ವೈವಾನುಗ್ರಹ
ವೈವಾ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ದಿವಸ ಎದುರಿಸಲೇಬೇಕಾದ ಅಗ್ನಿಪರೀಕ್ಷೆ. ಮೌಖಿಕ ಪರೀಕ್ಷೆಗೆ ನಾವು ವೈವಾ ಎನ್ನುವುದು ರೂಢಿಯಾದರೂ ಇದರ ಮೂಲ ವೀವಾ ವೋಸಿ ಎಂಬುದು. ಇಲ್ಲಿ ವೀವಾ ಎಂದರೆ ಜೀವಂತ ಎಂಬರ್ಥ. ನಾನು ಹುಡುಗನಾಗಿದ್ದಾಗ ವೀವಾ ಎಂಬ ಹಾರ್ಲಿಕ್ಸ್ ಮಾದರಿಯ ಪಾನೀಯ ಜನಪ್ರಿಯವಾಗಿತ್ತು. ಲಾಸ್ ಏಂಜಲೀಸ್ ನಗರದಲ್ಲಿ ವೀವಾ ಲ ಪಾಸ್ತಾ ಎಂಬ ಪಾಸ್ತಾ ಖಾದ್ಯಾಲಯದಲ್ಲಿ ತಾಜಾ ಪಾಸ್ತಾ ಮಾಡಿಕೊಡುತ್ತಾರೆ ಎಂಬ ಹೆಗ್ಗಳಿಕೆ. ವೀವಾ ಎಂಬುದನ್ನು ಲೈವ್ ಎಂದು ಈ ನಡುವೆ ಭಾಷಾಂತರಿಸುವ ರೂಢಿ ಬಂದಿದೆ. ಉದಾಹರಣೆಗೆ ಲೈವ್ ಟ್ರಾನ್ಸ್ಮಿಷನ್ ಎಂದರೆ ನೇರ ಜೀವಂತ ಪ್ರಸಾರ. ಇನ್ನು ವೀವಾ ವೋಸಿ ಎಂಬಲ್ಲಿ ವೋಸಿ ಎಂದರೆ "ಓಸಿ" ಎಂದು ಖಂಡಿತಾ ಅಪಾರ್ಥ ಮಾಡಬೇಡಿ. ವೋಸಿ ಎಂದರೆ ವಾಯ್ಸ್ ಅಥವಾ ಧ್ವನಿ. ವೀವಾ ವೋಸಿ ಎಂದರೆ "ಜೀವಂತ ಧ್ವನಿಯಲ್ಲಿ" ಎಂಬ ಅರ್ಥ. ಪರೀಕ್ಷಕರ ಮುಂದೆ ಜೀವಂತವಾಗಿ ಕೂತು ಆತನ ಅಥವಾ ಆಕೆಯ ಜೀವಂತ ಧ್ವನಿಯಲ್ಲಿ ಕೇಳಲ್ಪಡುವ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ಜೀವಂತವಾಗಿ ಉತ್ತರಿಸಿ ಜೀವ ಉಳಿಸಿಕೊಳ್ಳುವ ಪರೀಕ್ಷೆಗೆ ಈಗ ವೈವಾ ಎಂಬ ಹೆಸರು ಬಂದಿದೆ. ಕೆಲವರು ವೈವಾಹಿಕ ಎಂಬುದರ ಚುಟುಕು ರೂಪ ಇದೆಂದು ತಪ್ಪು ಕಲ್ಪನೆ ಹರಡಿರುವುದು ಖೇದನೀಯ. ವೈವಾಹಿಕ ಜೀವನದಲ್ಲಿ ಜೀವಂತವಾಗಿದ್ದು ಜೀವಂತ ಧ್ವನಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಹಿಕಪ್ ಇಲ್ಲದೆ ಉತ್ತರಿಸಿ ಜೀವ ಉಳಿಸಿಕೊಂಡವರು ಹೆಚ್ಚು ಜನರಿಲ್ಲ. ಅರ್ಜುನ ಭೀಮ ಮೊದಲಾದ ಘಟಾನುಘಟಿಗಳೇ ದ್ರೌಪದಿಯ ವೈ, ವಾಟ್, ವೆನ್, ವೇರ್, ಹೌ ಇತ್ಯಾದಿ ವೈವಾಟ್ ಪ್ರಶ್ನೆಗಳನ್ನು ಕೇಳಿ ಹೌಹಾರಿದರು. ಹೋಗಲಿ ಬಿಡಿ, ಅದೆಲ್ಲ ಈಗ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಎಂದು ಕೈ ಬಿಡೋಣ.
ಕೊರೋನಾ ಕೋವಿಡ್ ಕಾಲಮಾನದಲ್ಲಿ ಕಾಲೇಜುಗಳು ವೈವಾಗಳನ್ನು ಆನ್ಲೈನ್ ಮೂಲಕ ನಡೆಸಿದ್ದು ವೀವಾ ವೋಸಿ ಎಂಬುದಕ್ಕೆ ಸವಾಲು ಒಡ್ಡಿದ ಹಾಗಿತ್ತು. ಎಲ್ಲೋ ಉಪ್ಪಿಟ್ಟು ತಿನ್ನುತ್ತಾ ಕೂತಿರುವ ಪರೀಕ್ಷಕ. ಇನ್ನೆಲ್ಲೋ ಪಕ್ಕದಲ್ಲೇ ಪುಸ್ತಕ ನೋಟ್ಸ್ ಇತ್ಯಾದಿ ಇಟ್ಟುಕೊಂಡು ಕೂತಿರುವ ವಿದ್ಯಾರ್ಥಿ. ಪರೀಕ್ಷಕ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೆ "ಸರ್ ನಿಮ್ಮ ವಾಯ್ಸ್ ಕೇಳುತ್ತಿಲ್ಲ, ನೆಟ್ವರ್ಕ್ ಸಮಸ್ಯೆ" ಎಂದು ತಡ ಮಾಡುತ್ತಾ ಉತ್ತರವನ್ನು ಪುಸ್ತಕದಲ್ಲಿ ಹುಡುಕುತ್ತಾ ಕೊನೆಗೆ "ಸರ್ ಈಗ ಕೇಳ್ತಿದೆ" ಎಂದು ಉತ್ತರವನ್ನು ಪಠಿಸಿ ಜಯಭೇರಿ ಬಾರಿಸಿ ಕೂಡಲೇ ಮೊಬೈಲ್ ಮೂಲಕ ತನ್ನ ಮಿತ್ರನಿಗೆ ಪರೀಕ್ಷಕ ಕೇಳಿದ ಪ್ರಶ್ನೆಯನ್ನೂ ಮತ್ತು ಉತ್ತರವನ್ನೂ ವಿತರಿಸುವ ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದ ಸಂದರ್ಭಗಳು ಎಷ್ಟೋ! ಕಂಪನಿಗಳು ಆನ್ಲೈನ್ ಇಂಟರ್ ವ್ಯೂ ಪ್ರಾರಂಭಿಸಿದಾಗಲೂ ಇದೇ ಮುಂದುವರೆಯಿತು. ನಾನು ಒಮ್ಮೆ ಹೈದರಾಬಾದಿಗೆ ಹೋದಾಗ ಅಲ್ಲಿ ಒಂದು ಸ್ವಾರಸ್ಯ ಸಂಗತಿಯನ್ನು ಮಿತ್ರರೊಬ್ಬರು ತಿಳಿಸಿದರು. ವಿದ್ಯಾರ್ಥಿಗಳಿಗೆ ಇಂಟರ್ವ್ಯೂ ಸಹಾಯ ನೀಡಲು ಈಗ ಕಂಪನಿಗಳೇ ಇವೆಯಂತೆ. ವಿದ್ಯಾರ್ಥಿಯಂತೆ ನಟಿಸಿ ಉತ್ತರ ಹೇಳುವ ಬೃಹನ್ನಳೆಗಳು ಈ ಕಂಪನಿಯ ತಾರಾಮಣಿಗಳು. ಹೀಗೆ ಕೆಲಸ ಗಿಟ್ಟಿಸಿಕೊಂಡ ಮೇಲೆ ಆ ಕೆಲಸ ಮಾಡಲು ವಿದ್ಯಾರ್ಥಿಗೆ ಆಗಬೇಡವೇ ಎಂದು ನಾನು ಕೇಳುವಷ್ಟರಲ್ಲಿ ಅವರೇ ಉತ್ತರ ಹೇಳಿದರು. ಆನ್ಲೈನ್ ಕೆಲಸ ತಾನೇ! ಅದನ್ನು ಮಾಡಿಕೊಡಲು ಕೂಡಾ ಕಂಪನಿಗಳು ಇವೆ! ಅವರಿಗೆ ಅರ್ಧ ಸಂಬಳ ಕೊಟ್ಟರೆ ಸಾಕು. ಇಂಟರ್ವ್ಯೂದಿಂದ ರಿಟೈರ್ಮೆಂಟ್ ವರೆಗೂ ಹೀಗೆ ವಿದ್ಯಾರ್ಥಿಗೆ ಬಿಡದೆ ಕಂಪನಿ ನೀಡುವ ಕಂಪನಿಗಳ ಭರವಸೆಯನ್ನು ನಂಬಿದವರು ಕೊರೊನಾಮಾತಾಗೆ ಕಾಣಿಕೆಗಳನ್ನು ಅರ್ಪಿಸುವುದನ್ನು ಮರೆತು ಮುಂದೆ ಕಷ್ಟಕ್ಕೆ ಸಿಲುಕಿದರು. ಕಂಪನಿಗಳು ಈ ಆನ್ಲೈನ್ ಇಂಟರ್ವ್ಯೂ ನಡೆಸುವಾಗ ಜಾಬಾರ್ಥಿಯು ಕ್ಯಾಮೆರಾ ಆನ್ ಮಾಡಲೇ ಬೇಕೆಂದು ಹೇಳತೊಡಗಿದವು. ವಿದ್ಯಾರ್ಥಿಯ ಧ್ವನಿಯನ್ನು ಹೇಗೋ ಅನುಸರಿಸುತ್ತಿದ್ದ ಕಂಪನಿಗಳು ಈಗ ಕಂಪಿಸಲು ಪ್ರಾರಂಭಿಸಿದವು. ಲಾಕ್ ಡೌನ್ ಕಾಲದಲ್ಲಿ ನಾಟಕಗಳೇ ಇಲ್ಲದೆ ಲಕ್ ಡೌನ್ ಆಗಿದ್ದ ಮೇಕಪ್ ಕಲಾವಿದರಿಗೆ ಇದರಿಂದ ಮತ್ತೊಮ್ಮೆ ಭಾಗ್ಯೋದಯವಾಯಿತು. ಕಂಪನಿಯಲ್ಲಿ ಕೆಲಸ ಮಾಡುವ ನಲವತ್ತರ ಚೆಲುವೆಗೆ ಇಪ್ಪತ್ತರ ಕಿಶೋರಿಯ ಮೇಕಪ್ ಮಾಡಿದರು. ವಿಗ್ ಹಾಕಿ ಮೀಸೆಗೆ ಕಪ್ಪು ಬಳಿದು ನಿಜಜೀವನದಲ್ಲಿ ಅಂಕಲ್ ರೀತಿ ಕಾಣುತ್ತಿದ್ದವರನ್ನು ತರುಣನಂತೆ ಟ್ವಿಂಕಲ್ ಮಾಡಿಸಿದರು. ಕೊರೋನಾ ಕಾಲ ಮುಗಿದು ಕಚೇರಿಗೆ ಹಿಂದಿರುಗುವ ಕಾಲ ಬಂದಾಗ ಈ ಎಲ್ಲ ಸಂಭ್ರಮಗಳಿಗೂ ತೆರೆ ಬಿದ್ದಿತು.
ವೈವಾಗೆಂದು ಬಂದ ಅಧ್ಯಾಪಕರ ಕೈಯಲ್ಲಿ ಸಿಕ್ಕಿಹಾಕಿಕೊಂಡು ವೈವಾಧೀನರಾದ ವಿದ್ಯಾರ್ಥಿಗಳ ಕಥೆಯನ್ನು ಇನ್ನೇನು ಹೇಳೋಣ. ಕೆಲವು ವಿದ್ಯರ್ಥಿಗಳಿಗೆ ವೈವಾ ವೋಸಿ ಎಂದ ಕೂಡಲೇ ಜೈವಾನಿಲವೇ ಹೋದಂತೆ ಆಗಿಬಿಡುವುದು. ಮಿಸೆಸ್ ಸರಳಾ ಏನಾದರೂ ವೈವಾಗೆ ಬಂದರೆ ಏನು ಗತಿ ಎಂದು ಹುಡುಗರು ಒದ್ದಾಡುವುದು ಸಹಜವೇ ಏಕೆಂದರೆ ಆಕೆ ಸರಳವಾದ ಪ್ರಶ್ನೆಯನ್ನು ಕೇಳುವುದು ವಿರಳ. ವಾಟ್ ಈಸ್ ಲಾಗ್ ಆಫ್ ರೂಟ್ ತ್ರೀ ಎಂದು ಒಬ್ಬನನ್ನು ಕೇಳಿದಾಗ ಅವನು ಬಸ್ ರೂಟ್ ತ್ರೀಗೆ ಲಾಗ ಹಾಕಿ ಹತ್ತುವ ಪ್ರಕ್ರಿಯೆಯನ್ನು ನೆನೆಸಿಕೊಂಡು ಕಕ್ಕಾಬಿಕ್ಕಿಯಾದನು. ಇನ್ನೊಬ್ಬನು ಲಾಗಾನ್ ಲಾಗಾಫ್ ಎಂದೇನೋ ಹೇಳಲು ಹೋಗಿ ಸಿಕ್ಕಿಬಿದ್ದನು. ತಾವು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಉತ್ತರ ಕೊಡದಿದ್ದರೆ ಅವನ ಕಡೆ ತೀಕ್ಷ್ಣ ನೋಟದಿಂದ ನೋಡುತ್ತಿದ್ದ ಮಿಸ್ ಸರಳ ಇವಾಲ್ಲ್ಯುಯೇಶನ್ ಶೀಟಿನಲ್ಲಿ ವಿದ್ಯಾರ್ಥಿಗೆ ಕಾಣದಂತೆ ಏನೋ ಬರೆದುಕೊಂಡು ಅವನ ಹೃದಯದಲ್ಲಿ ಹಾರರ್ ಸಿನಿಮಾ ಸಂಗೀತದ ಅಲೆಗಳನ್ನು ಎಬ್ಬಿಸುವರು. ಇನ್ನು ಉತ್ತರ ಹೇಳಿದ ವಿದ್ಯಾರ್ಥಿಯ ಕಡೆ ಮತ್ತೂ ತೀಕ್ಷ್ಣವಾಗಿ ನೋಡಿ "ನಾನು ಈ ಪ್ರಶ್ನೆ ಕೇಳಿದೆ ಅಂತ ವಿವೇಕ್ ಹೇಳಿಕೊಟ್ಟನಾ?" ಎಂದು ನಾಲಗೆಯನ್ನು ಬಾಯೊಳಗೆ ಸೆಳೆದುಕೊಂಡು ಕೇಳಿದರೆ ತನ್ನ ಅವಿವೇಕಕ್ಕೆ ವಿದ್ಯಾರ್ಥಿ ಮರುಗುತ್ತಿದ್ದನು. ಏಕೆಂದರೆ ಮುಂದೆ ಮಿಸ್ ಸರಳ ಕೇಳುವ ಪ್ರಶ್ನೆಯನ್ನು ಅವನು ಎಂದೂ ನಿರೀಕ್ಷಿಸಿಯೇ ಇರಲಿಲ್ಲ. ವಾಟ್ ಈಸ್ ಲಾಗ್ ಆಫ್ ಜೀರೋ ಎಂದಾಗ ಮೊದಲ ಪ್ರಶ್ನೆಗೆ ಉತ್ತರಿಸಿದ ಹೀರೋ ಸೋತು ಕತ್ತು ಕೆಳಗೆ ಹಾಕುತ್ತಿದ್ದನು.
ಒಮ್ಮೊಮ್ಮೆ ಮಿಸ್ ಸರಳ ಜೊತೆಗೆ ಎಸ್ಸೆಮ್ಮೆಸ್ ಸರ್ ಕೂಡಾ ವೈವಾಗೆ ಬಂದರೆ ಅಂದು ಎಲ್ಲ ವಿದ್ಯಾರ್ಥಿಗಳಿಗೂ ಸಿಂಹಸ್ವಪ್ನ. ಇಬ್ಬರೂ ಒಬ್ಬರಿಗಿಂತ ಇನ್ನೊಬ್ಬರು ಕಠಿಣ ಪ್ರಶ್ನೆಗಳನ್ನು ಕೇಳುತ್ತಾ ಪರಸ್ಪರರ ಕಡೆಗೆ ತುಂಟತನದಿಂದ ನೋಡುತ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರೆ ಎದುರು ಕೂತಿದ್ದ ವಿದ್ಯಾರ್ಥಿಗೆ ಅವರಿಬ್ಬರ ಮುಖಗಳನ್ನೂ ನೋಡುತ್ತಾ ಸುಸ್ತಾಗಿ ಕೂರುವುದೊಂದೇ ಗತಿ. ನೀ ಏರಬಲ್ಲೆಯಾ ನಾನೇರುವೆತ್ತರಕೆ ಎಂದು ಮಿಸ್ ಸರಳ! ನೀನಿಳಿಯಬಲ್ಲೆಯಾ ನಾನಿಳಿಯುವಾಳಕ್ಕೆ ಎಂದು ಎಸ್ಸೆಮ್ಮೆಸ್! ಈ ಜುಗಳಬಂದಿಯಲ್ಲಿ ಬಂದಿಯಾಗಿ ಯುಗಳ ಗೀತೆಯಲ್ಲಿ ಮೂರನೇ ಗಾಯಕನಂತೆ ಕೂತ ವಿದ್ಯಾರ್ಥಿ! ಇಬ್ಬರೂ ಪ್ರಶ್ನಾಪೀಡಕರೂ ಒಂದೊಂದು ಗೂಗ್ಲಿ ಪ್ರಶ್ನೆಯನ್ನು ಯೋಚಿಸಿಕೊಂಡೇ ಬರುವರು. ಗೂಗ್ಲಿ ಎಂದರೆ ಕ್ರಿಕೆಟ್ ಆಟದಲ್ಲಿ ಬೋಲರನ ವಿಶಿಷ್ಟ ಚೆಂಡೆಸೆತ. ಈ ಚೆಂಡನ್ನು ಆಡಬಲ್ಲ ದಾಂಡಿಗರು ಬಹುವಿರಳ. ಇಡೀ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯೂ ಉತ್ತರ ಹೇಳದೇ ತತ್ತರಿಸಿಹೋಗುವ ಪ್ರಶ್ನೆಯೇ ಗೂಗ್ಲಿ ಪ್ರಶ್ನೆ. ಗೂಗಲ್ ಯಾವಾಗ ಬಂತೋ ಈ ಯುಗಳಭಯಂಕರರ ಗೂಗ್ಲಿಗಳು ಪುತಪುತನೇ ಉದುರಿಹೋದವು. ಕಾಲೇಜಿನ ವಿದ್ಯಾರ್ಥಿಗಳು ಇವರ ಪ್ರಶ್ನೆಗಳನ್ನು ವಾಟ್ಸಾಪ್ ಮೇಲೆ ಹರಿಬಿಟ್ಟರು. ಒಬ್ಬನು ಯಾರೋ ಪ್ರಶ್ನೆಗಳ ಡೇಟಾ ಬೇಸ್ ಸಿದ್ಧಪಡಿಸಿದ. ಗೂಗಲ್ ಮೊರೆ ಹೊಕ್ಕು ಇನ್ನೊಬ್ಬ ಪ್ರಶ್ನೆಗಳ ಉತ್ತರಗಳನ್ನು ಕಡೆದು ತೆಗೆದ. ಸಮುದ್ರ ಮಥನದ ರಸಾನುಭವವೇ ಹೋಯಿತು. ಎಲ್ಲ ವಿದ್ಯಾರ್ಥಿಗಳೂ ಉತ್ತರಗಳ ಅಮೃತವನ್ನು ಹೀರಿ ಅಮರರಾದರು. ಮಿಸ್ ಸರಳ ಮತ್ತು ಎಸ್ಸೆಮ್ಮೆಸ್ ಸರ್ ತಮ್ಮ ಸೋಲನ್ನು ಒಪ್ಪಿಕೊಂಡು "ವಾಟ್ ಈಸ್ ಓಮ್ಸ್ ಲಾ?" ಇತ್ಯಾದಿ ಸರಳ ಪ್ರಶ್ನೆಗಳನ್ನು ಕೇಳುತ್ತಾ ಎಲ್ಲರಿಗೂ ನೂರಕ್ಕೆ ತೊಂಬತ್ತಾರು ತುಂಬುವುದನ್ನು ಕಲಿತರು. ಗೂಗಲ್ ಎಲ್ಲರಿಗೂ ಓಸಿ ಮಾರ್ಕ್ಸ್ ನೀಡಿ ವೈವಾ ವೋಸಿಯ ಭಯವನ್ನು ವಿದ್ಯಾರ್ಥಿಗಳಿಂದ ಹಿಮ್ಮೆಟ್ಟಿಸಿತು ಎಂಬ ಸಂಕ್ಷೇಪದೊಂದಿಗೆ ಈ ಕಥಾಕಾಲಕ್ಷೇಪವನ್ನು ಮುಗಿಸುವೆ.
ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ