ಕಬೀರನ ಹತ್ತು ದ್ವಿಪದಿಗಳು (೨೧ - ೩೦)

ಮೂಲ: ಮಹಾತ್ಮಾ ಕಬೀರ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಕಲ್ಲು ಪೂಜೆಗೇ ಹರಿ ದೊರಕಿದರೆ ಪೂಜಿಸುವೆನು ನಾ ಬೆಟ್ಟ 
ಬೀಸುವಕಲ್ಲೇ ಎಷ್ಟೋ ಮೇಲು ಕುಟ್ಟಿ ತಿನಬಹುದು ಬತ್ತ  || ೨೧॥ 

ಮನದ ಹಮ್ಮು ಕಳೆಯಬೇಕು ಹಾಗಿರಲಿ ನಿನ್ನ ಮಾತು 
ನಿನ್ನ ಹೊಟ್ಟೆಯೂ ತಂಪು  ಕೇಳಿದವನಿಗೂ ಇಂಪು || ೨೨ ॥

ಎಳ್ಳಿನಲ್ಲಿರುವಂತೆ ಎಣ್ಣೆ ಕಲ್ಲಿನಲ್ಲಿರುವಂತೆ ಬೆಂಕಿ  
ನಿನ್ನೊಳಗೆ ನಿನ್ನ ದೇವರುಎಚ್ಚೆತ್ತು ನೋಡು ಮಂಕೆ  || ೨೩ 

ಮಾಯೆಗೂ ಸಾವಿಲ್ಲ ಮನಸ್ಸಿಗೂ ಸಾವಿಲ್ಲ  ಸಾಯುವುದೊಂದೆ ಶರೀರ 
ಆಸೆಗೂ ಸಾವಿಲ್ಲ ತೃಷ್ಣೆಗೂ ಸಾವಿಲ್ಲ ಹೇಳಿಹೋಗಿದ್ದಾನೆ ದಾಸ ಕಬೀರ || ೨೪ ॥ 

ನಿರ್ಮಲವಾಯ್ತು ಕಬೀರನ ಮನಸು ಗಂಗೆಯ ನೀರಿನ ಹಾಗೆ
ಕಬೀರ ಕಬೀರ ಎಂದು ಕರೆಯುತ್ತ ಹರಿಯೂ ಬರುವನು ಹಿಂದೆ  || ೨೫ ॥

ಗುರುವೇ ಧೋಬಿ ಶಿಷ್ಯನೆ ಅರಿವೆ ಅರಿವೇ ಸಾಬೂನು ತುಂಡು
ಗ್ರಂಥಗಳೆಂಬ ಬಂಡೆಯ ಮೇಲೆ ತಿಕ್ಕಿ ತೊಳೆದು ಹೊಳಹೊಳಪು ॥ ೨೬ ॥ 

ಅರಿವಿರುವುದು ಜೀವಿಗೇ ತಿಳಿವಿರುವುದು ಜೀವಿಗೇ ಆಸೆಯೂ ಜೀವಂತ ಪ್ರಾಣಿಗೆ
ಕರ್ಮದ ಬಂಧನ ಕಳೆಯದೆ ಜೀವಿಯೆ! ಮುಕ್ತಿಗೆ ಆಸೆಯ ಪಡುವೆ!  || ೨೭  ॥

ಪ್ರೇಮವೆಂದರೇನೆಂದರೆ ಬರೆಯಲು ಯಾರಿಗೆ ಸಾಧ್ಯ?
ಮೂಕ ಮುಗುಳುನಗೆ ನಗುತಿಹ ನೋಡು ತಿನ್ನುತ ಸಿಹಿಸಿಹಿ ಖಾದ್ಯ  || ೨೮ ॥

ಚಿಂತೆಎಂಬುದೊಂದು ಡಾಕಿಣಿ! ಕರುಳೇ ಕತ್ತರಿಸಿ ತಿನ್ನುವಳು ಆಕೆ
ಪಾಪ ವೈದ್ಯನೇನು ಮಾಡಿಯಾನು ಔಷಧ ಆರೈಕೆ? || ೨೯  ॥

ವಾಸಕ್ಕೆ ಎತ್ತರದ ಮನೆ ಇರುವುದೆಂದು ತಾಳದಿರು ಅಹಂಕಾರ
ಕೊನೆಗೆ ಭೂತಲವೇ ಶಯ್ಯೆ! ಮೇಲೆ ಬೆಳೆದ ಹುಲ್ಲು ಅಲಂಕಾರ  || ೩೦ ॥

Kannada translation by C.P. Ravikumar of of ten couplets by the celebrated saint-poet Kabir.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)