ಹಣ್ಣು ವ್ಯಾಪಾರಿಯ ಫಿಲಾಸಫಿ
ಮೂಲ ಕವಯಿತ್ರಿ ... ಕಾಜಲ್ ಅಹ್ಮದ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
ಓ ಗೆಳೆಯಾ, ನೀನು ನೇರಳೆಯ ಹಾಗೆ
ಒಂದೇ ಸಲ ಕಚ್ಚಿದರೂ
ಉಗಿದುಬಿಡುತ್ತೇನೆ ಒಳಗಿನ ಹೂರಣವನ್ನಷ್ಟೂ.
ಓ ನನ್ನ ಪೂರ್ವದ ಪ್ರೇಮಾಗ್ನಿಯೇ,
ನೀನು ಒಂದು ಕಿತ್ತಳೆಯ ಹಾಗೆ,
ಸಲೀಸಾಗಿ ಕಳಚಿಬಿಡುವೆ.
ಕೆಲವೊಮ್ಮೆ ನೀನು ಸೇಬಿನ ಹಾಗೆ.
ಸಿಪ್ಪೆ ಸಮೇತವಾದರೂ ಸರಿ
ಸಿಪ್ಪೆ ಇಲ್ಲದೆಯೂ ಓಕೆ.
ಪಕ್ಕದ ಮನೆಯವರೇ!
ನೀವು ಹಣ್ಣಿನ ಚಾಕುವಿನಂತೆ.
ನಮ್ಮ ಊಟದ ಮೇಜಿಗೂ ನಿಮಗೂ ಬಿಡಿಸಲಾರದ ನಂಟು.
ಬೇಸರಿಸಬೇಡಿ ಹೀಗೆ ಹೇಳಿದೆನೆಂದು:
ಹಣ್ಣಿನ ಚಾಕು ನಿಷ್ಟ್ರಯೋಜಕ ವಸ್ತು
ಓ ತಾಯ್ನಾಡೇ!
ನೀನು ನಿಂಬೆಹಣ್ಣಿನ ಹಾಗೆ.
ನಿನ್ನ ಹೆಸರು ಹೇಳಿದಾಗ ಎಲ್ಲರ ಬಾಯಲ್ಲಿ ಊರುತ್ತದೆ ನೀರು.
ನನ್ನ ಮೈಮೇಲೆ ಏಳುತ್ತದೆ ಮುಳ್ಳು.
ಓ ಅಪರಿಚಿತ!
ಕಲ್ಲಂಗಡಿಯಂತೆ ನೀನು, ಖಂಡಿತ.
ನಾನು ಚೂರಿಯ ಅವತಾರ ತಾಳದೇ
ತಿಳಿಯದು ನಿನ್ನ ಅಂತರಂಗ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ