ಹನಿ ಹನಿ ಕವನ!

ಹನಿ ಹನಿ ಕವನ! 

ಸಿ.ಪಿ. ರವಿಕುಮಾರ್ 

(ನನ್ನ ಹನಿಸಂಗ್ರಹ)



ವೋಟು ಕೊಡಿ! 

ಬಾಜಾ ಬಜಂತ್ರಿಯೊಂದಿಗೆ ಬಂದ ಮೆರವಣಿಗೆಯಲ್ಲಿ
ರಾಜಕಾರಣಿಯೊಬ್ಬ ಕೂಗುತ್ತಿದ್ದ: ಓಟು ಕೊಡಿ ಎಂದು!
ತೇಜಹೀನ ಕಳೆಯುಳ್ಳ ಮಿ॥ ಕಾಮನ್ ಗೊಣಗುತ್ತಿದ್ದ
"ನಿಜ ಹೇಳಲೇ? ನಮಗೆ ಓಟು ನೀವು ಕೊಡಬೇಕು!"
ರಜಾ ಕೊಟ್ಟು ನಿಮ್ಮ ಘೋಟಾಲೆಗಳಿಂದ ಒಂದಿಷ್ಟು
ತಾಜಾ O2 ನಮಗೆ ಉಸಿರಾಡಲು ಬೇಕು" 


ಮತಯಾಚನಾ ಗೀತೆ

ಒಮ್ಮೆ ಕೇವಲ ಒಮ್ಮೆ ಮತಕೊಟ್ಟು ನೋಡಿ!
ನಿಮ್ಮ ಭಾಗ್ಯವು ಹೇಗೆ ತೆರೆದುಕೊಳ್ಳುವುದು!

ನಮ್ಮ ಪಕ್ಷಕ್ಕೊಮ್ಮೆ ಮತಹಾಕಿ ನೋಡಿ
ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು!

ಗಣಿ ತೋಡಿ ಅಗೆಯುವೆವು! ಬೆಟ್ಟ ಪುಡಿ ಮಾಡುವೆವು!
ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು!

ಕೆರೆಗಳನು ಮುಚ್ಚುವೆವು! ಲೇಔಟ್ ಕಟ್ಟುವೆವು!
ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು!

ಸಾಲುಮರ ಕಡೆದರೂ ಸೇತುವೆಯ ಕಟ್ಟುವೆವು!
ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವು!

ಶಾಲೆಗಳ ಮುಚ್ಚುವೆವು, ಮಾಲುಗಳ ಕಟ್ಟುವೆವು!
ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು!

ಅಲ್ಲಿಂದ ಇಲ್ಲಿಂದ ಹೂಡಿಕೆಯ ತರುವೆವು!
ನಿಮ್ಮ ರಾಜ್ಯದ ಮಹಿಮೆ ಎಲ್ಲೆಡೆಗು ಮೆರೆವೆವು!

ಒಮ್ಮೆ ಕೇವಲ ಒಮ್ಮೆ ಮತಕೊಟ್ಟು ನೋಡಿ
ನಿಮ್ಮ ಭಾಗ್ಯವು ಹೇಗೆ ತೆರೆದುಕೊಳ್ಳುವುದು!


ಬಸ್ ಒಳಗೆ ಕಂಡ ಬರಹ


ಬಸ್ಸಿನಲ್ಲಿ ಕೂತ ಶಾಲಾ ಮಾಸ್ತರರ ಕಣ್ಣಿಗೆ ಬಿಟ್ಟು ಬರಹ:
"ಸಂಸ್ಥೆಯ ವಾಹನ ನಮ್ಮೆಲ್ಲರ ಆಸ್ತಿ ಹಾನಿ ಮಾಡದಂತೆ ಸಹಕರಿಸಿ"

ವಿರಾಮ ಚಿಹ್ನೆಗಳಿಲ್ಲದ ವಾಕ್ಯ! ಮಾಸ್ತರಿಗೆ ಕಸಿವಿಸಿ.

ತಡೆದುಕೊಳ್ಳಲಾರದೆ ಅವರು ತಿದ್ದಿದರು
"ಸಂಸ್ಥೆಯ ವಾಹನ ನಮ್ಮೆಲ್ಲರ ಆಸ್ತಿ! ಹಾನಿ ಮಾಡದಂತೆ ಸಹಕರಿಸಿ!"

ಯದ್ವಾ ತದ್ವಾ ಓಡಿಸುತ್ತಿದ್ದ ಚಾಲಕನನ್ನು ನೋಡಿ
ಎಚ್ಚೆತ್ತ ಮಾಸ್ತರರೊಳಗಿದ್ದ ಕಿಡಿಗೇಡಿ!

ಬರಹವನ್ನು ಮತ್ತೊಮ್ಮೆ ತಿದ್ದಿದರು ಮಾಸ್ತರರು ಒರೆಸಿ:
ಸಂಸ್ಥೆಯ ಬಸ್ ನಮ್ಮೆಲ್ಲರ ಆಸ್ತಿಯನ್ನು ಹಾನಿ ಮಾಡದಂತೆ ಚಾಲಕರೇ ಸಹಕರಿಸಿ!



 ಜೋಗುಳ


ಯಾಕಳುವೆ ಎಲೆ ರಂಗ? ಬೇಕಾದ್ದ ನಿನಗೀವೆ
ನಾಕೆಂಬಿ ಗೇಮ್ ಡೌನ್ ಲೋಡು
ಸಾಕಷ್ಟು ಜಾಗವಿದೆ ಡಿಸ್ಕಿನಲಿ ಶುರು ಮಾಡು


ವೈವಿಧ್ಯ


ವಿವಿಧಭಾರತಿಯೊಮ್ಮೆ ಹೀಗೆ ಹಾಡುತ್ತಿತ್ತು :
ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು!
ವಿವಿಧತೆಯು ಸ್ವಲ್ಪ ಹೆಚ್ಚಾಧಾಗ ಹಾಡಿದಳು ಭಾರತಿ :
ನಾವೆಲ್ಲರೂ ಒಂದೇ ಜಾತಿ, ನಮ್ಮ ಜಾತಿಗೆ ನಮ್ಮ ಮತ, ನಾವು ಕೇವಲ ಮನುಜರು!


ಸರ್ಚಜ್ಞ


ಸರ್ಚಜ್ಞನೆಂಬುವನು ಸರ್ಚಿನಿಂದಾದವನು
ಅರ್ಚಿಸುತ ಗಣಕನಂ ಗೂಗಲ್ ಮಂತ್ರಮಂ ಪಠಿಸಿ
ಅರ್ಜಿಸಿ ಉತ್ತರಮಂ ತಾಂ ಗರ್ಜಿಸುತ ತೋರ್ಪ ಸರ್ಚಜ್ಞ ॥

ಐರನ್ ಮ್ಯಾನ್

ಸರ್ದಾರ್ ಪಟೇಲ್ ಕತೆಯೇನೋ ಅಂದುಕೊಂಡು
ಹೋದೀರಿ "ಐರನ್ ಮ್ಯಾನ್" ಚಿತ್ರಕ್ಕೆ, ಜೋಕೆ!
ಇದು ಹಾಲಿವುಡ್ ಮೂಸೆಯಲ್ಲಿ
ಮತ್ತೊಂದು ಕಬ್ಬಿಣ(ನ) ಸಲಾಕೆ!


ಚಾವುಂಡರಾಯ 

ಉಂಡೆಯನು ತಿಂದು ಗುಂಡ ಚಾ
ಉಂಡ ಮಾತ್ರಕ್ಕೆ ಅವನನ್ನು ಚಾ-
ವುಂಡರಾಯನೆನ್ನುವರೆ ಅಲ್ಪಜ್ಞ ।।
ಹಿಮ್ಮತವಾಲಾ 

ಒಮ್ಮೆಯೂ ಮುಖ ತೋರಿಸದೆ ಗೆದ್ದ ಗಮ್ಮತ್ತಿನಲಿ
ನಿಮ್ಮ ಮತವನು ನನಗೇ ನೀಡಿರೆನುತಿಹನಲ್ಲ!
ಹಿಮ್ಮತವಾಲಾ ಎಂದರಿವನೇ ನೋಡು ಅಲ್ಪಜ್ಞ ॥

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)