ಹಾದಿಗಳು

ಹಾದಿಗಳು 

ಮೂಲ ಹಿಂದಿ ಕವಿತೆ: ಗುಲ್ಜಾರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 
ಗುಲ್ಜಾರ್ ಅವರು ಬರೆದ ಈ ಕವಿತೆಯನ್ನು ಆಂಧಿ ಚಿತ್ರದಲ್ಲಿ ಯುಗಳಗೀತೆಯಾಗಿ ಬಳಸಿಕೊಳ್ಳಲಾಗಿದೆ.  ಇದನ್ನು ಗುಲ್ಜಾರ್ ಚಿತ್ರಕ್ಕಾಗಿ ಬರೆದರೋ ಅಥವಾ ಅವರದೇ ಕವಿತೆಯನ್ನು ಚಿತ್ರಗೀತೆಯಾಗಿ ಅಳವಡಿಸಿಕೊಳ್ಳಲಾಯಿತೋ ಹೇಳುವುದು ಕಷ್ಟ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಪ್ರೀತಿಸಿ ಮದುವೆಯಾದರೂ ತದನಂತರ ಭಿನ್ನಾಭಿಪ್ರಾಯ ಉಂಟಾಗಿ ಬೇರಾಗಿದ್ದಾರೆ. ಅವರ ರಸ್ತೆಗಳು ಬೇರಾಗಿವೆ.  ನಾಯಕಿಯ ರಸ್ತೆ ಬಿರುಗಾಳಿಯಂತೆ ಹಾದು ಹೋಗುವ ರಸ್ತೆ. ನಾಯಕನದ್ದು ನಾಚಿ ಮೆಲ್ಲನೆ ಕೆಳಗಿಳಿಯುವ ರಸ್ತೆ. ನಾಯಕಿಯದು ತೀವ್ರಗತಿಯ ರಸ್ತೆ. ನಾಯಕನದ್ದು  ಆಲಸ ಹೆಜ್ಜೆಯ ರಸ್ತೆ.  ನಾಯಕಿಯದು ಗಾಜಿನ ಅರಮನೆಗೆ ಹೋಗುವ ರಸ್ತೆ. ನಾಯಕನದ್ದು ಕಡ್ಡಿಗಳ ಪುಟ್ಟ ಗೂಡಿಗೆ ಹೋಗುವ ರಸ್ತೆ ...  ಆದರೆ ಈ ರಸ್ತೆಗಳು ಕೂಡಾ ಒಂದು ತಿರುವಿನಲ್ಲಿ ಮತ್ತೆ ಬಂದು ಸೇರಬಹುದು.  ಯಾವುದೋ ಒಂದು ರಸ್ತೆ ಅವರನ್ನು ಪರಸ್ಪರರತ್ತ ಕೊಂಡೊಯ್ಯಬಹುದು ಎನ್ನುವ ಕ್ಷೀಣ ಆಶಯದೊಂದಿಗೆ ಕವಿತೆ ಮುಗಿಯುತ್ತದೆ.  ಈ ಗೀತೆಯನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದಾರೆ. 



ಈ ತಿರುವಿನಲ್ಲಿ ಹೊರಳುತ್ತವೆ 
ಕೆಲವು ಆಲಸ ಹೆಜ್ಜೆಯ ದಾರಿಗಳು 
ಕೆಲವು ತೀವ್ರಗತಿಯ ರಸ್ತೆಗಳು 

ಕಲ್ಲು ಗೋಪುರಗುಡಿಗೆ 
ಗಾಜಿನ ಅರಮನೆಗೆ 
ಕಡ್ಡಿಗಳ ಪುಟ್ಟ ಗೂಡಿಗೆ 
ಇದೇ ತಿರುವಿನಿಂದ ಸಾಗುತ್ತವೆ 

ಕೆಲವು ರಸ್ತೆಗಳು 
ಬಿರುಗಾಳಿಯಂತೆ ಹಾದು ಹೋಗುತ್ತವೆ 
ಕೆಲವು ನಾಚುತ್ತ 
ಮೆಲ್ಲನೆ ಕೆಳಗಿಳಿಯುತ್ತವೆ 

ದೂರದಿಂದ ಬಂದ ಒಂದು ದಾರಿ 
ಹತ್ತಿರ ಸರಿದು ಮತ್ತೆ ದೂರ ಹೊರಳುತ್ತದೆ 
ಇನ್ನೊಂದು ರಸ್ತೆ ಒಂಟಿಯಾಗಿದೆ 
ಇತ್ತ ನಿಲ್ಲದೆ ಅತ್ತ ನಡೆಯದೆ 

ಯೋಚಿಸುತ್ತಾ ಕುಳಿತಿದ್ದೇನೆ 
ಈ ದಾರಿಗಳಲ್ಲಿ
ಒಂದಾದರೂ ಇರಬಹುದಲ್ಲವೆ 
ನಿನ್ನನ್ನು ತಲುಪುವ ರಸ್ತೆ?



(ಈ ಕವಿತೆ ಒಂದು ಪ್ರಸಿದ್ಧ ಹಿಂದಿ ಚಲನಚಿತ್ರ ಗೀತೆಯಾಗಿದೆ! ಯಾವುದು ಊಹಿಸಿ!)


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)