ಕಬೀರನ ಹತ್ತು ದ್ವಿಪದಿಗಳು (೧೧ -೨೦)

ಮೂಲ: ಮಹಾತ್ಮಾ ಕಬೀರ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಆಸೆಯಳಿದರೆ ಚಿಂತೆ ಹರಿಯಿತು! ಮನಸುಗೊಂಡಿತು ನಿರ್ಮಲ!
ಯಾರಿಗೇನೂ ಬೇಡವೋ ಈ ಭೂಮಂಡಲವೇ ಅವನ ಪದತಲ  ॥೧೧॥ 

ನಿರಾಸೆಗೆ ಒಳಗಾದವನು ತನ್ನ ಜೀವನವೇ ಮುಗಿದುಹೋಯಿತು ಎಂದು ತಿಳಿದುಕೊಳ್ಳುತ್ತಾನೆ. ಇಂಥವನಿಗೆ ಕಬೀರನ ಸಾಂತ್ವನ ಹೀಗೆ: "ನಿನ್ನ ಆಶಾಗೋಪುರ ಬಿದ್ದುಹೋಯಿತೆ? ಚಿಂತೆ ಹರಿಯಿತು! ನಿನ್ನ ಮನಸ್ಸು ಈಗ ನಿರ್ಮಲವಾಯಿತು. ಯಾರಿಗೆ ಆಸೆಗಳಿಲ್ಲವೋ ಇಡೀ ಭೂಮಿಯೇ ಅವರ ಪಾದದ ಕೆಳಗೆ ಬಿದ್ದಿರುತ್ತದೆ!"

ಕೆಟ್ಟದೇನೆಂದು ಅರಸಿ ಹೊರಟೆ; ನನಗೆ ಕೆಟ್ಟದ್ದು ಏನೂ ಸಿಕ್ಕಲಿಲ್ಲ 
ನನ್ನೊಳಗೆ ಇಣುಕಿ ನೋಡಿದರೆ ಇನ್ನಷ್ಟು ಕೆಟ್ಟವರು ಇನ್ನೊಬ್ಬರಿಲ್ಲ  ॥೧೨॥ 

ಬೇರೊಬ್ಬರಲ್ಲಿ ತಪ್ಪು ಹುಡುಕಲು ಹೊರಡುವುದು ಮನುಷ್ಯನ ಸಹಜ ಸ್ವಭಾವ.  "ಇತರರಲ್ಲಿ ದೋಷ ಹುಡುಕಲು ಹೊರಟಾಗ ಏನೂ ಸಿಕ್ಕದಿದ್ದಾಗ ನಿನ್ನೊಳಗೆ ನೋಡಿಕೋ - ದೋಷ ನಿನ್ನಲ್ಲೇ ಇದೆ" ಎಂದು ಕಬೀರ ಎಚ್ಚರಿಸುತ್ತಾನೆ. ಒಬ್ಬ ಗೃಹಿಣಿ ತನ್ನ ಮನೆಯ ಕಿಟಕಿಯಿಂದ ಪ್ರತಿದಿನ ಪಕ್ಕದ ಮನೆಯ ಗೃಹಿಣಿ ಬಟ್ಟೆ ಒಣಗಿಹಾಕುವುದನ್ನು ನೋಡುತ್ತಾ "ಅಯ್ಯೋ, ಅಷ್ಟೊಂದು ಕಲೆಗಳಿದ್ದರೂ ಆಕೆಯ ಕಣ್ಣಿಗೆ ಕಾಣಲಿಲ್ಲವೇ?" ಎಂದು ತನ್ನ ಗಂಡನ  ಬಳಿ ಹೇಳಿಕೊಳ್ಳುತ್ತಿದ್ದಳಂತೆ. ಒಂದು ದಿನ ಅವಳ ಮನೆಯ ಕಿಟಕಿ ತೆರೆದು ನೋಡಿದಾಗ ಹರವಿಡ ಬಟ್ಟೆಗಳು ಶುಭ್ರವಾಗಿದ್ದುದು ಅವಳಿಗೆ ಕಾಣುತ್ತದೆ. ಕಲೆ ಇದ್ದದ್ದು ತನ್ನ  ಕಿಟಕಿಯ ಮೇಲೆ ಎಂದು ಅವಳಿಗೆ ತಿಳಿಯುತ್ತದೆ! 


ಬೀಸುವ ಕಲ್ಲನು ನೋಡಿ ಕಬೀರ ಸುರಿಸುತ್ತ ನಿಂತ ಕಣ್ಣೀರು 
ಎರಡು ಚಕ್ರಗಳ ನಡುವೆ ಸಿಲುಕಿ ಪುಡಿಯಾಗದವರಾರು?॥೧೩॥ 

ಗರಗರ ಎಂದು ಬೀಸುವ ಕಲ್ಲು ತಿರುಗುತ್ತಿದೆ. ನಡುವಿನ ಕಾಳು ಪುಡಿಯಾಗಿ ಕೆಳಗೆ ಬೀಳುತ್ತಿದೆ. ಇದನ್ನು ಕಂಡು ಕಬೀರನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಎರಡು ಪ್ರಬಲ ಚಕ್ರಗಳ ನಡುವೆ ಸಿಕ್ಕಿದ ಕಾಳು ಪುಡಿಯಾಗದೆ ಇನ್ನೇನಾದೀತು! ದ್ವಂದ್ವಗಳ ನಡುವೆ ಸಿಕ್ಕ ಮನುಷ್ಯ ಇಡಿಯಾಗಿ ಉಳಿಯಲಾರ ಎಂಬುದು ಕಬೀರನ ದುಃಖಕ್ಕೆ ಕಾರಣ. ಕಬೀರನ ಜೀವನದಲ್ಲೇ ದ್ವಂದ್ವವಿತ್ತು.  ಅವನು ಹುಟ್ಟಿದ್ದು ಒಬ್ಬ ಹಿಂದೂ ವಿಧವೆಯ ಮಗನಾಗಿ. ಬೆಳೆದದ್ದು ಇಸ್ಲಾಂ ಧರ್ಮದ ಅನುಯಾಯಿಗಳಾದ ನೇಕಾರರ ಮನೆಯಲ್ಲಿ. ಎರಡು ಧರ್ಮಗಳು ಎಂಬ ದ್ವಂದ್ವದಲ್ಲಿ ಅವನು ಅದೆಷ್ಟು   ಘರ್ಷಣೆಗಳನ್ನು ನೋಡಿರಬಹುದು! ಈ ದ್ವಂದ್ವಗಳ ಆಚೆಗಿನ ಏಕತೆಯನ್ನು ಮನುಷ್ಯ ಕಾಣಲಾರನೇ ಎಂಬುದು ಕಬೀರನ ದುಃಖವಾಗಿರಬಹುದು.  


ನಾಳೆ ಮಾಡುವುದನಿಂದೇ ಮಾಡು; ಇಂದು ಮಾಡುವದನ್ನೀಗ!
ಇನ್ನೊಂದು ಕ್ಷಣದಲ್ಲಿ ಪ್ರಳಯವಾಗುವುದು! ಮರುಗುವೆ ಆವಾಗ  ॥೧೪॥ 

ಇದನ್ನು ಬಿಡಿಸಿ ಹೇಳಬೇಕಾಗಿಲ್ಲ. ನಂತರ ಮಾಡಿದರಾಯಿತು ಎಂದು ಮುಂದೂಡುವುದು ಸಾಮಾನ್ಯ. ಹಾಗೆ ಮುಂದೂಡಿದ ಕೆಲಸಗಳನ್ನು ಮಾಡಲು ಅವಕಾಶವೇ ಸಿಕ್ಕಲಾರದು ಎಂಬುದು ಕಬೀರನ ಎಚ್ಚರಿಕೆಯ ನುಡಿ.


ನಿಂತಿಹ ಕಬೀರ ಬಾಜಾರದಲ್ಲಿ ಎಲ್ಲರ ಒಳಿತಿಗೂ ಪ್ರಾರ್ಥಿಸುತ್ತ 
ಅತ್ತ ಯಾರೂ ಅವನ ಮಿತ್ರರಲ್ಲ; ಇತ್ತ ಇಲ್ಲ ಯಾರದೂ ಶತ್ರುತ್ವ  ॥೧೫॥ 

ಇದು ಕಬೀರನ ಪ್ರಸಿದ್ಧ ದ್ವಿಪದಿ. ಕಬೀರ ಇಲ್ಲಿ ತನ್ನ ಬಗ್ಗೆ ಮಾತ್ರ ಮಾತಾಡುತ್ತಿಲ್ಲ. ಕಬೀರ ತನ್ನ ಜೀವಮಾನದಲ್ಲಿ ಎರಡು ವಿದುದ್ಧ ದಿಕ್ಕುಗಳಲ್ಲಿ ಎಳೆಯಲ್ಪಟ್ಟವನು. ಅವನನ್ನು ಹೆತ್ತವಳು ಒಬ್ಬ ಹಿಂದೂ ವಿಧವೆ. ಅಪಮಾನಕ್ಕೆ ಹೆದರಿ ಮಗುವನ್ನು ತ್ಯಾಗ ಮಾಡಿದವಳು. ಬೆಳೆಸಿದವಳು ಒಬ್ಬ ಮುಸ್ಲಿಂ ಮಹಿಳೆ. ಹಿಂದೂ-ಮುಸ್ಲಿಮರ ನಡುವಣ ವೈರತ್ವದಲ್ಲಿ ಕಬೀರ ಯಾರ ಪರವಾಗಿ ನಿಲ್ಲಬೇಕು? ಈ ಪ್ರಶ್ನೆಗೆ ಕಬೀರ ಉತ್ತರ ಕೊಟ್ಟಿದ್ದಾನೆ.

ದೊಡ್ಡ ದೊಡ್ಡ ಪುಸ್ತಕಗಳನೋದಿ ಪಂಡಿತರಾದವರಿಲ್ಲ 
ಪ್ರೇಮವೆಂಬ ಎರಡೂವರೆ ಅಕ್ಷರ ಓದಿ ಬಲ್ಲವನ ಸಮವಿಲ್ಲ  ॥೧೬॥ 

ಪುಸ್ತಕವನ್ನು ಓದಿ ಪಂಡಿತ ಎನ್ನಿಸಿಕೊಂಡವನಿಗೆ ಪ್ರೇಮ ಎಂಬುದರ ಅರ್ಥ ತಿಳಿಯದೇ ಇರಬಹುದು. ಪ್ರೇಮ ಎಂಬುದು ಕೇವಲ ಎರಡೂವರೆ ಅಕ್ಷರಗಳ ಪದ. ಇದನ್ನು ಅರ್ಥ ಮಾಡಿಕೊಂಡವನು ಎಲ್ಲರಿಗಿಂತ ಹೆಚ್ಚು ಜ್ಞಾನಿ ಎಂಬುದು ಕಬೀರನ ನುಡಿ. 
ಹೊಕ್ಕಾಗ ನೀನು ಜಗವನ್ನು ಎಲ್ಲರೂ ನಕ್ಕರು; ನೀನು ಮಾತ್ರ ಅತ್ತೆ 
ಎಂಥ ಕೆಲಸ ಮಾಡಬೇಕೆಂದರೆ ಹೊರಟಾಗ ಯಾರೂ ಹಿಂದೆ ನಗದಂತೆ ॥೧೭॥ 


ಹುಟ್ಟಿದಾಗ ಅಳುತ್ತಲೇ ಜಗತ್ತಿಗೆ ಬರುತ್ತೇವೆ. ಮಗು ಹುಟ್ಟಿತೆಂದು ಬಂಧುಮಿತ್ರರು ಸಂಭ್ರಮಿಸುತ್ತಾರೆ. ಬದುಕಿಗೆ ಕಾಲಿಡುವುದು ನಮ್ಮ ಇಚ್ಛೆಯಿಂದಲ್ಲ. ಆದರೆ ಬದುಕಿನಲ್ಲಿ ನಾವು ಏನು ಮಾಡುತ್ತೇವೆ ಎಂಬುದು ನಮ್ಮ ಇಚ್ಛೆಗೆ ಬಿಟ್ಟದ್ದು. ನಾವು ಹೋಗುವಾಗ ಯಾರೂ ನಮ್ಮ ಹಿಂದೆ ನಗದಂತೆ ಸಾರ್ಥಕ ಬದುಕನ್ನು ಬಾಳುವಂತೆ ಕಬೀರ ಹಿತವಚನ ನುಡಿಯುತ್ತಿದ್ದಾನೆ.

ನಾನು ಇದ್ದಾಗ ಹರಿ ಇರಲಿಲ್ಲ; ಈಗ ಹರಿ ಇದ್ದಾನೆ, ಇಲ್ಲ ನಾನು 
ಕತ್ತಲೆಲ್ಲವೂ ನಾಶವಾಯಿತು ದೀಪವನು ಕಂಡಾಗ ಕಣ್ಣು ॥೧೮॥ 


"ನಾನು" ಎಂಬ ಅಹಂಕಾರವಿದ್ದಾಗ ಅಲ್ಲಿ ದೈವತ್ವಕ್ಕೆ ಸ್ಥಾನವಿಲ್ಲ. ದೈವತ್ವವನ್ನು ಕಂಡುಕೊಂದಾಗ ಅಲ್ಲಿ ಅಹಂಕಾರಕ್ಕೆ ಸ್ಥಾನವಿಲ್ಲ. ಹೇಗೆ ದೀಪವು ಬೆಳಗಿದಾಗ ಎಲ್ಲವೂ ಕಾಣುತ್ತದೋ ಹಾಗೆ ದೈವತ್ವದ ಸಾಕ್ಷಾತ್ಕಾರದಿಂದ ಮನಸ್ಸಿನ ಎಲ್ಲ ತಮಸ್ಸೂ ನಾಶವಾಗುತ್ತದೆ.

ಸಾಧುವಿನ ಜಾತಿಯನ್ನೇಕೆ ಕೇಳುವೆ? ಕೇಳು ಅವನ ಅರಿವೆಷ್ಟು 
ಕವಚದ ಮೌಲ್ಯವ ಕಟ್ಟುವಿರೇನು ಖಡ್ಗದ ಮೌಲ್ಯವ ಬಿಟ್ಟು?॥೧೯॥ 

ಸಾಧು / ಸಂತ ಎನ್ನಿಸಿಕೊಂಡವನ ಹಿನ್ನೆಲೆ ನೋಡುವುದು ತಪ್ಪು. ಅವನ ಅರಿವು ಎಷ್ಟು ಎನ್ನುವುದು ಮಾತ್ರ ಮುಖ್ಯ.  ಖಡ್ಗದ ಕವಚ  ಮುಖ್ಯವಲ್ಲ, ಖಡ್ಗ ಎಷ್ಟು ಹರಿತವಾಗಿದೆ ಎಂಬುದು ಮುಖ್ಯ ಎನ್ನುವುದು ಕಬೀರನ ಜಾಣ್ನುಡಿ.  ಜ್ಞಾನಿ/ಪಂಡಿತ/ಸಾಧು/ಬಾಬಾ ಎಂದು ಹೇಳಿಕೊಂಡು ಓಡಾಡುವವರನ್ನು ನಾವು ಈಚೆಗೆ ತುಂಬಾ ನೋಡುತ್ತೇವೆ. ಅವರ ಹೊರಗಣ ಥಳುಕಿಗೆ ಮರುಳಾಗದೆ ಅವರಲ್ಲಿರುವ ಜ್ಞಾನಕ್ಕೆ ಬೆಲೆ ಕೊಡುವುದು ಲೇಸು. 

ಮಾಲೆ ಸವರುತ್ತ ಕಾಲವಾಯಿತು! ಬಿಡದು ಮನದ ಕಾಮಾಲೆ 
ಕರಗಳಿಗೇತಕೆ ಕರಕರೆ? ಬಿಡು ವನಮಾಲೆ! ಸವರು ಮನಮಾಲೆ!॥೨೦॥ 

ಜಪಮಾಲೆಯನ್ನು  ಕೈಯಲ್ಲಿ ಹಿಡಿದು ಮಣಿಗಳನ್ನು  ಎಣಿಸುತ್ತಾ ಜಪ ಮಾಡುವವರು ತಮ್ಮ ಮನದಲ್ಲಿರುವ ಕಾಮ-ಕ್ರೋಧ-ಮೋಹ-ಕ್ರೋಧ-ಮದ-ಮತ್ಸರಗಳನ್ನು ಬಿಡುವರೇ?  ಇವು ಕಾಮಾಲೆ ರೋಗದ ಹಾಗೆ ಕಾಡುತ್ತಿದ್ದರೂ ಜಪ ಮಣಿ ಸವರುತ್ತಾ ಕೂತರೆ ಏನು ಸಾಧಿಸಿದ ಹಾಗಾಯಿತು? ಜಪಸರವನ್ನು ಬಿಟ್ಟು ಮನಸ್ಸನ್ನು ಸವರು (ಸರಿ ಪಡಿಸಿಕೋ) ಎಂಬುದು ಕಬೀರನ ಸಲಹೆ.  

Kannada translation by C.P. Ravikumar of ten couplets by the celebrated saint-poet Kabir.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)