ಎಲೆ ಪುರಾಣ
ನೀನಾರಿಗಾದೆಯೋ ಎಲೆ ಮಾನವ ಎಂದು ಕವಿಯು ಹಾಡಿದಾಗ ಅಲ್ಲಿ ಒತ್ತು ಕೊಡಬೇಕಾದದ್ದು ಎಲೆಗೆ ಎಂದು ನಮಗೆ ಯಾರೂ ಹೇಳಿಕೊಡಲೇ ಇಲ್ಲ. ಎಲೆಗೂ ಮಾನವನಿಗೂ ಬಹಳ ಹತ್ತಿರದ ನಂಟಿರುವುದನ್ನು ಆಡಮಪುರುಷನ ಚಿತ್ರ ನೋಡಿದವರು ಬಲ್ಲರು. ನರಾಡಮನು ತನ್ನ ಮಾನವ ಮುಚ್ಚಿಕೊಳ್ಳಲು ಅಂಜೂರದ ಎಲೆಯ ಮರೆಹೋದನೆಂದು ಹೇಳಲಾಗುತ್ತದೆ. ಇದೀಗ ಎಲೆಗಳಿಗೆ ಇನ್ನೂ ಅನೇಕ ವಿಧದ ಉಪಯುಕ್ತತೆಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಹಿಡಿಯುತ್ತಿದ್ದಾರೆ. ಟಾಯ್ಲೆಟ್ ಪೇಪರ್ ಬದಲಿಗೆ ಎಲೆ ಬಳಸಬಹುದು ಎಂಬ ಈ ಆವಿಷ್ಕಾರವನ್ನು ಗಮನಿಸಿರಿ. ಈ ಬಿಸಿಬಿಸಿ ಸುದ್ದಿಯನ್ನು ಬಿಬಿಸಿ ಬಿತ್ತರಿಸಿದ ಕಾರಣ ಇದು ಸತ್ಯವೇ ಇರಬೇಕೆಂದು ಕಣ್ಮುಚ್ಚಿ ಹೇಳಬಹುದು. ಅದಕ್ಕೆ ಯಾವ ಅಗ್ನಿಪರೀಕ್ಷೆಯ ಅಗತ್ಯವಿಲ್ಲ. ಎಲೆಲೆ ರಸ್ತೆ ಏನ್ ಅವ್ಯವಸ್ತೆ ಅಂತ ರತ್ನ ತೂರಾಡುತ್ತಾ ಹೋಗಿದ್ದು ಎಲೆಗಳನ್ನು ಹುಡುಕಿಕೊಂಡೇ ಎಂಬ ಸುದ್ದಿಯನ್ನೂ ನಾನು ಓದಿದ್ದು ಬಿಬಿಸಿಯಲ್ಲೇ ಇರಬೇಕು. ಮರೆತಿದೆ. ಇದನ್ನು ನಾನು ರಾಜಾರಾಂ ಅವರಿಗೆ ಹೇಳಿದಾಗ ಅವರು ನಂಬಲಿಲ್ಲ. ಅವರೊಬ್ಬ ಡೌಟಿಂಗ್ ಥಾಮಸ್. ಎಲ್ಲದಕ್ಕೂ ಡೌಟು. ನಾನು ಮೇಲೆ ಹೇಳಿದ ಸುದ್ದಿ ನಿಜವೇ ಎಂದು ಅವರು ಡೌಟ್ ಮಾಡಲಿಲ್ಲ. ಅದು ಬಿಬಿಸಿಯಲ್ಲಿ ಪ್ರಕಟವಾಯಿತು ಎಂಬ ವಿಷಯದಲ್ಲಿ ಅವರ ಸಂಶಯ. "ಇರಲಾರದು" ಎಂದು ಚಾಲೆಂಜ್ ಮಾಡಿದರು. ನನಗೆ ರೇಗಿ "ಬೇಕಿದ್ದರೆ ನೀವು ಗೂಗಲ್ ಮಾಡಿ ನೋಡಿ ಎಂದು ನಾನು ಅವರಿಗೆ ಮರುಚಾಲೆಂಜ್ ಮಾಡಿದೆ. "ಅಯ್ಯಾ ಗೂಗಲ್ನಲ್ಲಿ ಎಲ್ಲಾ ಸಿಕ್ಕುತ್ತೆ" ಎಂದು ಮಾತು ತೇಲಿಸಿದರು. ಗೂಗಲಿನಲ್ಲಿ ಎಲ್ಲಾ ಸಿಕ್ಕರೂ ಕೆಲವರಿಗೆ ಕಷ್ಟ. ಎಲ್ಲರನ್ನೂ ಸಂತೋಷ ಪಡಿಸುವುದು ಸಾಧ್ಯವಿಲ್ಲ, ಬಿಡಿರಿ.
ಮುತ್ತುಗದ ಎಲೆಯನ್ನು ನಮ್ಮವರು ಜೋಡಿಸಿ ಊಟಕ್ಕೆ ತಟ್ಟೆಯಂತೆ ಬಳಸಿದರು. ಮುತ್ತುಗದ ಎಲೆಗೆ ಈಗ ಡಿಮ್ಯಾಂಡ್ ಕಡಿಮೆಯಾಗಿದೆ. ಮುತ್ತುಗದ ಎಲೆಯಲ್ಲಿ ಊಟ ಮಾಡಬಹುದು ಎಂದೇ ಮಿಲೆನಿಯಲ್ ಜೆನ್ ಜೀ ಆಲ್ಫಾ ಬೀಟಾಗಳಿಗೆ ತಿಳಿಯದು. ಈಗ ಬಾಳೆ ಎಲೆಯ ಕಾಲ. ಯಾವ ಸಮಾರಂಭಕ್ಕೆ ಹೋದರೂ ಬಾಳೆಲೆ ಊಟ. ಮುಂಚೆ ಬಾಳೆ ಎಲೆ ಊಟದಲ್ಲಿ ಕೆಲವರಿಗೆ ಮಾತ್ರ ಅಗ್ರ ಹಾಕುತ್ತಿದ್ದರು. ಉಳಿದವರಿಗೆ ಅಗ್ರ ಕತ್ತರಿಸಿದ ಮೇಲೆ ಉಳಿದ ರೆಕ್ಟಾಂಗಲ್ ಆಕಾರದ ಭಾಗ ಸಿಕ್ಕುತ್ತಿತ್ತು. ಅಗ್ರ ಎಲೆ ಸಿಕ್ಕವರಿಗೆ ಅಗ್ರಮಾನ್ಯರು ಎಂಬ ಖ್ಯಾತಿ ಬಂದಿದ್ದು ಹೀಗೆ. ಅಗ್ರವನ್ನೇ ಪಡೆಯುತ್ತಿದ್ದವರಿಗೆ ಅಗ್ರವಾಲ್ ಎಂಬ ಹೆಸರು ಬಂತು. ಅದನ್ನು ಜನ ಮುಂದೆ ಅಗ್ಗರ್ ವಾಲ್ ಎಂದು ತಿರುಚಿ ಅಗ್ರವನ್ನು ಅಗ್ಗ ಮಾಡಿಬಿಟ್ಟರು. ಇರಲಿ. ಹಿಂದೆ ಊಟದ ಎಲೆಗಳು ಹೇಗಿರುತ್ತಿದ್ದವು ಎಂದು ಹೇಳುತ್ತಿದ್ದೆನಲ್ಲವೇ? ಕೇಳಿ. ಊಟಕ್ಕೆ ಹಾಕಿದ ಎಲೆಗಳಲ್ಲಿ ಕೆಲವಾದರೂ ಸೀಳಿಹೋಗಿರುತ್ತಿದ್ದವು. ಊಟಕ್ಕೆ ಕೂಡುವವರು ಈ ಸೀಳೆಲೆಗಳನ್ನು ತಪ್ಪಿಸಿ ಬಾಳೆಲೆಗಳನ್ನು ಹುಡುಕಿಕೊಂಡು ಹೋಗಿ ಎರಡೂ ಸಿಕ್ಕದೆ ಪೆಚ್ಚಾಗಿ ಮುಂದಿನ ಪಂಕ್ತಿಗೆ ಕಾಯಬೇಕಾದ ಪರಿಸ್ಥಿತಿಗಳು ಉಂಟಾಗುತ್ತಿದ್ದವು. ಈಗಿನ ಪ್ರಗತಿ ನೋಡಿರಿ. ಎಲ್ಲರಿಗೂ ಅಗ್ರ! ಇವುಗಳಲ್ಲಿ ಒಂದಾದರೂ ಸೀಳಿದ್ದರೆ ಕೇಳಿ! ಇದೇನು ಜೆನೆಟಿಕ್ ಇಂಜಿನಿಯರಿಂಗ್ ಪ್ರಭಾವವೋ ಏನು ಕತೆ? ಬೀಸುವ ಗಾಳಿಗೆ ಸೀಳದ ಬಾಳೆಲೆಗಳನ್ನು ಸೃಷ್ಟಿಸಿದ್ದಾದರೂ ಯಾರು? ಇಂಥ ವಿಜ್ಞಾನ ವಿಶೇಷಗಳ ಬಗ್ಗೆ ಯಾರೂ ಬರೆಯಲೊಲ್ಲರು. ಬರೆಯುತ್ತಾರೆ ಏಐ ಅಂತೆ, ಗ್ಯಾಜೆಟ್ ಅಂತೆ, ಇನ್ನೇನೋ ಅಂತೆ ಕಂತೆ! ನಮ್ಮ ಮುಂದೆಯೇ ನಡೆಯುವ ಸಂಶೋಧನೆಗಳು ಇವರಿಗೆ ಬೇಡ! ಇರಲಿ, ಇದರ ಬಗ್ಗೆ ನಾನು ಇನ್ನೇನೂ ಹೇಳುವುದಿಲ್ಲ. ಒಬ್ಬರು ಇದನ್ನು ಕುರಿತು ಒಂದು ಸರಣಿಯನ್ನೇ ಬರೆದುಬಿಟ್ಟಾರು ಎಂಬ ಭಯ.
ಮುತ್ತುಗದ ಎಲೆಗೆ ಡಿಮ್ಯಾಂಡ್ ಕಡಿಮೆ ಆದದ್ದು ಹೇಗೆ? ನಿಜವೆಂದರೆ ನಾನು ಈನಡುವೆ ಮುತ್ತುಗದ ಮರಗಳನ್ನೇ ನೋಡಿಲ್ಲ. ಆಗಾಗ ತೇಗದ ಮರಗಳು ಕಾಣುತ್ತವೆ. ಎಲ್ಲರಿಗೂ ತೇಗ ಬೇಕು. ತಿಂದು ತೇಗಬೇಕು. ಮತ್ತು ತಿನ್ನಲು ಬಾಳೆಲೆಯೇ ಬೇಕು. ಇದು ಕಾಲಮಹಿಮೆ. ಕವಿಯು ಕೂಡಾ "ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ" ಎಂದು ಹಾಡಿದ. ಅಲ್ಲ, ನೀವೇ ಯೋಚಿಸಿ, ತಾಯಿಗೆ ನಿತ್ಯ ಉತ್ಸವದಲ್ಲಿ ನೈವೇದ್ಯಕ್ಕಾಗಿ ಬಳಸುವುದು ಮುತ್ತುಗ ಮತ್ತು ಬಾಳೆಲೆ ಅಲ್ಲವೇ? "ಮುತ್ತುಗ ಬಾಳೆ ತರುಗಳಲ್ಲಿ" ಎಂದರೆ ಏನೋ ಮರ್ಯಾದೆ ಕಡಿಮೆ! ಇದಕ್ಕೆ ತೇಗ, ಗಂಧ!
ಮುತ್ತುಗದ ಮರಗಳೇ ಇಲ್ಲದ ಮೇಲೆ ಎಲೆಗಳ ಸಪ್ಲೈ ಇಲ್ಲದೇ ಇರಬಹುದು ಎಂದು ಮಿತ್ರ ಮರಿಗೌಡರು ನನಗೆ ಸೂಚಿಸಿದರು. ಇರಬಹುದು. ಈ ಸಪ್ಲೈ ಮತ್ತು ಡಿಮ್ಯಾಂಡ್ ಒಂದು ವಿಷಚಕ್ರ ಇದ್ದಹಾಗೆ. ಹಿಂದೆ ಪತ್ರಕರ್ತರೇ ಆಗಿದ್ದ ಒಬ್ಬ ಮಿತ್ರರು "ಮೀಡಿಯಾಗಳ ಅಧಃಪತನಕ್ಕೆ ಮೀಡಿಯಾ ಕಾರಣವೋ ಓದುಗರೋ?" ಎಂಬ ಪ್ರಶ್ನೆ ಹಾಕಿದರು. ಒಳ್ಳೆಯದನ್ನು ಬರೆದರೆ ಜನ ಓದುವುದಿಲ್ಲ ಅರ್ಥಾತ್ ಡಿಮ್ಯಾಂಡ್ ಇಲ್ಲ ಎಂದು ಕೆಲವರು ಕೂಗಿದರು. ಒಳ್ಳೆಯದನ್ನು ಬರೆಯುತ್ತಿಲ್ಲ, ಹೀಗಾಗಿ ಜನರ ಅಭಿರುಚಿ ಕೆಟ್ಟಿದೆ ಎಂದು ಇನ್ನೊಂದು ಗುಂಪಿನವರು ರೇಗಿದರು. ಗಲಿವರನ ಕಥೆಯಲ್ಲಿ ಲಿಟ್ಲ್ ಎಂಡಿಯನ್ ಮತ್ತು ಬಿಗ್ ಎಂಡಿಯನ್ ಜನರು ಹೋರಾಡಿದ ಹಾಗೆ ಈ ಹೋರಾಟ ನಡೆಯಿತು. ಈ ಹೋರಾಟ ಸೋಷಿಯಲ್ ಮೀಡಿಯಾ ಮೇಲೆ ನಡೆಯಿತು, ಹೀಗಾಗಿ ಯಾರೂ ಗಾಯಗೊಳ್ಳಲಿಲ್ಲ. ಅಷ್ಟರಲ್ಲಿ ಯಾರೋ ಟಾಯ್ಲೆಟ್ ಪೇಪರ್ ಎಲೆ ಬಗ್ಗೆ ಸುದ್ದಿ ಹಾಕಿದ್ದರಿಂದ ಎಲ್ಲರ ಗಮನವೂ ಅತ್ತ ಹೋಯಿತು.
ಒಬ್ಬರು "ನಮ್ಮ ಬಯಲು ಶೌಚಾಲಯಗಳೇ ಚೆನ್ನಾಗಿದ್ದವು. ಪೊದೆಗಳ ಹಿಂದೆ ಇರುತ್ತಿದ್ದವು. ಟಾಯ್ಲೆಟ್ ರೋಲ್ ಬೇಕಾಗಿರಲಿಲ್ಲ" ಎಂದು ಪೇಚಾಡಿದರು. ಅವರಿಗೆ ಮೂವತ್ತೈದು ಲೈಕ್ಸ್ ಬಂದವು. ಇನ್ನೊಬ್ಬರು "ಟಾಯ್ಲೆಟ್ ಪೇಪರ್ ಬದಲು ಎಲೆಗಳನ್ನು ನಮ್ಮಲ್ಲಿ ಆರನೇ ಶತಮಾನದಿಂದಲೂ ಬಳಸುತ್ತಿದ್ದರು. ಇದೇನು ಮಹಾ!" ಎಂದು ಬರೆದರು. ಅವರಿಗೆ ಅರವತ್ತು ಲೈಕ್ಸ್ ಬಂದವು. "ನಾವೇಕೆ ಮುತ್ತುಗದ ಎಲೆಗಳಿಂದ ಇಂಥ ರೋಲ್ಸ್ ಮಾಡಬಾರದು? ಹೇಗಿದ್ದರೂ ಎಲೆಗಳನ್ನು ಹಚ್ಚಿ ಒಂದುಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಅದನ್ನೇ ರೋಲ್ ಮಾದರಿಯಲ್ಲಿ ಸುತ್ತಿ ಮಾರಿದರೆ ಹೇಗೆ?" ಎಂದು ಇನ್ನೊಬ್ಬರು ಕೇಳಿದರು. ಅದಕ್ಕೆ ಮರು ಕಾಮೆಂಟ್ ಹಾಕಿದ ಒಬ್ಬರು ಈ ತಯಾರಿಕೆಗೆ "ರೋಲ್ ಮಾಡೆಲ್" ಎಂದು ಹೆಸರು ಕೊಡಬಹುದು ಎಂದು ಸೂಚಿಸಿದರು. "ಅದನ್ನು ಮೊದಲು ಪೇಟೆಂಟ್ ಮಾಡಿ, ಇಲ್ಲದಿದ್ದರೆ ಜರ್ಮನಿಯವರು ಅದನ್ನು ತಮ್ಮದೇ ತಂತ್ರಜ್ಞಾನ ಅಂತ ಪೇಟೆಂಟ್ ಮಾಡಿಬಿಡುತ್ತಾರೆ" ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದರು. ಅವರಿಗೆ ಮೂವತ್ತಾರು ಲೈಕ್ಸ್ ಬಂದಿವೆ.
ಎಲೆ ಬಗ್ಗೆ ಮಾಹಿತಿ ಇನ್ನೂ ಎಳೆ ಎಳೆಯಾಗಿ ಜನ ಇನ್ನೂ ಎಳೆಯುತ್ತಲೇ ಇದ್ದಾರೆ. ಸದ್ಯಕ್ಕೆ ಈ ಎಳೆಯನ್ನು ಇಲ್ಲಿಗೇ ನಿಲ್ಲಿಸುತ್ತೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ