ಹಾಲನು ಮಾರಲು ಹೋಗುವ ಬಾರೇ ಬೇಗ ಸಖೀ

 ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು.

ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ಬಳಿ ಪದೇಪದೇ ಹೋಗುವುದು ಕಷ್ಟವೆನ್ನಿಸಿತು.  ನನ್ನ ಪಿಎಚ್.ಡಿ. ವಿದ್ಯಾರ್ಥಿಯೊಬ್ಬ ತನ್ನ ಮಕ್ಕಳನ್ನು ಹತ್ತಿರದ ಮದರ್ಸ್ ಆಸ್ಪತ್ರೆಯಲ್ಲಿದ್ದ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತೇನೆಂದು ಹೇಳಿದ್ದು ಕೇಳಿ ನಾವೂ ಅಲ್ಲಿಗೆ ಹೋದೆವು. ಅಲ್ಲಿಯ ಡಾಕ್ಟರ್ ಮಗಳ ಕೆಮ್ಮಿಗೆ ಕೊಟ್ಟ ಔಷಧಗಳನ್ನು ನೋಡಿ ನಮಗೆ ಹೆದರಿಕೆಯೇ ಆಯಿತು. ಆಸ್ತಮಾಗೆ ಕೊಡುವ ಒಂದು ಔಷಧ ಕೂಡಾ ಇತ್ತು. ಆ ಬಿಳಿ ದ್ರಾವಣ ಅತ್ಯಂತ ಕಹಿ.   ಅದನ್ನು ಕುಡಿಸಲು ಹರಸಾಹಸ ಪಡಬೇಕಾಗಿತ್ತು.  ಕೆಮ್ಮುವ ಮಗುವಿಗೆ ನೆಬ್ಯುಲೈಸೇಷನ್ ಕೊಡಿಸುತ್ತಿದ್ದರು. ಇದೆಲ್ಲ ಯಾಕೋ ಅತಿಯಾಯಿತು ಎಂದು ನಮಗೆ ಭಯವಾಯಿತು.  ಕೆಲವು ತಿಂಗಳು ಈ ಅನುಭವವಾದ ನಂತರ ಮತ್ತೊಬ್ಬ ಡಾಕ್ಟರನ್ನು ಹುಡುಕಿದೆವು.


ವಾರ್ಡನ್ ಕೆಲಸ ನನಗೆ ಹೊಸತು.  ಅಲ್ಲಿಯ ಸಿಬ್ಬಂದಿಯನ್ನು ನಾನು ಪರಿಚಯ ಮಾಡಿಕೊಂಡೆ. ಮೆಸ್ ಅಥವಾ ಊಟದಮನೆಯ ಮೇಲ್ವಿಚಾರಕನ ಹೆಸರು ಭಟ್. ಆತನನ್ನು ಎಲ್ಲರೂ ಭಟ್ ಜೀ ಎಂದು ಕರೆಯುತ್ತಿದ್ದರು. ಆತ ಉಡುಪಿಯ ಭಟ್ಟನೇನೂ ಅಲ್ಲ.  ಉತ್ತರಾಖಂಡದ ಭಟ್. ಅವನಿಗೊಬ್ಬ ಅಸಿಸ್ಟೆಂಟ್ ಇದ್ದ. ಲೆಕ್ಕಪತ್ರವನ್ನೆಲ್ಲ ಅಸಿಸ್ಟೆಂಟ್ ನೋಡಿಕೊಳ್ಳುತ್ತಿದ್ದ. ಹಾಸ್ಟೆಲಿನ ದುರಸ್ತಿಯನ್ನು ನೋಡಿಕೊಳ್ಳಲು ಒಬ್ಬ ಕೇರ್ ಟೇಕರ್ ಇದ್ದ. ಅವನಿಗೊಬ್ಬ ಅಸಿಸ್ಟೆಂಟ್. ಕೇರ್ ಟೇಕರ್ ಒಬ್ಬ ಹಳೇ ಹುಲಿ. ಅವನಿಗೆ ಆಗಲೇ ನಿವೃತ್ತಿ ಸಮೀಪಿಸಿತ್ತು.  ಎಷ್ಟೋ ಜನ ವಾರ್ಡನ್ನುಗಳು ನೋಡಿದ್ದ. ನನ್ನನ್ನು ಭೇಟಿ ಮಾಡಿದಾಗ "ನೋಡಿ, ನೀವು ಹಾಸ್ಟೆಲ್ ಕೆಲಸವನ್ನು ನಮಗೆ ಬಿಟ್ಟುಬಿಡಿ. ಅದರಿಂದ ನೀವು ಎಷ್ಟು ದೂರ ಇರುತ್ತೀರೋ ಅಷ್ಟು ಒಳ್ಳೆಯದು!" ಎಂದು ನಯವಾಗಿ ಎಚ್ಚರಿಸಿದ!! ನನಗೆ ಏನೂ ಹೇಳಲು ತೋರಲಿಲ್ಲ.


ಕೆಲವೇ ದಿನಗಳಲ್ಲಿ ಅದೇ ಕೇರ್ ಟೇಕರ್ ನನಗೆ ಫೋನ್ ಮಾಡಿ "ನಿಮ್ಮ ಹಾಸ್ಟೆಲಿಗೆ ನೀವು ಕೂಡಲೇ ಬರಬೇಕು" ಎಂದಾಗ ನನಗೆ ಒಂದು ಕ್ಷಣ ಗಲಿಬಿಲಿ. ಒಮ್ಮೆಲೇ ಇದು ನನ್ನ ಹಾಸ್ಟೆಲ್ ಹೇಗಾಯಿತು ಎಂಬ ಆಲೋಚನೆ ಸುಳಿದುಹೋಯಿತು. ಏನಾಯಿತು ಎಂದು ಕೇಳಿದೆ.  "ಅದನ್ನು ಫೋನ್ ಮೇಲೆ ಹೇಳಲು ಸಾಧ್ಯವಿಲ್ಲ. ನೀವು ಕೂಡಲೇ ಬನ್ನಿ.  ನಿಮ್ಮ ಹಾಸ್ಟೆಲಿನ ಮಾನವನ್ನು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯ"  ಎಂದ. ನನಗೆ ಕಕ್ಕಾಬಿಕ್ಕಿಯಾಯಿತು.  ನನ್ನ ಕೆಲಸವನ್ನೆಲ್ಲ ಬದಿಗಿಟ್ಟು ಹೊರಟೆ.  ಸಂಜೆಯ ನಾಲ್ಕು ಗಂಟೆ. ನಾನು ವಾರ್ಡನ್ ಆಗಿ ಸೇರಿದ್ದು ಸೆಪ್ಟೆಂಬರ್ ತಿಂಗಳಲ್ಲಿ, ದಸರಾ ಹಬ್ಬದ ದಿನಗಳಲ್ಲಿ.  ಹಾಸ್ಟೆಲ್ ಮುಂದಿದ್ದ ದೊಡ್ಡ ಮೈದಾನದಲ್ಲಿ ರಾವಣ ದಹನ ನಡೆದದ್ದನ್ನು ನನ್ನ ಮಗಳಿಗೆ ತೋರಿಸಿದ್ದು ಇನ್ನೂ ನೆನಪಿದೆ.  ಉತ್ತರಭಾರತದಲ್ಲಿ ನವರಾತ್ರಿಯಲ್ಲಿ ರಾಮಲೀಲಾ ನಾಟಕ ಒಂಬತ್ತು ದಿನ ನಡೆಯುತ್ತದೆ. ವಿಜಯದಶಮಿಯ ದಿನ ರಾವಣನ ವಧೆ ಮೈದಾನದಲ್ಲಿ ನಡೆಯುತ್ತದೆ. ರಾವಣನ ದೊಡ್ಡ ಪುತ್ಥಳಿಯಲ್ಲಿ ಪಟಾಕಿ ತುಂಬಿಸಿಡುತ್ತಾರೆ. ರಾಮನ ಪಾತ್ರಧಾರಿ ಬೆಂಕಿ ಹಚ್ಚಿದ ಬಾಣವನ್ನು ಈ ಪುತ್ಥಳಿಯತ್ತ ಹಾರಿಸುತ್ತಾನೆ. ಮಕ್ಕಳಿಗೆ ಢಮಢಮ ಸಿಡಿಯುತ್ತಾ ರಾವಣನ ಪುತ್ಥಳಿ ಬೀಳುವುದನ್ನು ನೋಡುವ ಸಡಗರ. ಮಕ್ಕಳಿಗಿಂತ ಅವರ ತಂದೆ ತಾಯಿಯರಿಗೆ! 


ಈಗ ದೀಪಾವಳಿ ಸಮೀಪಿಸುತ್ತಿತ್ತು.  ನನ್ನ ಆಫೀಸಿನಿಂದ ಹಾಸ್ಟೆಲಿಗೆ ಐದಾರು ನಿಮಿಷದ ನಡಿಗೆ. ನಾನು ಬಂದಾಗ ಹಾಸ್ಟೆಲ್ ಎದುರಿಗೆ ಪೊಲೀಸ್ ವ್ಯಾನ್ ನಿಂತಿತ್ತು. ಎಲ್ಲರೂ ನಾನು ಬರುವುದನ್ನೇ ಎದುರುನೋಡುತ್ತಿದ್ದರು. ವಾರ್ಡನ್ ಸಾಬ್ ಆಗಯೇ ಎಂದು ಪಿಸಿಪಿಸಿ ಮಾತಾಡಿಕೊಂಡರು. ಪೊಲೀಸ್ ಜೀಪಿನಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಕೆಳಗಿಳಿದು ಇವನೇನು ವಾರ್ಡನ್ ಎಂಬ ಪ್ರಾಣಿ ಎಂಬ ರೀತಿಯಲ್ಲಿ ನನ್ನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದರು.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)