ಗುಹೆಯ ತಪಸ್ವಿ

 (ಕಲಾವಿದ ರೆಂಬ್ರಾ ರಚಿಸಿದ ಚಿತ್ರ ನೋಡಿ)

ಇಲ್ಲಿ ಅಸೀನನಾಗಿದ್ದಾನೆ ಒಬ್ಬ ವಯೋವೃದ್ಧ;
ಬಹುಶಃ ಒಬ್ಬ ದಾರ್ಶನಿಕ, ಒಬ್ಬ ಪಂಡಿತ.
ಓದುತ್ತಿದ್ದಾನೆ ಮಂದ ಬೆಳಕಿನಲ್ಲಿ  ದೊಡ್ಡ ಗ್ರಂಥ.
ಕಲ್ಲಿನ ಕಟ್ಟಡ ಇರಬಹುದು. ಹುಡುಕಿದರೂ
ಸಿಕ್ಕದು ಯಾವುದೇ ವಸ್ತು ಮೇಲಿನ ಹೊರತು.
ಗಾಢ ಮೌನ ಆವರಿಸಿದೆ ಸುತ್ತಲೂ. 
ಗಾಳಿಯೂ ಆಡುತ್ತಿಲ್ಲ.  ಚಳಿಗಾಲ
ಕೊರೆಯುತ್ತಿರಬಹುದು ಮೂಳೆ. 
ಎಲ್ಲವನ್ನೂ ಮರೆತು ಹೇಗೆ ಓದುತ್ತಿದ್ದಾನೆ
ಲೀನನಾಗಿ.  ಟಿಪ್ಪಣಿ  ಮಾಡಿಕೊಳ್ಳಲು 
ಇಲ್ಲ ಕಾಗದ ಲೆಕ್ಕಣಿಕೆ ಶಾಯಿಯ ಕುಡಿಕೆ.
ಮನೋಭಿತ್ತಿಯ ಮೇಲೆ ಎಲ್ಲ ಬರಹ, ಅಳಿಸುವಿಕೆ.

ಶಬ್ದ ವಸ್ತುಗಳಿಂದ ತುಂಬಿದ ನಮ್ಮ ಜಗತ್ತು
ಒಂದೊಮ್ಮೆ ಹೀಗೆ ಸರಳವಾಗಿತ್ತು.
ಇರಲಿಲ್ಲ ಕಣ್ಣು ಕೋರೈಸುವ ಬೆಳಕು 
ಕಣ್ಣಿಗೆ ಹುಡುಕಿ ನೋಡುವ ಛಲವಿತ್ತು.
ಇರಲಿಲ್ಲ  ವಾತಾನುಕೂಲತೆಯ ಸದ್ದುಗದ್ದಲ
ಇತ್ತು ಚಳಿಗಾಳಿಗೆ ಒಗ್ಗಿಕೊಳ್ಳುವ ತಾಕತ್ತು.
ಇರಲಿಲ್ಲ ಸಂವಹನ ಸಾಧನಗಳು ಆದರೂ
ದೂರ ಸಂವಹನ ಸಾಧ್ಯವಾಗಿತ್ತು.
ಈಗ ಎಲ್ಲಿದೆ ಹೀಗೆ ಕುಳಿತು ಓದುವ ಪುರುಸೊತ್ತು 
ಓದಿದ್ದನ್ನು ಮೆಲುಕು ಹಾಕಿ ನೀಡಲು ಚೌಕಟ್ಟು?

ಎಲ್ಲೋ ದೂರದಲ್ಲಿ ಕುಳಿತು ಅಧ್ಯಯನ
ಮಾಡುತ್ತಿವೆ ಕೃತಕ ಬುದ್ಧಿಮತ್ತೆ ಪ್ರತಿದಿನ
ಹೊರಗಿನ ಗದ್ದಲ, ಬೆಳಕು, ಗಾಳಿ, ಮಳೆ, ಚಳಿಗೆ
ವಿಚಲಿತವಾಗದೆ ಕುಳಿತು ಸಿಲಿಕಾನ್ ಚಾದರದೊಳಗೆ
ಯೋಚಿಸುತ್ತಿವೆ ಎಲ್ಲರಿಗಾಗಿ, ಬಿಡಿಸುತ್ತಿವೆ ಸಮಸ್ಯೆ.
ಆಧುನಿಕ ಋಷಿಗಳ ಹಾಗೆ ತೋರುತ್ತವೆ ಏಐ!
ಕೇಳಿಕೊಳ್ಳುತ್ತಾರೆ ಮಕ್ಕಳು ಹೋಂ ವರ್ಕ್ ಮಾಡಿಕೊಡು 
ಕೇಳುತ್ತಾರೆ ಇನ್ನೊಬ್ಬರು ಈ ಜಾತಕ ನೋಡಿಕೊಡು.
ಬರೆದುಕೊಂಡು ಕ್ರೈಂ ಧಾರಾವಾಹಿಯ ಕಂತು.
ಸ್ಟಾಕ್ ಮಾರ್ಕೆಟ್ಟಿನಲ್ಲಿ ಪರಿಸ್ಥಿತಿ ಹೇಗುಂಟು?
ಇನ್ನೂ ಎಷ್ಟು ನಡೆಯಬಹುದು ಯುದ್ಧ
ತಿದ್ದಿಕೊಡು ನನಗೆ ಈ ಹಳೆಯ ಚಿತ್ರ.
ಹೀಗೆ ಎಲ್ಲರಿಗೂ ಒಂದೊಂದು ಕನಸು.
ಎಲ್ಲರ ಪರವಾಗಿ ಏಐ ಆಚರಿಸುತ್ತಿದೆ ತಪಸ್ಸು!




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ