ಮೂಲ : ಕಾನೀ ವಾನೆಕ್ (ಅಮೇರಿಕಾ ಸಂಸ್ಥಾನ) ಅನುವಾದ : ಸಿ. ಪಿ. ರವಿಕುಮಾರ್ "ಇದು ಆರಂಭದ ಘಟ್ಟದಲ್ಲಿದ್ದೇವೋ ಅಂತ್ಯದ ಘಟ್ಟದಲ್ಲೋ ನಾನರಿಯೆ." -- ಟೋಮಾಸ್ ಟ್ರಾನ್ಸ್‌ಫಾರ್ಮರ್ ಮಳೆ ಬೀಳತೊಡಗಿದೆ ಸೂರಿನ ಮೂಲಕ. ನೇಸರಿನ ಕೆಳಗೆ ಬೆಳೆದು ತೊಳಗಿದ ಪ್ರತಿಯೊಂದರ ಮೂಲಕ, ಬೆಳಗ್ಗೆ ತೆರೆದು, ಇರುಳು ಮುಚ್ಚಿ, ಇಡೀ ದಿವಸ ತಮ್ಮ ಪುಟಗಳನ್ನು ಬೆಳಕಿಗೆ ಒಡ್ಡಿದ ಪುಸ್ತಕಗಳು, ನೌಕೆಗಳ ಚಿತ್ರಗಳು, ಅಲ್ಲಿ ಬಲಿಷ್ಠ ತೋಳುಗಳು, ಜಾಣ್ಮೆಯಿಂದ ಹೊಳೆವ ಮುಖಗಳು, ಹೊಲಗಳು, ಕೊಟ್ಟಿಗೆಗಳು, ಮೊಟ್ಟೆಗಳನ್ನು ತುಂಬಿಸಿಟ್ಟ ಬುಟ್ಟಿ, ಪಿಯಾನೋ ಬಳಿ ಬಿದ್ದಿರುವ ಬೆಳ್ಳಿಯ ಕೊಳಲು, ಕಲ್ಪಿಸಿಕೊಂಡದ್ದು, ಕಂಡುಹಿಡಿದದ್ದು ಎಲ್ಲವನ್ನೂ ಪಿಸುಗುಟ್ಟಿದ್ದು, ಹಾಡಿದ ಪ್ರತಿಯೊಂದನ್ನೂ ನಿಶಬ್ದಗೊಳಿಸಿದೆ ಕೊರೆಯುವ ಮಳೆ. ಸಮಾಧಿಯ ಕಲ್ಲುಗಳ ಬಣ್ಣ ತೊಟ್ಟಿದೆ ಆಗಸ, ಬೀಳುವ ಮಳೆಗೆ ಉಪ್ಪಿನ ರುಚಿಯಿದೆ, ಮೇಲೇಳುತ್ತಿದೆ ಬೀದಿಗಳಲ್ಲಿ ವಿನಾಶಕ ಹೆದ್ದೆರೆಯಂತೆ. ಲಕ್ಷ, ಕೋಟಿ ವರ್ಷಗಳ ಮಾತಾಡುತ್ತಿದ್ದೆವಲ್ಲವೇ ನಾವು, ಮಾತಾಡಿ ಆಡಿ ಇನ್ನಷ್ಟು ಆಡಿದೆವು. ಅನಂತರ ಬಿತ್ತು ಒಂದು ಹನಿ ಗಿಟಾರ್ ಶಬ್ದರಂಧ್ರದೊಳಗೆ, ನಂತರ ಮತ್ತೊಂದು ಇನ್ನೂ ಸರಿಪಡಿಸದ ಹಾಸಿಗೆಯ ಮೇಲೆ. ನಮ್ಮ ತರುವಾಯ ಮಳೆ ನಿಲ್ಲಬಹುದು ಅಥವಾ ಬೀಳುತ್ತಲೇ ಇರಬಹುದು ಸ್ವಯಂ ತನ್ನ ಮೇಲೆ ಕೂಡಾ. ಕವಿತೆಯ ಸ್ವಾರಸ್ಯ: ಪ್ರಳಯದ ದೃಶ್ಯವನ್ನು...