ಏಐ ದೂರದರ್ಶಿನಿ

ಸಿ. ಪಿ. ರವಿಕುಮಾರ್ 



ಟಿವಿ  ನೋಡಿ ಬೋರಾಯ್ತು,ಹೊಸ ಟಿವಿ ಸೆಟ್ ಖರೀದಿಸೋಣ ಎಂದು ಹೆಂಡತಿ ದುಂಬಾಲು ಬಿದ್ದಳು. ಯಾವಾಗ ವಾಗ್ವಾದಗಳು ಆರ್ನಬ್ ರಾಯ್ ಮಟ್ಟವನ್ನು ಮುಟ್ಟಿತೋ ಆಗ ಮಂಜು ನಿರ್ವಾಹವಿಲ್ಲದೆ ಒಂದು ಆಫ್ಲೈನ್ ಅಂಗಡಿಗೆ ಭೇಟಿ ಕೊಡಲು ನಿರ್ಧರಿಸಿದ.  ಅಲ್ಲಿ ಒಬ್ಬ ಸ್ವಾಗತಕಾರಿಣಿ ಅವನನ್ನು ಮುಗುಳ್ನಗೆಯ ಸ್ವಾಗತದಿಂದ ಮೋಡಿ ಮಾಡಿದ್ದಲ್ಲದೆ ಅವನಿಗೆ ಕೂಡಲೇ ಬಿಸಿ ಕಾಫಿ ಕೊಡುವಂತೆ ಪರಿಚಾರಕನಿಗೆ ಕರೆ ಮಾಡಿ ತಿಳಿಸಿದಳು. "ವಾವ್ ಆನ್ಲೈನ್ ಖರೀದಿಯಲ್ಲಿ ಈ ರೀತಿಯ ಸ್ವಾಗತ ಎಲ್ಲಿ ಸಿಕ್ಕುತ್ತೆ!" ಎಂದು ಯೋಚಿಸುತ್ತಾ ಮಂಜುವಿನ ಕಣ್ಣು ಮಂಜಾಯಿತು.


ಅಷ್ಟರಲ್ಲಿ ಮಂಜುವಿನ ಡಾಪಲ್ ಗ್ಯಾಂಗರ್ ಎನ್ನಬಹುದಾದ ಒಬ್ಬ ಸೇಲ್ಸ್ಮನ್ ಕಾಣಿಸಿಕೊಂಡು "ಹೇಗಿದ್ದೀರಾ ಸಾರ್! ನಿಮಗೆ ಟಿವಿ ತಾನೇ ಬೇಕಾಗಿರೋದು?" ಎಂದ.


"ನಿಮಗೆ ಹೇಗೆ ಗೊತ್ತಾಯಿತು!"


"ಸಾರ್ ಈ ಕೆಲಸ ಮಾಡ್ತಾ ಮಾಡ್ತಾ ಇಪ್ಪತ್ತೈದು ವರ್ಷ ಆಯಿತು" ಎಂದು ಡಾಪಲ್ ಗ್ಯಾಂಗರ್ ತನ್ನ ಅರೆಬಕ್ಕ ತಲೆಯನ್ನು ತೋರಿಸಿ ನಕ್ಕ. "ಜನರ ಮುಖ ನೋಡಿಯೇ ನಾನು ಅವರಿಗೆ ವಾಷಿಂಗ್ ಮೆಶೀನ್ ಬೇಕೋ, ಮಿಕ್ಸರ್ ಅಂಡ್ ಗ್ರೈಂಡರ್ ಬೇಕೋ, ಫ್ರಿಜ್ ಬೇಕೋ, ಎಲೆಕ್ಟ್ರಿಕ್ ಶೇವರ್ ಬೇಕೋ, ಟಿವಿ ಬೇಕೋ ಹೇಳಿಬಿಡಬಲ್ಲೆ"


"ವಾವ್, ನೋಡಿ ಇದೆಲ್ಲ ಆನ್ಲೈನ್ ಖರೀದಿಯಲ್ಲಿ ಎಲ್ಲಿ ಸಾಧ್ಯ!" ಎಂದು ಮಂಜು ಕಾಫಿಯ ಸಿಪ್ ತೆಗೆದುಕೊಂಡ. ಫಿಲ್ಟರ್ ಕಾಫಿ ನಿಜವಾಗಿಯೂ ಚೆನ್ನಾಗಿತ್ತು.


"ಸಾರ್, ಇನ್ನುಮೇಲೆ ಅಲ್ಲೂ ಬರುತ್ತೆ ನೋಡ್ತಾ ಇರಿ. ಆನ್ಲೈನ್ ಸ್ಟೋರ್ ಗೆ ಬರೋ ಕಸ್ಟಮರ್ ವಿಡಿಯೋ ನೋಡಿ ಅವರಿಗೆ ಬೇಕಾಗಿರೋದು ಏನು ಅಂತ ಏಐ ಟೆಕ್ನಾಲಜಿ ಹೇಳುತ್ತೆ. ಇದು ನಮ್ಮ ಅಂಗಡಿಯದೇ ಸಾಫ್ಟ್ ವೇರ್ ಸಾರ್. ನಮಗೆ  ಪೇಟೆಂಟ್ ಇದೆ. ಗಮೇಜಾನ್ ಅವರು ನಮ್ಮ ಟೆಕ್ನಾಲಜಿ ಉಪಯೋಗಿಸಲು ಮುಂದಾಗಿದ್ದಾರೆ" ಎಂದು ಡಾಗ್ಯಾ ಪಟಪಟ ಮಾತಾಡಿದ. ನಂತರ "ಬನ್ನಿ ಸಾರ್, ನಮ್ಮ ಲೇಟೆಸ್ಟ್ ಮಾಡಲ್ ಏಐ ಟೀವಿ ನೋಡಿ" ಎಂದು ಕರೆದುಕೊಂಡು ಹೋದ. ಮಂಜು ಮಾತಿಲ್ಲದೆ ಅವನ ಹಿಂದೆ ಕಾಫಿಯ ಪೇಪರ್ ಕಪ್ ಹಿಡಿದು ನಡೆದ.


"ನೋಡಿ ಸಾರ್ ಇದೇ ನಮ್ಮ ಚಾಣಾಕ್ಷ್ ೫೬೨೮ ಮಾಡಲ್. ದಿನಕ್ಕೆ  ಇದೇ ಸ್ಟೋರಿನಲ್ಲಿ ಇನ್ನೂರು ಟಿವಿ ಖರೀದಿ ಆಗ್ತಿದೆ."


"ವಾವ್. ಇಲ್ಲಿ ಅಷ್ಟೊಂದು ಟಿವಿ ಇಡೋಕೆ ಜಾಗ ಇದೆಯಾ!"


"ಹಹಹ! ಸಾರ್ ಅಡ್ವಾನ್ಸ್ ಬುಕಿಂಗ್ ಮಾಡಿದ್ದಾರೆ. ಬಂದ ಬಂದ ಹಾಗೆ ಮನೆಗೇ ಡೆಲಿವರಿ ಆಗತ್ತೆ. ವೇಟಿಂಗ್ ಟೈಮ್ ಇದೆ. ಎರಡು ದಿನ! ಆದರೆ ನಿಮಗೆ ಬೇಕಾದರೆ ನಾನು ಇವತ್ತೇ ಡೆಲಿವರಿ ಕೊಡಿಸಿ ಅಂತ ನಮ್ಮ ಬಾಸ್ ಅವರನ್ನ ಕೇಳ್ತೀನಿ."


ಕಾಫಿ ಕಪ್ ತಪದಲ್ಲಿದ್ದ ಸಕ್ಕರೆ ಇನ್ನಷ್ಟು ರುಚಿ ಎನ್ನಿಸಿತು. ಮಂಜು "ಚಾಣಾಕ್ಷ್ ಫೀಚರ್ಸ್ ಏನು?"


"ಸಾರ್, ಅದರ ಜೊತೆ ಮಾತಾಡಬಹುದು. ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ..."


"ಕನ್ನಡಾ?"


"ಓ, ನಾಟ್ ಏ ಪ್ರಾಬ್ಲಂ. ಕನ್ನಡದಲ್ಲಿ ಎರಡು ಆಪ್ಷನ್ ಇದೆ. ಒಂದು ಕಂಗ್ಲಿಷ್, ಇನ್ನೊಂದು ಮಿಂಗ್ಲಿಷ್."


"ಏನ್ರೀ ಅದು?"


"ಕಂಗ್ಲಿಷ್ ಅಂದರೆ ಇನ್ ಬಿಟ್ವೀನ್ ಇಂಗ್ಲಿಷ್ ಸ್ವಲ್ಪ ಕನ್ನಡ ಮಿಕ್ಸ್ ಮಾಡೋದು. ಈಗ ನ್ಯೂಸ್ ಪೇಪರ್ಸ್ ಕೂಡಾ ಕಂಗ್ಲೀಷ್ನಲ್ಲೇ ಹೆಡಿಂಗ್ಸ್ ಹಾಕೋದು ನೀವೂ ಅಬ್ಸರ್ವ್ ಮಾಡೇ ಇರ್ತೀರಿ."


"ಮಿಂಗ್ಲಿಷ್?"


"ಅಲ್ಲಿ ಇಂಗ್ಲಿಷ್ ಜೊತೆ ಹಿಂದಿ, ತೆಲುಗು, ತಮಿಳು, ಎಲ್ಲಾ ಮಿಂಗಲ್ ಮಾಡಿರ್ತಾರೆ. ಸಂಕ್ರಾಂತಿಗೆ ಬರೀ ಎಳ್ಳು ಬೆಲ್ಲ ಕೊಟ್ಟರೆ ಏನು ಚೆನ್ನ ಸಾರ್? ಕೊಬ್ಬರಿ ಪೀಸಸ್ಸು, ಜೀರಿಗೆ ಪೆಪ್ಪರ್ಮಿಂಟ್, ಕಲ್ಯಾಣಸೇವೆ, ಬತ್ತಾಸು ಇವೆಲ್ಲ ಮಿಂಗಲ್ ಆದರೆ ತಾನೇ ರುಚಿ!"


"ನಿಜ ನಿಜ! ನನ್ನ ಹೆಂಡತಿ ವೈಟ್ ಚಾಕೋಲೆಟ್ ಪೀಸಸ್ ಹಾಕಿ ಈ ಸಲದ ಮೋಸ್ಟ್ ಇನ್ನೊವೇಟಿವ್ ಸಂಕ್ರಾಂತಿ ಮಿಕ್ಸ್ ಸ್ಪರ್ಧೆಯಲ್ಲಿ ಗೆದ್ದಳು!"


"ಕಂಗ್ರಾಚುಲೇಷನ್ಸ್ ಟು ಯುವರ್ ಮಿಸೆಸ್ ಸಾರ್! ಅವರಿಗೆ ಚಾಣಾಕ್ಷ್ ೬೨೩೫ ಲೇಟೆಸ್ಟ್ ಮಾಡಲ್ಲೇ ಸರಿ."


"ಇದೇ ಲೇಟೆಸ್ಟ್ ಅಂದುಕೊಂಡಿದ್ದೆ ..."


"ಇನ್ನೂ ಚಾಣಾಕ್ಷ್ ೬೨೩೫ ಮಾರ್ಕೆಟ್ಗೆ ಬಂದಿಲ್ಲ ಸಾರ್. ಎಕ್ಸ್ಪೆರಿಮೆಂಟ್ ಅಂತ ನಮಗೆ ಎರಡೇ ಎರಡು ಪೀಸಸ್ ಬಂದಿವೆ. ಇದುವರೆಗೂ ಯಾರಿಗೂ ಕೊಟ್ಟಿಲ್ಲ. ಅದು ತೀರಾ ಅಡ್ವಾನ್ಸ್ ಮಾಡಲ್. "


"ಓಹ್!"


"ಹೂಂ. ಟೀವಿ ಮುಂದೆ ಯಾರು ಕೂತಿದ್ದಾರೋ ಅವರ ಮನಸ್ಸಿನಲ್ಲಿ ಯಾವ ರೀತಿಯ ಪ್ರೋಗ್ರಾಮ್ ನೋಡಬೇಕು ಅಂತ ಇರುತ್ತೋ ಅದನ್ನೇ ಪ್ಲೇ ಮಾಡುತ್ತೆ. ಗಂಡಸರಿಗೆ ಏನು ನೋಡಬೇಕು ಅನ್ನಿಸುತ್ತೆ ಸಾರ್ - ಬಾಕ್ಸಿಂಗ್, ಕ್ರಿಕೆಟ್, ಆಕ್ಷನ್ ಮೂವೀಸ್, ಇದೇ ತಾನೇ? ಹೆಂಗಸರಿಗೆ ಫ್ಯಾಶನ್ ಇಷ್ಟ. ಅಜ್ಜಿ ಇದ್ದರೆ ಅವರಿಗೆ ಬೊಂಬಾಟ್ ಭೋಜನ ಇಷ್ಟ. ಮಕ್ಕಳು ಇದ್ದರೆ ಕಾರ್ಟೂನ್. ಅಜ್ಜ ಇದ್ದರೆ ವಿಷ್ಣು ಸಹಸ್ರನಾಮ. ಎಮೋಶನ್ ರೆಕಗ್ನಿಷನ್ ಟೆಕ್ನಾಲಜಿ ಇದೆ ಸಾರ್! ಸೂಪರ್ ಏಐ ಟೆಕ್ನಾಲಜಿ. ಸಕತ್ತಾಗಿದೆ!! ಮಾರ್ಕೆಟ್ನಲ್ಲಿ ಇನ್ನೂ ಬಂದೇ ಇಲ್ಲ. ಅದಕ್ಕೆ ಇನ್ನೂ ಪ್ರೈಸ್ ಟ್ಯಾಗ್ ಕೂಡಾ ಹಾಕಿಲ್ಲ. ನಿಮಗೆ ಡಿಸ್ಕೌಂಟ್ ಹಾಕಿ ಕೊಡೋದಕ್ಕೆ ನಮ್ಮ ಬಾಸ್ ಅವರಿಗೆ ಹೇಳ್ತೀನಿ"


"ಅಯ್ಯೋ ಬೇಡಿ. ನನಗೆ ಚಾಣಾಕ್ಷ್ ೫೬೨೮ ಸಾಕು. ಅದರಲ್ಲಿ ಅಚ್ಚ ಕನ್ನಡ ಇದ್ದಿದ್ದರೆ ಚೆನ್ನಾಗಿತ್ತು..."


"ಅಯ್ಯೋ ಯಾಕೆ ಹೇಳ್ತೀರಿ ಸಾರ್ ಅದರ ಕಥೇ..."


"ಯಾಕೆ ಏನಾಯ್ತು?"


"ಸಾರ್ ಪ್ಯೂರ್ ಕನ್ನಡಾ ಕೂಡಾ ಇದೆ ಸಾರ್, ಆದರೆ ನಾವು ಅದನ್ನು ಯಾರಿಗೂ ಬಾಯಿಬಿಟ್ಟು ಹೇಳ್ತಾ ಇಲ್ಲ."


"ಏನ್ರೀ ಹೀಗೆ ಹೇಳ್ತೀರಿ!!"


"ಸಾರ್, ನಮ್ಮ ಟೆಕ್ನಾಲಜಿ ಎಲ್ಲಾ ಮೆಶೀನ್ ಲರ್ನಿಂಗ್ ಸಾರ್. ಜನ ಹೇಗೆ ಬರೀತಾರೆ, ಮಾತಾಡ್ತಾರೆ ಅಂತ ಗಮನಿಸಿ ಲರ್ನಿಂಗ್ ಮಾಡತ್ತೆ. ಪ್ಯೂರ್ ಕನ್ನಡ ಅಂತ ಈಗ ಬೇಕಾದರೆ ಸರ್ಚ್ ಮಾಡಿ ನೋಡಿ ಸಾರ್.  ಏನೇನು ವರ್ಡ್ಸ್ ಇವೆ ಸಾರ್. ಪೊಲೀಸ್ ಫೋರ್ಸ್ ಅಂದರೆ ಕಾಪುಗ ಒತ್ತಡ ಅಂತೆ!  ಐಸ್ ಕ್ರೀಂ ಅಂದರೆ ಕೆನೆಮಂಜು!"


ಮಂಜುವಿನ ಕೆನ್ನೆ ಕೆಂಪಾಯಿತು.


"ವಿಡಿಯೋ ಅಂದರೆ ಓಡುತಿಟ್ಟ!"


ಮಂಜು "ನಾರೀ ನಿನ್ನ ಮಾರಿ ಮ್ಯಾಗ ನಗೀನವಿಲು ಓಡತಿಟ್ಟ ಅಂತ ಒಂದು ಹಾಡೂ ಇದೆ ಕಣ್ರೀ" ಎಂದು ನೆನೆಸಿಕೊಂಡು ಹೇಳಿದ.


"ಅದೆಲ್ಲ ಈಗ ಯಾರಿಗೆ ಬರತ್ತೆ ಸಾರ್. ಜನ ಈಗ ಬ್ರೋ, ರಾಕಿಂಗ್, ಕೂಲ್ ಅಂತೆಲ್ಲಾ ಮಾತಾಡೋವಾಗ ಒಡಹುಟ್ಟಿದವನೇ ಈ ಓಡತಿಟ್ಟ ಬಹಳ ತಂಪಾಗಿದೆ ಅಂತೆಲ್ಲಾ ಹೇಳಿದರೆ ಯಾರಿಗೆ ಅರ್ಥ ಆಗುತ್ತೆ ಹೇಳಿ!"


"ಯೂ ಆರ್ ರೈಟ್."


"ನಿಮಗೆ ನಾಳೆ ಡೆಲಿವರಿ ಆದರೆ ಓಕೆನಾ ಸಾರ್?" 


"ಓಕೆ."


"ತಮಿಳ್ ಸೆಲ್ವಿ, ಇಲ್ಲಿ ಬಂದು ಕಸ್ಟಮರ್ ಗೆ ಹೆಲ್ಪ್ ಮಾಡಿ! ಅವರಿಗೆ ಚಾಣಾಕ್ಷ್ ಲೇಟೆಸ್ಟ್ ಮಾಡೆಲ್ ಮೇಲೆ ಸೆವೆನ್ ಪಾಯಿಂಟ್ ಟೂ ಫೈವ್ ಪರ್ಸೆಂಟ್ ಡಿಸ್ಕೌಂಟ್ ಹಾಕಿಸಿ. ನಾನು ಬಾಸ್ ಅವರಿಗೆ ಹೇಳ್ತೀನಿ. ಓಕೆನಾ ಸಾರ್? ಥ್ಯಾಂಕ್ ಯು ಫಾರ್ ಶಾಪಿಂಗ್ ವಿತ್ ಕ್ವಿಕ್ ಅಂಡ್ ಈಸೀ ಎಲೆಕ್ಟ್ರಾನಿಕ್ಸ್." ಎಂದು. ಡಾಗ್ಯಾ ಅವಸರದಲ್ಲಿ ಇನ್ನೊಬ್ಬ ಕಸ್ಟಮರನ್ನು ನೋಡಲು ಓಡಿದ.


ಮರುದಿನ ಚಾಣಾಕ್ಷ್ ಡೆಲಿವರಿ ಕೂಡಾ ಆಯಿತು. ಅದನ್ನು ಯಾರೂ ಮುಟ್ಟಬಾರದು, ಇನ್ಸ್ಟಲೇಷನ್ ಮಾಡುವವರು ಐದು ಗಂಟೆಗೆ ಬರುತ್ತಾರೆ ಎಂದು ಹೇಳಿ ಹೋದರು.


ಹೆಂಡತಿ ಮಂಜುಲಾವಾಣಿಗೆ ಮಂಜು ಎಲ್ಲವನ್ನೂ ವಿವರಿಸಿ ಅವಳ ಆಸಕ್ತಿ ಗರಿಗೆದರಿತ್ತು. ಇಬ್ಬರೂ ಸೋಫಾ ಮೇಲೆ ಕೂತು ಯಾವಾಗ ಹೊಸ ಟಿವಿ ಪ್ರತಿಷ್ಠಾಪನೆ ಆದೀತೋ ಎಂದು ಕಾದಿದ್ದರು.


ಕೊನೆಗೂ  ಟೆಕ್ನಿಷಿಯನ್ ಬಂದು ಪೆಟ್ಟಿಗೆಯನ್ನು ಬಿಚ್ಚಿದ. 


"ಎಕ್ಸ್ಚೇಂಜ್ ಆಫರ್ರಾ ಲೇತೂ ಮೇಡಂ?" ಎಂದು ಕೇಳಿದ.


ಮಂಜುಲಾವಾಣಿ ಮಂಜುವಿನ ಮುಖವನ್ನು ನೋಡಿದಳು.


"ಎಕ್ಸ್ಚೇಂಜ್ ಆಫರ್ ಇದೆಯಾ? ನನಗೆ ಅವರು ಹೇಳಲಿಲ್ಲ?"


"ಡೆಲಿವರಿ ಟೈಮ್ ಮೇ ಹಳೇ ಟಿವಿ ಹೇಗಿದೆ ಅಂತ ನೋಡಬೇಕಲ್ಲ ಸಾರ್? ನಿಮ್ಮ ಹಳೇ ಟೀವಿ ಕೌನ್ಸಾ ಮಾಡೆಲ್ಲೂ?"


"ಹಳೇದೇನಲ್ಲ. ಐದು ವರ್ಷ ಆಯಿತು ಅಷ್ಟೇ."


"ಅಯ್ಯೋ ಪುರಾನಾ ಜಮಾನೇಕಾ ಬೋಲೋ. ಏಐ ಹೋಂಗಾ?"


"ನಹೀಂ."


"ಫಿರ್ ನಕೋ. ಸ್ಕ್ರಾಪ್ ವ್ಯಾಲ್ಯೂ ಬರತ್ತೆ ಅಷ್ಟೇ. ಫೈವ್ ಹಂಡ್ರೆಡ್."


"ಅಯ್ಯೋ! ಏನಪ್ಪಾ, ಐವತ್ತು ಸಾವಿರ ಕೊಟ್ಟು ತೊಗೊಂಡಿದೀವಿ!" ಅಷ್ಟೇನೂ ಮಂಜುಳವಲ್ಲದ ವಾಣಿಯಲ್ಲಿ ಮಂಜುಲಾವಾಣಿ ಪ್ರತಿಭಟಿಸಿದರು.


"ಅಮ್ಮಾ, ಟ್ರಾನ್ಸ್ಪೋರ್ಟ್ ಟೆಂಪೋ ಜಾರ್ಜ್ ಕಿತ್ನಾ ಮಾಲೂಮ್? ನಕೋ ಬೋಲೇ ತೋ ನಕೋ."


"ನಕೋ ನಕ್ಕೋ" ಎಂದು ಮಂಜುಲಾವಾಣಿ ನಗದೇ ಹೇಳಿದರು. ಮಂಜು ಅವರ ಕಡೆ "ಅಯ್ಯೋ ಬ್ಯಾಡ್ ಡಿಸಿಶನ್" ಎಂಬ ಮಾದರಿಯಲ್ಲಿ ನೋಡಿದ.


ಕೊನೆಗೂ ಐನೂರಾ ಐವತ್ತು ರೂಪಾಯಿಗೆ ಹಳೇ ಟಿವಿಯನ್ನು ಬೀಳ್ಕೊಟ್ಟು ದಂಪತಿಗಳು ಟೀವಿ ಮುಂದೆ ಕುಳಿತರು. ಟೆಕ್ನಿಶಿಯನ್ ಹೇಳಿಕೊಟ್ಟಂತೆ ರಿಮೋಟ್ ಒತ್ತಿ ವಾಯ್ಸ್ ಇನ್ಪುಟ್ ಮೋಡಿಗೆ ಹೋದರು. ಕನ್ನಡ ಸೆಲೆಕ್ಟ್ ಮಾಡಿ ನಂತರ ಕಂಗ್ಲೀಷ್ ಹೋನಾ ಎಂದು ಆರಿಸಿಕೊಂಡರು.


"ನಾನು ಚಾಣಾಕ್ಷ್ ಐದು ಆರು ಎರಡು ಎಂಟು ಮಾಡಲ್ ಟಿವಿ. ನನ್ನನ್ನು ಸೆಲೆಕ್ಟ್ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು. ನಿಮಗೆ ಯಾವ ರೀತಿಯ ಪ್ರೋಗ್ರಾಮ್ ನೋಡಬೇಕು?" ಎಂದು ಚಾಣಾಕ್ಷ್ ನುಡಿದಾಗ ಮಂಜುಲಾವಾಣಿ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಮಂಜುವಿನ ಕಡೆ ನೋಡಿ ಗೆಲುವಿನ ನಗೆ ಬೀರಿದರು. "ಸದ್ಯ!" ಎಂದು ಮಂಜು ನಿಟ್ಟುಸಿರು ಬಿಟ್ಟ.


"ನನಗೆ ಆಕ್ಷನ್, ಹಾಸ್ಯ, ಇಷ್ಟ" ಎಂದು ಮಂಜು ಗಟ್ಟಿಯಾಗಿ ಹೇಳಿದ.


"ತಾಳಿ, ನನಗೆ ಎಮೋಷನಲ್ ಡ್ರಾಮಾ ಇಷ್ಟ!" ಎಂದು ಮಂಜುಲಾ ಜಡ್ಜ್ಮೆಂಟ್ ಕೊಟ್ಟರು.


ಗುಂಡಗೆ ಸುತ್ತುವ ವೃತ್ತಾಕಾರ ಐಕನ್ ಕಾಣಿಸಿತು. "ಸೂಕ್ತವಾದ ಕಾರ್ಯಕ್ರಮಕ್ಕಾಗಿ ಸರ್ಚ್ ಮಾಡುತ್ತಿದ್ದೇನೆ. ದಯವಿಟ್ಟು ನಿರೀಕ್ಷಿಸಿ" ಎಂದು ಚಾಣಾಕ್ಷ ನುಡಿದ.


ಸ್ವಲ್ಪ ಹೊತ್ತಿನ ನಂತರ "ಕನೆಕ್ಟ್ ಮಾಡುತ್ತಿದ್ದೇನೆ ನಿಮ್ಮ ಮೆಚ್ಚಿನ ಪ್ರೋಗ್ರಾಮ್ ಗೆ" ಎಂದ.


ಕೂಡಲೇ ಒಂದು ನ್ಯೂಸ್ ಚಾನೆಲ್ ಪ್ರಾರಂಭವಾಯಿತು. ಒಬ್ಬರು ಕನ್ನಡ ನಿರೂಪಕಿ ತಾರಕಕ್ಕೇರಿದ ಧ್ವನಿಯಲ್ಲಿ ಒಂದು ಮೊಹಲ್ಲಾದಲ್ಲಿ ನಡೆದ ಕಲ್ಲು ತೂರಾಟದ ಬಗ್ಗೆ ವರದಿ ನೀಡುತ್ತಿದ್ದರು. "ಬನ್ನಿ ವೀಕ್ಷಕರೇ, ಇಲ್ಲಿ ನಡೆದ ಕಲ್ಲು ತೂರಾಟಕ್ಕೆ ಮುಖ್ಯ ಕಾರಣ ಏನು ಅಂತ ಲೈವ್ ಕವರೇಜಿಗೆ ಹೋಗೋಣ. ನಮ್ಮ ವರದಿಗಾರ್ತಿ ಲೀಲಾ ಅವರು ಲೋಕೇಶನ್ನಲ್ಲಿ ಇದ್ದಾರೆ. ಕಲ್ಲು ತೂರಾಟ ಯಾಕೆ ಶುರು ಆಯಿತು, ಹೇಗೆ ಶುರು ಆಯಿತು, ಯಾರು ಯಾರು ಈ ಕಲ್ಲು ತೂರಾಟದಲ್ಲಿ ಭಾಗಿ ಆಗಿದ್ದರು, ಇವೆಲ್ಲಾ ವಿಚಾರಗಳನ್ನೂ ನಮ್ಮ ಜೊತೆ ಶೇರ್ ಮಾಡೋದಕ್ಕೆ ವರದಿಗಾರ್ತಿ ಲೀಲಾ ನಮ್ಮ ಜೊತೆ ಬರಲಿದ್ದಾರೆ ಲೈವ್, ಲೈವ್ ವಿತ್ ಲೀಲಾ ಕಾರ್ಯಕ್ರಮದಲ್ಲಿ. ಹೆಲೋ ಗುಡ್ ಈವನಿಂಗ್ ಲೀಲಾ ಅವರೇ, ನಿಮ್ಮ ಹಣೆಗೆ ಯಾಕೆ ಬ್ಯಾಂಡೇಜ್ ಸುತ್ತಿದೆ? ಹಲೋ, ಲೀಲಾ ಅವರೇ, ನಮ್ಮ ವೀಕ್ಷಕರು ನಿಮಗೋಸ್ಕರ ಕಾಯ್ತಾ ಇದಾರೆ. ನಿಮಗೆ ಬ್ಯಾಂಡೇಜ್ ಹಾಕಿರೋದು ಯಾಕೆ? ಕಲ್ಲು ತೂರಾಟ ಯಾವಾಗ ಪ್ರಾರಂಭ ಆಯಿತು? ಯಾರು ಮೊದಲು ಕಲ್ಲು ಹೊಡೆದರು,ಕಲ್ಲುಗಳು ಎಲ್ಲಿಂದ ಸಪ್ಲೈ ಆದವು, ಅವು ಯಾವ ಸೈಜಿನ ಕಲ್ಲುಗಳು, ಇವೆಲ್ಲಾ ವಿವರಗಳನ್ನು ನೀವು ಶೇರ್ ಮಾಡ್ತೀರಿ ಅಂತ ನಮ್ಮ ವೀಕ್ಷಕರು ಕಾಯ್ತಾ ಇದಾರೆ...ಲೀಲಾ, ಲೀಲಾ, ನಿಮ್ಮ ಧ್ವನಿ ಕೇಳಿಸ್ತಾ ಇಲ್ಲ, ನಿಮಗೆ ನಮ್ಮ ಧ್ವನಿ ಕೇಳ್ತಾ ಇದೆಯಾ? ... ಹಲೋ .. ವೀಕ್ಷಕರೇ, ದಯವಿಟ್ಟು ಕ್ಷಮಿಸಿ, ಏನೋ ತಂತ್ರಜ್ಞಾನ ದೋಷದ ಕಾರಣ ನಮಗೆ ಲೀಲಾ ಅವರ ಜೊತೆ ಮಾತಾಡಲು ಆಗ್ತಾ ಇಲ್ಲ. ಆದರೆ ಈ ಬ್ರೇಕ್ ನಂತರ ಖಂಡಿತಾ ಲೈವ್ ವಿತ್ ಲೀಲಾ ಪ್ರೋಗ್ರಾಮಲ್ಲಿ ಅವರ ಜೊತೆ ಖಂಡಿತಾ ಮಾತಾಡಬಹುದು. ಸ್ಕ್ರೀನ್ ಮೇಲಿರೋ ನಂಬರ್ ಗೆ ಫೋನ್ ಮಾಡಿ. ಇಂದು ಪುಟ್ಟ ಬ್ರೇಕ್ ನಂತರ ಮತ್ತೆ ಸಿಕ್ಕೋಣ ..."


"ಇದೇನ್ರೀ ಇದು, ನ್ಯೂಸ್ ಪ್ರೋಗ್ರಾಮ್ ತೋರಿಸ್ತಾ ಇದೆ!" ಎಂದು ಮಂಜುಲಾವಾಣಿ ಸ್ವಲ್ಪ ನಿರಾಸೆಯಿಂದ ಕೇಳಿದರು.


"ನೋಡೇ, ಆಕ್ಷನ್, ಹಾಸ್ಯ, ಮೆಲೋಡ್ರಾಮಾ, ಇವೆಲ್ಲ ಇರೋ ಪ್ರೋಗ್ರಾಮ್ ಒಂದೇ. ನ್ಯೂಸ್!"  ಎಂದು ಮಂಜು ಸಮರ್ಥನೆ ನೀಡಿದರು.


"ಅಯ್ಯಾ, ಏನು ಏಐರೀ ಇದು!  ಒಂದು ಒಳ್ಳೆ ಪ್ರೋಗ್ರಾಮ್ ತೋರಿಸೋದಕ್ಕೆ ಹೇಳಿ."


ರಿಮೋಟ್ ಒತ್ತಿ ವಾಯ್ಸ್ ಇನ್ಪುಟ್ ಮೋಡಿಗೆ ಹೋಗಿ "ಒಳ್ಳೆಯ ಪ್ರೋಗ್ರಾಮ್ ತೋರಿಸು" ಎಂದು ಮಂಜು ಹೇಳಿದ. 


"ಸರ್ಚಿಂಗ್" ಎಂಬ ಬರಹ ಬಂತು. ಗೋಲಾಕಾರದ ಐಕನ್ ಸುತ್ತುತ್ತಿತ್ತು. ಸುತ್ತುತ್ತಿತ್ತು. ಸುತ್ತುತ್ತಲೇ ಇತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)