ಒಂದೆರಡೇ ಕ್ಷಣಗಳ ಕವಿ


ಮೂಲ ... ಸಾಹಿರ್ ಲೂಧಿಯಾನವಿ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
Body of Water
(ಕಭೀಕಭೀ ಚಿತ್ರದಲ್ಲಿ ಸಾಹಿರ್ ಲೂಧಿಯಾನವಿ ಅವರ ಈ ಗೀತೆಯನ್ನು ಬಳಸಿಕೊಳ್ಳಲಾಗಿದೆ.)

ಒಂದೆರಡೇ ಕ್ಷಣಗಳ ಕವಿ ನಾನು, ಒಂದೆರಡೇ ಕ್ಷಣಗಳು ನನ್ನ ಕಥೆ
ಒಂದೆರೆಡೇ ಕ್ಷಣ ನನ್ನಯ ರೂಪ, ಒಂದೆರಡೇ ಕ್ಷಣ ಯೌವ್ವನಚರಿತೆ

ನನಗಿಂತಲೂ ಮೊದಲು ಸಹಸ್ರಾರು ಕವಿಗಳು ಬಂದರು ನಿರ್ಗಮಿಸಿದರು
ನಿಡುಸುಯ್ದರು ಕೆಲವರು ಕಬ್ಬಿಗರು, ಕೆಲವರು ಪದ ಹಾಡಿ ಹೊರಟವರು

ಅವರದ್ದೂ ಕ್ಷಣಗಳ ಕಥೆಯಷ್ಟೆ, ನನ್ನದೂ ಕೂಡಾ ಕ್ಷಣಗಳದೇ ಕಥೆ
ಇಂದಿರುವೆನು ನಿಮ್ಮೊಂದಿಗೆ ನಾಳೆ ಕೈಬೀಸಿ ಇಗೋ ನಾನೂ ಹೊರಟೆ

ಏನೋ ಎರಡು ಮಾತುಗಳನ್ನು ಹೇಳಿದೆನಲ್ಲ ಅಷ್ಟೇ ಪುಣ್ಯ
ನೀವೂ ಕಿವಿಗೊಟ್ಟು ಕೇಳಿದಿರಿ, ನಿಮ್ಮಯ ವಿಶ್ವಾಸಕ್ಕೆ ಧನ್ಯ

ಬರುವರು ಮುಂದೆ ಬೇಕಾದಷ್ಟು ಹಾಡಿನ ಮೊಗ್ಗುಗಳನ್ನು ಬಿಡಿಸುವರು
ನನಗಿಂತಲೂ ಒಳ್ಳೆಯ ಕಬ್ಬಿಗರು, ನಿಮಗಿಂತಲೂ ಒಳ್ಳೆಯ ಕೇಳುಗರು

ಫಸಲಿನ ಹಾಗೆ ನಾನೂನೀವೂ, ಬೆಳೆಯುವುದೇ ಕತ್ತರಿಸಲು ಕೊನೆಗೆ
ಜೀವನವೆಂಬುದು ಅಮೃತ ದ್ರವ್ಯ, ಸಾಧಿಸು ತೃಪ್ತಿ ಒಂದೇ ಹನಿಗೆ

ಸಾಗರದೊಳು ಉಕ್ಕಿದ ತೆರೆ ನಾನು, ಸಾಗರದಲ್ಲೇ ಮರೆಯಾಗುವೆನು
ಮಣ್ಣಿನ ಆತ್ಮದ ಕನಸು ನಾನು, ಕೊನೆಗೂ ಮಣ್ಣಲ್ಲೇ ಮಲಗುವೆನು

ನೆನೆಯುವರೇ ನಾಳೆಗೆ ನನ್ನನ್ನು ನೆನೆಯುವರೇಕೆ ನನ್ನನು ನಾಳೆ?
ಹಾಳೇತಕೆ ಕಾಲವ ಮಾಡುವರು ಓದಲು ಪುನಃ ನನ್ನಯ ಹಾಳೆ?


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)