ಹೇಳು ಏನಾಯ್ತು ಮುಗ್ಧ ಮಾನಸವೇ


(ಮಿರ್ಜಾ ಗಾಲಿಬ್ ಅವರ 'ದಿಲ್ ಏ ನಾದಾನ್ ತುಝೇ ಹುವಾ ಕ್ಯಾ ಹೈ' ಎಂಬುದು ಚಿತ್ರಗೀತೆಯಾಗಿ ಬಹಳ ಪ್ರಸಿದ್ಧ. ಇದನ್ನು ಸುರೈಯ್ಯಾ ಮತ್ತು ತಲತ್ ಮಹಮೂದ್ ಅವರ ಮಧುರಕಂಠದಲ್ಲಿ ನೀವೂ ಕೇಳಬಹುದು.
ಈ ಹಾಡಿನಲ್ಲಿ ಮಿರ್ಜಾ ಗಾಲಿಬ್ ಅವರ ತುಂಟತನವನ್ನು ಕಾಣಬಹುದು. ಒಬ್ಬ ಪ್ರೇಮಿ ತನ್ನ ಪ್ರೇಮಿಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆಕೆಗೆ ಕೋಪ ಬಂದಿರಬಹುದು. ಅವಳನ್ನು ರಮಿಸಲು ಪ್ರೇಮಿ ಪರಿಪರಿಯಾಗಿ ಪ್ರಯತ್ನಿಸುತ್ತಾನೆ. "ನಿನ್ನ ಹೊರತು ಬೇರಾರೂ ಇಲ್ಲ" ಎಂದು ಆಣೆ ಹಾಕುತ್ತಾನೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾನೆ. ಪ್ರೇಮವೇ ಅರಿಯದ ನಿನ್ನಂಥವಳನ್ನು ನಾನು ಪ್ರೇಮಿಸಲು ಹಾತೊರೆಯುತ್ತಿರುವೆನಲ್ಲ ಎಂದು ಹಲುಬುತ್ತಾನೆ. "ಒಳ್ಳೆಯದು ಮಾಡಿದರೆ ಒಳಿತೇ ಆಗುತ್ತದೆ" ಎಂದು ದೊಡ್ಡ ಮಾತಾಡುತ್ತಾನೆ. ನನ್ನನ್ನು ಪ್ರೀತಿಸಿದರೆ ಅದರಿಂದ ಒಳಿತೇ ಆಗುತ್ತದೆ ಎಂಬುದು ಅವನ ಮಾತಿನ ಅರ್ಥ. ಕೊನೆಗೆ "ನೋಡು, ನನಗೆ ಯಾವ ಬೆಲೆಯೂ ಇಲ್ಲ ಅಲ್ಲವೇ? ಆದರೂ ಫ್ರೀ ಸಿಕ್ಕಾಗ ಯಾಕೆ ಬಿಡಬೇಕು?" ಎಂಬ ಸವಾಲು ಹಾಕುತ್ತಾನೆ!)

Woman And Man Wearing Brown Jackets Standing Near Tree
ಹೇಳು ಏನಾಯ್ತು ಮುಗ್ಧಮಾನಸವೇ
ಹೇಳು ಮದ್ದೇನು ಮನದ ಕಾಯಿಲೆಗೆ

ಕಡೆಗಣ್ಣೇಕೆ ಪ್ರೇಮಯಾಚನೆಗೆ
ದೈವವೇ ಹೇಳು ಹೀಗೆ ಏತಕ್ಕೆ

ನನ್ನ ಬಾಯಲ್ಲೂ ಉಂಟು ನಾಲಗೆಯು
ಕೇಳಲೇ ಬಾರದೇನು ನನ್ನರಿಕೆ

ಇಲ್ಲ ಬೇರಾರೂ ಹೊರತು ನಿನ್ನನ್ನು
ವ್ಯರ್ಥ ಸಂಘರ್ಷ ಆದರೂ ಏಕೆ

ಮುಖಕಮಲ, ನಯನಶ್ಚಂಗಗಳು
ಕೊಲ್ಲುವ ಬಿಂಕ ಕಣ್ಣೊಳೇತಕ್ಕೆ

ಹಾರುತಿವೆ ಮುಂಗುರುಳು ಗಾಳಿಯಾಟಕ್ಕೆ
ಕಣ್ಣನೋಟಕ್ಕೆ ಕಾಡಿಗೆ ರೇಖೆ

ಏನಿದೆ ಸುತ್ತ ಪರಿವೆ ಯಾರಿಗಿದೆ
ಅನ್ನ ಆಹಾರ ಗಾಳಿ ಇನ್ನೇಕೆ

ಪ್ರೇಮಿಸಲು ಕಾತರಿಸುತಿದೆ ಹೃದಯ
ಪ್ರೇಮವೇ ಅರಿಯದೊಂದು ಜೀವಕ್ಕೆ

ಬಿತ್ತಿದರೆ ಒಳಿತು ಪಡೆವೆ ಒಳಿತನ್ನೇ
ಬೇರೆ ಇನ್ನೇನು ಭಿಕ್ಷುವಿನ ಹರಕೆ

ಕೊಡುವೆನು ಪ್ರಾಣವನ್ನೇ ನಿನಗಾಗಿ
ಅರಿಯೆನು ಬೇರೆ ಯಾವುದೂ ಭಿಕ್ಷೆ

ಗೊತ್ತು ಗಾಲಿಬ್‍‍ಗಿಲ್ಲ ಯಾವ ಕಿಮ್ಮತ್ತೂ
ಮುಕ್ತ ಸಿಕ್ಕಾಗ ಬಿಡುವುದೇತಕ್ಕೆ?!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)