ರಿಕ್ಷಾಗಾಡಿ


ಅವನು ಬರೆದ ದಲಿತ ಕಾವ್ಯದಲ್ಲಿ ಪುಟಪುಟದಲ್ಲೂ ಶೋಷಣೆ
ವರ್ಷದೊಳಗೆ ಅವನ ಸಂಗ್ರಹಕ್ಕೆ ಪ್ರಶಸ್ತಿಯೊಂದರ ಘೋಷಣೆ
ಪುರಸ್ಕಾರ ಸಮಾರಂಭ ನವದೆಹಲಿಯಲ್ಲಿ
ಅವನಿರುವುದು ಬೆಂಗಳೂರಿನ ಮಹಲಲ್ಲಿ 
ಹೊರಟ ರಾಜಧಾನಿಗೆ ವಿಮಾನದಲ್ಲಿ ಕುಳಿತು
ಖರೀದಿಸಿದ ಸಿಲ್ಕ್ ಜುಬ್ಬಾ ಮತ್ತು ವೇಸ್ಟ್ ಕೋಟು 
ಸಮಾರಂಭಕ್ಕೆ ಹೊರಟಾಗ ಎಲ್ಲಿಂದಲೋ ಪ್ರತ್ಯಕ್ಷ-
ವಾಯಿತು ಅವನ ಮುಂದೆ ಸೈಕಲ್ ರಿಕ್ಷಾ!
ಸಾಹೇಬ್ ಜೀ ಬನ್ನಿ ಎಲ್ಲಿಗೆ ಹೊರಟಿದ್ದೀರಿ, ಹತ್ತಿ,
ರಿಕ್ಷಾದವನ ಧ್ವನಿಯಲ್ಲಿ ಎಲ್ಲಿಲ್ಲದ ಭಕ್ತಿ
ಎಷ್ಟು ತೊಗೊಳ್ಳುತ್ತೀ ಮೊದಲು ಹೇಳು ಅನಂತರ
ಯಾಕೆ ನಿನ್ನೊಂದಿಗೆ ಸುಮ್ಮನೇ ಜಗಳ ಆವಾಂತರ!
ನಡೆಯಿತು ಹತ್ತು ನಿಮಿಷ ಚೌಕಾಸಿ
ಕೇಳಿದ ಬೆಲೆಯ ಅರ್ಧಕ್ಕೆ ಇಳಿಸಿ 
ಕುಳಿತು ಹೊರಟನು ಕವಿ ಸಮಾರಂಭಕ್ಕೆ ಬೀಗುತ್ತಾ
ಇನ್ನೂ ಸ್ವಲ್ಪ ಬೇಗ ಹೋಗೆಂದು ರೇಗುತ್ತಾ 
ತುಳಿದರೂ ರಿಕ್ಷಾ ಚಾಲಕನು ಬೇಗ
ಸಮವಾದೀತೇ ಕಾರು ಸ್ಕೂಟರಿನ ವೇಗ
ತುಳಿಯುತ್ತಾ ತುಳಿಯುತ್ತಾ ಬೆವರಿ ಬಸವಳಿದು 
ಚಾಲಕನು ನಿಲ್ಲಿಸಿದ ಸುಸ್ತಾಗಿ ತುಳಿತುಳಿದು
ಕೂಗಿಕೊಂಡನು ಕವಿ, ಏಕೆ ನಿಲ್ಲಿಸಿದೆ ನಡುವೆ!
ನಿದ್ರಿಸಿದ್ದನು ಚಾಲಕನು ಇಲ್ಲದೆ ಯಾವ ಗೊಡವೆ.
ಅಂತಿಂಥ ನಿದ್ದೆಯಲ್ಲ, ಚಿರನಿದ್ರೆಗೆ ಜಾರಿದ್ದ ಚಾಲಕ.
ನಗುತ್ತಿತ್ತು ಸಭಾಂಗಣದ ಮುಂದಿದ್ದ ಸ್ವಾಗತ ಫಲಕ.


ಸಿ ಪಿ ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)