ಎತ್ತರ

ಎತ್ತರ 




ಮೂಲ ಹಿಂದಿ ಕವಿತೆ: (ಯಾರಿರಬಹುದು, ಊಹಿಸಿ! ಇವರೊಬ್ಬ ಪ್ರಸಿದ್ಧ ರಾಜಕಾರಣಿ  -ಭಾರತರತ್ನ ವಿಜೇತರು)
ಕನ್ನಡಕ್ಕೆ: ಸಿ.ಪಿ. ರವಿಕುಮಾರ್  

ಎತ್ತರದ ಪರ್ವತದ ಮೇಲೆ 
ಮರಗಿಡಗಳು ಹುಟ್ಟುವುದಿಲ್ಲ 
ಹುಲ್ಲು ಬೆಳೆಯುವುದಿಲ್ಲ
ಹಿಮ  ಕವಿದಿರುತ್ತದೆ 
ಶವವಸ್ತ್ರದ ಹಾಗೆ 
ಬೆಳ್ಳಗೆ ಮತ್ತು ತಣ್ಣಗೆ. 


ಒಮ್ಮೆ ನಗುನಗುತ್ತಾ ಓಡುತ್ತಿದ್ದ ನದಿ
ಪರ್ವತವನ್ನು ತಬ್ಬಿದ ತಪ್ಪಿಗೆ
ಈಗ ಹಿಮದ ಪ್ರೇತವಸ್ತ್ರವಾಗಿ 

ತನ್ನ ದುರ್ಭಾಗ್ಯಕ್ಕೆ 
ಹನಿಹನಿ ಕಂಬನಿ ಮಿಡಿಯುತ್ತದೆ. 


ಮೆಚ್ಚಬೇಕಾದದ್ದೆ ಇಂಥ ಉತ್ತುಂಗವನ್ನು 
ನೀರನ್ನೂ ಗಡ್ಡೆ ಮಾಡಿಬಿಡುವ ಅದರ ಶಕ್ತಿಯನ್ನು 
ನೋಡಿದರೆ ಸಾಕು 
ಮನದಲ್ಲಿ  ಹೀನ ನಾನೆಂಬ ಭಾವವನ್ನು ಉಕ್ಕಿಸುವ 
ಎತ್ತರವನ್ನು ಮೆಚ್ಚಲೇ ಬೇಕು. 


ಹತ್ತಲು ಉತ್ಸಾಹವುಳ್ಳವರನ್ನು 
ನೀನೇರಬಲ್ಲೆಯಾ ನನ್ನೆತ್ತರಕ್ಕೆಂದು  

ಕೈ ಬೀಸಿ ಕರೆಯುತ್ತದೆ, ಆದರೆ 
ಯಾವ ಬಾನಕ್ಕಿಗೂ ನೀಡಲಾರದು ಆಸರೆ 
ನೆರಳು ಕೊಡಲಾರದು ದಣಿದ ದನಗಾಹಿಗೆ . 

ನಿಜ ಹೇಳಲೆ?
ಬರೀ ಎತ್ತರ ಬೆಳೆಯುವುದರಲ್ಲಿ ಏನಿದೆ ಸಾರ್ಥಕತೆ?
ಎಲ್ಲರಿಂದ ದೂರವಾಗಿ ಹೀಗೆ 
ತಮ್ಮವರಿಂದಲೂ ನಂಟು ಕಡಿದುಕೊಂಡು 
ಶೂನ್ಯದಲ್ಲಿ ಒಬ್ಬಂಟಿ  ನಿಲ್ಲುವುದು 
ಪರ್ವತದ ದೊಡ್ಡಸ್ತಿಕೆಯಲ್ಲ, ಹಣೆಬರಹ.


ಎತ್ತರಕ್ಕೂ ಆಳಕ್ಕೂ ಅಜಗಜಾಂತರ. 
ಯಾರು ಎತ್ರರಕ್ಕೆ ಬೆಳೆಯುತ್ತಾನೋ 
ಅವನು ಅಷ್ಟೇ ಏಕಾಂಗಿ. 
ತನ್ನ ಸಮಸ್ತ ಭಾರವನ್ನೂ 
ತಾನೇ ಹೊರುತ್ತಾನೆ. 
ಹೊರಗೆ ನಗುಮುಖ ತೋರಿದರೂ 
ಒಳಗೊಳಗೇ ಅಳುತ್ತಾನೆ. 

ಎತ್ತರದ ಜೊತೆಗೆ ಮನುಷ್ಯನಿಗೆ ಅಗಲವೂ ಬೇಕು. 
ಸುಮ್ಮನೆ ಕೋಲಿನ ಹಾಗೆ ನಿಂತರೇನು ಬಂತು?
ಸಂಗಡಿಗರು ಬೇಕು. 

ಜೊತೆಯಲ್ಲಿ ನಡೆಯುವವರು ಬೇಕು. 
ಗುಂಪಿನಲ್ಲಿ ತನ್ನನ್ನು ತಾನೇ ಕಳೆದುಕೊಳ್ಳಬೇಕು 
ಹಳೆಯ ನೆನಪುಗಳಲ್ಲಿ ಮಿಂದೇಳಬೇಕು. 
ತಾನು ಯಾರೆಂದು ಮರೆಯಬೇಕು. 
ಆಗ ಲಭಿಸುವುದು ಅಸ್ತಿತ್ವಕ್ಕೊಂದು ಅರ್ಥ
ಮತ್ತು ಜೀವನಕ್ಕೊಂದು  ಸೌರಭ. 

ಭೂಮಿಗೆ ಬೇಕಾಗಿರುವುದು ಕುಬ್ಜರಲ್ಲ 
ಎತ್ತರದ ಮಾನನರು. 
ಗಗನವನ್ನೂ ಮೀರಿ ಬೆಳೆದು 
ಹೊಸ ನಕ್ಷತ್ರಗಳಲ್ಲಿ ಪ್ರತಿಭೆಯ ಬೀಜಗಳನ್ನು ನೆಡುವವರು. 
ನಿಜ. ಆದರೆ ಎತ್ತರವಾಗಿ ಬೆಳೆಯುತ್ತ 
ನೆಲದಿಂದ ಕಾಲುಗಳು ಮೇಲೆದ್ದು 
ಮಣ್ಣು ಮೆತ್ತಿಕೊಳ್ಳುವುದಿಲ್ಲ 
ಮುಳ್ಳು ಚುಚ್ಚುವುದಿಲ್ಲ 
ಮೊಗ್ಗು ಅರಳುವುದಿಲ್ಲ 
ಎನ್ನುವಂಥವರಲ್ಲ. 

ಎಲ್ಲಿ ವಸಂತದ ಪಲ್ಲವವಿಲ್ಲವೋ 
ಶಿಶಿರದಲ್ಲಿ  ಎಲೆ ಉದುರಿ ಹಾರುವ ಸಂಭ್ರಮವಿಲ್ಲವೋ 
ಎಲ್ಲಿ ಸದಾ ಒಂಟಿತನದ ನಿಶಬ್ದ ಕವಿದಿರುತ್ತದೋ 
ಪ್ರಭೂ!
ಅಂಥ ಎತ್ತರವನ್ನು 
ನನಗೆಂದೂ ಕರುಣಿಸಬೇಡ. 


(ನನ್ನ ಇನ್ನೊಂದು ಬ್ಲಾಗ್ ಕೂಡಾ ನೋಡಿ!)

ಕಾಮೆಂಟ್‌ಗಳು

  1. Excellent Poem and translation. Adbhuta
    ಎಲ್ಲಿ ವಸಂತದ ಪಲ್ಲವವಿಲ್ಲವೋ
    ಶಿಶಿರದಲ್ಲಿ ಎಲೆ ಉದುರಿ ಹಾರುವ ಸಂಭ್ರಮವಿಲ್ಲವೋ
    ಎಲ್ಲಿ ಸದಾ ಒಂಟಿತನದ ನಿಶಬ್ದ ಕವಿದುರುತ್ತದೋ
    ಪ್ರಭೂ!
    ಅಂಥ ಎತ್ತರವನ್ನು
    ನನಗೆಂದೂ ಕರುಣಿಸಬೇಡ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)