ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಡಲ್ ಆಟ

ಇಮೇಜ್
  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು!* ಮಳೆ ಬಂದಾಗ ಮೈದಾನದಲ್ಲಿ ನೀರು ನಿಂತಾಗ ನೀನೂ ಬಂದು ಜೊತೆ ಸೇರು ಆಡೋಣ ಅತ್ತಕಡೆಯಿಂದಿತ್ತಕಡೆ ಹಾರಿ ಮತ್ತೆ ಇತ್ತಕಡೆಯಿಂದತ್ತಕಡೆ ಹಾರಿ ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ನೋಡು ನಾನೇ ಹನುಮಂತನಂತೆ ಅದೇ ಲಂಕೆ, ನಡುವೆ ಕಡಲಂತೆ ನೋಡು ಒಂದೇ ಸಲ ಹಾರಿ ಬಂದು ನಿಂತೆ ನೀನೂ ಬಂದರೆ ಜೊತೆಗೇ ಆಡೋಣವಂತೆ  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ಛಪ್ ಎಂದು ಕಡಲಲ್ಲಿ ಹಾರಿಸೋಣ ಕೊಚ್ಚೆ ಅಮ್ಮ ಕರೆಯುವವರೆಗೂ ಮನಸೋ ಇಚ್ಛೆ  ಏನೀಗ ಕೊಳೆಯಾದರೆ ಒಂದಿಷ್ಟು ಬಟ್ಟೆ ಒಗೆದರೆ ಬಿಳಿಯಾಗದೇ ಇರುವುದೇ ಮತ್ತೆ! ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! (*ಪಡಲು - puddle. ಮಳೆ ಬಂದಾಗ ನೀರು ಸೇರಿ ಉಂಟಾಗುವ ಪುಟ್ಟ ಹೊಂಡ) ಸಿ ಪಿ ರವಿಕುಮಾರ್

ತೊರೆ ಮತ್ತು ನದಿ

ಇಮೇಜ್
ಕಾಡಿನ ಅಂಚಿಗೆ ಬಂದಾಗ ತೊರೆ ದೊಡ್ಡದಾಗಿ ಬೆಳೆದು ಬಿಟ್ಟಿತ್ತು ಹೆಚ್ಚೂಕಡಿಮೆ ನದಿಯಾಗಿ ಮತ್ತು ಹಾಗೆ ಬೆಳೆದುಬಿಟ್ಟಿದ್ದರಿಂದ ಈಗ ತಗ್ಗಿತ್ತು ಸಾಕಷ್ಟು ಅದರ ವೇಗ ಇನ್ನೂ ಎಳೆಯದಾಗಿದ್ದಾಗ ಹೇಗೆ ಕುಣಿದು ಕುಪ್ಪಳಿಸುತ್ತಿತ್ತೋ ಹಾಗೆ ಜಿಗಿಯದೆ, ಹೊಳೆಯದೆ, ಓಡದೆ ಅತ್ತಿಂದಿತ್ತ ಗಂಭೀರತೆಯಿಂದ ಕೂಡಿತ್ತು ಹೊಳೆಯ ಚಿತ್ತ  ಎಲ್ಲಿಗೆಂದು ಪ್ರಯಾಣ ಈಗ  ನದಿಗೆ ಗೊತ್ತಿತ್ತು ನಿಖರ "ಒಂದು ದಿನ ಮುಟ್ಟುತ್ತೇನೆ ಸಾವಕಾಶ, ಏನವಸರ?" ವನದ ಎತ್ತರಗಳಲ್ಲಿ ಹರಿದು ಬರುವ ಪುಟ್ಟ ಹಳ್ಳ ತೊರೆ ಹಾತೊರೆದು ಹರಿಯುತ್ತಾ ಬರೆಯುತ್ತಿವೆ  ವಕ್ರ ಗೆರೆ ಎಷ್ಟೊಂದಿದೆ ನೋಡಬೇಕಾದದ್ದು, ಕಲಿಯಬೇಕಾದದ್ದು ಎಂಬಂತೆ ಓಡುತ್ತಿವೆ ಅವಸರದಲ್ಲಿ ಬಿದ್ದು ಎದ್ದು. ಮೂಲ: ಎ ಎ ಮಿಲ್ನ್  ಅನುವಾದ: ಸಿ ಪಿ ರವಿಕುಮಾರ್   By the time it came to the edge of the Forest, the stream had grown up, so that it was almost a river, and, being grown-up, it did not run and jump and sparkle along as it used to do when it was younger, but moved more slowly. For it knew now where it was going, and it said to itself, “There is no hurry. We shall get there some day.” But all the little streams higher up in the Forest went this way and that, quickly, eagerly, ...

ಫಾಂಟ್ಆಸ್ಟಿಕ್ ಕನ್ನಡ

ಕನ್ನಡ ಅಕ್ಷರದಲ್ಲಿ ಇಲ್ಲ ಲೋವರ್ ಕೇಸ್, ಅಪ್ಪರ್ ಕೇಸ್  ಇದು ಏನು ತೋರಿಸುತ್ತದೆ ನಮ್ಮಲ್ಲಿ ಇರಲೇ ಇಲ್ಲ ಮೇಲು ಕೀಳು. ಕೇಳೇ ಇರಲಿಲ್ಲ ನಮ್ಮವರು ಕ್ಯಾಪಿಟಲ್ ಲೆಟರ್ಸ್  ಇವೆಲ್ಲಾ ಕ್ಯಾಪಿಟಲಿಸಂ ತಂದ ಗೋಳು. ಬೋಲ್ಡ್ ಫೇಸ್ ಎಲ್ಲಿತ್ತು ನಮ್ಮಲ್ಲಿ ನಮ್ಮದು ಮೆಲುದನಿಯ ಮಾತು ಐಟಾಲಿಕ್ಸ್ ಇರಲೇ ಇಲ್ಲ ಏಕೆಂದರೆ ಅತ್ತಿತ್ತ ಬಾಗದೆ ನಿಲುವು ನೇರವಾಗಿತ್ತು. ಸಿ ಪಿ ರವಿಕುಮಾರ್

ವಿನಯ

ಇಮೇಜ್
ಜನ ಕೇಳಿದಾಗ ಪ್ರಶ್ನೆ ಕೊಡುವೆ ಸಿದ್ಧ ಉತ್ತರವನ್ನೇ : "ಓಹೋ ಚೆನ್ನಾಗಿದ್ದೇನೆ, ಎಲ್ಲಾ ನಿಮ್ಮ ಆಶೀರ್ವಾದ" ಮತ್ತೊಬ್ಬರು ಕೇಳಿದಾಗ ಪ್ರಶ್ನೆ ನನ್ನ ಉತ್ತರ ಪುನರಾವರ್ತನೆ: "ನೀವು ಹೇಗಿದ್ದೀರಿ? ನಾನು ಚೆನ್ನಾಗಿದ್ದೇನೆ! ಧನ್ಯವಾದ!" ನಾನು ಉತ್ತರಿಸುವುದು ಖಂಡಿತ ನನ್ನ ಉತ್ತರ ಪೂರ್ವನಿಶ್ಚಿತ ಮತ್ತು ವಿನಯಪೂರ್ವಕ  ಯಾವಾಗಲೂ. ಆದರೆ    ಕೆಲವೊಮ್ಮೆ ಅಂದುಕೊಳ್ಳುತ್ತೇನೆ       ಅವರು ಏನೂ ಕೇಳದಿದ್ದರೆ ಮೇಲು. ಮೂಲ: ಏ ಏ ಮಿಲ್ನ್  ಕನ್ನಡ ಅನುವಾದ: ಸಿ ಪಿ ರವಿಕುಮಾರ್

ಏಐ ದೂರದರ್ಶಿನಿ

ಇಮೇಜ್
ಸಿ. ಪಿ. ರವಿಕುಮಾರ್  ಟಿವಿ  ನೋಡಿ ಬೋರಾಯ್ತು,ಹೊಸ ಟಿವಿ ಸೆಟ್ ಖರೀದಿಸೋಣ ಎಂದು ಹೆಂಡತಿ ದುಂಬಾಲು ಬಿದ್ದಳು. ಯಾವಾಗ ವಾಗ್ವಾದಗಳು ಆರ್ನಬ್ ರಾಯ್ ಮಟ್ಟವನ್ನು ಮುಟ್ಟಿತೋ ಆಗ ಮಂಜು ನಿರ್ವಾಹವಿಲ್ಲದೆ ಒಂದು ಆಫ್ಲೈನ್ ಅಂಗಡಿಗೆ ಭೇಟಿ ಕೊಡಲು ನಿರ್ಧರಿಸಿದ.  ಅಲ್ಲಿ ಒಬ್ಬ ಸ್ವಾಗತಕಾರಿಣಿ ಅವನನ್ನು ಮುಗುಳ್ನಗೆಯ ಸ್ವಾಗತದಿಂದ ಮೋಡಿ ಮಾಡಿದ್ದಲ್ಲದೆ ಅವನಿಗೆ ಕೂಡಲೇ ಬಿಸಿ ಕಾಫಿ ಕೊಡುವಂತೆ ಪರಿಚಾರಕನಿಗೆ ಕರೆ ಮಾಡಿ ತಿಳಿಸಿದಳು. "ವಾವ್ ಆನ್ಲೈನ್ ಖರೀದಿಯಲ್ಲಿ ಈ ರೀತಿಯ ಸ್ವಾಗತ ಎಲ್ಲಿ ಸಿಕ್ಕುತ್ತೆ!" ಎಂದು ಯೋಚಿಸುತ್ತಾ ಮಂಜುವಿನ ಕಣ್ಣು ಮಂಜಾಯಿತು. ಅಷ್ಟರಲ್ಲಿ ಮಂಜುವಿನ ಡಾಪಲ್ ಗ್ಯಾಂಗರ್ ಎನ್ನಬಹುದಾದ ಒಬ್ಬ ಸೇಲ್ಸ್ಮನ್ ಕಾಣಿಸಿಕೊಂಡು "ಹೇಗಿದ್ದೀರಾ ಸಾರ್! ನಿಮಗೆ ಟಿವಿ ತಾನೇ ಬೇಕಾಗಿರೋದು?" ಎಂದ. "ನಿಮಗೆ ಹೇಗೆ ಗೊತ್ತಾಯಿತು!" "ಸಾರ್ ಈ ಕೆಲಸ ಮಾಡ್ತಾ ಮಾಡ್ತಾ ಇಪ್ಪತ್ತೈದು ವರ್ಷ ಆಯಿತು" ಎಂದು ಡಾಪಲ್ ಗ್ಯಾಂಗರ್ ತನ್ನ ಅರೆಬಕ್ಕ ತಲೆಯನ್ನು ತೋರಿಸಿ ನಕ್ಕ. "ಜನರ ಮುಖ ನೋಡಿಯೇ ನಾನು ಅವರಿಗೆ ವಾಷಿಂಗ್ ಮೆಶೀನ್ ಬೇಕೋ, ಮಿಕ್ಸರ್ ಅಂಡ್ ಗ್ರೈಂಡರ್ ಬೇಕೋ, ಫ್ರಿಜ್ ಬೇಕೋ, ಎಲೆಕ್ಟ್ರಿಕ್ ಶೇವರ್ ಬೇಕೋ, ಟಿವಿ ಬೇಕೋ ಹೇಳಿಬಿಡಬಲ್ಲೆ" "ವಾವ್, ನೋಡಿ ಇದೆಲ್ಲ ಆನ್ಲೈನ್ ಖರೀದಿಯಲ್ಲಿ ಎಲ್ಲಿ ಸಾಧ್ಯ!" ಎಂದು ಮಂಜು ಕಾಫಿಯ ಸಿಪ್ ತೆಗೆದುಕೊಂಡ. ಫಿಲ್ಟರ್ ಕಾಫಿ ನಿಜವಾಗಿಯೂ...

ಅರ್ಧ ದಾರಿ ಮೇಲೆ

ಇಮೇಜ್
ಮೆಟ್ಟಿಲನೇರುತ ನಡುವಿನ ಮೆಟ್ಟಿಲ ಮೇಲೆ ಕೂಡುವೆನು ನಾನು ಇದುವೇ ನನ್ನಯ ಮೆಚ್ಚಿನ ಮೆಟ್ಟಿಲು, ಏತಕೆ ಎನ್ನುವಿರೇನು? ಮೇಲೂ ಅಲ್ಲದ ಕೆಳಗೂ ಅಲ್ಲದ ನಡುವಣ ಮೆಟ್ಟಿಲು ಚೆನ್ನ ಕುಳಿತುಕೊಳ್ಳದೇ ಇದ್ದರೆ ಅಲ್ಲಿ, ಕರಗದು ತಿಂದ ಮೊಸರನ್ನ. ಅಂತ್ಯವಲ್ಲ , ಆರಂಭವೂ ಅಲ್ಲ ಎಲ್ಲೋ ಇದೆ ನಡುವಿನಲಿ! ಮುಂದಿನ ಬೆಂಚಿನ ಮೌನಿಯೂ ಅಲ್ಲ, ಅಲ್ಲ ಹಿಂದಿನ ಬೆಂಚ್ ವಾಚಾಳಿ! ಏನೇನೋ ಆಲೋಚನೆ, ಕಲ್ಪನೆ, ಬರುವುವು ಇಲ್ಲಿ ಕುಳಿತಾಗ, ಕೇಳದಿರಿ ಆಲೋಚನೆ ಏತಕೆ ಏಐ ಏರ್ ಪ್ಲೇನ್ ಏರಿರುವಾಗ! ಮೂಲ: ಏ ಏ ಮಿಲ್ನ್  ಭಾವಾನುವಾದ: ಸಿ. ಪಿ. ರವಿಕುಮಾರ್

ನನ್ನ ನೆರಳು

ಇಮೇಜ್
 ನನ್ನ ನೆರಳು ನನಗೊಬ್ಬ ಸ್ನೇಹಿತನಿದ್ದಾನೆ, ಅವನ ಹೆಸರು ನೆರಳು ನಮ್ಮ ಸ್ನೇಹ ಹೇಗೆಂದರೆ ಹೇಗೋ ಜೀವ-ಕೊರಳು  ನನ್ನೊಂದಿಗೇ ಇರುತ್ತಾನೆ ಯಾವಾಗಲೂ, ಒಳಗೂ ಹೊರಗೂ ಮಾತಾಡುವುದಿಲ್ಲ ಒಂದೂ ಎಂಬುದೇ ಒಂದು ಕೊರಗು  ಅಡಿಯಿಂದ ಮುಡಿವರೆಗೆ ಎಲ್ಲ ನನ್ನ ಹಾಗೇ ಇವನು ನಾನು ಸೇರುವ ಸ್ಥಳವನ್ನು ನನಗಿಂತ ಮುಂಚೆ ಸೇರುವನು ಏನೋ ವಿಚಿತ್ರವಿದೆ ಇವನು ಬೆಳೆಯುವ ರೀತಿಯಲ್ಲಿ ಮಕ್ಕಳು ಬೆಳೆಯುವಾಗ ಬೆಳೆಯುವರು ಮಂದಗತಿಯಲ್ಲಿ ಆದರೆ ಇವನೋ! ಒಮ್ಮೆಲೇ ಉದ್ದವಾಗುವನು ಒಮ್ಮೊಮ್ಮೆ! ರಬ್ಬರ್ ಚೆಂಡಿನ ಹಾಗೆ ಪುಟಿದು ಮೇಲೆದ್ದು ಛಂಗನೆ! ಗಿಡ್ಡವಾಗುವನು ಒಮ್ಮೊಮ್ಮೆ ಹಠಾತ್ತಾಗಿ ಮಾಯಾವಿ ಮಾಯವಾಗಿಬಿಡುವನು ಎಲ್ಲೋ ಹೇಳದೇ ಕೇಳದೇ! ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಎಲೆ ಪುರಾಣ

ಇಮೇಜ್
  ನೀನಾರಿಗಾದೆಯೋ ಎಲೆ ಮಾನವ ಎಂದು ಕವಿಯು ಹಾಡಿದಾಗ ಅಲ್ಲಿ ಒತ್ತು ಕೊಡಬೇಕಾದದ್ದು ಎಲೆಗೆ ಎಂದು ನಮಗೆ ಯಾರೂ ಹೇಳಿಕೊಡಲೇ ಇಲ್ಲ. ಎಲೆಗೂ ಮಾನವನಿಗೂ ಬಹಳ ಹತ್ತಿರದ ನಂಟಿರುವುದನ್ನು ಆಡಮಪುರುಷನ ಚಿತ್ರ ನೋಡಿದವರು ಬಲ್ಲರು. ನರಾಡಮನು ತನ್ನ ಮಾನವ ಮುಚ್ಚಿಕೊಳ್ಳಲು ಅಂಜೂರದ ಎಲೆಯ ಮರೆಹೋದನೆಂದು ಹೇಳಲಾಗುತ್ತದೆ. ಇದೀಗ  ಎಲೆಗಳಿಗೆ ಇನ್ನೂ ಅನೇಕ ವಿಧದ ಉಪಯುಕ್ತತೆಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಹಿಡಿಯುತ್ತಿದ್ದಾರೆ. ಟಾಯ್ಲೆಟ್ ಪೇಪರ್ ಬದಲಿಗೆ ಎಲೆ ಬಳಸಬಹುದು ಎಂಬ ಈ ಆವಿಷ್ಕಾರವನ್ನು ಗಮನಿಸಿರಿ. ಈ ಬಿಸಿಬಿಸಿ ಸುದ್ದಿಯನ್ನು ಬಿಬಿಸಿ ಬಿತ್ತರಿಸಿದ ಕಾರಣ ಇದು ಸತ್ಯವೇ ಇರಬೇಕೆಂದು ಕಣ್ಮುಚ್ಚಿ ಹೇಳಬಹುದು.  ಅದಕ್ಕೆ ಯಾವ ಅಗ್ನಿಪರೀಕ್ಷೆಯ ಅಗತ್ಯವಿಲ್ಲ.  ಎಲೆಲೆ ರಸ್ತೆ ಏನ್ ಅವ್ಯವಸ್ತೆ ಅಂತ ರತ್ನ ತೂರಾಡುತ್ತಾ ಹೋಗಿದ್ದು ಎಲೆಗಳನ್ನು ಹುಡುಕಿಕೊಂಡೇ ಎಂಬ ಸುದ್ದಿಯನ್ನೂ ನಾನು ಓದಿದ್ದು ಬಿಬಿಸಿಯಲ್ಲೇ ಇರಬೇಕು. ಮರೆತಿದೆ. ಇದನ್ನು ನಾನು ರಾಜಾರಾಂ ಅವರಿಗೆ ಹೇಳಿದಾಗ ಅವರು ನಂಬಲಿಲ್ಲ. ಅವರೊಬ್ಬ ಡೌಟಿಂಗ್ ಥಾಮಸ್. ಎಲ್ಲದಕ್ಕೂ ಡೌಟು. ನಾನು ಮೇಲೆ ಹೇಳಿದ ಸುದ್ದಿ ನಿಜವೇ ಎಂದು ಅವರು ಡೌಟ್ ಮಾಡಲಿಲ್ಲ. ಅದು ಬಿಬಿಸಿಯಲ್ಲಿ ಪ್ರಕಟವಾಯಿತು ಎಂಬ ವಿಷಯದಲ್ಲಿ ಅವರ ಸಂಶಯ.   "ಇರಲಾರದು" ಎಂದು ಚಾಲೆಂಜ್ ಮಾಡಿದರು. ನನಗೆ ರೇಗಿ "ಬೇಕಿದ್ದರೆ ನೀವು ಗೂಗಲ್ ಮಾಡಿ ನೋಡಿ ಎಂದು ನಾನು ಅವರಿಗೆ ಮರುಚಾಲೆಂಜ್ ಮಾಡಿದೆ...

ಕವಿಯ ವ್ಯಕ್ಷ

ಇಮೇಜ್
  ಕವಿಯ ವೃಕ್ಷದ ಕೆಳಗೆ  ವಿರಮಿಸು ಬಾ ನನ್ನೊಂದಿಗೆ ಕತೆಗಳ ಎಲೆಗಳ ದಟ್ಟ ಚಾವಣಿಯ ಮೇಲೆ ನೋಡು ಪದಗಳ ಬಲೆಗಳ ಹೆಣಿಗೆ ಕವಿಯ ವೃಕ್ಷದ ರೆಂಬೆ ಕೊಂಬೆಗಳು ಹೇಗೆ ನೋಡು ಹರಡಿವೆ ಬೆಟ್ಟದಿಂದ ಕಡಲಿನವರೆಗೆ ವಿಶ್ರಮಿಸು ಬಾ ಕನಸು ಕಾಣುತ್ತಾ  ಅಥವಾ ಮೇಲೇರು ಮರದ ತುದಿಯತ್ತ - ಏರುವಾಗ ಮಾತ್ರ ಸ್ವಲ್ಪ ಜಾಗ್ರತೆ ವಹಿಸು  ಮೇಲಿಂದ ಬಿದ್ದಾವು ಪ್ರಾಸ, ಅಲಂಕಾರ, ಛಂದಸ್ಸು. ಮೂಲ: ಶೆಲ್ ಸಿಲ್ವರ್ಸ್ಟೀನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಸಮಯ

 ಸಮಯವು  ಕಾದವರಿಗೆ ಅತೀ ನಿಧಾನ ಬೆದರಿದವರಿಗೆ ಅತೀ ತ್ವರಿತ ದುಃಖಿಗಳಿಗೆ ಅತೀ ದೀರ್ಘ ಸುಖಿಗಳಿಗೆ ಅತೀ ಗಿಡ್ಡ  ಆದರೆ ಪ್ರೇಮಿಸುವವರಿಗೆ ಸಮಯವು ಅಪ್ರಸ್ತುತ ಮೂಲ: ಹೆನ್ರಿ ವ್ಯಾನ್ ಡೈಕ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಅಂತರ

ಇಮೇಜ್
ಅಕ್ಕಪಕ್ಕದಲ್ಲಿ ಬೆಳೆಯುತ್ತಿದ್ದವು ಹೊಲದ ತುದಿಯಲ್ಲಿ ಒಂದು ಗುಲಾಬಿ ಪೊದೆ ಮತ್ತು ಒಂದು ನೀಲಗಿರಿ ಮರ ಕಂಗೊಳಿಸುತ್ತಿದ್ದವು ಎರಡೂ ಹಸಿರು ಹಸಿರಾಗಿ ಗಾಳಿ,ಮಳೆಗಳ ಕುರಿತು ಸಂಭಾಷಣೆ ಪರಸ್ಪರ. ಹರಡಿಕೊಂಡಿತು ಗುಲಾಬಿಯ ಹೊದರು,  ನೀಲಗಿರಿ ಬೆಳೆಯಿತು ಬಾನೆತ್ತರ ಈಗ ನೀಲಗಿರಿಯ ಮಾತಲ್ಲಿ ಹೊಸತನ: ಹಾರಾಡುವ ಹದ್ದು, ನೀಲಾಕಾಶ, ಗಿರಿಶಿಖರ. "ನಾನೇ ದೂಡ್ಡವನೆಂದು ಬಗೆದಂತಿದೆ ನೀನು!" ಗುಲಾಬಿಯ ಹೊದರು ಮಾಡಿಕೊಂಡಿತು ಬೇಸರ ಕೇಳಿಸಲಿ ಮೇಲಿರುವ ಮರದ ತುದಿಗೆಂದು ಜೋರಾಗಿ ಕಿರುಚಿ ಹರಡಿತು ತನ್ನ ಅಪಸ್ವರ. "ಹಳೆಯದೆಲ್ಲಾ ಮರೆತುಹೋಯಿತು ಅಲ್ಲವೇ ನಿನಗೆ ಎತ್ತರ ಬೆಳೆದೆನೆಂಬ ಅಹಂಕಾರ!" "ನಾನು ಬೆಳೆದದ್ದು ನಿಜ, ಆದರೆ ನೀನು ಹಾಗೇ  ಕುಬ್ಜನಾಗೇ ಉಳಿದದ್ದು ಸೃಷ್ಟಿಸಿತು ಅಂತರ" ಮೂಲ: ಶೆಲ್ ಸಿಲ್ವರ್ಸ್ಟೀನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ನೋಟ

ಇಮೇಜ್
ಸ್ಟೀವನ್ ನನ್ನನ್ನು ಚುಂಬಿಸಿದ  ವಸಂತದಲ್ಲಿ ರಾಬಿನ್ ಚುಂಬಿಸಿದನು ಶಿಶಿರದಲ್ಲಿ. ಕೊಲಿನ್ ಮಾತ್ರ ಚುಂಬಿಸಲೇ ಇಲ್ಲ ಸುಮ್ಮನೇ ನೋಡಿದ ಕಣ್ಣಿಟ್ಟು ಕಣ್ಣಲ್ಲಿ. ನಗೆಯಲ್ಲಿ ಕರಗಿಹೋಯಿತು ಸ್ಟೀವನ್ ಕೊಟ್ಟದ್ದು ಆಟದಲ್ಲಿ ಕಳೆದುಹೋಯಿತು ರಾಬಿನ್ ಚುಂಬನ ಕೊಲಿನ್ ನೆಟ್ಟನಲ್ಲ ನನ್ನ ಕಡೆ ನೋಟ ಕಾಡುತ್ತದೆ ಅದು ಇಂದಿಗೂ ಪ್ರತಿದಿನ. ಮೂಲ: ಸಾರಾ ಟೀಸ್ ಡೇಲ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಕವಿತೆಯ ಆರಂಭ

ಇಮೇಜ್
ಕವಿತೆ ಪ್ರಾರಂಭವಾಗುವುದು ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡ  ಅನುಭವದಲ್ಲಿ ದೂರವಿದ್ದಾಗ ಕಾಡುವ ಮನೆಯ ನೆನಪಿನಲ್ಲಿ ಅಥವಾ ವಿರಹದ ಜ್ವರದಲ್ಲಿ. ಹೊರಬರಲು ತವಕಿಸುವ ಭಾವನೆ, ಕವಿತೆ. ಕೃತಾರ್ಥ ಭಾವನೆಯ ಶೋಧನೆ, ಕವಿತೆ. ಭಾವನೆಗೆ ಸಿಕ್ಕಿದಾಗ ಅದರ ಆಲೋಚನೆ  ಮತ್ತು ಆಲೋಚನೆಗೆ ದಕ್ಕಿದಾಗ ಮಾತು ಆಗ ಕವಿತೆಗೆ ದೊರಕುವುದು ಪೂರ್ಣತೆ. ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ವಿನಿಮಯ

ಇಮೇಜ್
  ರೊಟ್ಟಿ ಇದೆ ನನ್ನ ಕೈಯಲ್ಲಿ ಮತ್ತು ನಿಮ್ಮ ಕೈಯಲ್ಲಿದೆ ನಾಣ್ಯ ಕೈ ಬದಲಿಸಿದಾಗ ವಸ್ತುಗಳು ಉಂಟಾಗುವ ವಿನಿಮಯ ಸಾಮಾನ್ಯ ರೊಟ್ಟಿ ನಿಮ್ಮ ಕೈಯಲ್ಲಿದೆ ಮತ್ತು ನಾಣ್ಯ ನನ್ನ ಕೈಯಲ್ಲಿದೆ, ಅಷ್ಟೇ. ನನ್ನ ಬಳಿ ಇದೆ ಪೈಥಾಗೊರಸ್ ಪ್ರಮೇಯ ಮತ್ತು ನಿಮ್ಮಲ್ಲಿದೆ  ಒಂದು ಕವಿತೆ ಕೊಟ್ಟಾಗ ಇದನ್ನು ಒಬ್ಬರಿನ್ನೊಬ್ಬರಿಗೆ ಉಂಟಾಗುವ ವಿನಿಮಯ ಅಸಾಮಾನ್ಯ ನಿಮ್ಮ ಬಳಿ ಇದೆ ಕವಿತೆ ಮತ್ತು ಪ್ರಮೇಯ, ನನ್ನಲ್ಲೂ ಇದೆ ಪ್ರಮೇಯ ಮತ್ತು ಕವಿತೆ. --ಮಿಶೆಲ್ ಸೆರ್ (ಫ್ರೆಂಚ್ ತತ್ವಜ್ಞಾನಿ) ಅವರ ಮಾತುಗಳನ್ನು ಆಧರಿಸಿ Michel Serres, French philosopher (1/09/1930 - 1/06/2019)  ಸಿ ಪಿ ರವಿಕುಮಾರ್

ರಿಕ್ಷಾಗಾಡಿ

ಇಮೇಜ್
ಅವನು ಬರೆದ ದಲಿತ ಕಾವ್ಯದಲ್ಲಿ ಪುಟಪುಟದಲ್ಲೂ ಶೋಷಣೆ ವರ್ಷದೊಳಗೆ ಅವನ ಸಂಗ್ರಹಕ್ಕೆ ಪ್ರಶಸ್ತಿಯೊಂದರ ಘೋಷಣೆ ಪುರಸ್ಕಾರ ಸಮಾರಂಭ ನವದೆಹಲಿಯಲ್ಲಿ ಅವನಿರುವುದು ಬೆಂಗಳೂರಿನ ಮಹಲಲ್ಲಿ  ಹೊರಟ ರಾಜಧಾನಿಗೆ ವಿಮಾನದಲ್ಲಿ ಕುಳಿತು ಖರೀದಿಸಿದ ಸಿಲ್ಕ್ ಜುಬ್ಬಾ ಮತ್ತು ವೇಸ್ಟ್ ಕೋಟು  ಸಮಾರಂಭಕ್ಕೆ ಹೊರಟಾಗ ಎಲ್ಲಿಂದಲೋ ಪ್ರತ್ಯಕ್ಷ- ವಾಯಿತು ಅವನ ಮುಂದೆ ಸೈಕಲ್ ರಿಕ್ಷಾ! ಸಾಹೇಬ್ ಜೀ ಬನ್ನಿ ಎಲ್ಲಿಗೆ ಹೊರಟಿದ್ದೀರಿ, ಹತ್ತಿ, ರಿಕ್ಷಾದವನ ಧ್ವನಿಯಲ್ಲಿ ಎಲ್ಲಿಲ್ಲದ ಭಕ್ತಿ ಎಷ್ಟು ತೊಗೊಳ್ಳುತ್ತೀ ಮೊದಲು ಹೇಳು ಅನಂತರ ಯಾಕೆ ನಿನ್ನೊಂದಿಗೆ ಸುಮ್ಮನೇ ಜಗಳ ಆವಾಂತರ! ನಡೆಯಿತು ಹತ್ತು ನಿಮಿಷ ಚೌಕಾಸಿ ಕೇಳಿದ ಬೆಲೆಯ ಅರ್ಧಕ್ಕೆ ಇಳಿಸಿ  ಕುಳಿತು ಹೊರಟನು ಕವಿ ಸಮಾರಂಭಕ್ಕೆ ಬೀಗುತ್ತಾ ಇನ್ನೂ ಸ್ವಲ್ಪ ಬೇಗ ಹೋಗೆಂದು ರೇಗುತ್ತಾ  ತುಳಿದರೂ ರಿಕ್ಷಾ ಚಾಲಕನು ಬೇಗ ಸಮವಾದೀತೇ ಕಾರು ಸ್ಕೂಟರಿನ ವೇಗ ತುಳಿಯುತ್ತಾ ತುಳಿಯುತ್ತಾ ಬೆವರಿ ಬಸವಳಿದು  ಚಾಲಕನು ನಿಲ್ಲಿಸಿದ ಸುಸ್ತಾಗಿ ತುಳಿತುಳಿದು ಕೂಗಿಕೊಂಡನು ಕವಿ, ಏಕೆ ನಿಲ್ಲಿಸಿದೆ ನಡುವೆ! ನಿದ್ರಿಸಿದ್ದನು ಚಾಲಕನು ಇಲ್ಲದೆ ಯಾವ ಗೊಡವೆ. ಅಂತಿಂಥ ನಿದ್ದೆಯಲ್ಲ, ಚಿರನಿದ್ರೆಗೆ ಜಾರಿದ್ದ ಚಾಲಕ. ನಗುತ್ತಿತ್ತು ಸಭಾಂಗಣದ ಮುಂದಿದ್ದ ಸ್ವಾಗತ ಫಲಕ. ಸಿ ಪಿ ರವಿಕುಮಾರ್