ಪಡಲ್ ಆಟ
ಕೆಲವರಿಗೆ ಇಷ್ಟ ಕಡಲು
ನನಗೆ ಇಷ್ಟ ಪಡಲು!*
ಮಳೆ ಬಂದಾಗ ಮೈದಾನದಲ್ಲಿ ನೀರು
ನಿಂತಾಗ ನೀನೂ ಬಂದು ಜೊತೆ ಸೇರು
ಆಡೋಣ ಅತ್ತಕಡೆಯಿಂದಿತ್ತಕಡೆ ಹಾರಿ
ಮತ್ತೆ ಇತ್ತಕಡೆಯಿಂದತ್ತಕಡೆ ಹಾರಿ
ಕೆಲವರಿಗೆ ಇಷ್ಟ ಕಡಲು
ನನಗೆ ಇಷ್ಟ ಪಡಲು!
ನೋಡು ನಾನೇ ಹನುಮಂತನಂತೆ
ಅದೇ ಲಂಕೆ, ನಡುವೆ ಕಡಲಂತೆ
ನೋಡು ಒಂದೇ ಸಲ ಹಾರಿ ಬಂದು ನಿಂತೆ
ನೀನೂ ಬಂದರೆ ಜೊತೆಗೇ ಆಡೋಣವಂತೆ
ಕೆಲವರಿಗೆ ಇಷ್ಟ ಕಡಲು
ನನಗೆ ಇಷ್ಟ ಪಡಲು!
ಛಪ್ ಎಂದು ಕಡಲಲ್ಲಿ ಹಾರಿಸೋಣ ಕೊಚ್ಚೆ
ಅಮ್ಮ ಕರೆಯುವವರೆಗೂ ಮನಸೋ ಇಚ್ಛೆ
ಏನೀಗ ಕೊಳೆಯಾದರೆ ಒಂದಿಷ್ಟು ಬಟ್ಟೆ
ಒಗೆದರೆ ಬಿಳಿಯಾಗದೇ ಇರುವುದೇ ಮತ್ತೆ!
ಕೆಲವರಿಗೆ ಇಷ್ಟ ಕಡಲು
ನನಗೆ ಇಷ್ಟ ಪಡಲು!
(*ಪಡಲು - puddle. ಮಳೆ ಬಂದಾಗ ನೀರು ಸೇರಿ ಉಂಟಾಗುವ ಪುಟ್ಟ ಹೊಂಡ)
ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ