಡ ಎಂದರೆ ಕೋಲು. ಪಾಣಿ ಎಂದರೆ ಕೈ ಎಂದು ಅರ್ಥ.   ಪಾಣಿಗ್ರಹಣ ಎಂದರೆ ಕೈ ಹಿಡಿಯುವುದು. ಮದುವೆಯ ದಿನ ಗಂಡು ಹೆಣ್ಣಿನ ಕೈ ಹಿಡಿದು ಸಪ್ತಪದಿ ತುಳಿಯುವ ಪದ್ಧತಿ ಇರುವುದರಿಂದ ಮದುವೆಗೆ ಪಾಣಿಗ್ರಹಣ ಎನ್ನುವ ಹೆಸರು ಬಂದಿದೆ. ಕೆಲವರು ಇದನ್ನು ಪ್ರಾಣಿಗ್ರಹಣ ಎಂದು ತಪ್ಪಾಗಿ ಬರೆಯುತ್ತಾರೆ. ಮದುವೆಯ ಗಂಡು ಅವರಿಗೆ ಪಾಪದ ಪ್ರಾಣಿಯಂತೆ ಮತ್ತು ಕಾಶಿಯಾತ್ರೆಗೆ ಹೊರಟ ಈ ಬಡಪ್ರಾಣಿಯನ್ನು ಹಿಡಿದು ತರುವ ಬೇಟೆಗಾರನಂತೆ ಮಾವನು ತೋರಿದ ಕಾರಣ ಕೆಲವರು ಈ ಪದವನ್ನು ಅಪಾರ್ಥ ಮಾಡಿಕೊಂಡಿರುವುದು ಸಾಧ್ಯ.  ಕಾಶಿಯಾತ್ರೆಯಿಂದ ಕರೆತಂದ ವರನನ್ನು ಸುಧಾರಿಸಿಕೋ ಎಂದು ಕುರ್ಚಿಯ ಮೇಲೆ ಕೂಡಿಸಿ, ಛತ್ರಿ ಹಿಡಿದು, ಗಾಳಿ ಬೀಸಿ ಕೈಗೆ  ಥಂಡಾಪಾನಿಯ ಲೋಟವನ್ನು ಕೊಡುವ ಪದ್ಧತಿ ಇರುವುದರಿಂದ ಉತ್ತರಭಾರತೀಯರು ಹೆಸರನ್ನು  ಅಪಾರ್ಥ ಮಾಡಿಕೊಂಡಿರುವ ಸಾಧ್ಯತೆಯೂ ಇದೆ.


ದಂಡ ಎಂಬ ಪದವು ಹಿಂದಿಯ ಡಂಡಾ ಎಂಬ ಪದಕ್ಕೆ ಮೂಲ.  ನಮ್ಮಲ್ಲಿ ಕೋಲನ್ನು ಹಲವು ರೀತಿಗಳಲ್ಲಿ ಬಳಸುತ್ತಾರೆ. ನಡೆಯಲು ಆಧಾರಕ್ಕಾಗಿ ಬಳಸುವ ಕೋಲು ನಡೆಗೋಲು. ಮೊಸರು ಕಡೆಯಲು ಬಳಸುವ ಕೋಲು ಕಡೆಗೋಲು.  ಮೇಷ್ಟ್ರು ಹೊಡೆಯಲು ಬಳಸುವ ಕೋಲಿಗೆ ಹೊಡೆಗೋಲು ಎಂಬ ಪದವನ್ನು ಯಾರೂ ಬಳಸಿದ್ದು ಕಾಣೆ. ಈಗ ಮೇಷ್ಟ್ರುಗಳು ಹೊಡೆಯವ ಕೆಲಸವನ್ನು ಬಿಟ್ಟಿರುವ ಕಾರಣ ಹೊಡೆಗೋಲು ಕೂಡಾ ಮೂಲೆ ಸೇರಿದೆ.  ಕನ್ನಡದಲ್ಲಿ ದಂಡ ಹೋಗಿ ಅದು ಹೇಗೆ ದೊಣ್ಣೆ ಆಯಿತೋ ನಾ ಕಾಣೆ.  ಹೊಳೆ ದಾಟಲು ದೊಣ್ಣೆ ನಾಯಕನ ಅಪ್ಪಣೆ ಬೇಕೋ ಬೇಡವೋ ಎಂಬುದು ಹಿಂದೊಮ್ಮೆ ಚರ್ಚೆಯ ವಿಷಯ ಆಗಿತ್ತು. ಹೊಳೆಯ ತೀರದಲ್ಲಿ ದೊಣ್ಣೆ ಹಿಡಿದು ಓಡಾಡುತ್ತಿದ್ದ ಒಬ್ಬನು ನಾಯಕನಂತೆ ಕೆಲವರ ಕಣ್ಣಿಗೆ ಕಂಡಿರಬಹುದು. ಹೊಳೆ ದಾಟುವ ಮುಂಚೆ ಈತನ ಅಪ್ಪಣೆ ಬೇಕೋ ಏನೋ ಎಂಬ ಅನುಮಾನ ಕಾಡಿರಬಹುದು. ನಾವು ಹಾಗೇ ಸ್ವಾಮೀ ಇರೋದು. ಎಲ್ಲಾದರೂ ಎತ್ತು ಕಂಡರೆ ಮುಂದೆ ಹೋಗಿ ಬಾ ನನ್ನನ್ನು ತಿವಿ ಎಂದು ನಿಲ್ಲುವವರು. ತಿವಿಯುವ ಉದ್ದೇಶ ಇಲ್ಲದಿದ್ದರೂ ಬಸವನಿಗೆ ಹೊಸ ಐಡಿಯಾ ದಯಪಾಲಿಸುವವರು. ಹೊಳೆಯ ತೀರದ ನಾಯಕನಿಗೆ ತನ್ನ ಪಾಣಿಯಲ್ಲಿರುವ ದಂಡಕ್ಕೆ ಹೆದರುವ ಜನರನ್ನು ನೋಡಿ ಅದನ್ನು ಅತ್ತಿಂದಿತ್ತ ಬೀಸುತ್ತಾ ಜನರಿಗೆ ಅಪ್ಪಣೆ ನೀಡುತ್ತಾ ಅವರಿಂದ ಹೊಳೆ ದಾಟಲು ಫೀ ವಸೂಲು ಮಾಡಿರಬಹುದು. ಬೆಂಗಳೂರಲ್ಲಿ ಕೆಲವು ಸಲ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುವಾಗ ಇಂಥ ದಂಡನಾಯಕರು ಹಠಾತ್ ಪ್ರತ್ಯಕ್ಷರಾಗಿ ಪಾರ್ಕಿಂಗ್ ಫೀ ಎಂಬ ದಂಡವನ್ನು ಹೇರುವ ಸಂದರ್ಭ ನಿಮಗೂ ಎರುರಾಗಿರಬಹುದು.  ಅಯ್ಯೋ ಮಾತು ಎಲ್ಲಿಗೋ ಹೋಯಿತು. ದಂಡದ ಹತ್ತು ಉಪಯೋಗಗಳನ್ನು ಕುರಿತಲ್ಲವೇ ನಾನು ಹೇಳುತ್ತಿದ್ದುದು? ಕೋಲಾಟ ಎಂಬ ಆಟವೂ ನಮ್ಮಲ್ಲಿ ಇತ್ತು. ಕೋಲು ಬಣ್ಣದ ಕೋಲು, ಕೋಲು ಚಿನ್ನದ ಕೋಲು ಎಂದೆಲ್ಲಾ ಹಾಡುತ್ತಾ ಒಂದು ಸಾಲಿನಲ್ಲಿ ಗಂಡುಮಕ್ಕಳು ಮತ್ತು ಇನ್ನೊಂದು ಸಾಲಿನಲ್ಲಿ ಹೆಣ್ಣುಮಕ್ಕಳು ಕೈಯಲ್ಲಿ ಬಣ್ಣದ ಕಾಲುಗಳನ್ನು ಹಿಡಿದು ನರ್ತನ ಮಾಡುವುದಕ್ಕೆ ಕೋಲಾಟ ಎನ್ನುತ್ತಿದ್ದರು. ಹೇಗೆ ಅಮೆರಿಕಾ ದೇಶದಲ್ಲಿ ಸ್ಕ್ವೇರ್ ಡ್ಯಾನ್ಸಿಂಗ್ ಅಥವಾ ನಾಲ್ಕು ರಸ್ತೆಗಳು ಕೂಡುವ ಚೌಕದಲ್ಲಿ ಹೆಣ್ಣು ಗಂಡುಗಳು ನರ್ತಿಸುತ್ತಾ ಪರಸ್ಪರ ಪ್ರೀತಿಸಿ ಮದುವೆಗೆ ಸಿದ್ಧರಾಗುತ್ತಿದ್ದರೋ ಥೇಟ್ ಅದೇ ರೀತಿಯಲ್ಲಿ ಇದ್ದ ಡೇಟಿಂಗ್ ಸಂಪ್ರದಾಯವೇ ಕೋಲಾಟ.  ಬಹುಶಃ ಕೆಲವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೋಲುಗಳನ್ನು ತಮ್ಮ ಜೊತೆಗಾರರ ಮೇಲೆ ಹೊಡೆಗೋಲಿನಂತೆ ಪ್ರಯೋಗಿಸಿ ಈ ಆಟದ ಅಂದವನ್ನು ಕೆಡಿಸಿದರು ಎಂದು ನನ್ನ. ಊಹೆ. ಹೀಗಾಗಿ ಈಗ ಈ ಬಣ್ಣದ ಕೋಲುಗಳು ಅಟ್ಟ ಸೇರಿ ವರ್ಷಕ್ಕೆ ಒಮ್ಮೆ ದಸರಾ ಹಬ್ಬದಲ್ಲಿ ಕೆಳಗಿಳಿದು ಪಟ್ಟದ ಗೊಂಬೆಗಳ ಅಕ್ಕಪಕ್ಕ ಹತ್ತು ದಿನ ವಿರಾಜಿಸಿ ಮತ್ತೆ ಅಟ್ಟ ಏರುತ್ತವೆ. ಶ್ರೀಕೃಷ್ಣನು ಸ್ಥಾಪಿಸಿದ ದ್ವಾರಕಾ ನಗರ ಇರುವ ಗುಜರಾತ್ ರಾಜ್ಯದಲ್ಲಿ ಮಾತ್ರ ದಂಡಗಳನ್ನು ಹಿಡಿದು ಆಡುವ ದಾಂಡಿಯಾ ನೃತ್ಯ ಇನ್ನೂ ಪ್ರಸಿದ್ಧವಾಗಿದೆ.  ಈಗ ಈ ದಾಂಡಿಯಾ ಕೂಡಾ ಡೇಟಿಂಗ್ ಸಾಧನವಾಗಿ ದೇಶ ವಿದೇಶಗಳಿಗೆ ಹರಡಿದೆ.  ಪುರಂದರದಾಸರು ದಂಡಿಗೆ ಬೆತ್ತ ಹಿಡಿಸಿದಳಯ್ಯ ಎಂದಾಗ ಅವರೂ ಡೇಟಿಂಗ್ ಮೂಲಕ ಮದುವೆ ಆಗಿದ್ದರ ಸುಳಿವು ಸಿಕ್ಕುತ್ತದೆ.  ಮೊದಲು ಅವರಿಗೆ ಮದುವೆ ಕುರಿತು ಸ್ವಲ್ಪ ಅನುಮಾನ ಇದ್ದರೂ ಕೊನೆಗೆ ಆದದ್ದೆಲ್ಲಾ ಒಳಿತೇ ಆಯಿತು ಎಂಬ ತೀರ್ಮಾನಕ್ಕೆ ಬಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.


ತಲೆದಂಡ ಎಂಬ ಪದವೂ ಕನ್ನಡದಲ್ಲಿ ಇದೆ. ಇದರ ಅರ್ಥ ತಲೆಗೆ ಹೊಡೆಯುವ ದಂಡ ಎಂದಲ್ಲ. ಶ್ರೀಕೃಷ್ಣನು ಮಥುರೆಯಲ್ಲಿ ಹೋಳಿ ಆಡುವಾಗ ಅವನ ಗೆಳೆಯರ ಪುಂಡಾಟಿಕೆಗೆ ಬೇಸತ್ತು ಹೆಂಗಸರು ಅವರಿಗೆ ದಂಡಗಳಿಂದ ಹೊಡೆಯುತ್ತಿದ್ದರಂತೆ. ಇಂದಿಗೂ ಹೋಳಿ ಹಬ್ಬದಲ್ಲಿ ಮಥುರೆಯಲ್ಲಿ ಲಟ್ಠಮಾರ್ ಹೋಳಿ ಎಂಬ ಪ್ರಥೆಯೇ ಇದೆ. ತಲೆಯ ಮೇಲೆ ಪ್ರಹಾರ ಮಾಡಲು ಹೆಂಗಳೆಯರು ಬೀಸಿದ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂದು  ಗಂಡಸರು ತಲೆಯ ಮೇಲೆ ಬಾಣಲೆ ಇತ್ಯಾದಿ ಶಿರಸ್ತ್ರಾಣ ಧರಿಸಿಯೇ ಹೋಳಿ ಆಡಲು ಬರುತ್ತಾರೆ.  ಇಲ್ಲಿ ಹೊಡೆಯಲು ಬಳಸುವ ಕೋಲಿಗೆ ತಲೆದಂಡ ಎಂಬ ಪದವು ಒಪ್ಪುವುದಾದರೂ "ತಲೆದಂಡ" ಎಂಬ ಪದಕ್ಕೆ ಬೇರೆಯೇ ಆರ್ಥ. ದಂಡ ಎಂದರೆ ಮಾಡಿದ ತಪ್ಪಿಗೆ ರಾಜನಿಗೆ ಕೊಡಬೇಕಾದ  ಪ್ರಾಯಶ್ಚಿತ್ತ ಕಾಣಿಕೆ ಎಂಬ ಅರ್ಥವೂ ಇದೆ. ಉದಾಹರಣೆಗೆ "ನೀವು ಟಿಕೆಟ್ ಇಲ್ಲದೆ ಬಸ್ ಪ್ರಯಾಣ ಮಾಡಿದರೆ ರೂ ೫೦೦.೦೦ ದಂಡ ಕಟ್ಟಬೇಕಾಗತ್ತದೆ." ದಂಡ ಎಂದರೆ ವ್ಯರ್ಥ ಎಂಬ  ಅರ್ಥವೂ ಇದೆ. ("ಐನೂರು ರೂಪಾಯಿ ಫೈನ್ ಕಟ್ಟಿದ್ದು ದಂಡ. ಬಸ್ ಟಿಕೆಟ್ ನನ್ನ ಪಾಕೆಟ್ ಒಳಗೇ ಇತ್ತು.")  ತಲೆದಂಡ ಎಂದರೆ "ನಿಮಗೆ ತಲೆ ಇದ್ದರೂ ದಂಡ" ಎಂಬ ಅರ್ಥ ಖಂಡಿತಾ ಇಲ್ಲ. ರಾವಣನಿಗೆ ಹತ್ತು ತಲೆಗಳಿದ್ದರೂ ಒಂದು ತಲೆಯಲ್ಲೂ ರಾಮನ ಜೊತೆಗೆ ವೈರ ಸಲ್ಲದು ಎಂಬ ಆಲೋಚನೆ ಬರಲಿಲ್ಲ. ಹೀಗಾಗಿ ಅವನ ತಲೆಗಳೆಲ್ಲ ದಂಡವೇ.  ರಾಜನು ಯಾರಾದರೂ ಅಪರಾಧಿಗಳ ಮೇಲೆ ವಿಪರೀತ ಕೋಪ ಮಾಡಿಕೊಂಡಾಗ ಅವರ ತಲೆಯನ್ನೇ ದಂಡವಾಗಿ (ಫೈನ್) ಕೇಳುತ್ತಿದ್ದ.  ಹಾಗೆ ಪಡೆದುಕೊಂಡ ತಲೆಗಳಿಂದ ಏನೂ ಪ್ರಯೋಜನವಿಲ್ಲ, ಅದು ಸಂಪೂರ್ಣ ದಂಡ ಎಂದು ರಾಜನ ತಲೆಗೆ ಹೊಳೆದಾಗ ಈ ತಲೆದಂಡ ಪದ್ಧತಿ ಕೊನೆಗೂ ನಿಂತಿತು.  


ದಂಡಗಳು ಹೀಗೆ ಹಲವು ಹತ್ತು ವಿಧಗಳಾದ್ದರಿಂದಲೇ ದಂಡಂ ದಶಗುಣಂ ಎಂಬ ನುಡಿ ಪ್ರಸಿದ್ಧವಾಗಿರಬಹುದು. ಆದರೆ ಕೆಲವರು ದಂಡ ಪ್ರಯೋಗ ಮಾಡಿದಾಗ ವ್ಯಕ್ತಿಯ ಹತ್ತೂ ಗುಣಗಳು ವ್ಯಕ್ತವಾಗುತ್ತವೆ ಎಂಬ ಅರ್ಥ ಹಿಡಿಯುತ್ತಾರೆ. ಈ ದಾಂಡಿಗರು ಅಥವಾ ದಂಡ ಹಿಡಿದವರು ಅಹಿಂಸಾ ಮಾರ್ಗದಲ್ಲಿ ನಂಬಿಕೆ ಇಡದ, ಶಿಕ್ಷೆಯಿಂದಲೇ ಶಿಕ್ಷಣ ಎಂದು ನಂಬಿದ ಶಿಕ್ಷಕರು. ದಸ್ ಗುನಾಹ್ ಎಂದರೆ ಉರ್ದುವಿನಲ್ಲಿ ಹತ್ತು ಅಪರಾಧಗಳು ಎಂದೂ ಅರ್ಥ. ದಂಡ ಕೈಯಲ್ಲಿದ್ದರೆ ಹತ್ತು ಅಪರಾಧಗಳು ಉಂಟಾಗುವ ಸಾಧ್ಯತೆ ಹೆಚ್ಚು. ದಶಶಿರ ರಾವಣ ಮುಂದೆ ನಿಂತಾಗ ಕೋದಂಡಪಾಣಿ ರಾಮನಿಗೂ ಒಂದೊಂದೇ ತಲೆಯನ್ನು ಕೆಡಹುವ ಆಸೆಯನ್ನು ನಿಗ್ರಹಿಸಲು ಆಗಲಿಲ್ಲ.  ದಂಡಿ ಮಾರ್ಚ್ ಎಂದು ದಂಡ ಹಿಡಿದು ಹೊರಟ ಬಾಪೂಜಿ ಕೂಡಾ ಉಪ್ಪು ತಯಾರಿಸಿ ಅಪರಾಧ ಮಾಡಿ ಜೈಲಿಗೆ ಹೋದರು. 


ದಂಡದ ಬಗ್ಗೆ ಇನ್ನೂ ಬರೆಯಲು ದಂಡಪಿಂಡ ಇತ್ಯಾದಿ ವಿಷಯಗಳು ದಂಡಿಯಾಗಿ ಇವೆಯಾದರೂ ನಿಮ್ಮ ಸಮಯ ದಂಡವಾದೀತು ಎಂಬ ಕಾಳಜಿಯಿಂದ ಇಲ್ಲಿಗೇ ಮುಗಿಸುವೆ.


ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)