ನಾನು ಮೌಂಟನ್ ಹೋಂಗೆ ಹೋಗಿದ್ದು
ಅಮೆರಿಕಾದಲ್ಲಿ ಒಂದು ವರ್ಷ ವೃತ್ತಿ ಜೀವನ ನಡೆಸಿ ಹಿಂದಿರುಗಿದ ಮೇಲೆ ಓದುವುದನ್ನು ಮುಂದುವರೆಸುವ ಅದಮ್ಯ ಬಯಕೆ ನನ್ನಲ್ಲಿ ಎದ್ದಿತು. ಮೌಂಟನ್ ಹೋಮಿನಲ್ಲಿದ್ದಾಗ ವೀಕೆಂಡ್ ಮಾಡಲು ಏನೂ ತೋರುತ್ತಿರಲಿಲ್ಲ. ಆಗ ಇಂದಿನಂತೆ ಪರ್ಸನಲ್ ಕಂಪ್ಯೂಟರ್ ಇರಲಿಲ್ಲ. ಭಾರತದ ಸಮಾಚಾರ ತಿಳಿದುಕೊಳ್ಳಲು ಇಂದಿನಂತೆ ಇಂಟರ್ನೆಟ್ ಇರಲಿಲ್ಲ. ಆಗ ಹಿಂದೂ ಪತ್ರಿಕೆಯ ಒಂದು ಇಂಟರ್ ನ್ಯಾಷನಲ್ ಆವೃತ್ತಿ ಬರುತ್ತಿತ್ತು. ನಮ್ಮ ತಂದೆ ಅದನ್ನು ಕಳಿಸುವ ವ್ಯವಸ್ಥೆ ಮಾಡಿದ್ದರು. ನಾಲ್ಕು ಪುಟಗಳ ಈ ನ್ಯೂಸ್ ಪೇಪರ್ ಓದಲು ನನ್ನ ಸಹೋದ್ಯೋಗಿಗಳು ಕಾದಿರುತ್ತಿದ್ದರು. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿ.ಇ. ಪದವಿ ಗಳಿಸಿದ ನಂತರ ನಾನು ಮಾಡುತ್ತಿದ್ದ ಕೆಲಸಕ್ಕೂ ನಾನು ಓದಿದ ವಿಷಯಗಳಿಗೂ ಏನೇನೂ ಸಂಬಂಧ ಇಲ್ಲವಲ್ಲ ಎಂದು ನನಗೆ ವ್ಯಥೆಯಾಗುತ್ತಿತ್ತು. ಮೌಂಟನ್ ಹೋಮಿನ ಪಬ್ಲಿಕ್ ಲೈಬ್ರರಿಯಲ್ಲಿ ಎಲೆಕ್ಟ್ರಾನಿಕ್ಸ್ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿದೆ. ಸಿಕ್ಕಲಿಲ್ಲ. ಮುಂದೆ ಕ್ಲಿಯರ್ ವಾಟರಿಗೆ ಬಂದಾಗ ನನ್ನ ಮಿತ್ರ ರವಿಚಂದ್ರನ್ ಯೂನಿವರ್ಸಿಟಿ ಆಫ್ ಸೌತ್ ಫ್ಲಾರಿಡಾದಲ್ಲಿ ಓದುತ್ತಿದ್ದುದನ್ನು ನೋಡಿ ನನ್ನ ಆಸೆ ಮತ್ತೆ ಜಾಗೃತವಾಯಿತು. ಅವನು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂ.ಎಸ್. ಮಾಡುತ್ತಿದ್ದ. ಅವನ ಪುಸ್ತಕಗಳನ್ನು ನೋಡಿದಾಗ ನಾನು ಅಕಾಡೆಮಿಕ್ಸ್ ನಿಂದ ಎಷ್ಟು ದೂರ ಇದ್ದೇನೆ ಎಂದು ವ್ಯಥೆಯಾಗುತ್ತಿತ್ತು. ಗೇಟ್ ಪರೀಕ್ಷೆಯಲ್ಲಿ ನಾನು ಉತ್ತಮ ಸ್ಥಾನ ಗಳಿಸಿದ್ದೆ. ಆಗ ಗೇಟ್ ಪರೀಕ್ಷೆಯ ಫಲಿತಾಂಶವು ಮೂರು ವರ್ಷಗಳ ಕಾಲ ಮಾನ್ಯವಾಗಿತ್ತು. ಹೀಗಾಗಿ ನಾನು ಹಿಂತಿರುಗಿದಾಗ ಗೇಟ್ ಮೂಲಕ ನನಗೆ ಎಂ.ಇ. ಮಾಡಲು ಪ್ರವೇಶ ಸಿಕ್ಕುವುದೆಂಬ ವಿಶ್ವಾಸ ಇತ್ತು.
ನ್ಯಾಯವಾಗಿ ನಾನು ಬಿ.ಇ. ಮುಗಿಸಿದ ನಂತರ ನೇರವಾಗಿ ಎಂ.ಇ. ಮಾಡಬೇಕಾಗಿತ್ತು. ಆದರೆ ನಮ್ಮ ಪರೀಕ್ಷೆಗಳು ಎಂದೂ ಸಮಯಕ್ಕೆ ಸರಿಯಾಗಿ ನಡೆಯಲಿಲ್ಲ. ಆಗ ಎಚ್. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳು. ಅವರಿಗೂ ಈ ವ್ಯವಸ್ಥೆಯನ್ನು ಸರಿಪಡಿಸಲು ಆಗಲಿಲ್ಲ. ಸೆಮೆಸ್ಟರ್ ಪರೀಕ್ಷೆಯ ದಿನಾಂಕ ಗೊತ್ತು ಮಾಡುವುದು, ಅದು ಸಮೀಪಿಸಿದಾಗ ವಿದ್ಯಾರ್ಥಿ ಮುಂದಾಳುಗಳ ಗುಂಪು ಉಪಕುಲಪತಿಗಳನ್ನು ಘೇರಾವ್ ಮಾಡಿ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಡ ಹೇರುವುದು, ಉಪಕುಲಪತಿಗಳು ಕೊನೆಗೆ ಒಪ್ಪಿಕೊಂಡುಬಿಡುವುದು, ಹೀಗೆ ವ್ಯವಸ್ಥೆ ಕುಂಟುತ್ತಾ ನಡೆಯುತ್ತಿತ್ತು. ನನ್ನ ಬಿ.ಇ. ಮುಗಿಯಲು ಸುಮಾರು ಆರು ವರ್ಷಗಳೇ ಬೇಕಾದವು!
ನನ್ನ ಬಿ.ಇ. ಕೊನೆಯ ಸೆಮೆಸ್ಟರ್ ಪರೀಕ್ಷೆ ಮುಗಿಯುವ ಹೊತ್ತಿಗೆ ಐಐಎಸ್ಸಿಯಲ್ಲಿ ತರಗತಿಗಳು ಪ್ರಾರಂಭವಾಗಿ ಒಂದು ಸೆಮೆಸ್ಟರ್ ಮುಗಿದಿತ್ತು. ಉಳಿದ ಆರು ತಿಂಗಳನ್ನು ಹೇಗೋ ಕಳೆದಿದ್ದರೆ ಮರುವರ್ಷ ಎಂ.ಇ. ಸೇರಬಹುದಾಗಿತ್ತು. ಯಾರೋ ನನಗೆ ಐಐಎಸ್ಸಿಯಲ್ಲಿ ಯಾರಾದರೂ ಪ್ರೊಫೆಸರನ್ನು ಹಿಡಿದರೆ ಅವರು ಪ್ರಾಜೆಕ್ಟ್ ಕೊಡಬಹುದು ಎಂದು ಸಲಹೆ ಕೊಟ್ಟರು. ನಾನು ಐಐಎಸ್ಸಿಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಂದು ಹೆಡ್ ಆಗಿದ್ದ ಪ್ರೊ ರಂಗಸ್ವಾಮಿ ಅವರನ್ನು ಭೇಟಿಯಾದೆ. ಅವರು ಏನೇನೋ ಹರಟೆ ಹೊಡೆದು ಕೊನೆಗೆ ನೀನು ಈಸೀಇ ಡಿಪಾರ್ಟ್ಮೆಂಟಿನ ಹೆಡ್ ಪ್ರೊ ಸೋಂದೆ ಅವರನ್ನು ಭೇಟಿಯಾಗು ಎಂದು ಕೈ ತೋರಿಸಿಬಿಟ್ಟರು. ನಾನು ತಲೆಯಾಡಿಸಿ ಈಸೀಇ ಡಿಪಾರ್ಟ್ಮೆಂಟಿನತ್ತ ಹೆಜ್ಜೆ ಹಾಕಿದೆ. ಇಬ್ಬರೂ ಪ್ರೊಫೆಸರುಗಳ ನಡುವೆ ಏನೋ ವೈಷಮ್ಯವಿತ್ತೆಂದು ಊಹಿಸಲು ಕಷ್ಟವಾಗಲಿಲ್ಲ. ಪ್ರೊ ಸೋಂದೆ ಅವರಿಗೆ ನಾನು ಪ್ರೊ ರಂಗಸ್ವಾಮಿ ಅವರ ಸಲಹೆಯ ಮೇರೆಗೆ ಬಂದಿದ್ದೇನೆಂದು ತಿಳಿದ ತಕ್ಷಣ ಅವರ ಹುಬ್ಬು ಗಂಟಾಯಿತು. ನನ್ನನ್ನು ನಿರ್ದಾಕ್ಷಿಣ್ಯದಿಂದ ಕಳಿಸಿಬಿಟ್ಟರು. ಮುಂದೆ ನಾನು ಪ್ರೊ ಸೋಂದೆ ಅವರ ಮೈತ್ರಿ ಗಳಿಸಿ ಅವರೊಂದಿಗೆ ಒಡನಾಡಿದಾಗ ಅವರಿಗೆ ಈ ಘಟನೆಯನ್ನು ನೆನಪಿಸುವ ಧೈರ್ಯ ಮಾಡಲಿಲ್ಲ!
ಮನೆಯಲ್ಲಿ ಕೂತು ಆರು ತಿಂಗಳು ಕಳೆಯುವುದಕ್ಕೆ ಮನಸ್ಸು ಒಪ್ಪಲಿಲ್ಲ. ಇನ್ಫೋಸಿಸ್ ಕಂಪನಿಯ ಆಫರ್ ನನ್ನ ಬಳಿ ಇತ್ತು. ಹೀಗೆ ನನ್ನ ವೃತ್ತಿಜೀವನ ಪ್ರಾರಂಭವಾಯಿತು. ಆಗ ಇನ್ಫೋಸಿಸ್ ಬಹಳ ಚಿಕ್ಕ ಕಂಪನಿ. ಜಯನಗರ ಐದನೇ ಬ್ಲಾಕಿನ ಮನೆಯಲ್ಲಿ ನಮ್ಮ ಆಫಿಸ್ ಇತ್ತು. ಅಲ್ಲಿದ್ದ ನಾಲ್ಕಾರು ರೂಮುಗಳಲ್ಲಿದ್ದ ಟೇಬಲ್ ಚೇರುಗಳೂ ಬಾಡಿಗೆಯವು. ಆಫೀಸಿನಲ್ಲಿ ನಮಗೆ ನಿರ್ಧಿಷ್ಟ ಕೆಲಸವಿರಲಿಲ್ಲ. ಆಗ ಟ್ರೇನಿಂಗ್ ಇತ್ಯಾದಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬೆಳಗ್ಗೆ, ಮಧ್ಯಾಹ್ನ ನಮಗೆ ಟೀ ಬರುತ್ತಿತ್ತು. ಒಬ್ಬ ಪಿಯೂನ್ ಅಡಿಗೆಮನೆಯಲ್ಲಿ ಟೀ ಮಾಡಿ ಎಲ್ಲರಿಗೂ ಸರಬರಾಜು ಮಾಡುತ್ತಿದ್ದ. ನೀವು ಯಾವಾಗ ಫಾರಿನ್ನಿಗೆ ಹೋಗುತ್ತೀರಾ ಎಂದು ಕೇಳುತ್ತಿದ್ದ. ಹೋದಾಗ ನನಗೆ ಅಲ್ಲಿಂದ ಟೇಪ್ ರೆಕಾರ್ಡರ್ ತಂದುಕೊಂಡಿ ಎಂದು ಎಲ್ಲರನ್ನೂ ಕೇಳುತ್ತಿದ್ದ.
ಅಲ್ಲಿದ್ದ ಇತರ ಸಹೋದ್ಯೋಗಿಗಳು ಬಹುತೇಕ ಐಐಟಿ ಮದ್ರಾಸಿನಲ್ಲಿ ಬಿಇ ಮಾಡಿದವರು. ಅವರು ವಿಭಿನ್ನ ವಿಭಾಗಗಳಿಂದ ಬಂದವರು. ಒಬ್ಬ ಮೆಕ್ಯಾನಿಕಲ್, ಇನ್ನೊಬ್ಬ ಟೆಕ್ಸ್ಟೈಲ್ಸ್, ಇತ್ಯಾದಿ. ಐಐಟಿಯಿಂದ ಬಂದವರು ಎಂದು ಅವರಿಗೆ ವಿಪರೀತ ಜಂಭವಿತ್ತು. ನಮ್ಮನ್ನು ಕಡೆಗಣ್ಣಿನಿಂದ ನೋಡುತ್ತಿದ್ದರು. ಮದ್ರಾಸ್ ಐಐಟಿಯಲ್ಲಿ ಎಂ.ಟೆಕ್ ಮಾಡಿದ ಒಬ್ಬ ಹುಡುಗ ಮಾತ್ರ ಬಹಳ ಆತ್ಮೀಯತೆಯಿಂದ ಎಲ್ಲರನ್ನೂ ಮಾತಾಡಿಸುತ್ತಿದ್ದ. ಅವನ ಹೆಸರು ಸಡಯಪ್ಪನ್. ಎಲ್ಲರೂ ಸಡೀ ಎನ್ನುತ್ತಿದ್ದರು. ಅವನು ಎಂಬಿಎ ಓದುತ್ತಿದ್ದ. ಆಗ ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ ಆಗಿದ್ದ. ಈ ಹುಡುಗರು ಮಾತಾಡುವಾಗ ಬಳಸುತ್ತಿದ್ದ ಫoಡಾ, ಮಚ್ಚ, ಮಚ್ಚಿ, ಮಿಸ್ಸೈ ಇತ್ಯಾದಿ ಪದಗಳು ನನಗೆ ಹೊಸವು.
ನಾನು ಹೇಗೋ ಆರು ತಿಂಗಳು ಇದ್ದು ಎಂ.ಇ. ಸೇರುವ ಹಂಬಲದಲ್ಲಿ ಕಾಲ ದೂಡುತ್ತಿದ್ದೆ. ನನ್ನ ಇಂಗಿತವನ್ನು ನಮ್ಮ ಡೈರೆಕ್ಟರ್ ರಾಘವನ್ ಅವರಿಗೆ ನಾನು ನೇರವಾಗಿ ಹೇಳಿಬಿಟ್ಟಿದ್ದೆ. ಕೆಲವೇ ವಾರಗಳಲ್ಲಿ ನಮಗೆ ಪಾಸ್ ಪೋರ್ಟ್ ಮಾಡಿಸಿಕೊಳ್ಳಬೇಕು ಎಂದು ಸೂಚನೆ ಬಂತು. ಇದಾದ ನಂತರ ಮುಂಬೈಗೆ ವೀಸಾ ಪಡೆಯಲು ಕಳಿಸಿದರು. ನಾವು ಸುಮಾರು ಹತ್ತು ಜನ ವೀಸಾಗಾಗಿ ಹೋದೆವು. ಆಗ ವೀಸಾ ಸಿಕ್ಕುವುದು ಕಷ್ಟವಾಗಿತ್ತು. ನಾವು ಮುಂಬೈಗೆ ಬಸ್ಸಿನಲ್ಲಿ ಹೋದೆವು! ರಾತ್ರಿ ಪ್ರಯಾಣದಲ್ಲಿ ಜೋರಾಗಿ ವಿಡಿಯೋ ಸಿನಿಮಾ ಗಲಾಟೆ. ಇದು ನನಗೆ ಹೊಸ ಅನುಭವ. ನಿದ್ದೆಗೆಟ್ಟು ಮುಂಬೈಗೆ ಬಂದಾಗ ಇಳಿದುಕೊಳ್ಳಲು ನಮ್ಮ ಕಂಪನಿಯ ಆತ್ಮೀಯ ಗೆಳೆಯರೊಬ್ಬರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅವರು ವಿಲೇ ಪಾರ್ಲೆಯ ತಮ್ಮ ಮನೆಯಲ್ಲೇ ಒಂದು ಕಂಪನಿ ನಡೆಸುತ್ತಿದ್ದರು. ಅವರ ಆಫೀಸಿನಲ್ಲೇ ಹಾಸಿಗೆಗಳನ್ನು ಹಾಕಿಸಿ ನಮಗೆ ವ್ಯವಸ್ಥೆ ಮಾಡಿದ್ದರು. ವಿಲೇ ಪಾರ್ಲೆಯ ರಾಮಕೃಷ್ಣ ಲಂಚ್ ಹೋಮಿನಲ್ಲಿ ನಮಗೆ ಒಳ್ಳೆಯ ಊಟ. ಮುಂಬೈ ನಗರದ ರುಚಿಗಳಾದ ಫಲೂದಾ, ಪಾವ್ ಭಾಜಿ ಇವೆಲ್ಲ ನನಗೆ ಆಗಲೇ ಪರಿಚಯವಾಗಿದ್ದು. ನಮಗೆಲ್ಲರಿಗೂ ಏನೂ ತೊಂದರೆ ಇಲ್ಲದೆ ವೀಸಾ ಸಿಕ್ಕಿತು.
ಅಮೇರಿಕಾದಲ್ಲಿ ಹಲವು ಪ್ರಾಜೆಕ್ಟ್ ಕೆಲಸಗಳು ನಡೆಯುತ್ತಿದ್ದವು. ಕೆಲವರು ನ್ಯೂಜರ್ಸಿಗೆ ಹೊರಟರು. ನಾವು ನಾಲ್ಕು ಜನ ಮತ್ತು ನಮ್ಮ ಡೈರೆಕ್ಟರ್ ಕ್ರಿಸ್ ಗೋಪಾಲಕೃಷ್ಣನ್ ಅರ್ಕನ್ಸಾದಲ್ಲಿ ಮೌಂಟನ್ ಹೋಮಿಗೆ ಹೋಗುವುದೆಂದು ಇತ್ಯರ್ಥವಾಯಿತು. ಈ ಅರ್ಕನ್ಸಾ ಎಲ್ಲಿದೆ ಎಂದೂ ನನಗೆ ಗೊತ್ತಿರಲಿಲ್ಲ.
ಆಗ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿರಲಿಲ್ಲ. ಬೆಂಗಳೂರಿನಿಂದ ಮುಂಬೈಗೆ ಹೋಗಿ ಅಲ್ಲಿಂದ ಪ್ಯಾನಾಮ್ ಏರ್ಲೈನ್ಸ್ (ಈಗ ಮುಚ್ಚಿಹೋಗಿದೆ) ವಿಮಾನದಲ್ಲಿ ಹೊರಟೆವು. ನನಗೆ ಇದೇ ಮೊದಲ ವಿಮಾನ ಪ್ರಯಾಣದ ಅನುಭವ. ಮುಂಬೈ ಏರ್ ಪೋರ್ಟಿನಲ್ಲಿ ಒಬ್ಬ ಅಮೆರಿಕನ್ ದಂಪತಿ ನನ್ನನ್ನು ಮಾತಾಡಿಸಿದರು. ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಕೇಳಿದರು. ನಾನು ಉತ್ತರಿಸಿದೆ. ಅವರಿಗೆ ನಾನು ಮೌಂಟನ್ ಹೋಮ್, ಅರ್ಕನ್ಸಾಸ್ ಎಂದಾಗ "ಓ! ಆರ್ಕಂಸಾ!" ಎಂದು ದೀರ್ಘವಾಗಿ ಉದ್ಗರಿಸಿದರು. ನಮಗೆ ಎಷ್ಟು ಸಂಬಳ ಎಂದು ಕೇಳಿದರು. ನಾನು ಹೇಳಿದೆ. ಅವರು ಚಿಂತಾಕ್ರಾಂತರಾದರು. ಅಷ್ಟು ಸಂಬಳದಲ್ಲಿ ಹೇಗೆ ಜೀವನ ನಡೆಸುವುದೆಂದು ಅವರು ಯೋಚಿಸುತ್ತಿದ್ದರು. "ಇಲ್ಲ, ಅದು ನಮ್ಮ ಖರ್ಚಿಗೆ ಮಾತ್ರ. ನಮ್ಮ ಮನೆ ಬಾಡಿಗೆಯನ್ನು ಕಂಪನಿ ವಹಿಸಿಕೊಳ್ಳುತ್ತದೆ" ಎಂದಾಗ ಅವರು ನಿಟ್ಟುಸಿರು ಬಿಟ್ಟು "ಓ! ಹಾಗನ್ನಿ! ಇಷ್ಟು.ಸಂಬಳದಲ್ಲಿ ನೀವು ಮೌಂಟನ್ ಹೋಮಿನಲ್ಲಿ ಶ್ರೀಮಂತರೇ ಆಗಿರುತ್ತೀರಿ, ಬಿಡಿ!" ಎಂದು ನಕ್ಕರು. ಆಗ ಡಾಲರಿಗೆ ಹತ್ತು ರೂಪಾಯಿ ಎಕ್ಸ್ಛೇಂಜ್ ಇತ್ತು. ಅವರು ಹೇಳಿದಂತೆ ನಮಗೆ ಸಿಕ್ಕುತ್ತಿದ್ದ ಖರ್ಚುವೆಚ್ಚ ನಮಗೆ ಮೌಂಟನ್ ಹೋಮಿನಲ್ಲಿ ಧಾರಾಳವಾಗಿ ಸಾಕಾಯಿತು.
#ನೆನಪುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ