ನನ್ನನೆಲ್ಲಿ ಅರಸುವೆ?

ಕವಿತೆ ಓದುವ ಮುನ್ನ



ಸಂತ ಕವಿ ಕಬೀರನ ಈ ರಚನೆಯನ್ನು ಭಜನೆಯ ರೂಪದಲ್ಲಿ ಬಹಳ ಸುಂದರವಾಗಿ ಭೂಪೇಂದ್ರ ಎಂಬ ಹಾಡುಗಾರ ಹಾಡಿದ್ದಾರೆ.

ಈ ಕವಿತೆಯಲ್ಲಿ ಒಂದು ವಿಶೇಷವಿದೆ - ಇಲ್ಲಿ ಭಗವಂತನೇ ಭಕ್ತನೊಂದಿಗೆ ಮಾತಾಡುತ್ತಿದ್ದಾನೆ! ಇಂಥದೊಂದು ರಚನೆಯನ್ನು ಮಾಡಲು ಕಬೀರನಲ್ಲಿದ್ದ ಆತ್ಮವಿಶ್ವಾಸವಾದರೂ ಎಷ್ಟಿದ್ದಿರಬೇಕು! ತನಗಾಗಿ ಎಲ್ಲಾ ಕಡೆ ಹುಡುಕಾಡುವ ಭಕ್ತನಿಗೆ ಭಗವಂತ ತಾನು ಎಲ್ಲೆಲ್ಲಿ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾನೆ. "ಪುಣ್ಯಕ್ಷೇತ್ರಗಳಲ್ಲಿ ನನ್ನನ್ನು ಹುಡುಕಬೇಡ - ಅಲ್ಲಿರುವ  ಕಲ್ಲಿನ ಶಿಲ್ಪಗಳಲ್ಲಿ ನಾನು ವಾಸ ಮಾಡುತ್ತಿಲ್ಲ! ನನ್ನನ್ನು ಕಾಬಾದಲ್ಲಿ, ಕೈಲಾಸಪರ್ವತದಲ್ಲಿ ಹುಡುಕಬೇಡ!" ಎಂಬ ಮಾತಿನ ತೂಕ ಬಹಳ ದೊಡ್ಡದು. ಇಂದು ಪುಣ್ಯ ಕ್ಷೇತ್ರಗಳಲ್ಲಿ ವ್ಯಾಪಾರಿ ಧರ್ಮವೇ ಪ್ರಧಾನವಾಗಿ ಕಾಣುತ್ತದೆ. ಭಕ್ತರು ಅರ್ಪಿಸಿದ  ಕಾಣಿಕೆಯನ್ನು ಕದಿಯುವ ಪೂಜಾರಿಯನ್ನು ನಾನು ನೋಡಿದ್ದೇನೆ.  ಉತ್ತರ ಭಾರತದ ಕ್ಷೇತ್ರಗಳಲ್ಲಿ ಪಂಡಾ ಎಂಬ ಪೂಜಾರಿಗಳ ಹಾವಳಿಯನ್ನು ನಾವೆಲ್ಲರೂ ಕೇಳಿದ್ದೇವೆ. ಇಷ್ಟಾಗಿ "ಪೂಜಾರಿ" ಎಂಬ ಪದದ ಗುಟ್ಟು ನನಗೆ ಇನ್ನೂ ಗೊತ್ತಾಗಿಲ್ಲ; ಅವನು  ಪೂಜೆಯ ಶತ್ರು ಎಂಬ ತಾತ್ಪರ್ಯವೇ?! ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎಂಬ ಗಾದೆ ಇದೆ. ವರ ಕೊಡದಿದ್ದರೆ ಪರವಾಗಿಲ್ಲ, ಶಾಪ ಕೊಡದಿದ್ದರೆ ಅದು ಪುಣ್ಯ! ಇಂಥ ಅನುಭವ ನನಗೆ ಅಲಾಹಾಬಾದ್ ನ ಸಂಗಮದಲ್ಲಿ ಆಗಿದೆ! ಪೂಜಾರಿ ಇರುವ ಕಡೆ ಪೂಜಿಸಬೇಕಾದ ದೇವರು ಇರಲಾರ!

ಜಪ, ತಪ, ಉಪವಾಸ, ಯೋಗಾಭ್ಯಾಸ, ಕ್ರಿಯಾಕರ್ಮ, ಸಂನ್ಯಾಸ - ಇವು ಯಾವುದರಲ್ಲೂ ತನ್ನನ್ನು ಹುಡುಕಬೇಡ ಎಂದು ದೇವರು ಹೇಳುತ್ತಿದ್ದಾನೆ! ಹಿಂದಿಯಲ್ಲಿ "ಹಸಿದವನು ಭಕ್ತನಾಗಲಾರ" ಎಂಬ ನಾಣ್ನುಡಿ ಇದೆ!  ಇಂದು ಅನೇಕ ಪುಣ್ಯ ಕ್ಷೇತ್ರಗಳಲ್ಲಿ ರುಚಿಯಾದ ಪ್ರಸಾದದ ಮಾರಾಟವೇ ಒಂದು ವ್ಯಾಪಾರ.  ಅನೇಕ ಪುಣ್ಯಕ್ಷೆತ್ರಗಳು ರಿಸಾರ್ಟ್ ಗಳಾಗಿಬಿಟ್ಟಿವೆ! ನೀವು ಪುಣ್ಯಕ್ಷೇತ್ರಗಳಿಗೆ ಹೋದರೆ ಅಲ್ಲಿ ಕೇಳುವುದು ದೊಡ್ಡದಾದ ವಾಲ್ಯೂಮ್ ನಲ್ಲಿ ಹಾಕಿದ "ಭಕ್ತಿ ಸಂಗೀತ" - ಈ ಸಂಗೀತದಲ್ಲಿ ಭಕ್ತಿ ಹುಡುಕಿದರೆ ನಿಮಗೆ ಸಿಕ್ಕಲಾರದು. ಸಿನಿಮೀಯ ಶೈಲಿಯಲ್ಲಿ ಹೇಳಿದ ಗೀತೆಗಳಲ್ಲಿ ಅಬ್ಬರವೇ ಪ್ರಧಾನ!

ಕತ್ತಲು ಗುಹೆಗಳಲ್ಲಿ ತಪಸ್ಸು ಮಾಡುವವರು ಹಿಂದೆ ಇರುತ್ತಿದ್ದರೇನೋ! ಯೋಗಾಭ್ಯಾಸ, ಪ್ರಾಣಾಯಾಮಗಳಲ್ಲಿ ದೇವರನ್ನು ಕಂಡುಕೊಂಡವರು ಇದ್ದರೇನೋ! ಇಂದು ಯೋಗಾಭ್ಯಾಸ-ಪ್ರಾಣಾಯಾಮ ಕೂಡಾ ವ್ಯಾಪಾರಗಳಾಗಿವೆ!

ತಾನು ಎಲ್ಲೆಲ್ಲಿ ಇಲ್ಲ ಎಂದು ಹೇಳಿದ ಮೇಲೆ ಅದನ್ನು ಕೇಳಿ ನಿರಾಶನಾದ ಭಕ್ತನಿಗೆ ಕೊನೆಗೆ ಭಗವಂತನೇ ತಾನು ಎಲ್ಲಿ ಸಿಕ್ಕುತೇನೆ ಎಂಬ ರಹಸ್ಯವನ್ನೂ ಬಯಲು ಮಾದುತ್ತಾನೆ. "ಹುಡುಕಿದರೆ ಕ್ಷಣದಲ್ಲೇ ಕಾಣುವೆನು, ನಾನಿರುವುದು ನಿನ್ನ ವಿಶ್ವಾಸದಲ್ಲಿ" ಎಂದು ಭಗವಂತ ಗುಟ್ಟು ಬಯಲು ಮಾಡುತ್ತಾನೆ! ವಿಶ್ವಾಸವಿಲ್ಲದೇ ಪುಣ್ಯಕ್ಷೇತ್ರಗಳಲ್ಲಿ, ಉಪವಾಸದಲ್ಲಿ, ಯೊಗಾಭ್ಯಾಸದಲ್ಲಿ, ಕತ್ತಲು ಗುಹೆಗಳಲ್ಲಿ ದೇವರನ್ನು ಹುಡುಕಿದರೆ ಅವನು ಅಲ್ಲಿ ಸಿಕ್ಕುವುದಿಲ್ಲ ಎಂದು ಕಬೀರ ಸೂಚಿಸುತ್ತಿದ್ದಾನೆ.

"ಗಾಡ್ ಪಾರ್ಟಿಕಲ್" ಗಾಗಿ ಇಂದು ಹುಡುಕಾಡುತ್ತಿರುವ ವಿಜ್ಞಾನಿಗಳು ಕಬೀರನ ಈ ಭಜನೆಯನ್ನು ಓದಬೇಕು!



ಹಿಂದಿ ಮೂಲ ಮಹಾತ್ಮಾ ಕಬೀರ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 


ನನ್ನನೆಲ್ಲಿ ಅರಸುವೆಯೋ ದಾಸ?
ನಿನ್ನ ಬಳಿಯಲ್ಲೇ ನನ್ನ ವಾಸ!

ಪುಣ್ಯಕ್ಷೇತ್ರಗಳಲ್ಲಿ, ಕಲ್ಲುಶಿಲ್ಪಗಳಲ್ಲಿ ಇಲ್ಲ ನನ್ನ ವಾಸ
ಗುಡಿಯಲ್ಲ ಮಸೀದಿಯಲ್ಲ ಅಲ್ಲ ಕಾಬಾ ಕೈಲಾಸ 

ಜಪದೊಳಗಿಲ್ಲ ತಪದೊಳಗಿಲ್ಲ ಇಲ್ಲ ನಾನುಪವಾಸದಲ್ಲಿ 
ಕ್ರಿಯಾಕರ್ಮ ಯೋಗಗಳಲ್ಲಿಲ್ಲ, ಇಲ್ಲ ಸಂನ್ಯಾಸದಲ್ಲಿ 

ಪ್ರಾಣ ಪಿಂಡ ಬ್ರಹ್ಮಾಂಡಗಳಲ್ಲ ದಾಸನೆ ನನ್ನಯ ವಾಸ 
ಕಗ್ಗತ್ತಲ ಗುಹೆಗಳಲ್ಲ, ಅಲ್ಲ ಶ್ವಾಸನಿಶ್ವಾಸ 

ಕಣ್ಮುಚ್ಚಿ ಹುಡುಕಿದರೆ ಕ್ಷಣದಲ್ಲಿ ಕಾಣುವೆನು
ಕಬೀರ! ನನ್ನ ನೆಲೆ ನಿನ್ನ ವಿಶ್ವಾಸ  


Kannada Translation by C.P. Ravikumar of a song by the saint-poet Kabir.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)