"ಅರಸಿಗಳಿಗಿದು ವೀರ
(ವಿಂಡ್ಸರ್ ಕಾಸಲ್ ಊಟದ ಮನೆಯ ಚಿತ್ರ ನೋಡಿ)
ಊಟಕ್ಕೆ ಮುಂಚೆ ಗೋವಿಂದನನ್ನು ನೆನೆಯುವಂತೆ ಇಲ್ಲಿ ಗೋ ವಿಂಡ್ಸರ್ ಎಂದೇ ಊಟವನ್ನು ಪ್ರಾರಂಭಿಸುತ್ತಾರಂತೆ. ಇದು ವಿಂಡ್ಸರ್ ಕಾಸಲ್ ಅರಮನೆಯಲ್ಲಿ ಊಟದ ದೃಶ್ಯ. ಇದು ಸಂಜಯ ಲೀಲಾ ಬನ್ಸಾಲಿ ಅವರ ಚಿತ್ರದ ದೃಶ್ಯ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ. ಸಂಜಯನು ಉವಾಚಿಸುವ ಮೊದಲೇ ರಾಣಿಯು ಎಷ್ಟು ಜನರಿಗೆ ಆಹ್ವಾನ ಹೋಗಬೇಕು, ಯಾರು ಎಲ್ಲಿ ಕೂಡಬೇಕು, ಏನೇನು ವ್ಯಂಜನಗಳನ್ನು ತಯಾರಿಸಬೇಕು ಮುಂತಾದವುಗಳನ್ನು ನಿರ್ಧರಿಸಿ ಪ್ರಕಟಣೆ ಹೊರಡಿಸುತ್ತಿದ್ದಳು. ರಾಣಿಗೆ ಏನು ಕೆಲಸ ಎಂದು ಕೆಲವರು ಕುಹಕ ಆಡುವರಲ್ಲ, ಅವರು ಈ ಚಿತ್ರ ನೋಡಲಿ. ನೋಡಲಿ ಅದೆಷ್ಟು ಅಸಂಖ್ಯ ವಿವರಗಳನ್ನು ಕುರಿತು ರಾಣಿವಾಸವು ಯೋಚಿಸಬೇಕಾದ ಅಗತ್ಯವಿತ್ತು ಎಂದು! ಡ್ಯೂಕ್ ಆಫ್ ಬರ್ಮಿಂಗಮ್ ಅವರಿಗೆ ಬೇಯಿಸಿದ ಬಟಾಟೆ ಇಷ್ಟ. ಆದರೆ
ಆದರೆ ಲೇಡಿ ಬರ್ಮಿಂಗಮ್ ಅವರಿಗೆ ಇದರಿಂದ ವಾಯು ದೋಷ ಉಂಟಾಗುವುದು. ಅರ್ಲ್ ಆಫ್ ಬಕಿಂಗ್ ಹ್ಯಾಮ್ ಗೆ ಹ್ಯಾಮ್ ಇಲ್ಲದೇ ಊಟ ಸೇರದು. ಒಂದೇ ಎರಡೇ ಈ ಬಗೆಯ ಕುಶಪಿಷ್ಟೆಗಳು! ರಾಣಿ ಇಡೀ ದಿನ ಕೂತರೂ ಮುಂದಿನ ದಿನದ ಮೆನುವಿನಲ್ಲಿ ಏನಾದರೂ ಸಣ್ಣ ಲೋಪ ಯಾರಿಗಾದರೂ ಕಾಣಸದೇ ಇರದು.
ಇನ್ನು "ಮಾಡಿದ್ದುಣ್ಣೋ ಮಹರಾಯ" ಎಂಬ ಹಾಗೆ ಮಾಡಿದ್ದನ್ನು ಮಾತಿಲ್ಲದೆ ಉಣ್ಣುವ ಮಹಾರಾಜರಿಗೆ ಅಂಜದಿದ್ದರೂ ಮಾತಿಲ್ಲದೆ ಬಡಿಸುವ ಮಹಾಗಾಂಭೀರ್ಯದ ವ್ಯಾಲೆಗಳಿಗೆ ರಾಣಿ ಕೂಡಾ ಹೆದರುವಳು ಎಂಬುದು ಗುಪ್ತ ಸತ್ಯ. ನೋ ಮ್ಯಾನ್ ಈಸ್ ಎ ಹೀರೋ ಟು ಹಿಸ್ ವ್ಯಾಲೆ ಎನ್ನುತ್ತಾರೆ. ಹೊರಗೆ ಎಷ್ಟೇ ದೊಡ್ಡ ಹೀರೋ ಎಂಬ ಹೆಸರು ಪಡೆದಿರಲಿ, ಆದರೆ ತನ್ನ ಪರಿಚಾರಕನಿಗೆ ಯಾವ ಮನುಷ್ಯನೂ ಹೀರೋ ಅನ್ನಿಸುವುದಿಲ್ಲ. ಬ್ಯಾಟ್ ಮ್ಯಾನ್ ಮೆಣಸಿನಕಾಯಿ ಕಾರಕ್ಕೆ, ಜಿರಳೆಗೆ, ಹಲ್ಲಿಗೆ ಹೆದರುವುದನ್ನು ಪರಿಚಾರಕ ಬಲ್ಲ. ಹೀಗಾಗಿ ಅವನಿಗೆ ಹೀರೋ ಬಗ್ಗೆ ಅಂಥ ಅಂಧಭಕ್ತಿ ಏನೂ ಇಲ್ಲ. ತದ್ವಿರುದ್ಧವಾಗಿ ಸ್ವತಃ ಬ್ಯಾಟ್ ಮ್ಯಾನ್ ತನ್ನ ವ್ಯಾಲೆಯನ್ನು ಭಯಭಕ್ತಿಯಿಂದ ನೋಡುತ್ತಾನೆ. ಹೊಸತರಲ್ಲಿ ರಾಣಿಯು ನೋ ಮ್ಯಾನ್ ಈಸ್ ಎ ಹೀರೋ ಟು ಹಿಸ್ ವ್ಯಾಲೇ ಎಂಬುದು ಸರಿ, ಆದರೆ ವುಮನ್ ವಿಷಯ ಬೇರೆ ಎಂಬ ಧಾರ್ಷ್ಟ್ಯದಿಂದ ವ್ಯಾಲೆಗಳಿಗೆ ಅವರ ಸಣ್ಣಪುಟ್ಟ ದೋಷಗಳನ್ನು ತಿಳಿಸಲು ಪ್ರಯತ್ನಿಸಿದಳು. ನಿಮ್ಮ ಟೈ ಬಣ್ಣ ಅಂಥ ಗಾಢ ಪಚ್ಚೆಹಸಿರು ಯಾಕೆ? ಬಡಿಸುವಾಗ ಸ್ವಲ್ಪ ನಗುನಗುತ್ತಾ ಬಡಿಸಿ. ಅತಿಥಿಗಳು ಮತ್ತೊಂದು ಪೇಯ ಬಯಸಿದರೆ ಮುಖ ಗಂಟಿಕ್ಕದಿರಿ, ಇತ್ಯಾದಿ. ನಿಮ್ಮ ಬೋ ಚೆನ್ನಾಗಿದೆ ಎಂದು ಅವಳು ಹೊಗಳಿದರು ಕೂಡಾ ಅವರಿಗೆ ಅದು "ಬೋ ಚೆನ್ನಾಗಿದೆ" ಎಂಬ ಕಟಕಿಯಂತೆ ಕೇಳಿಸಿತು. ಇವೆಲ್ಲ ಟೀಕೆಗಳಿಗೆ ಅವರ ಭೀಕರ ಮೌನವೇ ಉತ್ತರವಾಗಿತ್ತು. ಅಂದು ಊಟದಲ್ಲಿ ನಾನಾ ದೋಷಗಳು ಉಂಟಾದವು. . ಬೆಂದ ಬಟಾಟೆಯೊಂದಿಗೆ ಬಟರ್ ಭರಣಿ ಬರಲೇ ಇಲ್ಲ. ಆಪಲ್ ಪೈಗಳ ಪೈ ಆರ್ ಸ್ಕ್ವೇರ್ ಹತ್ತು ಪರ್ಸೆಂಟ್ ಕಡಿಮೆಯಾಗಿದ್ದವು. ಕರ್ನಲ್ ಪಿಕರಿಂಗ್ ಅವರಿಗೆ ಬಡಿಸಿದ ವ್ಯಂಜನದಲ್ಲಿ ಟೂತ್ ಪಿಕ್ ಸಿಕ್ಕಿತು. ಎಲ್ಲಕ್ಕಿಂತ ಕ್ರೂರವಾದ ಅವಘಡವೆಂದರೆ ತಾನು ಕೇವಲ ಎರಡೇ ವಾರಗಳ ಹಿಂದೆ ಧರಿಸಿದ್ದ ಉಡುಪನ್ನು ಮತ್ತೆ ತಯಾರು ಮಾಡಿ ತನಗೆ ಉಡಲು ನೀಡಿದ್ದು. ಇಡೀ ವರ್ಷ ಒಮ್ಮೆಯೂ ತನ್ನ ಉಡುಪು ಪುನರಾವರ್ತನೆ ಆಗಬಾರದು. ಎಂಟು ತಿಂಗಳಲ್ಲಿ ಒಮ್ಮೆ ಅದೇ ಉಡುಪನ್ನು ಧರಿಸಿದರೂ ಲೇಡಿ ಎಡಿನ್ ಬರೋ ತನ್ನ ಐ ಬ್ರೋಗಳನ್ನು ಹೈ ಬ್ರೋ ಮಾಡುವಳು. ಇಂಥ ಪರಿಸ್ಥಿಯಲ್ಲಿ ... ಇದಾದ ನಂತರ ರಾಣಿಯು ವ್ಯಾಲೆಗಳ ಮುಂದೆ ತನ್ನ ಬ್ಯಾಳೆ ಬೇಯುವುದಿಲ್ಲ ಎಂದು ಅರಿತು ಅವರ ಮ್ಯಾಲೆ ಎಂದೂ ಕೋಪಿಸಿಕೊಳ್ಳದೆ ವ್ಯಾಳೆ ತಳ್ಳಿದಳು.
ಈ ಚಿತ್ರ ನೋಡಿ ನಿಮ್ಮಲ್ಲಿ ಮದುವೆ ಗೊತ್ತಾದವರು ಮತ್ತು ಮದುವೆಯ ಯೋಚನೆ ಮಾಡುತ್ತಿರುವವರು "ನನ್ನ ಮದುವೆಯಲ್ಲೂ ಇಂಥದ್ದೇ ಊಟ ಇರಬೇಕು" ಎಂದು ದಯವಿಟ್ಟು ಹಠ ಹಿಡಿಯಬೇಡಿ. ಭಾರತದಲ್ಲಿ ಹೀಗೆ ಸಾಲಾಗಿ ಕೂಡಿಸಿ ಪಂಕ್ತಿ ಭೋಜನ ಬಡಿಸಲು ಯಾವ ವ್ಯಾಲೆಗಳೂ ಇರುವುದಿಲ್ಲ. ಬಾಳೆ ಎಲೆ ಮೇಲೆ ಒಂದಾದ ನಂತರ ಒಂದು ವ್ಯಂಜನಗಳನ್ನು ಅವಸರದಲ್ಲಿ ಬಡಿಸುತ್ತ ಸಾಗುವ ಭಟ್ಟರು ಮಾತ್ರ ಸಿಕ್ಕುವರು. ಇವರಿಗೆ ನೀವು ಇನ್ನೊಂದು ಹಪ್ಪಳ ಹಾಕಿ ಎಂದೆಲ್ಲ ಕೇಳಿದರೆ ಯುದ್ಧವೇ ನಡೆದು ಹೋದೀತು. ಬೇಕಾದರೆ ಒಂದು ಆನೆಗೆ ಸಾಕಾಗುವಷ್ಟು ಅನ್ನ ಬಡಿಸಿಯಾರು. ಓಡುವ ನದಿ ಸಾಗರವ ಬೆರೆಯಲೆ ಬೇಕು ಎಂಬ ಹಾಡು ನೆನಪಾಗುವಂತೆ ನಿಮ್ಮ ಎಲೆಯಿಂದ ಓಡಿ ಪಕ್ಕದವರ ಎಲೆಯನ್ನು ಬೆರೆಯುವಷ್ಟು ಬಿಸಿ ಸಾರನ್ನು ಬಡಿಸಿ ಮುಂದುವರೆದಾರು. ಆದರೆ ಪುನಃ ಹಪ್ಪಳ ತನ್ನಿ ಎಂದರೆ ಕಪಾಳ ಮೊಕ್ಷವೇ ಆದೀತು. ಇನ್ನೊಂದು ಮಸಾಲೆ ವಡೆ ಕೇಳಿದರೆ ದ ವಡೆಯೊಂದಿಗೆ ದವಡೆಯೂ ಬಿದ್ದೀತು.
ಶಾಮಿಯಾನದಲ್ಲಿ ವಿಂಡ್ಸರ್ ಮಾದರಿಯ ಅಲಂಕಾರ ಮಾಡುವವರು ಸಿಕ್ಕಬಹುದು. ಆದರೆ ಟೇಬಲ್ ಮುಂದೆ ನಾಜೂಕಾಗಿ ಕೂತು ನಾಜೂಕಾಗಿ ತಿನ್ನುವ ಬಂಧುಬಳಗ ನಿಮಗೆ ಇರುವರೇ ಎಂದು ಒಮ್ಮೆ ಯೋಚಿಸಿ. ನಾವು ಭೀಮ ಹನುಮರ ನಾಡಿನವರು. ಸೂಪ್ ಬಟ್ಟಲನ್ನೇ ಮೇಲೆತ್ತಿ ಸೊರ್ ಎಂದು ಕುಡಿಯುವವರು. ತುತ್ತನ್ನು ಎಗರಿಸಿ ಬಾಯಿಗೆ ಹಾಕಿಕೊಳ್ಳುವವರು. ಪಕ್ಕದಲ್ಲಿ ಕೂತ ಮಕ್ಕಳು ತಿನ್ನದೇ ಬಿಟ್ಟ ಲಾಡು ಚಿರೋಟಿಗಳನ್ನು ಏನೂ ಮುಲಾಜಿಲ್ಲದೆ ಎತ್ತಿಕೊಂಡು ಕಬಳಿಸುವವರು. ಫಿಂಗರ್ ಬೋಲ್ ಬಂದಾಗ ನಿಂಬೆಯ ತುಂಡನ್ನು ನೀರಿಗೆ ಹಿಂಡಿ ಎಲೆಯ ತುದಿಯಲ್ಲಿ ವೇಸ್ಟ್ ಆಗುತ್ತಿರುವ ಉಪ್ಪನ್ನು ಬೆರೆಸಿ ಹೀರಿ ತೇಗುವವರು. ನಮಗೆ ನೆಲದ ಮೇಲೆ ಕೂತು ಎಲೆಯ ಮೇಲೆ ಊಟ ಮಾಡುವುದೇ ರಾಣಿಯೋಗ್ಯ ಎಂದು ನೆನಪಿಸುತ್ತಾ ನನ್ನ ಮಾತನ್ನು ಮುಗಿಸಿ ನಮ್ಮ ಅರಮನೆಯ ಅಡುಗೆಮನೆಗೆ ಪ್ರಸ್ಥಾನ ಮಾಡುತ್ತೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ