ನಿನ್ನ ನಗು

ಮೂಲ ಹಿಂದಿ ಕವಿತೆ: ಕುಸುಮ್ ಸಿನ್ಹಾ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ನಿನ್ನ ನಗು ಹೇಗಿದೆ ಗೊತ್ತಾ?
ಕಲಕಲ ಸದ್ದು ಮಾಡುತ್ತ 
ಮೇಲಿಂದ ಧುಮುಕುವ ನೀರಿನಂತೆ 

ಚಕಿತಳಾಗಿ ನಾ ನೋಡುತ್ತ ನಿಂತೆ
ಕೊಚ್ಚಿಕೊಂಡು ಹೋಯ್ತು ನಿನ್ನ ನಗೆಯೊರತೆ 
ಸುತ್ತಲೂ ಕವಿದಿದ್ದ ವಿಷಾದ-ನೀರವತೆ 

ನಿನ್ನ ನಗು ಹೇಗಿದೆ ಗೊತ್ತಾ?
ಶ್ರಾವಣದ ಜಡಿಯಂತೆ 
ಬಿದ್ದು ಪಟಪಟ ಹನಿ ಒದ್ದೆಯಾಗಿ ಮೂಲೆಮೂಲೆ 
ಮನೋ ಮರುಭೂಮಿಯ ನೀರಸತನದ ಮೇಲೆ 
ಹಸಿರು ಒಮ್ಮೆಲೇ ಅವತರಿಸಿದಂತೆ 

ಹೇಗಿದೆ ಎಂದರೆ ನಿನ್ನ ನಗು 
ಅಮಾವಾಸ್ಯೆ ತರುವಾಯ ಚಂದ್ರಕಾಂತಿ ಸುರಿದಂತೆ ಹಾಲು
ಒಣನೆಲದಿಂದ ಪುಟಿದಂತೆ ಕಾರಂಜಿ ಸಿಹಿನೀರು 
ಉದಾಸ ಮನದಲ್ಲೆದ್ದಂತೆ ಮಧುರ ಪ್ರೇಮಭಾವನೆ 
ಕಂಡಂತೆ ದಾರಿ ಅತ್ತಿತ್ತ ಸುತ್ತಿ ದಣಿದವನಿಗೆ 
ಬೇಸಗೆಯ ಮಧ್ಯಾಹ್ನ ಬೀಸಿದಂತೆ ತಂಗಾಳಿ 
ಕೊಂಪೆಯಲ್ಲಿ ಕೇಳಿದಂತೆ ಕೋಕಿಲವಾಣಿ 
ಶ್ರಾವಣದ ಮೊದಲ ಕಪ್ಪು ಮೋಡದ ಹಾಗೆ 

 ಹೌದು ಹೀಗೇ ಇದೆ ನಿನ್ನ ನಗೆ 
ಹೇಗೆ ಉಳಿಸಿಕೊಂಡೆ ನೀನು 
ಈ ನಿರ್ಮಮ ಜಗತ್ತಿನಲ್ಲಿ 
ನಿನ್ನ ನಗೆ?


ಮೂಲ ಹಿಂದಿ ಕವಿತೆ: ಕುಸುಮ್ ಸಿನ್ಹಾ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)