ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಿಲ್ಲಿಗಳು

ಇಮೇಜ್
ದಿಲ್ಲಿಗಳು  ಮೂಲ ಹಿಂದಿ ರಚನೆ: ಶಲಭ್ ಶ್ರೀರಾಮ ಸಿಂಹ  ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ಆನೆಯ ನಗ್ನ  ಬೆನ್ನಿನ ಮೇಲೆ ದಾರಾ ಶಿಕೋನನ್ನು  ಬೀದಿ ಬೀದಿ ಅಲೆಸಿದಾಗ  ದಿಲ್ಲಿ ಸುಮ್ಮನಿತ್ತು.  ರಕ್ತದ  ಮಡುವಿನಲ್ಲಿ ನಿಂತು ಮುಗುಳ್ನಗುತ್ತಿದ್ದಾಗ ನಾದಿರ್ ಶಾಹ್ ದಿಲ್ಲಿ ಸುಮ್ಮನಿತ್ತು. ಕೆಂಪು ಕೋಟೆಯ ಮುಂದುಗಡೆ ಬಂದಾ ಬೈರಾಗಿಯ ಬಾಯಲ್ಲಿ ತುರುಕಿದಾಗ ಸ್ವಂತ ಮಗನ ರಕ್ತಸಿಕ್ತ ಕರುಳಿನ ಚೂರು ದಿಲ್ಲಿ ಸುಮ್ಮನಿತ್ತು. ಬಹಾದುರ್ ಶಾಹ್ ಜಫರನನ್ನು ಬಂಧಿಸಿದಾಗ ದಿಲ್ಲಿ ಸುಮ್ಮನಿತ್ತು. ಮೀರ್ ಗಾಲಿಬ್ ತೊರೆದು ಹೊರಟಾಗ ದಿಲ್ಲಿ ಸುಮ್ಮನಿತ್ತು. ದಿಲ್ಲಿಗಳಿರುವುದೇ ಸುಮ್ಮನಿರುವುದಕ್ಕೆಸದಾ. ಅವುಗಳ ಏಕಾಂತದಲ್ಲಿ ಎಂದೂ ಯಾರೂ ಏನೂ ಇರುವುದಿಲ್ಲವೇನೋ ಬಹುಶಃ.

ಮೂಡ್ ನಂಬಿಕೆಗಳು

ಇಮೇಜ್
ಮೂಡ್ ನಂಬಿಕೆಗಳು (ಹರಟೆ) ಸಿ.  ಪಿ. ರವಿಕುಮಾರ್ ನನ್ನ ನಂಬಿಕೆಗಳು ನನ್ನ ಮೂಡ್  ಗೆ ತಕ್ಕಂತೆ ಬದಲಾಯಿಸುತ್ತವೆ  ಎಂದು ನನ್ನ ಹೆಂಡತಿ ಆಗಾಗ ನನ್ನನ್ನು ರೇಗಿಸುತ್ತಾಳೆ.  "ಮೂಡ್ ನಂಬಿಕೆಗಳು" ಎಂಬ ಹೆಸರಿನ ಆವಿಷ್ಕಾರವೂ ಅವಳದ್ದೇ. ಕೊಲೆಸ್ಟರಾಲ್ ಕೊಲ್ಲುತ್ತದೆ, ಎಣ್ಣೆ ಹಾಕದೆ ದೋಸೆ ಮಾಡಲು ಸಾಧ್ಯವಿಲ್ಲವೇ, ನಾನ್ ಸ್ಟಿಕ್ ತವ ಇರುವುದು ಯಾಕೆ ಇತ್ಯಾದಿಯಾಗಿ ನಾನು ಸಿಡುಕಿದಾಗ ಅವಳು ಅದಕ್ಕೆ ಒಗ್ಗರಣೆ ಹಾಕುವುದಿಲ್ಲ. ನನ್ನ ಈ ವಾದವೂ ನಾನ್ ಸ್ಟಿಕ್  ಎಂದು ನನ್ನ ಹೆಂಡತಿಗೆ ಗೊತ್ತಾಗಿಬಿಟ್ಟಿದೆ. "ದೋಸೆಗೆ ಎಣ್ಣೆಯ ಬದಲು ತುಪ್ಪ ಹಾಕಬಹುದೇ?" ಎಂದು ಕೇಳಿ ಮುಗ್ಧತೆ ನಟಿಸುತ್ತಾಳೆ. ಕೊಬ್ಬರಿಯಲ್ಲಿ ಎಷ್ಟೊಂದು ಕೊಬ್ಬಿದೆ, ತೆಂಗಿನಕಾಯಿ ಮನೆಗೆ ತರಲೇಬೇಡ ಎಂದು ಕಟ್ಟುನಿಟ್ಟು ಮಾಡಿದ ದಿವಸವೇ ಕೊಬ್ಬರಿ ಮಿಠಾಯಿ ಮಾಡಿ "ಮಕ್ಕಳಿಗೆ ಅಂತ ಮಾಡಿದೆ, ನಿಮಗೆ ಬೇಡದಿದ್ದರೆ ಹೋಗಲಿ ಬಿಡಿ ಪಾಪ!" ಎನ್ನುತ್ತಾಳೆ ಈ  ಸಿಂಪತಿವ್ರತೆ. ಬೆಕ್ಕಿನ ನಂಬಿಕೆ ಮೂಡ್ ನಂಬಿಕೆಯ ವಿಷಯ ಯಾತಕ್ಕೆ ಬಂತು ಅಂತ ಕೇಳಿ. ನಮ್ಮ ಸರಕಾರಕ್ಕೆ ಅದು ಯಾಕೋ ಮೂಡ್ ಕೆಟ್ಟು ಹೋಗಿ  ಮೂಢ ನಂಬಿಕೆಯ ವಿರುದ್ಧ ಒಂದು ಕಾನೂನನ್ನೇ ಮಾಡುತ್ತಿದೆಯಂತೆ.  ಬೆಕ್ಕು ಎಡದಿಂದ ಬಲಕ್ಕೆ ಹಾದು ಹೋದರೆ ಕೆಲಸ ಕೆಡುತ್ತದೆ ಎಂದು ಕೆಲವರು ನಂಬುತ್ತಾರೆ.  ಹಾಲನ್ನು ಕುಡಿಯಲು ಬಂದ ಬೆಕ್...

ರಾಧೆಗೆ ಸಾಂತ್ವನ

ಇಮೇಜ್
ಸಿ.ಪಿ. ರವಿಕುಮಾರ್ ನಾಳೆಯ ಚಿಂತೆ ಕೆಲವರಿಗೆ; ಉಳಿಯುತ್ತದೆಯೇ ಮುಂದಿನ ಪೀಳಿಗೆಗೆ ಇಳೆ? ಗಾಳಿ ಕಲುಷಿತವಾಗುತ್ತಿದೆ ಇತ್ತ, ಅತ್ತ ಸಾಲುಮರಗಳ ಕೊಲೆ ಮಾಲಿನ್ಯ ಹರಡುತ್ತಿದೆ ನಾನಾ ತ್ಯಾಜ್ಯಗಳಿಂದ ಅಂತರ್ಜಲಕ್ಕೆ ಕೇಳಲಾಗದು ನಿಶಬ್ದವನೆಂಬಂತೆ ವ್ಯೋಮದಲ್ಲಿ ಶಬ್ದಗಳ ಸಂತೆ ಬಾಲಕ್ಕೆ ಬೆಂಕಿ ಹಚ್ಚಿದ ಕಪಿಯಂತೆ ಮಾನವನ ನಡತೆ ಬಾಳುವಳೇ ಸೀತೆ,  ಮತ್ತವಳ  ಜನ್ಮದಾತೆ, ಹೀಗೆ ಬೀಳುತ್ತಿರುವಾಗ ಲಂಕೆ? ನಾಳೆಯ ಚಿಂತೆ ಇಲ್ಲ ಕೆಲವರಿಗೆ; ಇಂದು ತುಂಬಿತೇ  ತುತ್ತಿನ ಚೀಲ? ಗಾಳಿಗೆ ತೂರಿಬಿಡು ಚಿಂತೆ! ಸುಧಾಮನಾಗಲಿಲ್ಲವೇ ಒಮ್ಮೆಲೇ  ಕುಚೇಲ? ತಾಳಿದವನು ಬಾಳಿಯಾನು; ಜನ್ಮ ತಾಳಿದವನು ಬಾಳದಿರಲಾರ ಮೇಲೆ ಮರಕ್ಕೆ ಕಟ್ಟಿ ಹಗ್ಗದ ಕುಣಿಕೆ ಜೋಳಿಗೆಯಲ್ಲಿ ಹಾಕಿ ಬಿಡು ಭಾರ ತಾಳಿ ಕಟ್ಟಿದವನು ನೋಡು ಸೆರೆಯ ತೋಳಲ್ಲಿ ಮರೆತು ಮಲಗಿಹನು ಮೇಲೇಳುವನು ಇವನು ಯಾವಾಗ? ಎಂದು ಎದ್ದು ಮೈ ಕೊಡಹುವನು? ಆಳಾಗಬಲ್ಲವನು ಅರಸಾಗಬಲ್ಲ! ಬರಿದೆ ಹುರಿದುಂಬಿಸುವುದು ಗಾದೆ ಬಾಲಗೋಪಾಲನ ಮಧುರ ಸ್ಮೃತಿಯಲ್ಲೇ ದಿನವನ್ನು ದೂಡುವಳು ರಾಧೆ (ಈ ಕವಿತೆ "ಮಯೂರ" ಕನ್ನಡ ಮಾಸಪತ್ರಿಕೆ, ಡಿಸೆಂಬರ್ ೨೦೧೩ - ಇದರಲ್ಲಿ  ಪ್ರಕಟವಾಗಿದೆ. ಪ್ರಕಟಿತ ಕವಿತೆಯ ಪೂರ್ಣಪಾಠ  ಇಲ್ಲಿದೆ.)

ನನ್ನ ಪ್ರೀತಿಯ ದೇಶವೇ

ಇಮೇಜ್
ಸಿ. ಪಿ. ರವಿಕುಮಾರ್  ಮನ್ನಾ ಡೇ ಹಾಡಿರುವ ಹಾಡುಗಳಲ್ಲಿ ಕಾಬುಲಿವಾಲಾ ಚಿತ್ರದ "ಐ ಮೇರೆ ಪ್ಯಾರೇ ವತನ್" ಬಹಳ ಜನಪ್ರಿಯವಾಗಿದೆ. ಕಾಬುಲಿವಾಲಾ ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಕೂರರು ಬರೆದ ಪ್ರಸಿದ್ಧ ಕಥೆ. ಅದನ್ನು ಆಧರಿಸಿ ಬಿಮಲ್ ರಾಯ್ ನಿರ್ದೇಶಿಸಿದ  ಹಿಂದಿ ಚಿತ್ರದಲ್ಲಿ ಬಲರಾಜ್ ಸಾಹನಿ ಕಾಬುಲಿವಾಲನ ಪಾತ್ರ ವಹಿಸಿದ್ದರು. ಕಾಬುಲಿವಾಲಾ ಒಂದು ಹೃದಯಸ್ಪರ್ಶಿ ಕಥೆ. ಒಬ್ಬ ಕಥಾ ಲೇಖಕನ ಐದು ವರ್ಷದ ಪುಟ್ಟ ಮಗಳು ಮಿನ್ನಿ ಮತ್ತು ಕಾಬುಲ್ ನಗರದಿಂದ ಒಣ ಹಣ್ಣು ವ್ಯಾಪಾರ ಮಾಡಲು ಬಂದಿದ್ದ ಒಬ್ಬ ಕಾಬುಲಿವಾಲಾನ  ನಡುವೆ ಒಂದು ಅಪೂರ್ವವಾದ ಪ್ರೇಮಸಂಬಂಧ ಬೆಳೆಯುತ್ತದೆ. ಅವನ ದೈತ್ಯಾಕಾರವನ್ನು ಕಂಡು ಮೊದಲು ಮಿನ್ನಿ ಹೆದರಿಕೊಂಡರೂ ಕ್ರಮೇಣ ಅವರಿಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ಅವಳಿಗೆ ಅವನು ಕಥೆ ಹೇಳುತ್ತಾನೆ, ಸವಾರಿ ಮಾಡಿಸುತ್ತಾನೆ, ದ್ರಾಕ್ಷಿ ಹಣ್ಣು ಕೊಟ್ಟು ಒಲಿಸಿಕೊಳ್ಳುತ್ತಾನೆ. ಅವನ ದೊಡ್ಡ ಮೂಟೆಯಲ್ಲಿ ಏನಿದೆ ಎಂದು ಮಿನ್ನಿಗೆ ಕುತೂಹಲ. ಮಕ್ಕಳನ್ನು ಅವನು ಕೊಂಡೊಯ್ಯುತ್ತಾನೆ ಎಂದು ಅವಳ ತಾಯಿ ಹೆದರಿಸಿದ್ದಾಳೆ. ಕಾಬುಲಿವಾಲಾ ತನ್ನ ಮೂಟೆಯಲ್ಲಿ ಅದಿದೆ, ಇದಿದೆ ಎಂದು ಕತೆ ಕಟ್ಟಿ ನಗಿಸುತ್ತಾನೆ. ಅವನಿಗೆ ತನ್ನ ದೇಶದಲ್ಲಿ ಇದೇ ವಯಸ್ಸಿನ ಮಗಳಿದ್ದಾಳೆ. ತನ್ನ ಮಗಳನ್ನೇ ಅವನು ಮಿನ್ನಿಯಲ್ಲಿ ಕಾಣುತ್ತಾನೆ. ಕಾಬುಲಿವಾಲಾ ತುಂಬಾ ಸರಳ...

ಕೊಟ್ಟ ಭಾಷೆ, ಪ್ರೀತಿ, ಪ್ರೇಮ

ಇಮೇಜ್
ಮನ್ನಾ ಡೇ ಅವರ ಗೀತೆಗಳನ್ನು ಕೇಳುತ್ತಾ ಬೆಳೆದವನು ನಾನು. ಅವರ ಭಾವಪೂರ್ಣ ಗಾಯನ ಮತ್ತು ಅರ್ಥಪೂರ್ಣ ಗೀತೆಗಳು ಯಾರ ಹೃದಯವನ್ನಾದರೂ ಕಲಕುತ್ತವೆ. ಅವರು ನಿಧನರಾದರೆಂಬ ಸುದ್ದಿ ಬಂದಿದೆ; ಆದರೆ ಅಂಥವರಿಗೆ ಸಾವಿಲ್ಲ.  ಅವರು ಹಾಡಿರುವ ಒಂದು ಗೀತೆಯ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ. ಚಲನಚಿತ್ರ: ಉಪಕಾರ್  ಗೀತೆ: ಕಸ್ಮೇ ವಾದೇ ಪ್ಯಾರ್ ವಫಾ  ಕವಿ: ಇಂದೀವರ್  ಗಾಯಕ: ಮನ್ನಾ ಡೇ  ಅನುವಾದ: ಸಿ.ಪಿ. ರವಿಕುಮಾರ್  ಕೊಟ್ಟ ಭಾಷೆ, ಪ್ರೀತಿ, ಪ್ರೇಮ ಮಾತುಗಳು, ಮಾತಿಗೆ ಬೆಲೆಯೇ? ಯಾರಿಗೆ ಯಾರೂ ಆಗರು ನೆರವು ನಂಟುಗಳು, ನಂಟಿಗೆ ಬೆಲೆಯೇ? ದೇವನ ದೂತ ಎದುರಿಗೆ ಬಂದರೂ ಸಾವಿನಿಂದ ಸಿಗುವುದೇ ಮುಕ್ತಿ? ನಿನ್ನ ಹೊಟ್ಟೆಯಲಿ ಹುಟ್ಟಿದ ಮಗನೇ ಸುಡಲು ಕೊಡುವುದಿಲ್ಲವೆ ಬೆಂಕಿ? ಮುಗಿಲಿನಲ್ಲಿ ತೇಲಾಡುವ ನೀನು ಮಣ್ಣನು ಸೇರುವೆ ಮಣ್ಣಾಗಿ ಸುಖದಲಿ ಎಲ್ಲಾ ಹಿಂಬಾಲಿಸುವರು ದುಃಖದಲ್ಲಿ ಬೇರಾಗುವರು ನಿನ್ನವರೇ ಬೆನ್ನೊಳಗಿರಿಯುವರು ನಿನ್ನೆದೆ ವಿಛಿದ್ರಗೊಳಿಸುವರು ದೇವರಿಗೇ ದ್ರೋಹವ ಮಾಡುವರು ಮನುಜರನ್ನು ಗಣಿಸುವರೇನು?

ಹೇ ಮಾ! ಮಾಲಿನೀ

ಹೇ ಮಾ! ಮಾಲಿನೀ  (ಹರಟೆ) ಸಿ.ಪಿ. ರವಿಕುಮಾರ್  (ಈ ಹರಟೆ "ಪ್ರಜಾವಾಣಿ" ಸಾಪ್ತಾಹಿಕ ಪುರವಣಿ, ಅಕ್ಟೋಬರ್ ೨೦, ೨೦೧೩ ರಲ್ಲಿ ಪ್ರಕಟವಾಗಿದೆ. ಹರಟೆಯ ಪೂರ್ಣಪಾಠವನ್ನು ಕೆಳಗೆ ಓದಿ. ) ನಾನು  ಪಿಯೂಸಿ ಎರಡನೇ ವರ್ಷ ಓದುತ್ತಿದ್ದಾಗ ನಮಗೆ ರಬೀಂದ್ರನಾಥ ಟ್ಯಾಗೋರ್ ಬರೆದ "ನೌಕಾಘಾತ" ಎಂಬ ಕಾದಂಬರಿಯ ಇಂಗ್ಲಿಷ್ ಭಾಷಾಂತರವನ್ನು ಪಠ್ಯವಾಗಿ ಓದುವ ಅವಕಾಶ ಒದಗಿತ್ತು.  ಅದೊಂದು ರೊಮ್ಯಾಂಟಿಕ್ ಕಥೆ. ಇಂದಿನ ಸೀರಿಯಲ್  ನಿರ್ಮಾಪಕರ ಕಣ್ಣಿಗೆ ಯಾಕೋ ಈ ಕಥೆ ಬಿದ್ದಿಲ್ಲ.  ಈ ಕಾದಂಬರಿಯಲ್ಲಿ ಬರುವ ಒಂದು ಪಾತ್ರದ ಹೆಸರು ಹೇಮನಳಿನಿ. ಅದನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಾಗ ಗಮನವಿಟ್ಟು ಓದದೇ ಹೋದರೆ ಯಾರಾದರೂ "ಹೇಮಮಾಲಿನಿ" ಎಂದು ಓದುವುದು ಸ್ವಾಭಾವಿಕ. ಅದರಲ್ಲೂ ಆಗ ಹೇಮಮಾಲಿನಿ ಬಾಲಿವುಡ್ ನಲ್ಲಿ ತಮ್ಮ ಅಭಿನೇತ್ರಿ  ವೃತ್ತಿಜೀವನದ ಶಿಖರದಲ್ಲಿದ್ದರು. ಬೇರೊಂದು ಸೆಕ್ಷನ್ ನಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ಅಧ್ಯಾಪಕರು ಸುಮಾರು ಅರ್ಧ ವರ್ಷ "ಹೇಮಮಾಲಿನಿ" ಎಂದೇ ಓದುತ್ತಾ ಪಾಠ ಮಾಡಿದರು. ಒಂದು ದಿನ ಒಬ್ಬ ವಿದ್ಯಾರ್ಥಿ ಅವರಿಗೆ ತಪ್ಪನ್ನು ತೋರಿಸಿಕೊಟ್ಟಾಗ ಐವತ್ತರ ಹರೆಯದ ಅಧ್ಯಾಪಕರು ಕೂಡಾ ನಾಚಿದರು! ಹೇಮಮಾಲಿನಿ ಅವರ ಹೆಸರನ್ನು ಉತ್ತರ ಭಾರತೀಯರು "ಹೇಮಾ ಮಾಲಿನಿ" ಎಂದು ಸ್ವಲ್ಪ ತಿರುಚಿದ್ದಾರೆ. ಅದನ್ನು ಕೇಳಿದಾಗ "ಹೇ ಮಾ! ಮಾಲಿನಿ!" ಅಥವಾ "ತಾಯೇ...

ಕಟ್ಟಿ ಕಾಲಿಗೆ ಗೆಜ್ಜೆ

ಇಮೇಜ್
ಮೂಲ : ಮೀರಾ ಬಾಯಿ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕಟ್ಟಿ ಕಾಲಿಗೆ ಗೆಜ್ಜೆ ಹಾಕಿ ಕುಣಿತದ ಹೆಜ್ಜೆ ಮತ್ತೆ ಮಾಡುವೆ ನಾನು ನರ್ತನದ ಪೂಜೆ || ನನ್ನ ನಾರಾಯಣನಿಗೆ ದಾಸಿಯಾದೆನು ನಾನು ಅನ್ಯರಾರದು ಅಲ್ಲ, ಇದು ನನ್ನದೇ  ಇಚ್ಛೆ || ಇಷ್ಟನೆಂಟರು ಮೀರಾ ಕುಲನಾಶಿನಿ ಎಂದರು ಎಷ್ಟೋ ಜನ ಚುಚ್ಚಿದರು ಮೀರಾಳಿಗೆ ಹುಚ್ಚೆ? || ನಗುನಗುತ ಕುಡಿಯುವೆನು ನೋಡಿ ರಾಣಾಜೀ ನೀವು ಕಳಿಸಿದ ವಿಷದ ಬಟ್ಟಲಿನ ಭಿಕ್ಷೆ || ನನ್ನ ಪ್ರಭು ಗಿರಿಧರನಾಗರನ ನಂಬಿರುವೆ ತನ್ನವರಿಗೆ ನೀಡುವನು ಸಹಜ ಶ್ರೀರಕ್ಷೆ  || ಹದಿನಾರನೇ ಶತಮಾನದಷ್ಟು ಹಿಂದೆ ಸಮಾಜವನ್ನು ಎದುರು ಹಾಕಿಕೊಂಡು ತನ್ನ ನಂಬಿಕೆಯ ಮೇಲೆ ಬದುಕಿದವಳು  ಮೀರಾ ಬಾಯಿ. ಸಾಧುಸಂತರೊಂದಿಗೆ ಅಲೆದಾಡುತ್ತಾ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನರ್ತಿಸುತ್ತಾ ಕಾಲ ಕಳೆದವಳನ್ನು ಸಮಾಜ ಎಷ್ಟು ನಿಂದಿಸಿರಬಹುದು! ಮೀರಾ ಬಗ್ಗೆ ಹುಟ್ಟಿಕೊಂಡಿರುವ ದಂತಕತೆಯಲ್ಲಿ ಅವಳನ್ನು ಮದುವೆಯಾಗಿದ್ದ ರಾಣಾ (ಚಿತ್ತೌಢದ ರಾಜ ರಾಣಾ ಸಾಂಗಾ ಎಂಬುವನ ಮಗ ರಾಜಾ ಭೋಜರಾಜ) ತನ್ನನ್ನು ತೊರೆದು ತನಗೆ ಅಪಮಾನ ಮಾಡಿದಳೆಂಬ ಕ್ರೋಧದಲ್ಲಿ ಮೀರಾ ಬಾಯಿಗೆ ವಿಷದ ಬಟ್ಟಲನು ಕಳಿಸುತ್ತಾನೆ; ವಿಷವನ್ನು ಕುಡಿದರೂ ಮೀರಾ ಬದುಕಿ ಉಳಿಯುತ್ತಾಳೆ.  ಇಲ್ಲಿ "ವಿಷ" ಎಂಬುವುದನ್ನು ನಾವು ಸಾಂಕೇತಿಕವಾಗಿ ಸ್ವೀಕರಿಸಬಹುದೆಂಬುದಕ್ಕೆ  ಮೀರಾಳ ಈ ಪದದಲ್ಲಿ ಸುಳಿವು ಸಿಕ್ಕುತ...

ಪತ್ರಿಕೋದ್ಯಮವನ್ನು ಕುರಿತು ಗಾಂಧಿ

ಇಮೇಜ್
ಅನುವಾದ: ಸಿ.ಪಿ. ರವಿಕುಮಾರ್ ಗಾಂಧಿ ಪ್ರೆಸ್ ಬಗ್ಗೆ ಹೀಗೆ ಬರೆಯುತ್ತಾರೆ: (೧) ಸೇವೆಯೇ ಪತ್ರಿಕೋದ್ಯಮದ ಏಕಮಾತ್ರ ಗುರಿಯಾಗಿರಬೇಕು ಎಂಬುದು ನನ್ನ ಭಾವನೆ. ಪತ್ರಿಕೆಗಳು ಒಂದು ಮಹಾನ್ ಶಕ್ತಿಯೇನೋ ನಿಜ, ಆದರೆ ನಿಗ್ರಹವಿಲ್ಲದ ನೀರಿನ ತೊರೆಯು ಹೇಗೆ  ಇಡೀ ಹಳ್ಳಿಗಳನ್ನು ಮುಳುಗಿಸಿ ಬೆಳೆಯನ್ನು ನಾಶ ಮಾಡುತ್ತದೋ, ನಿಗ್ರಹವಿಲ್ಲದ ಲೇಖನಿಯೂ ನಾಶಕ್ಕೆ ಕಾರಣವಾಗುತ್ತದೆ. ಆದರೆ ಬರವಣಿಗೆಗೆ ನಿಗ್ರಹವು ಹೊರಗಡೆಯಿಂದ ಬಂದರೆ ಅದು ನಿಗ್ರಹವಿಲ್ಲದೇ ಇರುವ ಬರವಣಿಗೆಗಿಂಗಲೂ ಹೆಚ್ಚು ವಿಷಮಯವಾಗಬಲ್ಲದು. ಬರವಣಿಗೆಗೆ ಸ್ವಯಂನಿಗ್ರಹವಿದ್ದಾಗ ಮಾತ್ರ ಅದು ಪ್ರಯೋಜನಕಾರಿ. ನನ್ನ ಈ ವಿಚಾರಧಾರೆ ಸರಿಯಾಗಿದ್ದರೆ ಜಗತ್ತಿನ ಎಷ್ಟು ನಿಯತಕಾಲಿಕೆಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತವೆಯೋ? ನಿಷ್ಪ್ರಯೋಜಕವಾದ ಪತ್ರಿಕೆಗಳನ್ನು ತಡೆಯುವವರು ಯಾರು? ಯಾವುದು ನಿಷ್ಪ್ರಯೋಜಕ ಎಂಬುದನ್ನು ನಿರ್ಧರಿಸುವುದು ಯಾರು? ಜಗತ್ತಿನಲ್ಲಿ ಹೇಗೆ ಒಳ್ಳೆಯದೂ ಮತ್ತು ಕೆಟ್ಟದ್ದೂ ಒಟ್ಟಿಗೆ ಬಾಳುತ್ತವೆಯೋ ಹಾಗೇ ಪ್ರಯೋಜನವುಳ್ಳದ್ದೂ ಮತ್ತು ನಿಷ್ಪ್ರಯೋಜಕವಾದದ್ದೂ ಜೊತೆಜೊತೆಗೇ ಬಾಳಬೇಕಾಗುತ್ತದೆ; ಯಾವುದನ್ನು ಸ್ವೀಕರಿಸಬೇಕು ಎಂಬುದು  ಮನುಷ್ಯನಿಗೆ  ಬಿಟ್ಟದ್ದು. (ಆತ್ಮ ಚರಿತ್ರೆ)  (೨) ಬರಿಯ ತೋರಿಕೆ,  ಏಕಪಕ್ಷೀಯತೆ, ಅನಿಖರತೆ, ಮತ್ತು ಸ್ವಲ್ಪ ಮಟ್ಟಿಗೆ ಅಪ್ರಾಮಾಣಿಕತೆ, ಇವೆಲ್ಲಾ ಆಧುನಿಕ ಪತ್ರಿಕೋದ್ಯಮದಲ್ಲಿ ನುಸ...

ನಿಮ್ಮೊಳಗಿರುವ ರಾಕ್ಷಸ

ಇಮೇಜ್
ಸಿ.ಪಿ. ರವಿಕುಮಾರ್ ಕೆ.ವಿ. ಐಯ್ಯರ್ ಅವರು ಬರೆದ "ರೂಪದರ್ಶಿ" ಕಾದಂಬರಿ ಬಹಳ ಜನಪ್ರಿಯವಾದದ್ದು. ಇಟಲಿ ದೇಶದ ಪ್ರಸಿದ್ಧ ಚಿತ್ರಕಾರ ಹಾಗೂ  ಮೂರ್ತಿಕಾರನಾದ ಮೈಕೆಲ್ ಏಂಜೆಲೋ ಈ ಕತೆಯಲ್ಲಿ ಒಂದು ಪಾತ್ರ. ಅವನು ಬಾಲ ಏಸುವಿನ ಚಿತ್ರಕ್ಕಾಗಿ ಒಬ್ಬ ರೂಪದರ್ಶಿಯ ಹುಡುಕಾಟದಲ್ಲಿದ್ದಾಗ ಕರುಣೆ ಮತ್ತು ನಿಷ್ಕಪಟತೆಗಳೇ ಮೂರ್ತಿವೆತ್ತಂಥ ಒಬ್ಬ ಬಾಲಕ ಅವನಿಗೆ ಎದುರಾಗುತ್ತಾನೆ; ಅವನನ್ನು ರೂಪದರ್ಶಿಯನ್ನಾಗಿ ಮೈಕೆಲ್ ಬಳಸಿಕೊಳ್ಳುತ್ತಾನೆ. ಮುಂದೆ ಸಮಾಜದ ಅನೇಕ ಅನ್ಯಾಯಗಳಿಗೆ ತುತ್ತಾಗಿ ಆ ಬಾಲಕನ ಚಹರೆ ಭಯಂಕರವಾಗಿ ಮಾರ್ಪಾಟಾಗುತ್ತದೆ. ತಾನು ಬರೆಯಲಿರುವ ಸೈತಾನನ ಚಿತ್ರಕ್ಕೆ ರೂಪದರ್ಶಿಯನ್ನು ಹುಡುಕುತ್ತಿರುವಾಗ ಮೈಕೆಲ್ ಏಂಜೆಲೋ ಗೆ ಅದೇ ವ್ಯಕ್ತಿ ಎದುರಾಗುತ್ತಾನೆ.  ವೃದ್ಧ ಮೂರ್ತಿಕಾರನಿಗೆ ಈ ವ್ಯಕ್ತಿಯೇ ತಾನು ಹಿಂದೆ ಬಾಲ ಏಸುವಿನ ಚಿತ್ರಕ್ಕೆ ಬಳಸಿದ ರೂಪದರ್ಶಿ ಎಂದು ಗೊತ್ತಿಲ್ಲ. ಮುಂದೆ ನಾಟಕೀಯ ಬೆಳವಣಿಗೆಯಲ್ಲಿ  ಅದು ಗೊತ್ತಾದಾಗ ಅವನಿಗೆ ಆಘಾತವಾಗುತ್ತದೆ. ಇದೇ ರೀತಿಯ ಇನ್ನೊಂದು ಕತೆ. ಇದನ್ನು ಬರೆದಿರುವುದು ಜೆಫ್ರಿ ಆರ್ಚರ್. ಒಂದು ಮಗುವಿನ ಜನನದ ವೃತ್ತಾಂತ ಅದರಲ್ಲಿ ಬರುತ್ತದೆ. ಎಲ್ಲ ಮಕ್ಕಳು ಹುಟ್ಟುವ ಹಾಗೆ ಆ ಮಗು ಹುಟ್ಟಿತು. ತಾಯಿ ಹೆರಿಗೆ ನೋವನ್ನು ತಿಂದು ಮಗುವನ್ನು ಹೆತ್ತಳು. ಆದರೆ ತನ್ನ ಮಗುವಿನ ಮುಗ್ಧ ಮುಖವನ್ನು ನೋಡಿದಾಗ ನೋವನ್ನು ಮರೆತಳು. ಆ ಮಗು ಮುಂದೆ ಹೋಗಿ ಅಡಾಲ್ಫ್ ಹಿಟ್ಲರ್ ಎಂಬ ಹೆ...

ಅವಳ ಹಾಡು

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ವಿಲಿಯಂ ವರ್ಡ್ಸ್ ವರ್ತ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನೋಡಲ್ಲಿ! ಕಾಣಿಸಿತೆ? ಹೆಣ್ಣುಮಗಳೊಬ್ಬಳು, ಮೇಡುಗಳ ಮೇಲಿರುವ ಹೊಲದಲ್ಲಿ ಒಬ್ಬಳೇ ಹಾಡುತ್ತ ಏನೋ ತನ್ನ ಪಾಡಿಗೆ ತಾನೇ, ಕಡಿಯುತ್ತ ಪೈರನ್ನು, ಕಟ್ಟುತ್ತ ತೆನೆ! ನಿಲ್ಲು ಒಂದೆರಡು ಕ್ಷಣ! ಕೇಳಿಸಿಕೋ! ಏನವಳು ಸೊಲ್ಲೆತ್ತಿ ಹಾಡುತಿಹ ದುಃಖಗೀತೆ? ಎಲ್ಲೆಡೆಗೆ ಹರಡುತಿದೆ, ಕಣಿವೆಯೊಳು ತುಂಬುತಿದೆ ಮೆಲ್ಲಮೆಲ್ಲನೆ ಅವಳ ಗಾನದೊರತೆ ಮರಳುಗಾಡಿನಲೊಬ್ಬ ಬಸವಳಿದ ಯಾತ್ರಿಕನು ನೆರಳನ್ನು ಕಂಡು ಮೈಚಾಚಿ ಮಲಗಿರಲು ಕೊರಳೆತ್ತಿ ಹಾಡಿ ಕಾಜಾಣವೊಂದು ತರುವ ಸುಖವನ್ನೂ ಮೀರಿಸುವ ಹಾಡು ಯಾವ ಕೋಗಿಲೆ ಕೂಡಾ ಕುಹೂ ಕೂಹೂ ಎನ್ನುತ್ತ ನವವಸಂತನು ಬಂದ ಸಂಭ್ರಮಕ್ಕೆ ದಿವ್ಯಕಂಠದಿ ಹೀಗೆ ಹಾಡಿರಲು ಸಾಧ್ಯವೇ ಭಾವಪೂರ್ಣತೆಯಿಂದ ಇವಳು ಹಾಡಿದಂತೆ ನಾನರಿಯೆ ಇವಳಾವ ಹಾಡು ಹಾಡುತ್ತಿಹಳೋ ಮನವ ಕಲಕುತ್ತಿದೆ ಇವಳ ಆರ್ತಗಾನ ನೆನೆದು ಹಾಡುವಳೇನೋ ಹಳೆಯ ಕತೆ ಯಾವುದೋ ರಣರಂಗದಲ್ಲೆಂದೋ ನಡೆದ ಯುದ್ಧ ಇವಳದೇ ಬಾಳಿನಲಿ ನಡೆದಿರುವ ಯಾವುದೋ ನೋವಿಂದು ಹಾಡಾಗಿ ಹರಿಯುತಿಹುದೇ? ನಾವೆ ಮುಳುಗಿರಬಹುದು, ಇನಿಯ ಮುನಿದಿರಬಹುದು, ಸಾವುನೋವಿನ ನೆನಪು ಕಣ್ಣಲ್ಲಿ ತುಳುಕಿತೇ? ಕಾಡುತ್ತಿರುವ ನೋವು ಯಾವುದಾದರೂ ಇರಲಿ ಹಾಡುತ್ತಿಹಳು ಇವಳು ಕೊನೆಯಿಲ್ಲದಂತೆ ನಡುಬಗ್ಗಿಸಿ ಕೈಯಲ್ಲಿ ಹಿಡಿದು ಕುಡುಗೋಲನ್ನು ದುಡಿಯುತ್ತ ಹೊಲದಲ್ಲಿ ಜೊತೆಗಾರರಿಲ್ಲ...

ಅದ್ಭುತ ವಿಜಯ

ಇಮೇಜ್
ಸ್ಫೂರ್ತಿ: ರಾಬರ್ಟ್ ಸದೇ ಬರೆದ ಬ್ಯಾಟಲ್ ಆಫ್ ಬ್ಲೆನ್ ಹೈಮ್  ಎಂಬ ಇಂಗ್ಲಿಷ್ ಕವಿತೆ  ಸಿ.ಪಿ. ರವಿಕುಮಾರ್  ಬೇಸಗೆಯ ಸಂಜೆ ನಂಜಪ್ಪ ಕುಳಿತಿದ್ದ  ಮನೆ ಹೊರಗೆ  ಕೆಲಸ ಮುಗಿಸಿ  ಮುಸ್ಸಂಜೆ ಬಿಸಿಲಲ್ಲಿ ಆಡುವ ಮೊಮ್ಮಕ್ಕಳು  ನದಿಯ ಬಳಿ ಹರಡಿರುವ  ಮರಳ ರಾಶಿ ರಾಜಣ್ಣನಿಗೆ ಸಿಕ್ಕಿ ಏನೋ ಗುಂಡಗಿನ  ವಸ್ತು  ತಳ್ಳುತ್ತ ಬರುವುದನು ನೋಡಿ  ಏನಜ್ಜ ಎಂದು ಬೆರಳು ಮಾಡಿದಳು ಲಕ್ಷ್ಮಿ  ಅಣ್ಣ ಬರುತಿದ್ದ ಕಡೆಗೆ ಓಡಿ  ಬೆಳ್ಳಗಿನ ನುಣುಪಾದ ಗೋಲವನು ಮೆಲ್ಲಗೆ  ಎತ್ತಿಕೊಂಡನು ಅಜ್ಜ  ಕೈಯಲ್ಲಿ  ನತದೃಷ್ಟ ಯಾರದೋ ತಲೆಬುರುಡೆ! ಎಂದನು ತಲೆ ಕೊಡವಿ ನಿಟ್ಟುಸಿರು ಚೆಲ್ಲಿ  ತೋಟದಲಿ ಗುದ್ದಲಿಗೆ, ಹೊಲದಲ್ಲಿ ನೇಗಿಲಿಗೆ  ಆಗಾಗ ಸಿಗುವಂಥ ವಸ್ತು  ದೊಡ್ಡಕಾಳಗದಲ್ಲಿ ಸತ್ತವರ ಕುರುಹುಗಳು  ಎಷ್ಟು ಜನ ಸತ್ತರೋ, ಯಾರಿಗೆ ಗೊತ್ತು?   ಕೆರಳಿತು ಮಕ್ಕಳ ಕುತೊಹಲ, ಕಥೆಯನ್ನು  ಹೇಳಲೇಬೇಕೆಂದು ಗೋಗರೆದರು  ಯಾರಲ್ಲಿ ನಡೆಯಿತು ಯುದ್ಧ? ಯಾವಾಗ? ಯಾಕೆ ನಡೆಯಿತು? ನಮಗೆ ಹೇಳಲೇಬೇಕು ತಾಳಿಕೋಟೆಯ ಯುದ್ಧ ಕೇಳಿಲ್ಲದವರಾರು  ನೂರಾರು ವರ್ಷಗಳು  ಕಳೆದಿದ್ದರೂ  ವಿಜಯನಗರ ಅರಸರನು ಸೋಲಿಸಿದರಂತೆ  ದಕ...

ಡೇರೆ ಹೂಗಳು

ಇಮೇಜ್
ಕವಿತೆ ಓದುವ ಮುನ್ನ ...  ವಿಲಿಯಂ ವರ್ಡ್ಸ್ ವರ್ತ್ ಒಬ್ಬ ನಿಸರ್ಗಪ್ರಿಯ ಕವಿ. ಪ್ರಕೃತಿಯ ದೃಶ್ಯದಲ್ಲಿ ಅನಾದೃಶವಾದ ದರ್ಶನವನ್ನು ಕಂಡುಕೊಳ್ಳುವುದು ರೊಮ್ಯಾಂಟಿಕ್ ಕವಿಗಳ ಪ್ರಥೆ. ಕನ್ನಡದಲ್ಲಿ ರೊಮ್ಯಾಂಟಿಕ್ ಕಾವ್ಯ ಮಾರ್ಗದಲ್ಲಿ ಬರೆದ ಕುವೆಂಪು ಬೆಳ್ಳಕ್ಕಿಗಳ ಸಾಲನ್ನು ನೋಡಿ ಅದರಲ್ಲಿ ದೇವರ ರುಜುವನ್ನು ಕಾಣುತ್ತಾರೆ. ವರ್ಡ್ಸ್ ವರ್ತ್ ಕವಿಯ ಡ್ಯಾಫೊಡಿಲ್ಸ್ ಕವಿತೆಯನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಿಸುವುದು ಸಾಮಾನ್ಯ. ಡ್ಯಾಫೊಡಿಲ್ಸ್ ಎಂದರೆ ಡೇರೆ ಹೂವಲ್ಲ - ಆದರೆ ಅನುವಾದದ ಅನುಕೂಲಕ್ಕೆ ನಾನು ಅದನ್ನು ಡೇರೆ ಹೂವು ಎಂದು ಭಾವಿಸಿದ್ದೇನೆ. ಈ ಕವಿತೆಯಲ್ಲಿ ಕವಿ ನಿಸರ್ಗದ ಸುಂದರ ಸೃಷ್ಟಿ ನಮಗೆ ಹೇಗೆ ಸಾಂತ್ವನ ನೀಡಬಲ್ಲದು ಎಂಬುದನ್ನು ಕುರಿತಾಗಿ ಬರೆದಿದ್ದಾನೆ. ಸೋಷಿಯಲ್ ಮೀಡಿಯಾ ಬಳಸುವ ಎಲ್ಲರೂ ಆಗಾಗ ತಮಗೆ ಕಂಡ ಯಾವುದಾದರೂ ಪ್ರಾಣಿ, ಹೂವು, ಬೆಟ್ಟ, ಗುಡ್ಡ ಮೊದಲಾದ ನೈಸರ್ಗಿಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವರ್ಡ್ಸ್ ವರ್ತ್ ಕಾಲದಲ್ಲಿ ಹೀಗೆ ಚಿತ್ರಗಳನ್ನು ತೆಗೆಯುವುದಾಗಲಿ, ಬೇರೆಯವರೊಂದಿಗೆ ಹಂಚಿಕೊಳ್ಳುವುದಾಗಲಿ ಸಾಧ್ಯವಿರಲಿಲ್ಲ! ತಾನು ಕಂಡ ಸುಂದರ ದೃಶ್ಯವನ್ನು ತನ್ನ ನೆನಪಿನ ಕೋಶದಲ್ಲಿ ಹಿಡಿದಿಟ್ಟುಕೊಳ್ಳುವುದು ಮಾತ್ರ ಸಾಧ್ಯವಾಗಿತ್ತು. ಏಕಾಂತದಲ್ಲಿ ಖಾಲಿತನವನ್ನು ಅನುಭವಿಸುವಾಗ ಇಂಥ ದೃಶ್ಯಗಳೇ ನೆರವಿಗೆ ಬರುತ್ತವೆ ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ. ಇದೇ ವರ್ಡ್ಸ್ ವರ್ತ್ "ದ ವರ್ಲ...

ನಾನು ತುಳಿಯದ ಹಾದಿ

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  (ಕವಿತೆ ಓದುವ ಮುನ್ನ ಒಂದು ಪೀಠಿಕೆ: ನಮ್ಮ ಮುಂದೆ ಎಷ್ಟೋ ಸಂದರ್ಭಗಳಲ್ಲಿ ಕವಲು ಹಾದಿಗಳು ಎದುರಾಗುತ್ತವೆ.  ಎರಡೂ ಕವಲುಗಳಲ್ಲಿ ಒಮ್ಮೆಲೇ ಸಂಚರಿಸಲು ಸಾಧ್ಯವೇ? ಇನ್ನೂ ನಮ್ಮನ್ನು ನಾವೇ ಕ್ಲೋನ್ ಮಾಡಿಕೊಳ್ಳುವ ತಂತ್ರಜ್ಞಾನ ಸಿದ್ಧವಾಗಿಲ್ಲ! ನಿರ್ವಾಹವಿಲ್ಲದೆ ಯಾವುದಾದರೊಂದು ಹಾದಿಯನ್ನು ಹಿಡಿಯಲೇ ಬೇಕು. ಹಾಗೆ ಹಿಡಿದ ಕವಲು ದಾರಿ ನಮಗೆ ಸಿದ್ಧಿಸದೆ ನಾವು ಬ್ಯಾಕ್ ಟ್ರ್ಯಾಕ್ ಮಾಡಬೇಕಾಗಬಹುದು. ಆಗ ಮತ್ತೆ ಅದೇ ಕವಲಿಗೆ ಹಿಂದಿರುಗಬಹುದು - ಇದರ ಪ್ರಾಬಬಿಲಿಟಿ ಬಹಳ ಕಡಿಮೆ! ನಾವು ಏನು ಆಗುತ್ತೇವೊ  ಅದು ನಮ್ಮ ನಿರ್ಧಾರಗಳ ಮೇಲೆ ಅವಲಂಬಿಸುತ್ತದೆ. ರಾಬರ್ಟ್ ಫ್ರಾಸ್ಟ್ ಕವಿ ತನ್ನ ಜೀವನದಲ್ಲಿ ಇಂಥ ಕವಲನ್ನು ಎದುರಿಸಿರಬಹುದು.  ಆಗ ಅವನು ನಿರ್ಧಾರ ಕೈಗೊಳ್ಳಲು ಯಾವ ಮಾನದಂಡವನ್ನು ಉಪಯೋಗಿಸಿದ? ಬೇರೆಯವರು ಹೆಚ್ಚಾಗಿ ಬಳಸದ ಹಾದಿಯಲ್ಲಿ ಹೋಗವುದೇ ಒಳ್ಳೆಯದೆಂಬ ಹ್ಯೂರಿಸ್ಟಿಕ್ ಬಳಸಿ ನಿರ್ಧಾರವನ್ನು ಕೈಗೊಂಡೆ ಎಂದು ಕವಿ ನಮಗೆ ಹೇಳುತ್ತಾನೆ. ಈ ನಿರ್ಧಾರ ತನ್ನ ಜೀವನಪಥದ ವಿನ್ಯಾಸವನ್ನು ಬದಲಿಸಿತು ಎಂಬ ನಿರ್ಧಾರಕ್ಕೆ ಕವಿ ಬರುತ್ತಾನೆ.  ನೀವೂ ನಿಮ್ಮ ನಿರ್ಧಾರಗಳನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ!  ರಾಬರ್ಟ್ ಫ್ರಾಸ್ಟ್ ಹೇಳುವುದನ್ನು ನೀವು ಒಪ್ಪುತ್ತೀರಾ?) ಕವಲಾಗಿದೆ ಕಾ...

ನಿನ್ನ ಚರಣದ ಧೂಳಿ ನನ್ನ ಮಸ್ತಕದ ಮೇಲಿರಲಿ

ಮೂಲ: ರಬೀಂದ್ರನಾಥ ಟ್ಯಾಗೋರ್  ಕನ್ನಡಕ್ಕೆ : ಸಿ.ಪಿ. ರವಿಕುಮಾರ್  ನಿನ್ನ ಚರಣದ ಧೂಳಿ ನನ್ನ ಮಸ್ತಕದ ಮೇಲಿರಲಿ ಕೊಚ್ಚಿ ಹೋಗಲಿ ನನ್ನ ಅಹಂಕಾರ ಕಣ್ಣೀರಿನಲ್ಲಿ ಇಲ್ಲಸಲ್ಲದ ಗೌರವವ ರಕ್ಷಿಸುವ ಭರದಲ್ಲಿ ನನ್ನ ಅಪಮಾನಕ್ಕೆ ನಾನೇ ಕಾರಣನಾದೆ ನನ್ನ ವಿಶ್ವದ ಸುತ್ತ ನಾನೇ ಹಾಕುತ್ತ ಪ್ರದಕ್ಷಿಣೆ ಪ್ರತಿಕ್ಷಣವೂ  ವ್ಯಾಕುಲತಾ-ಚಾರಣನಾದೆ ಬರಿಯ ಕರ್ತನು ನಾನು, ನನ್ನ ಕೆಲಸಗಳಲ್ಲಿ ನನ್ನ ಹೆಸರಿನ ಮೇಲ್ಮೆ ಕಾಣದಿರಲಿ ನನ್ನ ಜೀವನದಲ್ಲಿ ನನ್ನ ಕೆಲಸಗಳಲ್ಲಿ ಓ ಪೂರ್ಣ! ನಿನ್ನ ಇಚ್ಛಾಪುಷ್ಪ ಹಣ್ಣಾಗಲಿ ಯಾಚಿಸುವೆನು ದೀನನಾಗಿ ನಿನ್ನ ಚರಮ ಶಾಂತಿಯನ್ನು ಯಾಚಿಸುವೆನು ಪ್ರಾಣದಲ್ಲಿ ನಿನ್ನ ಪರಮ ಕಾಂತಿಯನ್ನು ಜಲಬಿಂದು ನಾನಾಗಿ ನಿನ್ನ ಹೃದಯಕಮಲದಲ್ಲಿ ಕೊಚ್ಚಿ ಹೋಗಲಿ ನನ್ನ ಅಹಂಕಾರ ಕಣ್ಣೀರಿನಲ್ಲಿ [ಮೂಲ: ಗೀತಾಂಜಲಿ] Kannada Translation by C.P. Ravikumar of a poem from Geetanjali by Rabindranath Tagore

ಇಲ್ಲವೋ ಎಲ್ಲಿ ಮನದೊಳಗೆ ಭೀತಿ

ಮೂಲ ಕವಿತೆ: ರಬೀಂದ್ರನಾಥ ಟ್ಯಾಗೋರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಇಲ್ಲವೋ ಎಲ್ಲಿ  ಮನದೊಳಗೆ ಭೀತಿ, ಎಲ್ಲಿ ನಡೆಯಬಲ್ಲೆವೋ ತಲೆಯೆತ್ತಿ,  ಜ್ಞಾನವಾಹಿನಿ  ಎಲ್ಲಿ  ಹರಿವುದೋ ಮುಕ್ತ - ಮನೆಮಠಗಳ ಕಿರುಗೋಡೆಗಳಿಂದ  ಎಲ್ಲಿ   ವಿಶ್ವ   ಉಳಿದುಕೊಂಡಿದೆಯೋ ಇನ್ನೂ  ಆಗದೆ  ವಿಛಿದ್ರ   -  ಎಲ್ಲಿ   ಆಡುವ ಮಾತು ಬರುವುದೋ ಸತ್ಯದ ಆಳದಿಂದ, ಎಲ್ಲಿ     ಪೂರ್ಣತೆಗಾಗಿ  ಕೈಚಾಚಿ   ಶ್ರಮಿಸುವುದೋ  ಅವಿರತ ಪ್ರಯತ್ನ, ಎಲ್ಲಿ ಅಭ್ಯಾಸಬಲವೆಂಬ ಮರಳುಗಾಡಿನಲ್ಲಿ  ಲುಪ್ತವಾಗಿಲ್ಲವೋ  ವಿವೇಕದ ತಿಳಿಗೊಳ, ಕಲ್ಪನಾ-ಕೃತಿಗಳ ಬೆಳೆಯುತ್ತಲೇ ಇರುವ ವೈಶಾಲ್ಯದತ್ತ  ಎಲ್ಲಿ ಮುನ್ನಡೆವುದೋ  ನಿನ್ನ ಸಾರಥ್ಯದಲ್ಲಿ    ಮನೋರಥ, ಅಂಥ  ಸ್ವತಂತ್ರ ಸ್ವರ್ಗದಲ್ಲಿ  ಹೇ ಪ್ರಭೂ ಕಣ್ತೆರೆಯಲಿ ನನ್ನ ದೇಶ  Kannada translation by C.P. Ravikumar of "Where the mind is without fear" by Rabindranath Tagore 

ಗಾಂಧಿ

ಮೂಲ ಹಿಂದಿ ರಚನೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ದೇಶದಲ್ಲಿ ಎಲ್ಲೇ ಹೋದರೂ ಕಿವಿಗೆ ಕೇಳುತ್ತದೆ ಅದೇ ಆಹ್ವಾನ: ಜಡತ್ವ ಹೊಡೆದೋಡಿಸಲು  ಸೃಷ್ಟಿಸು ಯಾವುದಾದರೂ ಭೂಕಂಪ!  ಕವಿದಿರುವ ಕತ್ತಲಿನಲ್ಲಿ  ನಿನ್ನ ದೊಂದಿ ಮತ್ತೆ ಹಚ್ಚು! ಇಡೀ ಬೆಟ್ಟವನ್ನು ಕೈಯಲ್ಲಿ ಹೊತ್ತು ಹನುಮಂತನ ಉಪಾದಿಯಲ್ಲಿ ಲಂಘಿಸು! ಬಿರುಗಾಳಿ ಎಬ್ಬಿಸು, ಕವಿ! ಗರ್ಜಿಸು! ಗರ್ಜಿಸು! ಗರ್ಜಿಸು! ನಾನು ತಣ್ಣಗೆ ಕುಳಿತು ಯೋಚಿಸುತ್ತೇನೆ - ನಾನೆಂದು ಗರ್ಜಿಸಿದೆ? ನನ್ನ ಗರ್ಜನೆಯೆಂದು ಜನರು ಭ್ರಮಿಸಿದರಲ್ಲ ಅದು ನಿಜಕ್ಕೂ ಗಾಂಧಿಯ ಗರ್ಜನೆಯಾಗಿತ್ತು ನಮಗೆ ಜನ್ಮ ಕೊಟ್ಟರಲ್ಲ ಆ ಗಾಂಧಿಯ ಗರ್ಜನೆ. ಆಗಲೂ ನಾವು ನೋಡಿದ್ದು ಬಿರುಗಾಳಿಯನ್ನು, ಗಾಂಧಿಯನ್ನಲ್ಲ ಬಿರುಗಾಳಿ ಮತ್ತು ಗರ್ಜನೆಗಳ ನೇಪಥ್ಯದಲ್ಲಿ  ಅವರು ಇರುತ್ತಿದ್ದರು. ನಿಜವೆಂದರೆ ತಮ್ಮ ಲೀಲೆಯಲ್ಲಿ ಬಿರುಗಾಳಿ ಗರ್ಜನೆಗಳು ಸೇರಿಕೊಳ್ಳುವುದನ್ನು ಕಂಡು ಅವರು ನಗುತ್ತಿದ್ದರು. ಗರ್ಜನೆ ಹೊರಡುವುದು ದೊಡ್ಡ ಧ್ವನಿಯಿಂದಲ್ಲ ಮೆಲುದನಿಯಿಂದ ಒಂಟಿ ಉರಿಯುವ ಮೋಂಬತ್ತಿಯಂಥ ಧ್ವನಿ ಹದ್ದಿನಂತಲ್ಲ ಪಾರಿವಾಳದ ನಡೆ ನಡೆಯುವ ಧ್ವನಿ ಗಾಂಧಿ ಹದ್ದನ್ನೂ ಮೀರಿಸಿದ ಹದ್ದಾಗಿದ್ದರು ಏಕೆಂದರೆ ಅವರು ನೀರವತೆಯ ಸದ್ದಾಗಿದ್ದರು --- [ಈ ಕವಿತೆಯನ್ನು ಬರೆದ ರಾಮಧಾರಿ ಸಿಂಹ್ "ದಿನಕ...

ಬೇಕಾದಷ್ಟು ಪಿನ್ನು

ಬೇಕಾದಷ್ಟು ಪಿನ್ನು  ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್ ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಬದುಕಿನ ಅರ್ಥ  ಸಾಯುವುದೆಂದೇ ಆಗಿಬಿಟ್ಟಿದೆ ಹಾಗೂ  ಬದುಕಲು ದಿನಗಳು  ಬೇಕಾದಷ್ಟಿವೆ ಇನ್ನೂ  ಕಾಲದ ಮೇಜಿನ ಮೇಲೆ  ಸೂಜಿ ಚುಚ್ಚಲು ಇಟ್ಟ  ದಿಂಬಿನಂತಿದೆ ಬದುಕು;  ಸ್ನೇಹದ ಅರ್ಥ  ಚುಚ್ಚುವುದೆಂದೇ ಆಗಿಬಿಟ್ಟಿದೆ  ಹಾಗೂ  ಚುಚ್ಚಲು ಇವೆ  ಬೇಕಾದಷ್ಟು  ಪಿನ್ನು ಕೆಳ ಮಧ್ಯಮ ವರ್ಗದ   ಅಲ್ಪ ಮಾಸಿಕ ವೇತನದಂತಿದೆ ಬದುಕು;  ವೇತನದ ಅರ್ಥ  ತೀರಿಸುವುದೆಂದೇ ಆಗಿಬಿಟ್ಟಿದೆ ಹಾಗೂ  ತೀರದಷ್ಟಿವೆ ಎಣಿಸಿದರೆ ಋಣಗಳನ್ನು  Kannada Translation by C.P. Ravikumar of a Hindi Poem by Kunwar Bechain

ಮೊಬೈಲಿಣಿ!

ಇಮೇಜ್
ಹರಟೆ: ಸಿ.ಪಿ. ರವಿಕುಮಾರ್  ಇಂಥವರನ್ನು ನೀವು ಖಂಡಿತಾ ನೋಡಿರುತ್ತೀರ. ಬಸ್ ನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಪಕ್ಕದಲ್ಲಿ ಕುಳಿತು ಕೊಳ್ಳುತ್ತಾರೆ. ಟಿಕೆಟ್ ಕೊಳ್ಳಲು ಹಣ ಹೊರತೆಗೆಯುವ ಮುಂಚೆ ಮೊಬೈಲ್ ಫೋನ್ ಕೈಗೆತ್ತಿಕೊಳ್ಳುತ್ತಾರೆ.  ಚಕಚಕ ಸ್ಪೀಡ್ ಡಯಲ್ ಮಾಡಿ ಸುಖಾಸೀನರಾಗುತ್ತಾರೆ. ಮುಖದ ತುಂಬಾ ನಗೆ. ತಮ್ಮ ಸ್ನೇಹಿತನೋ ಸ್ನೇಹಿತೆಯೋ ಎದುರಿಗೇ ಇರುವಂತೆ ಕಲ್ಪನೆ.  ಅಕ್ಕಪಕ್ಕ ಇರುವವರ ಪರಿವೆ ಇಲ್ಲ. ಸಂಭಾಷಣೆ ಪ್ರಾರಂಭವಾದರೆ ಮುಗಿಯುವ ಸೂಚನೆಯೇ ತೋರುವುದಿಲ್ಲ.  ಇವರ ಸಂಭಾಷಣೆಗೆ ಇಂಥದೇ ಒಂದು ವಿಷಯ ಬೇಕು ಎಂದೂ ಇಲ್ಲ. ಒಮ್ಮೆ ನನ್ನ ಪಕ್ಕದಲ್ಲೇ ಕುಳಿತಿದ್ದ ಒಬ್ಬ ಮೊಬೈಲಿಣಿ ತಾನು ತನ್ನ ಮದುವೆಗೆ ಕೊಂಡ ಸೀರೆಗಳನ್ನು ಕುರಿತು ಇಡೀ ಪ್ರಯಾಣದ ಉದ್ದಕ್ಕೂ ಮಾತಾಡಿದಳು. "ಅಲ್ಲ, ಆ ಕಲರ್ ಅಲ್ಲ, ಒಂದು ಥರಾ ಹನಿ ಕಲರ್." "..." "ಉಹೂಂ. ಅದು ತೀರಾ ಡಾರ್ಕ್ ಆಯಿತು. ಇನ್ನೂ ಲೈಟಾಗಿದೆ. ಗೊತ್ತಾಯಿತಾ?" "..." ಬಣ್ಣದ ವಿವರವನ್ನೂ ಮಾತಿನ ಮಾಧ್ಯಮದಲ್ಲಿ ಬಿತ್ತರಿಸಬಹುದು ಎಂಬುದು ನನಗೆ ಆಗಲೇ ಗೊತ್ತಾಗಿದ್ದು. ಯಾವ ಕವಿಯೂ ಲೇಖಕನೂ  ಇಂಥದ್ದನ್ನು ಸಾಧಿಸಿರಲಾರ. ಮುಂದೆ ಸೀರೆಯ ಮೇಲಿರುವ ಜರಿ ಅಲಂಕಾರಗಳ ವಿವರಣೆ ನಡೆಯಿತು. ಮದುವೆಗೆ ಸುಮಾರು ಹತ್ತು ಸೀರೆಗಳನ್ನಾದರೂ ಆಕೆ ಖರೀದಿ ಮಾಡಿದ್ದಳೆಂದು ತೋರುತ್ತದೆ. ಮೊದಮೊದಲು ನಾನು ನನ್ನ ಕೈಯಲ್ಲಿದ್ದ ಪುಸ್ತಕವನ್ನು ಓದಲ...

ನಿಶಾ ಭಿಕಾರಿಣಿ

ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಒಂಟಿ ಬರುವಳು ನಿತ್ಯ ನಿಶಾ ಭಿಕಾರಿಣಿ ಪಾಪ! ಒಬ್ಬಂಟಿಯಾಗಿ ತೆರಳುವಳು ಚಳಿಗೆ ನಡುಗುವ ಕಪ್ಪು ಕೈಗಳಲಿ ಹಿಡಿದು ಹೊಳೆವ ತಿಂಗಳ ಬಟ್ಟಲು ಲಕ್ಷ ನಕ್ಷತ್ರಗಳ ವಜ್ರ ವೈಡೂರ್ಯ ತುಂಬಿರುವ ಕಪ್ಪು ಸೆರಗು ಇಷ್ಟೆಲ್ಲ ಇದ್ದರೂ ಏನು ಬೇಡುತ್ತಿಹಳು, ಏನಿವಳ  ಕಷ್ಟ  ಕೊರಗು? ಜೋಗಿಣಿಯ ಹಾಗೆ ಕಾಣುವಳು ಯಾರೋ, ಕಣ್ಣಲ್ಲಿ ಅರೆ ನಿದ್ರೆ ಎಚ್ಚರ ಗಲ್ಲಿ ಗಲ್ಲಿಗಳಲ್ಲೂ ತಿರುಗುವಳು ಒಬ್ಬಂಟಿ, ಹೊದ್ದು ಕಪ್ಪಾದ ಹಚ್ಚಡ ಬೇಡುತ್ತಾ ನಿತ್ಯ ಬರುವಳು , ಪಾಪ,  ಒಳಗಿದೆಯೇ ನೋಡಿ  ಪುಟ್ಟ  ಮರಿ ಹಗಲು ಹಾಕಿ ಬಿಡಿ ಇವಳ ಮಡಿಲಿಗೆ, ಸುಮ್ಮನೆ ತೊಂದರೆ ಕೊಡುವುದು ಮಲಗಲು Kannada translation by C.P. Ravikumar of a Hindi Poem by Gulzar ಈ ಕವಿತೆಯನ್ನು ಒಂದು ಹಿಂದಿ ಚಿತ್ರದಲ್ಲಿ ಜೋಗುಳದ ರೊಪದಲ್ಲಿ ಬಳಸಿಕೊಳ್ಳಲಾಗಿದೆ. ಲತಾ ಮಂಗೇಶ್ಕರ್ ಅಧ್ಭುತವಾಗಿ ಹಾಡಿದ್ದಾರೆ. ರಾತ್ರಿಯನ್ನು ಒಬ್ಬ ಭಿಕಾರಿಣಿಗೆ ಹೋಲಿಸಿರುವ  ಕವಿಯ ಕಲ್ಪನೆ ಅನನ್ಯವಾದುದು. ಚಂದ್ರ ಭಿಕಾರಿಣಿಯ ಬಟ್ಟಲಿನಂತೆ ಕವಿಗೆ ಗೋಚರವಾಗುತ್ತದೆ. ಲಕ್ಷಾಂತರ ವಜ್ರಗಳಿದ್ದರೂ ಬೇಡುವ ಸ್ಥಿತಿಯಲ್ಲಿರುವ ನಿಶಾ ಭಿಕಾರಿಣಿಯ ಬಗ್ಗೆ ನಮಗೆ ಅನುಕಂಪ ಮೂಡುತ್ತದೆ.  ಎಷ್ಟೋ...