ಕೆಸರು
ಮೂಲ ಹಿಂದಿ ... ದುಷ್ಯಂತ್ ಕುಮಾರ್
ಕನ್ನಡಕ್ಕೆ : ಸಿ.ಪಿ. ರವಿಕುಮಾರ್
ದುಷ್ಯಂತ್ ಕುಮಾರ್ ಹಿಂದಿಯ ಪ್ರಸಿದ್ಧ ಕವಿ (1933-1975). ಅವರ ಕವಿತೆಗಳಲ್ಲಿ ರಾಜಕೀಯಪ್ರಜ್ಞೆ ದಟ್ಟವಾಗಿದೆ. ಸಾಮಾಜಿಕ ಅನ್ಯಾಯಗಳನ್ನು ಕುರಿತು ಅವರ ಕವಿತೆಗಳಲ್ಲಿ ಕವಿ ದನಿ ಎತ್ತುತ್ತಾರೆ. ಪ್ರಸ್ತುತ ಕವಿತೆಯಲ್ಲೂ ಸಮಾಜ ಮತ್ತು ರಾಜಕಾರಣದ ಮೇಲೆ ಒಂದು ಟಿಪ್ಪಣಿ ಇದೆ. ಇಲ್ಲಿ ದಟ್ಟ ಮಂಜು, ಕೆಸರು, ಸೂರ್ಯ - ಇವೆಲ್ಲವೂ ಪ್ರತಿಮೆಗಳು. ಏನಾಗುತ್ತಿದೆ ಎಂಬುದನ್ನು ಮರೆಮಾಚಲೂ ಕೂಡಾ ರಾಜಕೀಯ ಧುರೀಣರು ಅಸತ್ಯಗಳ ಮಂಜನ್ನು ಸೃಷ್ಟಿಸುತ್ತಾರೆ. ಇದರ ನಡುವೆ ಸತ್ಯವು ಗೋಚರಿಸುವುದು ಕಷ್ಟ. ಸಮಾಜವು ಒಂದು ಕೆಸರಿನ ಹೊಂಡದಂತೆ ಕವಿಗೆ ಕಾಣುತ್ತಿದೆ. ಕಾಲಿಟ್ಟರೆ ಸಾಕು ಕೆಸರು ನಮ್ಮನ್ನು ಎಳೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಕೋಪದಿಂದ ರಕ್ತ ಕುದ್ದರೆ ಅದು ಕ್ಷಣಿಕ ಪ್ರಚೋದನೆಯೇ? "ಇಲ್ಲ, ನಾನಂತೂ ಪ್ರತಿಭಟಿಸುತ್ತೇನೆ, ಕೆಸರಿನಲ್ಲಿ ಮುಳುಗುವವರು ಬೇಕಾದರೆ ಮುಳುಗಲಿ" ಎಂದು ಕವಿ ಸನ್ನದ್ಧನಾದರೂ ತನ್ನ ಪ್ರತಿಭಟನೆಯನ್ನು ನೇರವಾಗಿ ಮಾಡುವಂತಿಲ್ಲ ಎಂಬ ಅಳುಕೂ ಅವನಿಗಿದೆ. ನಮ್ಮ ದೇಶದಲ್ಲಿ ಎಪ್ಪತ್ತನೆಯ ದಶಕದಲ್ಲಿ ಎಮರ್ಜೆನ್ಸಿ ಹೂಡಲಾಗಿತ್ತು ಮತ್ತು ಆ ಕಾಲದಲ್ಲಿ ಎಲ್ಲ ಬಗೆಯ ಸಂವಹನದ ಮೇಲೂ ಪ್ರತಿಬಂಧನಗಳಿದ್ದವು ಎನ್ನುವುದನ್ನು ನೆನೆಸಿಕೊಳ್ಳಿ. ಆಗ ಕೊನೆಯ ಎರಡು ಸಾಲುಗಳಿಗೆ ವಿಶೇಷ ಅರ್ಥ ಸಿಕ್ಕುತ್ತದೆ.
ದಟ್ಟ ಮಂಜು ಕವಿದಿದೆ ಎಂದೇಕೆ ದೂರುವೆ?
ಅದು ಯಾರದೋ ವ್ಯಕ್ತಿಗತ ಟೀಕೆ.
ಸೂರ್ಯದರ್ಶನ ನನಗೂ ಸಿಕ್ಕಿಲ್ಲ ಬೆಳಗಿಂದ,
ಏನು ಮಾಡುವೆ ನೋಡಿ? ಯಾಕೆ ವ್ಯರ್ಥ ಚಡಪಡಿಕೆ?
ಕೆಸರು ತುಂಬಿದೆ ಈ ರಸ್ತೆಯಲ್ಲಿ, ಎಷ್ಟೆಂದರೆ
ಹೂತುಹೋಗಿದೆ ಪೂರ್ತಿ ಪ್ರತಿಯೊಬ್ಬರ ಕಾಲು
ಅತ್ತ ಸದನದಲ್ಲಿ ಮುಖಾಮುಖಿಯಾಗಿವೆ ಪಕ್ಷಗಳು,
ಪೂರ್ಣವಾದ ಸೇತುವೆ ಕುರಿತು ಪಾಟೀಸವಾಲು.
ನಾಡಿಗಳಲ್ಲಿ ವರ್ಷಗಳಿಂದಲೂ ಕುದಿಯುತ್ತಿದೆ ರಕ್ತ,
ಕ್ಷಣಿಕ ಪ್ರಚೋದನೆ ಎನ್ನುವುದು ನೀನಿತ್ತ ಹೆಸರು.
ಮುಗಿದಿದೆ ಪ್ರತಿಯೊಂದೂ ಘಟ್ಟದ ವ್ಯವಸ್ಥೆ;
ಮುಳುಗಲಿ ಮನಸೋ ಇಚ್ಛೆ ಮುಳುಗುವವರು.
ಮಿತ್ರರೇ! ಅವಕಾಶವಿಲ್ಲ ಈಗ ವೇದಿಕೆಯ ಮೇಲೆ
ನೇಪಥ್ಯದಲ್ಲಷ್ಟೇ ಸಂಭವನೀಯ ಈನಡುವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ