ಅಂತರ್ಜಾಲೀಯ ವಿವಾಹ

 ಮದುವೆ ಮಾಡಿಸಲು ಬರಬೇಕಾಗಿದ್ದ ಪುರೋಹಿತರಿಗೆ ಆಟೋ, ಓಲಾ, ಊಬರ್ ಯಾವುದೂ ಸಿಕ್ಕಲಿಲ್ಲ. 


ಪುರೋಹಿತರು ಇರಲಿ, ಮದುವೆಯ ಗಂಡು ಕೂಡಾ ರೈಲ್ವೆ ಸ್ಟೇಷನ್ನಲ್ಲಿ ಪೆಚ್ಚಾಗಿ ಕೂತಿದ್ದ. ಅವನ ಪರಿವಾರದವರು ಎಲ್ಲಾದರೂ ಬ್ರೇಕ್ ಫಾಸ್ಟ್ ಸಿಕ್ಕಬಹುದೇ ಎಂದು ಹುಡುಕುತ್ತಾ ಓಡಾಡುತ್ತಿದ್ದರು.


ಮದುವೆಯ ಹೆಣ್ಣು ಮತ್ತು ಅವಳ ಪರಿವಾರದವರು ನಿಮಿಷ ನಿಮಿಷಕ್ಕೂ ಕಾಲ್ ಮಾಡಿ ಯಾವಾಗ ಬರುವಿರಿ ಎಂದು ಗಂಡಿನ ಕಡೆಯವರನ್ನು ಕೇಳುತ್ತಿದ್ದಿದ್ದನ್ನು ಕೇಳಿ ಕೇಳಿ 'ಕಾಲ ಪುರುಷ'ನ ಬ್ಯಾನ್ಡ್ ವಿಡ್ತ್ ಕೂಡಾ ಲುಪ್ತವಾಗಿ '"ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎಂಬ ಮೆಸೇಜಿನ "ತಾಳಿ ಭಾಗ್ಯ"ವನ್ನೇ ಪಡೆಯಬೇಕಾಯಿತು.  ತಾನು ವಧೂಪರೀಕ್ಷೆಯ ದಿನ "ದೇವ ಬಂದಾ," "ಮೆಲ್ಲ ಮೆಲ್ಲನೆ ಬಂದನೇ",  "ಯಾರೇ ಬಂದವರು" ಇತ್ಯಾದಿ "ಬಂದ" ಪದಖಚಿತ ಕೀರ್ತನೆಗಳನ್ನು ಹಾಡಿದ್ದರಿಂದಲೇ ಈ ಬಂದ್ ಬಂದು ವಕ್ಕರಿಸಿತೇ ಎಂದು ವಧು ಮರುಗಿದಳು.


ಕೊನೆಗೂ ಹೆಣ್ಣಿನ ಅಜ್ಜಿಗೆ ಈ ಸಮಸ್ಯೆಯ ಪರಿಹಾರ ಹೊಳೆದೇ ಬಿಟ್ಟಿತು. ಮದುವೆ ಹೆಣ್ಣನ್ನು ಲ್ಯಾಪ್ ಟಾಪ್ ಮುಂದೆ ಕೂಡಿಸಿ ಐಟಿ ಗೌರಿ ಪೂಜೆ ಮಾಡಮ್ಮಾ ಎಂದು ಬಾಸಿಂಗ ಕಟ್ಟಿಯೇ ಬಿಟ್ಟರು.  ಓಲಾ ಇಲ್ಲದೆ ಬರಲಾಗದ ಓಲಗದವರ ಕೊರತೆ ನೀಗಲು ವಧುವಿನ ತಮ್ಮ ಕಿಟ್ಟಿ ಯೂಟ್ಯೂಬಿನಲ್ಲಿ ಹುಡುಕಿ ನಾದಸ್ವರವನ್ನು ನುಡಿಸಿದ್ದು ಎಲ್ಲರ ಮೈಯಲ್ಲೂ ಉತ್ಸಾಹಸಂಚಾರವಾಯಿತು. ಓಂ ಸ್ಕೈಪಾಯ ನಮಃ ಓಂ ದೂರದರ್ಶಿನ್ಯೆ3 ನಮಃ ಓಂ ದೂರಶ್ರವಣ ಕರ್ತಾಯೈ ನಮಃ ಎಂದು ಕಿಟ್ಟಿ ಪಠಿಸಿದ ಆವಾಹನಾ ಮಂತ್ರಗಳಿಗೆ ಸುಪ್ರೀತನಾಗಿ ಸ್ಕೈಪನಾರಾಯಣನು ವಾಹನಗಳು ಯಾವುದೇ ಇಲ್ಲದಿದ್ದರೂ ಮೇಘದಿಂದ ಮೇಘಕ್ಕೆ ವೇಗ ಹೆಚ್ಚಿಸಿಕೊಂಡು ಬಂದು ಸುಖಾಸೀನನಾದನು.  ಅತ್ತ ಪುರೋಹಿತರಿಗೆ ಇತ್ತ ಗಂಡಿನ ಕಡೆಯವರಿಗೆ ಸ್ಕೈಪ್ ನಾರಾಯಣವೃತಕ್ಕೆ ಮಿಂಚಿನ ಆಹ್ವಾನ ಹೋಯಿತು. ರೈಲ್ವೆ ಸ್ಟೇಷನ್ನಿನಲ್ಲೇ ವರನಿಗೆ ಅವನ ಕಡೆಯವರು ಹೇಗೋ ಹೊಂದಿಸಿ ತಕ್ಕಮಟ್ಟಿಗೆ ಅಲಂಕಾರ ಮಾಡಿದರು. ಬನಾರಸ್ಸಿಗೆ ಹೊರಟಿದ್ದ ಟ್ರೇನನ್ನು ವರನು ಹತ್ತಿದಾಗ ಅವನನ್ನು ತಡೆದು ಸ್ಕೈಪಾರಾಧನೆಗೆ ಕರೆತರುವ ದೃಶ್ಯಾವಳಿಯನ್ನು ಅವನ ಮಿತ್ರವೃಂದದವರು ಸೆರೆಹಿಡಿದರು. 


ಪುರೋಹಿತರ ಕಂಚಿನ ಕಂಠ ಮೊಳಗಿತು. ಮನೆಯಲ್ಲೇ ಅವರು ಹೋಮಕುಂಡವನ್ನು ರಚಿಸಿ ತಾವು ಸೃಷ್ಟಿಸಿದ ಹೊಗೆಯನ್ನು ತಾವೇ ಕುಡಿಯುತ್ತಾ ವರ್ಕ್ ಫ್ರಮ್ ಹೋಮವೆಂಬ ನಾಣ್ಣುಡಿಯನ್ನು ಸಾಕ್ಷಾತ್ಕಾರಗೈದರು. ವರನ ಮೊಬೈಲಿನಲ್ಲಿ ಚಾರ್ಜ್ ಕ್ಷೀಣಿಸುವ ಲಕ್ಷಣಗಳು ತೋರಿದ್ದರಿಂದ ಸಾವಧಾನವಾಗಿ ನಡೆಯಬೇಕಿದ್ದ ಸುಲಗ್ನವು ಟೂ ಎಕ್ಸ್ ಸ್ಪೀಡಿನಲ್ಲಿ ನೆರವೇರಿತು. ದೂರದೂರದಿಂದ ಲಾಗಿನ್ನಾಗಿದ್ದ ನೆಂಟರಿಷ್ಟರು ಲೈಕಾಕ್ಷತೆಯನ್ನು ವಧೂವರರ ಮೇಲೆ ಸುರಿಮಳೆಗೈದರು.


ಇಂತೀ ನೆಟ್ ವಿವಾಹ ಕಥನಂ ಸಂಪೂರ್ಣಮ್.


ಸಿ. ಪಿ. ರವಿಕುಮಾರ್




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)