ಗುರ್ ಎನ್ನುವ ಗುರು



ಗುರ್ ಎನ್ನುವವನೇ ಗುರು ಎಂಬುದರಲ್ಲಿ ಗುಲಗಂಜಿಯಷ್ಟೂ ನಿಜವಿಲ್ಲ. ಗುರುಗಳು ಗುರ್ ಎನ್ನಬಹುದು, ಆದರೆ ಗುರ್ ಎನ್ನುವವರೆಲ್ಲ ಗುರುಗಳಲ್ಲ. ಗುರ್ ಎನ್ನುವ ರಾಜಕಾರಣಿಗಳು ಎಷ್ಟೋ ಜನರನ್ನು ನೀವು ಗುರುತಿಸಬಹುದು. ಆದರೆ ಅವರೆಲ್ಲರನ್ನೂ ಗುರು ಎನ್ನಲಾದೀತೆ? ಮಾತು ಮಾತಿನಲ್ಲಿ ಸ್ನೇಹಿತರನ್ನು  ಏನ್ ಗುರೂ ಎನ್ನುವವರೂ ಇದ್ದಾರೆ. ಆದರೆ ಸ್ನೇಹಿತರಿಂದ ಅವರು ಏನನ್ನು ಕಲಿತರೋ ಹೇಳಲಾಗದು.  ನಿಮಗೆ ಅದೃಷ್ಟ ಇದ್ದರೆ ನಿಮ್ಮ ಸ್ನೇಹಿತರೇ ನಿಮಗೆ ಉತ್ತಮ ಗುರುಗಳಾದಾರು. ಬೆತ್ತದ ಏಟಿನಿಂದ ಮೇಷ್ಟ್ರು ಹೇಳಿಕೊಡಲಾಗದ್ದನ್ನು ಎಷ್ಟೋ ಸಲ ಸ್ನೇಹಿತರು ಸರಳವಾಗಿ ಹೇಳಿಕೊಟ್ಟುಬಿಡುವುದನ್ನು ಕಾಣುತ್ತೇವೆ. ಇಟ್ ಟೇಕ್ಸ್ ಎ ವಿಲೇಜ್ ಟು ರೇಸ್ ಎ ಚೈಲ್ಡ್ ಎಂದು ಹೇಳುವುದು ಇದಕ್ಕೇ. ನಮ್ಮ ಸೋಮನಾಥನು ಇದನ್ನೇ ಕೆಲವಂ ಬಲ್ಲವರಿಂದ ಕಲ್ತು ಇತ್ಯಾದಿಯಾಗಿ ಹೇಳಿದ್ದಾನೆ.


ಬಲ್ಲವರು ಯಾರು ಎಂದು ಹೇಳುವುದೇ ಈಗ ಕಷ್ಟವಾಗಿದೆ. ಏನೇ ವಿಷಯವನ್ನು ಇಂಟರ್ನೆಟ್ನಲ್ಲಿ ಹುಡುಕಿದರೆ ಅದೆಷ್ಟು ಹಿಟ್ಸ್ ಸಿಕ್ಕುತ್ತವೆ ಎಂದರೆ ಗೂಗಲಿಗೂ ಸುಸ್ತಾಗಿ ಹೋಗುವಷ್ಟು.   ಅದೆಷ್ಟು ಜನ ಪಂಡಿತರು ಇದ್ದಾರಪ್ಪ ಎಂದು ಆಶ್ಚರ್ಯವಾಗುವಷ್ಟು.  ವಿಕಿಪೀಡಿಯವಂತೂ ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆಗಿಬಿಟ್ಟಿದೆ. ಕೆಲವರು ವಿಕಿಯಿಂದಲೇ ಕಲ್ತು ವಿದ್ಯೆಯ ಸಣ್ಣ ಗುಡ್ಡಗಳಾಗಿ ಶೋಭಿಸುವುದನ್ನೂ ನೀವು ಕಾಣುತ್ತೀರಿ. ಇದನ್ನು ನೋಡಿ ನನ್ನ ಸ್ನೇಹಿತರೊಬ್ಬರು ಕೆಲವಂ ಅಲ್ಲಿಲ್ಲಿಂದ  ಕದ್ದು ಎಂದು ಸೋಮನಾಥನನ್ನು ಅನುಸರಿಸಿ ಒಂದು ಪದ್ಯವನ್ನೇ ಬರೆದಿದ್ದಾರೆ.  ಅದನ್ನು ಅವರು ವಾಟ್ಸಾಪ್ ಮೇಲೆ ಹಾಕಿದಾಗ ಅದನ್ನು ನಿಸ್ಸಂಕೋಚವಾಗಿ ತಮ್ಮದೇ ರಚನೆ ಎಂಬಂತೆ ಅದೆಷ್ಟು ಜನ ಹಂಚಿದರು ಎಂದರೆ ಮೂಲ ಕವಿ ಯಾರೆಂದು ತಿಳಿಯದೇ ಹೋಗುವಷ್ಟು. ಅವರ ಮನೆಯ ಪಕ್ಕದ ಬೀದಿಯಲ್ಲಿರುವ ಇನ್ನೊಬ್ಬ ಕವಿ ಅದನ್ನು ತನ್ನದೇ ರಚನೆ ಎಂದು ಒಂದು ಪತ್ರಿಕೆಯಲ್ಲಿ ಅಚ್ಚುಹಾಕಿದಾಗಂತೂ ಅವರು (ನನ್ನ ಸ್ನೇಹಿತರು) ಶಾಕಾಘಾತದಿಂದ ವಾಟ್ಸಾಪ್ ಬಳಸುವುದನ್ನು ಬಿಟ್ಟೇ ಬಿಟ್ಟರು.  


ಕೆಲವಂ ಮಾಳ್ಪವರಿಂದ ಕಂಡು ಕಲಿಯಬೇಕು ಎಂದು ಸೋಮನಾಥನ ಜಾಣ್ಮೆಯನ್ನು ನಮ್ಮ ಪೀಳಿಗೆಗೆ ಹೇಳಿಕೊಡಬೇಕಾಗಿಯೇ  ಇಲ್ಲ. ಪರೀಕ್ಷೆಯಲ್ಲಿ ನನ್ನ ಪಕ್ಕ ಕೂಡುತ್ತಿದ್ದ ವಿದ್ಯಾರ್ಥಿಗಳು ಲೆಕ್ಕ ಮಾಡಲು ಬಾರದಿದ್ದಾಗ  ನಾನು ಮಾಡುತ್ತಿದ್ದ  ಲೆಕ್ಕವನ್ನು ಮಾಳ್ಪವರಿಂದ ಕಲಿ ಎಂಬ ನೀತಿಯನ್ನು ಅನುಸರಿಸಿದರು.  ಲೆಕ್ಕ ಕಲಿತರೋ ಇಲ್ಲವೋ ತಿಳಿಯದು, ಅದರ ಪ್ರತಿ ಮಾಡುವುದನ್ನು ಖಂಡಿತಾ ಕಲಿತರು. 


ನನ್ನ ಹೆಂಡತಿ ಈಚೆಗೆ ಮಾಲ್ಪುವಾ ರೆಸಿಪಿ ಹುಡುಕಿದಾಗ ಈ ಮಾಳ್ಪವರಿಂದ ಕಲಿತ ಅದೆಷ್ಟೋ ಮಹಿಳಾಮಣಿಯರನ್ನು ಕಂಡು ಬೆರಗಾದಳು. ಕವಿತಾ, ಕಾವ್ಯ, ಕೀರವಾಣಿ, ಕುಮುದಾ, ಕೇತಕಿ, ಕೌಸಲ್ಯಾ ಹೀಗೆ ಎಲ್ಲರೂ ಕಿಚನ್ ಪ್ರಾರಂಭಿಸಿ ಪ್ರತಿಯೊಂದು ಮಾಲ್ಪುವಾದಿಂದ ಮೊದಲಾಗಿ  ಮೈಸೂರುಪಾಕ್ ವರೆಗೆ ಯಾವುದನ್ನೂ ಬಿಡದೆ ಪ್ರತಿಯೊಂದು  ರೆಸಿಪಿಯನ್ನೂ ಮಾಳ್ಪವರಿಂದ ಕಲಿತು ತಮ್ಮದೇ ಅನನ್ಯ ರೀತಿಯಲ್ಲಿ ವೆಲ್ಕಮ್ ಟು ಕಾದಂಬರೀಸ್ ಕಿಚನ್ ಫ್ರೆಂಡ್ಸ್ ಎಂದೆಲ್ಲ ಹೇಳುತ್ತಾ ಇಂಟರ್ ನೆಟ್ ತುಂಬಾ ತಮ್ಮ ಅಡುಗೆಯ ಘಮವನ್ನು ಹರಡಿಬಿಟ್ಟಿದ್ದಾರೆ. ನಾನು ಹೇಳುವ ಟಿಪ್ಸ್ ಬಳಸಿ ನೀವು ಕೋಡುಬಳೆ ಮಾಡಿದರೆ ನಿಮ್ಮ ಕೋಡುಬಳೆ ಖಂಡಿತಾ ಗರಿಗರಿ ಆಗುತ್ತದೆ ಎಂಬ ಟಿಪ್ ವಾಕ್ಯವನ್ನು ಎಲ್ಲಾ ವಿಡಿಯೋಗಳಲ್ಲೂ ಕೇಳಿ ಇದೇನು ಇಂಟರ್ನೆಟ್ಟೋ ಟಿಪ್ ಸಂದ್ರವೋ ಎಂಬ ಅನುಮಾನ ಬಂದಿದೆ. ಇಷ್ಟೆಲ್ಲ ಟಿಪ್ಸ್ ನೋಡಿ "ನೋಡು, ಚಕ್ಕುಲಿ ಬಾಯಲ್ಲಿಟ್ಟರೆ ಕರಗಿಹೋಗುವಂತೆ ಮಾಡಬೇಕೆಂದರೆ ಹೀಗೆ ಮಾಡಬೇಕು" ಎಂದು ಟಿಪ್ ಟಿಪ್ಪಣಿಗಳನ್ನು ನನ್ನ ಮಡದಿಯೊಂದಿಗೂ  ಹಂಚಿ ಟಿಪ್ಪು ಸುಲ್ತಾನ್ ಎಂಬ ಬಿರುದಿಗೆ ಪಾತ್ರನಾಗುವುದಲ್ಲದೆ "ನಾನು ಮಾಡುವ ಚಕ್ಕುಲಿ ಬಾಯಲ್ಲಿಟ್ಟರೆ ಕರಗುವುದಿಲ್ಲವೋ!" ಎಂಬ ಆಕ್ಷೇಪಣೆಯನ್ನೂ ಆಹ್ವಾನಿಸಿದ್ದೇನೆ. ನನ್ನ "ಆ ಬೈಲ್ ಮುಝೆ ಮಾರ್" (ಬಸವಾ ಬಾ, ನನ್ನನ್ನು ತಿವಿ) ಕಥೆ ಅಲ್ಲಿಗೆ ಮುಗಿಯಲಿಲ್ಲ.  "ನನಗಂತೂ ಗೊತ್ತಿಲ್ಲ, ಟ್ರೈ ಮಾಡೋಣ ಎಂದರೆ ನನ್ನ ಬಾಯಿಗೆ ಬರಲೇ ಇಲ್ಲ" ಎಂದು ಗೇಲಿ ಮಾಡಲು ಹೋಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.


ಸೆಪ್ಟೆಂಬರ್ ಐದು ಮತ್ತು ಗುರು ಪೂರ್ಣಿಮೆಯ ದಿನಗಳಲ್ಲಿ ಗುರುಗಳ ಡಿಮ್ಯಾಂಡ್ ವಿಪರೀತ ಹೆಚ್ಚಾಗುತ್ತದೆ. ಋಷಿಯ ವೇಷ ಧರಿಸಿ ಆಶೀರ್ವದಿಸುತ್ತಿರುವ ಪೋಸ್ ಕೊಡುವ ಫೋಟೋ ಜೊತೆಗೆ ಗುರುಭ್ಯೋ ನಮಃ ಮುಂತಾದ ಗುರುಕೀರ್ತನೆಗಳು ನೆಟ್ ತುಂಬಾ ಓಡಾಡುತ್ತವೆ.   ಕಬೀರನು ಗುರುಗಳನ್ನು ಕುರಿತು ಬರೆದ ದೋಹಾ ಪುನರಾವರ್ತನೆಯಾಗುತ್ತದೆ. ಗುರುವೂ ಗೋವಿಂದನೂ ಇಬ್ಬರೂ ಬಂದಾಗ ಯಾರಿಗೆ ನಮಸ್ಕರಿಸಲಿ? ಗೋವಿಂದನ ಪರಿಚಯ ನೀಡಿದ ಗುರುವಿಗೆ ಮೊದಲು ವಂದಿಸುವೆ ಎಂದು ಕಬೀರ ನುಡಿಯುತ್ತಾನೆ. ಇದೊಳ್ಳೆಯ ಸಸ್ಪೆನ್ಸ್ ಮೂವಿಯ ಹಾಗೆ ನನಗೆ ಒಮೊಮ್ಮೆ ತೋರಿದೆ. ಯಾರು ಈ ಗೋವಿಂದ್? ಇವನನ್ನು ತೋರಿಸಿ "ಇವನೇ ಗೋವಿಂದ್" ಎಂದು ಗುರು ಹೇಳಿದ್ದು ಯಾಕೆ? ಕಬೀರನು ಇದೊಂದೂ ತಿಳಿಸದೆ ಬರೀ ಟ್ರೇಲರ್ ಒಂದನ್ನು ತೋರಿಸಿ ಹೊರಟು ಹೋಗಿದ್ದು ನನಗಂತೂ ಸರಿತೋರದು.  


ಋಷಿವೇಷದ.ಗುರುಗಳನ್ನು ನಾನು ಎಂದೂ ನೋಡಿಲ್ಲ. ನಾನು ನೋಡಿದ ಗುರುಗಳು ಎಲ್ಲರೂ ಬಹುತೇಕ ಪ್ಯಾಂಟ್, ಶರ್ಟ್ ತೊಟ್ಟವರೇ. ಮಹಿಳಾ ಗುರುಗಳು ಸೀರೆ ಅಥವಾ ಸಲ್ವಾರ್ ತೊಟ್ಟವರು. ಇಂದು ಯಾವುದೇ ಕಾಲೇಜಿಗೆ ಹೋದರೂ ಸುಮಾರು ನೂರಕ್ಕೆ ಎಂಬತ್ತು ಜನ ಗುರುಗಳು ಮಹಿಳೆಯರೇ ಆಗಿರುವಾಗ ಋಷಿಗಳ ಐಕಾನ್ ಇನ್ನೂ ಬದಲಾಗದೆ ಇರುವುದು ಅಕ್ಷಮ್ಯ. ಮುಂದಿನ ವರ್ಷವಾದರೂ ಇಂಥದೊಂದು.ಐಕಾನ್ ಯಾರಾದರೂ ಸೃಷ್ಟಿಸಲಿ ಎಂಬ ಆಶಯದೊಂದಿಗೆ ಇಲ್ಲಿಗೆ ಮುಗಿಸುತ್ತೇನೆ.


(ಗುರುಗಳಲ್ಲಿ ಕ್ಷಮೆ ಬೇಡಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)