ಯಾರಿಗೆ ಮಾಡ್ತೀ ಮೀಮ್? - ಒಂದು ಮೀಮಾಂಸೆ
ಸಿ.ಪಿ. ರವಿಕುಮಾರ್ "ಯಾರಿಗೆ ಮಾಡ್ತೀ ಮ್ಯಾಮ್" ಎಂಬ ಕನ್ನಡ ನಾಟಕವಿದೆ. "Who are you trying to fool?" ಎಂಬುದು ಈ ವಾಕ್ಯಪ್ರಯೋಗದ ತಾತ್ಪರ್ಯ. ಇಂದಿನ ಫೇಸ್-ಬುಕ್ ಪೀಳಿಗೆಯಲ್ಲಿ "ಯಾರಿಗೆ ಮಾಡ್ತೀ ಮೀಮ್" ಎಂಬುದು ಹೆಚ್ಚು ಪ್ರಸ್ತುತ. ಚಿತ್ರ ಮತ್ತು ಬರಹಗಳನ್ನು ಬಳಸಿ ಯಾವುದಾದರೊಂದು ವಿಷಯದ ಬಗ್ಗೆ ರೋಚಕವಾಗಿ ಮಂಡಿಸುವುದಕ್ಕೆ ಮೀಮ್ (Meme) ಎಂಬ ಹೆಸರಿದೆ. ಯಾರೋ ಕನ್ನಡಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ ಎಂದು ಮೀಮ್ ಕಳಿಸಿದರು. ಅದನ್ನು ಕೆಳಗೆ ತೋರಿಸಿದ್ದೇನೆ. ಮೀಮನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಎಂಟು ಪ್ರಶ್ನೆಗಳನ್ನು ಮಾತ್ರ ಇಲ್ಲಿ ಕಲೆ ಹಾಕಿದ್ದೇನೆ. ಎಂಟು ಪ್ರಶಸ್ತಿಗಳು; ಎಂಟು ಪ್ರಶ್ನೆಗಳು. ಈ ಪ್ರಶ್ನೆಗಳನ್ನು ನಾನೇನೂ ವ್ಯಂಗ್ಯಪೂರ್ವಕವಾಗಿ ಕೇಳುತ್ತಿಲ್ಲ. ಈ ಎಂಟು ಜನ ಸಾಹಿತಿಗಳ ಒಂದಾದರೂ ಕೃತಿಯನ್ನು ಕನ್ನಡದಲ್ಲಿ ಓದಿದವರು ಎಷ್ಟು ಜನ ಇರಬಹುದು? ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು? ನಿಮ್ಮಿಂದಲೇ ಪ್ರಾರಂಭಿಸಿ ನಿಮ್ಮ ಸ್ನೇಹಿತರು-ಬಾಂಧವರಲ್ಲಿ ಈ ಕೃತಿಗಳನ್ನು ಓದಿದವರು ಯಾರಾದರೂ ಇದ್ದಾರೆಯೇ? ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು? ಮೂಲ ಕನ್ನಡದಲ್ಲ್ಲಿ ಅಲ್ಲವಾದರೂ ...