ಕಲ್ಲಂಗಡಿಯ ಭೂತ

ಸ್ಫೂರ್ತಿ ... ಸಾಗರ್ ಖಯ್ಯಾಮಿ ಅವರ ಉರ್ದು ಕವಿತೆ
ಕನ್ನಡ ಅವತರಣ ... ಸಿ.ಪಿ. ರವಿಕುಮಾರ್
Watermelon Fruit
ಬೆಂಗಳೂರಲ್ಲಿ ಬಾಡಿಗೆಗೆ ಮನೆಯೊಂದನ್ನು ಹುಡುಕುತ್ತ
ಪ್ರಾಣ ಬಿಡುವುದೇ ಏನೋ ಪರದೈವದ ಚಿತ್ತ
ಒಂದು ದಿನ ಹೀಗೇ ಅಲೆದಲೆದೂ ದಿನವೆಲ್ಲಾ
ಹೊಟ್ಟೆಯಲ್ಲಿ ನಡೆಯುತಿತ್ತು ತಾಳಮದ್ದಳೆ ಮೇಳ
ನನ್ನ ಹೊಟ್ಟೆಯು ಕೂಡಾ ತುಸು ದೊಡ್ಡದೇ, ಕ್ಷಮಿಸಿ !
ಮತ್ತು ಜೋಬಿನಲ್ಲಿದ್ದದ್ದು ಅತ್ಯಲ್ಪ ಧನರಾಶಿ!
ಇನ್ನೇನು ಸಿಕ್ಕುವುದು ಜುಜುಬಿ ಕಲ್ಲಂಗಡಿ ಹೊರತು?
ಹೊತ್ತು ಬರುವಾಗ ಎಡವಿ ಅದು ಕೂಡಾ ಕೈಜಾರಿತು!
ಆಯಿತು ನೋಡಿರಿ ಆಗ ಒಂದು ಕರಾಮತ್ತು
ಹೊಗೆಯೆದ್ದು ಭುಸ್ ಒಂದು ಭೂತ ಹೊರಬಂತು!

ರಸ್ತೆಯಲ್ಲೇ ನನ್ನ ಕಾಲಿಗೆ ಸಾಷ್ಟಾಂಗ ಪ್ರಣಾಮ
ನೀಡು ಆಜ್ಞೆಯ! ಶಿರಸಾ ವಹಿಸುವನು ಗುಲಾಮ!
ಬೀರಿದರೆ ನಾನು ಒಂದೇ ಕಟಾಕ್ಷ
ಸಾಹಿತ್ಯ ಸಮ್ಮೇಳನಕ್ಕೆ ನೀನೇ ಅಧ್ಯಕ್ಷ

ಕವಿಗೋಷ್ಠಿಯಲ್ಲಿ ನಿನ್ನದೇ ಮೊದಲ ಕವಿತಾ ವಾಚನ
ತಡೆಹಿಡಿಯಬಲ್ಲೆ ಓಡದಂತೆ ಅಧ್ಯಕ್ಷರ ವಾಚನ್ನ!
ಮುದ್ರಿಸುವೆನು ನಿನ್ನ ಕವನಸಂಗ್ರಹಗಳ ಸಂಪುಟ
ಮುನ್ನುಡಿ, ಬೆನ್ನುಡಿ, ಬಿಡುಗಡೆಯೆಲ್ಲಾ ಚಟಪಟ
ಮುಖಪುಟದಲ್ಲೇ ಬಂದೀತು ಅರೆಪುಟದ ವರದಿ
ನೀನೆಂತೆಂಥಾ ದೊಡ್ಡ ಕಾವ್ಯಗಳ ಬರದೀ
ನೋಡುತ್ತಿರು ನೀನು ಏನೇನು ಆಗುವೆ
ಏನೂ ಮಾಡದೆ ಅವಾರ್ಡ್ ಪಡೆಯುತ್ತ ಸಾಗುವೆ!
ಕೆಟ್ಟ ವಿಮರ್ಶಕರನ್ನು ಮಾಡುವೆನು ನಾಶ
ನಿನ್ನ ಬಕ್ಕತಲೆ ಮೇಲೂ ಬೆಳೆಸುವೆನು ಕೇಶ

ಅಪ್ರತಿಮ ಸುಂದರಿಯ ಜೊತೆ ಪಾಣಿಗ್ರಹಣ
ಮಧುಚಂದ್ರಕ್ಕೆ ಮೆಡಿಟರೇನಿಯನ್ ತೀರಕ್ಕೆ ಪಯಣ
ಉರಿದುಕೋಬೇಕು ನಿನ್ನ ಶತ್ರುಗಳು ಹೊಟ್ಟೆ
ಹಾರುತ್ತೀಯ ಹಾಗೆ ಹೊರಬಂದಾಗೊಡೆದು ಮೊಟ್ಟೆ!

ಇಷ್ಟೆಲ್ಲಾ ಕೇಳಿ ಆಸೆಗಳು ಗರಿಕೆದರಿ ರೆಕ್ಕೆ
ಎಷ್ಟೋ ದಿನಗಳ ಬಳಿಕ ಮನಸಾರೆ ನಕ್ಕೆ
ಕೊಡಿಸಿಬಿಡು ಇರಲೊಂದು ಪುಟ್ಟ ಮನೆ ಬಾಡಿಗೆ
ಸುಖವಾಗಿ ಇದ್ದು ಬಿಡುವೆ ನನ್ನ ಪಾಡಿಗೆ!

ಮಾಯವಾಯಿತು ಕಲ್ಲಂಗಡಿಯೊಳಗೇ ಭೂತ ಗೊಣಗುತ್ತ
"ಬಹಳ ಇಳಿದಿದೆ ಈನಡುವೆ ಜನರ ಐಕ್ಯೂ ಮಟ್ಟ!
ಕೇಳುತ್ತಿದ್ದೀಯಲ್ಲ ನಗರದಲ್ಲಿ ಬಾಡಿಗೆ ಮನೆ, ಪೆದ್ದೇ
ಸಿಕ್ಕಿದ್ದರೆ ನಾನ್ಯಾಕೆ ಕಲ್ಲಂಗಡೀಲಿರ್ತಿದ್ದೆ?"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)