ತುಲಸೀದಾಸರ ದ್ವಿಪದಿಗಳು

ಸಿ.ಪಿ. ರವಿಕುಮಾರ್  




ವಾಲ್ಮೀಕಿ ರಾಮಾಯಣವನ್ನು ಅವಧಿ ಭಾಷೆಯಲ್ಲಿ "ಶ್ರೀರಾಮಚರಿತಮಾನಸ" ಎಂಬ ಗ್ರಂಥದ ರೂಪದಲ್ಲಿ ಪುನರ್ಸೃಷ್ಟಿಸಿ ತುಲಸೀದಾಸರು ಭಾರತೀಯ ಸಾಹಿತ್ಯಲೋಕದಲ್ಲಿ ಮೇರುವಿನಂತೆ ನಿಂತಿದ್ದಾರೆ.  ರಾಮನ ಚರಿತ್ರೆಯನ್ನು ಜನರ ಆಡುಭಾಷೆಯಲ್ಲಿ ಮನೋಹರವಾಗಿ ಸೃಷ್ಟಿಸಿ ಭಕ್ತಿಪಂಥಕ್ಕೆ ಅಮೂಲ್ಯವಾದ ಕಾಣಿಕೆಯನ್ನು ತುಲಸೀದಾಸರು ನೀಡಿದರು. ರಾಮಚರಿತ ಮಾನಸದ ಪಂಕ್ತಿಗಳು ಇಂದು ನಮ್ಮ ಸಂಸ್ಕೃತಿಯ ಭಾಗಗಳಾಗಿ ಹೋಗಿವೆ.  ಈ ಗ್ರಂಥವನ್ನು (ಕನ್ನಡದಲ್ಲಿ ಕುಮಾರವ್ಯಾಸನ ಭಾರತವನ್ನು ಪ್ರತಿನಿತ್ಯ ಓದುತ್ತಿದ್ದ ಹಾಗೆ) ಉತ್ತರಭಾರತದಲ್ಲಿ ಇಂದಿಗೂ ಪ್ರತಿನಿತ್ಯ ಪಠಿಸುವ ಪದ್ಧತಿ ಇದೆ.   ಅವರು ರಚಿಸಿದ "ಶ್ರೀರಾಮಚಂದ್ರ ಕೃಪಾಳು ಭಜಮನ" ಎಂಬ ರಾಮಸ್ತುತಿ ಹಾಗೂ "ಹನುಮಾನ್ ಚಾಲೀಸಾ"  ಪ್ರತಿದಿವಸವೂ ಕೋಟ್ಯಾಂತರ ತುಟಿಗಳ ಮೇಲೆ ಇಂದಿಗೂ ನಲಿದಾಡುತ್ತವೆ.  ಅವರು ಪ್ರಾರಂಭಿಸಿದ "ರಾಮಲೀಲಾ" ಎಂಬ ಜಾನಪದ ನಾಟಕ ಪರಂಪರೆ ಉತ್ತರಭಾರತದಲ್ಲಿ ಇಂದಿಗೂ ಜೀವಂತವಾಗಿದೆ.

ಗೋಸ್ವಾಮಿ ತುಲಸೀದಾಸರನ್ನು ವಾಲ್ಮೀಕಿಯ ಅವತಾರವೆಂದು ನಂಬುತ್ತಾರೆ. ಶಿವನು ಪಾರ್ವತಿಗೆ "ಕಲಿಯುಗದಲ್ಲಿ ವಾಲ್ಮೀಕಿಯು ಅವತಾರ ತಳೆದು ತುಲಸಿದಾಸ ಎಂಬ ಹೆಸರಿನಲ್ಲಿ ಜನರ ಭಾಷೆಯಲ್ಲಿ ರಾಮನ ಕಥೆಯನ್ನು ರಚಿಸುತ್ತಾನೆ" ಎಂದು ಭವಿಷ್ಯ ನುಡಿದನಂತೆ. ಇದಕ್ಕೆ ಸಂಬಂಧಿಸಿದ ಇನ್ನೊಂದು ಕಥೆ ಹೀಗಿದೆ. ಹನುಮಂತನು ಅನೇಕ ಸಲ ವಾಲ್ಮೀಕಿಯ ಬಳಿಗೆ ಹೋಗಿ ರಾಮಾಯಣವನ್ನು ಅವರಿಂದ ಕೇಳಬಯಸಿದನಂತೆ.  "ನೀನು ವಾನರ! ನಿನಗೆ ಅರ್ಥವಾಗುವುದಿಲ್ಲ!" ಎಂದು ಅವರು ಉದಾಸೀನ ಮಾಡಿದರಂತೆ. ಕೊನೆಗೆ ಹನುಮಂತ ಹಿಮಾಲಯಕ್ಕೆ ತೆರಳಿ ಅಲ್ಲಿನ ಬಂಡೆಗಳ ಮೇಲೆ ತನ್ನ ಉಗುರುಗಳಿಂದ ರಾಮಾಯಣದ ಕಥೆಯನ್ನು ನಾಟಕ ರೂಪದಲ್ಲಿ  ಬರೆದನಂತೆ. ಈ ನಾಟಕಕ್ಕೆ  "ಹನುಮಾನ್ ನಾಟಕ" ಎಂಬ ಹೆಸರಿದೆ. ನಾಟಕದ ರಮ್ಯತೆಯನ್ನು ನೋಡಿದ ವಾಲ್ಮೀಕಿಗೆ ಅದು ತಮ್ಮ ಮೂಲರಾಮಾಯಣವನ್ನೇ ಎಲ್ಲಿ ಪೇಲವಗೊಳಿಸುತ್ತದೋ ಎಂದು ಚಿಂತೆಯಾಯಿತು. ಅವರ ಆದೇಶದ ಮೇರೆಗೆ ಹನುಮಂತನು ನಾಟಕ ಬರೆದಿಟ್ಟ ಬಂಡೆಗಲ್ಲುಗಳನ್ನು ಸಮುದ್ರದಲ್ಲಿ ಎಸೆದುಬಿಟ್ಟನಂತೆ. "ಕಲಿಯುಗದಲ್ಲಿ ನೀವೇ ಅವತರಿಸಿ ಜನರ ಭಾಷೆಯಲ್ಲಿ ರಾಮನ ಕಥೆಯನ್ನು ಬರೆಯಬೇಕು" ಎಂದು ಹನುಮಂತನು ವಾಲ್ಮೀಕಿ ಋಷಿಯನ್ನು ಕೇಳಿಕೊಂಡನಂತೆ.  ವಾರಣಾಸಿಯಲ್ಲಿರುವ ಸಂಕಟ ಮೋಚನ ಹನುಮಾನ್ ಮಂದಿರವನ್ನು ತುಲಸೀದಾಸರೇ ಕಟ್ಟಿಸಿದರಂತೆ.  ಈ ದೇವಸ್ಥಾನವು ಇರುವ ಸ್ಥಳದಲ್ಲಿ ಅವರಿಗೆ ಹನುಮಂತನ ದರ್ಶನವಾಯಿತೆಂಬ ಕತೆ ಇದೆ.

ತುಲಸೀದಾಸರ ಜನ್ಮ ವೃತ್ತಾಂತ ರೋಚಕವಾಗಿದೆ. ಅವರು ತಾಯಿಯ ಗರ್ಭದಲ್ಲಿ ಹನ್ನೆರಡು ಮಾಸಗಳನ್ನು ಕಳೆದು ಹುಟ್ಟಿದರಂತೆ. ಹುಟ್ಟಿದಾಗ ಅವರು ಐದು ವರ್ಷದ ಮಗುವಿನಂತೆ ಬೆಳವಣಿಗೆ ಹೊಂದಿದ್ದು ಬಾಯಲ್ಲಿ ಮೂವತ್ತೆರಡು ಹಲ್ಲುಗಳಿದ್ದವಂತೆ. ಹುಟ್ಟಿದ ಮಗು ಅಳಲಿಲ್ಲ. ಬದಲಾಗಿ "ರಾಮ" ಎಂದಿತು. ಹೀಗಾಗಿ ಮಗುವಿಗೆ "ರಾಮ್ ಬೋಲಾ" ಎಂದು ಹೆಸರಿಟ್ಟರು. ಆದರೆ ಮಗು ಹುಟ್ಟಿದ ಘಳಿಗೆಯು ಅಶುಭವೆಂದು ಜ್ಯೋತಿಷಿಯು ಸಾರಿದಾಗ ಇದರಿಂದ ತಂದೆಗೆ ಅಪಾಯವೆಂದು  ನಂಬಿ ಮಗುವನ್ನು "ಚುನಿಯಾ" ಎಂಬ ಒಬ್ಬ ದಾಸಿಗೆ ದಾನ ಮಾಡಿಬಿಟ್ಟರಂತೆ.  ಇವಳು ತನ್ನ ಗ್ರಾಮವಾದ ಹರಿಪುರದಲ್ಲಿ ಮಗುವನ್ನು ಬೆಳೆಸಿದಳು. ಮಗುವಿಗೆ ಐದೂವರೆ ವರ್ಷ ವಯಸ್ಸಾದಾಗ ಆಕೆ ತೀರಿಕೊಂಡ ಕಾರಣ ರಾಮ್ ಬೋಲಾ ನಿರ್ಗತಿಕನಾದ. ಪಾರ್ವತಿಯು  ಬ್ರಾಹ್ಮಣ ಸ್ತ್ರೀ ರೂಪದಲ್ಲಿ ಮಗುವಿಗೆ ಪ್ರತಿದಿವಸ ಊಟ ಮಾಡಿಸುತ್ತಿದ್ದಳೆಂಬ ದಂತಕಥೆ ಪ್ರಚಲಿತವಾಗಿದೆ.

ಸಂತ ರಾಮಾನಂದ ದಾಸರ ಶಿಷ್ಯರಾದ ನರಹರಿದಾಸರು ಐದುವರ್ಷದ ಮಗು ರಾಮ್ ಬೋಲಾನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸಾಕಿದರು. ಅವನಿಗೆ ವಿರಕ್ತಿ ದೀಕ್ಷೆ ಕೊಟ್ಟು ತುಲಸೀದಾಸ ಎಂಬ ಹೆಸರನ್ನು ಕೊಟ್ಟವರೂ ಅವರೇ. ಮಗುವಿಗೆ ಉಪನಯನ ಮಾಡಿ ವರಾಹ ಕ್ಷೇತ್ರ ಎಂಬ ಸ್ಥಾನದಲ್ಲಿ ಅವನಿಗೆ ರಾಮಾಯಣದ ಕಥೆಯನ್ನು ಮೊದಲಸಲ ಹೇಳಿದರಂತೆ.

ಸೂಕರಕ್ಷೇತ್ರದಲ್ಲಿ ನನ್ನ ಗುರು ತಿಳಿಸಿದರು ಮೊದಲಸಲ ಪುಣ್ಯ ಕಥೆಯನ್ನು
ಆಟವಾಡುವ ಎಳೆ ವಯಸ್ಸು, ತಿಳಿಯಲಾರದೆ ಹೋದೆ ಅಷ್ಟೇನೂ ॥

ಇದಾದ ನಂತರ ಗುರುಗಳು ಕಥೆಯನ್ನು ಅನೇಕ ಸಲ ಹೇಳಿದರು, ನನಗೆ ಕ್ರಮೇಣ ಅದು ಅರ್ಥವಾಯಿತೆಂದು ತುಲಸೀದಾಸರು   ಹೇಳಿಕೊಂಡಿದ್ದಾರೆ. ನರಹರಿದಾಸರು ತುಲಸೀದಾಸರಿಗೆ ವಾರಾಣಾಸಿಯಲ್ಲಿದ್ದ ತಮ್ಮ ಮಿತ್ರರಾದ ಶೇಷ ಸನಾತನ ಎಂಬ ಪಂಡಿತರಿಂದ ಶಿಕ್ಷಣ ಕೊಡಿಸಿದರು. ಗುರುಗಳ ಅಪ್ಪಣೆ ಪಡೆದು ತುಲಸೀದಾಸರು ತಮ್ಮ ಜನ್ಮಸ್ಥಾನವಾದ ರಾಜಪುರಕ್ಕೆ ಬಂದಾಗ ತಂದೆ ತಾಯಿ ಇಬ್ಬರೂ ತೀರಿ ಹೋದದ್ದು ತಿಳಿಯಿತು. ಅವರಿಗೆ ಶ್ರಾದ್ಧ ಕರ್ಮವನ್ನು ಮಾಡಿ ತಮ್ಮ ಮನೆಯಲ್ಲಿ ಇದ್ದುಕೊಂಡು ರಾಮನ ಕಥೆಯನ್ನು (ಹರಿಕಥೆಯ ಮಾದರಿಯಲ್ಲಿ) ಹೇಳತೊಡಗಿದರೆಂದು ಪ್ರತೀತಿ.

ಮುಂದೆ ತುಲಸೀದಾಸರು ರತ್ನಾವಲಿ ಎಂಬ ಹುಡುಗಿಯನ್ನು ಮದುವೆಯಾಗಿ ಗೃಹಸ್ಥರಾದರು. ಅವರಿಗೆ ತಾರಕ ಎಂಬ ಮಗ ಹುಟ್ಟಿದ. ಆದರೆ ಮಗು ಶೈಶವದಲ್ಲೇ ಸತ್ತುಹೋಯಿತು.  ಒಮ್ಮೆ ತುಲಸೀದಾಸರು ಹನುಮಂತನ ಗುಡಿಗೆ ಹೋಗಿದ್ದಾಗ ಅವರ ಹೆಂಡತಿಯನ್ನು ಮೈದುನ  ತವರಿಗೆ ಕರೆದುಕೊಂಡು ಹೋದನಂತೆ. ಹೆಂಡತಿಯನ್ನು ಬಿಟ್ಟಿರಲಾರದ ತುಲಸೀದಾಸರು ಯಮುನಾ ನದಿಯನ್ನು ಈಜಿಕೊಂಡು ಹೋಗಿ ರತ್ನಾವಲಿಯ ತವರುಮನೆಯನ್ನು ಸೇರಿದರಂತೆ. ಇದರಿಂದ ವಿಚಲಿತಳಾದ ಅವಳು "ರಕ್ತ ಮಾಂಸಗಳ ನನ್ನ ಶರೀರದ ಮೇಲಿರುವ ಮೋಹದ ಅಲ್ಪ ಭಾಗವಾದರೂ ನಿಮಗೆ  ರಾಮನಲ್ಲಿ ಇದ್ದಿದ್ದರೆ ನಿಮಗೆ ಮೋಕ್ಷ ಸಿಕ್ಕುತ್ತಿತ್ತು!" ಎಂದು ದೂರಿದಳಂತೆ.  ಇದು ತುಲಸೀದಾಸರ ಜೀವನದಲ್ಲಿ ಒಂದು ಹೊರಳು. ಅವರಲ್ಲಿ ವಿರಕ್ತಿ ಹುಟ್ಟಿ ಅವರು ಕೂಡಲೇ ಪ್ರಯಾಗಕ್ಕೆ ಹೊರಟು ಅಲ್ಲಿ ಸಂನ್ಯಾಸ ಸ್ವೀಕರಿಸಿದರೆಂದು ಕಥೆ ಇದೆ.  ಸಂನ್ಯಾಸ ದೀಕ್ಷೆ ಪಡೆದ ನಂತರ ತುಲಸೀದಾಸರು ಭಾರತದ ಉದ್ದಕ್ಕೂ ಸಂಚರಿಸಿ ಪುಣ್ಯಕ್ಷೇತ್ರಗಳ ದರ್ಶನ ಪಡೆದರು. ಈ ಪ್ರವಾಸಗಳು ಅವರ ಕಾವ್ಯದ ಮೇಲೆ ಪ್ರಭಾವ ಬೀರಿವೆ. ಟಿಬೆಟ್ ನಲ್ಲಿರುವ  ಮಾನಸ ಸರೋವರಕ್ಕೆ ಹೋದಾಗ ಅಲ್ಲಿ ಅವರಿಗೆ ತಮ್ಮ ಕಾವ್ಯದ ಹೆಸರು ಹೊಳೆದಿರಬಹುದು. ಅವರ ರಾಮಚರಿತ ಮಾನಸದಲ್ಲಿ ಬರುವ ಪಾತ್ರವಾದ ಕಾಕಭುಶುಂಡಿ ಎಂಬ ಕಾಗೆಯ   ದರ್ಶನವನ್ನು ಅವರು ಮಾನಸ ಸರೋವರದಲ್ಲಿ ಪಡೆದರಂತೆ. ಅವರ ಕಾವ್ಯದಲ್ಲಿ ರಾಮನ ಕತೆಯನ್ನು ಹೇಳುವ ನಾಲ್ಕು ಪಾತ್ರಗಳಲ್ಲಿ ಈ ಕಾಗೆಯೂ ಒಂದು.

ತಮಗೆ ಹನುಮಂತ ಮತ್ತು ರಾಮ ಇಬ್ಬರೂ ದರ್ಶನ ನೀಡಿದರೆಂದು ತುಲಸೀದಾಸರೇ ಹೇಳಿಕೊಂಡಿದ್ದಾರೆ. ಇದನ್ನು ಪ್ರಿಯದಾಸ ಎಂಬ ಕವಿ ತಮ್ಮ ಭಕ್ತಿರಸಬೋಧಿನಿ ಎಂಬ ಕಾವ್ಯದಲ್ಲಿ ವಿಸ್ತರಿಸಿದ್ದಾನೆ. ಪ್ರತಿದಿನ ಬೆಳಗ್ಗೆ ತಮ್ಮ ಪ್ರಾತಃಕರ್ಮಗಳನ್ನು ಮುಗಿಸಿದ ನಂತರ ತುಲಸೀದಾಸರು ಉಳಿದ ನೀರನ್ನು ಒಂದು ಮರದ ಬುಡಕ್ಕೆ ಹಾಕುತ್ತಿದ್ದರಂತೆ. ಆ ಮರದಲ್ಲಿದ್ದ ಪ್ರೇತ ಇದರಿಂದ ಪ್ರಸನ್ನವಾಗಿ "ನಿನಗೇನು ವರ ಬೇಕು?" ಎಂದು ಕೇಳಿತು. ತುಲಸೀದಾಸರು "ನನಗೆ ಶ್ರೀರಾಮನ ದರ್ಶನ ಬೇಕು" ಎಂದು ಕೇಳಿದರು.  "ಇದು ನನ್ನಿಂದ ಸಾಧ್ಯವಿಲ್ಲ. ನಾನು ನಿನಗೆ ಹನುಮಂತನ ದರ್ಶನ ಮಾಡಿಸಬಲ್ಲೆ. ಅವನು ನಿನಗೆ ಶ್ರೀರಾಮನ ದರ್ಶನ ಮಾಡಿಸಬಲ್ಲ!" ಎಂದ ಪ್ರೇತ ಅವರಿಗೆ ಹನುಮಂತನ ದರ್ಶನದ ರಹಸ್ಯಮಾರ್ಗವನ್ನೂ ಹೇಳಿತು. "ಪ್ರತಿದಿನ ನೀನು ಹೇಳುವ ರಾಮಕಥೆಯನ್ನು ಕೇಳಲು ಸಾಕ್ಷಾತ್ ಹನುಮಂತನೇ ಒಬ್ಬ ಕುಷ್ಟರೋಗಿಯ ರೂಪದಲ್ಲಿ  ಬರುತ್ತಾನೆ. ಅವನನ್ನು ಹಿಂಬಾಲಿಸು" ಎಂಬ ಪ್ರೇತದ ಸಲಹೆಯನ್ನು ತುಲಸೀದಾಸರು ಪಾಲಿಸಿದರು.ಕುಷ್ಟರೋಗಿಯನ್ನು ಕಾಡಿನಲ್ಲಿ ಹಿಂಬಾಲಿಸಿ ಹೋಗಿ ಅವನ ಕಾಲಿಗೆ ಬಿದ್ದು "ನನಗೆ ನಿಮ್ಮ ನಿಜರೂಪವನ್ನು ತೋರಿಸಬೇಕು" ಎಂದು ಪ್ರಾರ್ಥಿಸಿದರು. ಮೊದಲು ತನಗೇನೂ ತಿಳಿಯದೆಂದು ನಟಿಸಿದರೂ ಕೊನೆಗೆ ಹನುಮಂತ ತನ್ನ ವಿರಾಟ್ ಸ್ವರೂಪವನ್ನು ತುಲಸೀದಾಸರಿಗೆ ತೋರಿಸಿದನಂತೆ. ಆ ಸ್ಥಳದಲ್ಲಿ ತುಲಸೀದಾಸರು ಮುಂದೆ ಸಂಕಟಮೋಚನ ಹನುಮಾನ್ ಮಂದಿರವನ್ನು ನಿರ್ಮಿಸಿದರಂತೆ.

ಚಿತ್ರಕೂಟಕ್ಕೆ ಹೋದರೆ ಅಲ್ಲಿ ರಾಮನ ದರ್ಶನ ಸಿಕ್ಕುವುದೆಂದು ಹನುಮಂತನೇ ತುಲಸೀದಾಸರಿಗೆ ಹೇಳಿದನಂತೆ. ಅಲ್ಲಿಗೆ ಹೋದ ತುಲಸೀದಾಸರಿಗೆ ಒಂದು ದಿನ ಕುದುರೆಯ ಮೇಲೆ ಕುಳಿತ ಇಬ್ಬರು ಸವಾರರು ಕಂಡರು. ಅವರ ರೂಪಕ್ಕೆ ಮನಸೋತರೂ ಅವರು ಯಾರೆಂದು ಗುರುತಿಸಲಾಗಲಿಲ್ಲ. "ರಾಮ ಲಕ್ಷ್ಮಣರು ಕಾಣಿಸಿದರೇ?" ಎಂದು ಹನುಮಂತ ಕೇಳಿದಾಗಲೇ ಅವರಿಗೆ ತಮ್ಮ ಅಜ್ಞಾನದ ಅರಿವಾದದ್ದು. ಮರುದಿನವೂ ಹೀಗೇ ಅವರಿಗೆ ಶ್ರೀರಾಮನ ದರ್ಶನ ತಪ್ಪಿಹೋಯಿತು. ಮೂರನೇ ದಿನ  ಅವರಿಗೆ ಶ್ರೀರಾಮನು ಪುಟ್ಟ ಬಾಲಕನ ರೂಪದಲ್ಲಿ ಪ್ರಕಟವಾದನಂತೆ.  ಆಗ ದಾಸರು ಶ್ರೀಗಂಧ ತೇಯುತ್ತಿದ್ದರು.  ಹನುಮಂತನು ಮೊದಲೇ ಈ ಬಗ್ಗೆ ಸೂಚನೆ ಕೊಟ್ಟಿದ್ದರಿಂದ ತುಲಸೀದಾಸರಿಗೆ ಶ್ರೀರಾಮನ ಪೂರ್ಣ ದರ್ಶನ ಸಾಧ್ಯವಾಯಿತು. ಬಾಲಕನ ಮೋಹಕ ಸೌಂದರ್ಯಕ್ಕೆ  ತುಲಸೀದಾಸರು ಮನಸೋತರು. ಬಾಲಕನು ಅವರಿಂದ ಶ್ರೀಗಂಧವನ್ನು ಕೇಳಿ ಪಡೆದು ಅವರ ಹಣೆಗೆ ತಿಲಕವನ್ನಿಟ್ಟು ಅಂತರ್ಧಾನನಾದನೆಂಬ ಕತೆಯಿದೆ.

ತುಲಸೀದಾಸರು ಮಾಡಿದರೆಂಬ ಹಲವು ಪವಾಡಗಳ ಕತೆಗಳು ಹುಟ್ಟಿಕೊಂಡಿವೆ. ಒಮ್ಮೆ ತುಲಸೀದಾಸರು ಎಲ್ಲೋ ಹೋಗುತ್ತಿದ್ದಾಗ ಒಬ್ಬ ಹೆಂಗಸು ಅವರ ಕಾಲಿಗೆ  ಬಂದು ಬಿದ್ದಳು. ಅವರು ಅವಳನ್ನು "ಸುಮಂಗಲಿಯಾಗು" ಎಂದು ಹರಸಿದರು. "ಅದು ಹೇಗೆ ಸಾಧ್ಯ? ನನ್ನ ಪತಿ ಇಂದೇ ತೀರಿಕೊಂಡರು" ಎಂದು ಅವಳು ದುಃಖ ಪಟ್ಟಳು. "ನನ್ನ ಬಾಯಲ್ಲಿ ಶ್ರೀರಾಮನು ಈ ಮಾತನ್ನು ಹೇಳಿಸಿದರೆ ಅದು ಸುಳ್ಳಾಗುವುದಿಲ್ಲ. ಎಲ್ಲರೂ ಕಣ್ಮುಚ್ಚಿ ಶ್ರೀರಾಮನ ಹೆಸರನ್ನು ಕೂಗಿ!" ಎಂದು ತುಲಸೀದಾಸರು ಆದೇಶಿಸಿದರು. ಹೀಗೆ ಮಾಡಿದಾಗ ಸತ್ತಿದ್ದ ವ್ಯಕ್ತಿ ಜೀವಿತನಾದನಂತೆ.  ಈ ವದಂತಿ ಎಲ್ಲಾ ಕಡೆಗೆ ಹಬ್ಬಿ ಅಕ್ಬರನ ಕಿವಿಯನ್ನೂ ಮುಟ್ಟಿತು. ಅವನು ತುಲಸೀದಾಸರನ್ನು ಬರಹೇಳಿದ. ತಾವು ಕಾವ್ಯರಚನೆಯಲ್ಲಿ  ತೊಡಗಿರುವುದರಿಂದ ಇದು ಸಾಧ್ಯವಿಲ್ಲ ಎಂದು ಅವರು ಹೇಳಿಕಳಿಸಿದರು.  ಕ್ರುದ್ಧನಾದ ಅಕ್ಬರ್ ಅವರನ್ನು ಬಲವಂತದಿಂದ ಕರೆಸಿಕೊಂಡ.  ತನ್ನ ಕಣ್ಣುಗಳ ಮುಂದೆಯೂ ಇಂಥ ಪವಾಡ ಮಾಡಿ ತೋರಿಸಬೇಕೆಂದು ಹಠ ಮಾಡಿದ. "ನೀವು ಕೇಳಿದ್ದೆಲ್ಲಾ ಸುಳ್ಳು. ನನಗೆ ಶ್ರೀರಾಮನನ್ನು ಹೊರತಾಗಿ ಏನೂ ತಿಳಿದಿಲ್ಲ" ಎಂದು ದಾಸರು ಹೇಳಿಬಿಟ್ಟರು. ಅಕ್ಬರ್ "ನಿಮ್ಮ ರಾಮನನ್ನು ನಾವೂ ನೋಡೋಣ!" ಎಂದು ಸವಾಲೆಸೆದು ದಾಸರನ್ನು ಫತೇಹ್ ಪುರ ಸಿಕ್ರಿಯ ಕಾರಾಗ್ರಹದಲ್ಲಿ ಬಂಧಿಸಿದ.  ಅಲ್ಲಿ ತುಲಸೀದಾಸರು ನಲವತ್ತು ಚರಣಗಳುಳ್ಳ ಹನುಮಾನ್ ಚಾಲೀಸಾ ರಚಿಸಿ ನಲವತ್ತು ದಿವಸ ಪಠಣ ಮಾಡಿದರಂತೆ.  ನಲವತ್ತನೇ ದಿವಸ ಕೋತಿಗಳ ದೊಡ್ಡ ಸೈನ್ಯ ನಗರದಲ್ಲಿ ಬಂದಿಳಿದು ಧ್ವಂಸ ಮಾಡಲು ಪ್ರಾರಂಭಿಸಿತು. ಅಕ್ಬರನ ಒಬ್ಬ ಸಲಹೆಗಾರ "ಇದು ನೀವು ಬಂಧಿಸಿಟ್ಟ ಫಕೀರನ ಕೆಲಸ!" ಎಂದು ತಿಳುವಳಿಕೆ ಹೇಳಿದ. ಅಕ್ಬರನು  ದಾಸರನ್ನು ಬಿಡುಗಡೆ ಮಾಡಿದಾಗ ತುಲಸೀದಾಸರು ಹನುಮಂತನನ್ನು ಪ್ರಾರ್ಥಿಸಿ ಕೋತಿಗಳ ಹಾವಳಿಯನ್ನು ಕೊನೆಗೊಳಿಸಿದರು. ಮುಂದೆ ಅಕ್ಬರ್ ದಾಸರ ಸ್ನೇಹ ಸಂಪಾದಿಸಿ ಅವರ ಸಲಹೆಯ ಮೇರೆಗೆ ಫತೇಹ್ ಪುರ ಸಿಕ್ರಿಯನ್ನು ಬಿಟ್ಟು ದೆಹಲಿಗೆ ಹಿಂತಿರುಗಿದನಂತೆ.

ಒಮ್ಮೆ ತುಲಸೀದಾಸರು ವೃಂದಾವನಕ್ಕೆ ಹೋಗಿ ಶ್ರ್ರೀಕೃಷ್ಣನ ದೇವಸ್ಥಾನದಲ್ಲಿ ವಿಗ್ರಹಕ್ಕೆ  ನಮಸ್ಕರಿಸಲು ಬಗ್ಗುತ್ತಿದ್ದಾಗ ದೇವಸ್ಥಾನದ ಮಹಂತನು "ಯಾರು  ತನ್ನ  ಇಷ್ಟದೈವವನ್ನು ಬಿಟ್ಟು ಬೇರೆ ದೇವರಿಗೆ ನಮಸ್ಕರಿಸುತ್ತಾರೋ ಅವರು ಮೂರ್ಖರು!" ಎಂದು ಕೆಣಕಿದನಂತೆ. ಆಗ ದಾಸರು ಹೀಗೆ ಪ್ರಾರ್ಥಿಸಿದರಂತೆ:

ಹೇಗೆ ವರ್ಣಿಸಲಿ ಪ್ರಭು ನಿನ್ನ ಇಂದಿನ ವೈಭವವನ್ನು?
ಬಿಲ್ಲು ಬಾಣಗಳಿರಲು ಕೈಯಲ್ಲಿ ನಿನ್ನ ಕಾಲಿಗೆ ತುಲಸಿ ವಂದಿಸುವನು ॥

ಭಕ್ತನನ್ನು ಮೆಚ್ಚಿಸಲು ಶ್ರೀಕೃಷ್ಣನು ತನ್ನ ಕೊಳಲು ಮತ್ತು ಕೋಲುಗಳನ್ನು ತ್ಯಜಿಸಿ ಬಿಲ್ಲು ಬಾಣಗಳನ್ನು ಹೊತ್ತು ನಿಂತನಂತೆ!

ಈ ಕತೆಗಳಲ್ಲಿ ಇರುವ ಸತ್ಯಾಂಶವನ್ನು ಹುಡುಕಿ ಹೊರಡುವುದು ಜಾಣರ ಕೆಲಸವಲ್ಲ. ಕತೆಗಳ ರೋಚಕತೆಯನ್ನು ಆನಂದಿಸುವುದೇ ಜಾಣ್ಮೆ!

ತುಲಸೀದಾಸರ ಕೆಲವು ದ್ವಿಪದಿಗಳ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ:

ತುಲಸಿ  ತುಲಸಿ  ಎಂಬರೆಲ್ಲರೂ! ಅದು ಕಾಡು ಪತ್ರೆ ಮಾತ್ರ 
ರಾಮನ ಕೃಪೆ ಎಂದಾಯಿತೋ ಅಂದಾದನು ತುಲಸೀದಾಸ ॥೧॥ 

ಕಾಮ ಕ್ರೋಧ ಮದ ಲೋಭಗಳು ಮನದಲ್ಲಿ ಇರುವಾಗ ವಾಸ 

ಹೇಳುವೆ ಕೇಳಿರಿ ಪಂಡಿತನಿಗೂ ಮೂರ್ಖನಿಗಿಲ್ಲ ಏನೂ ವ್ಯತ್ಯಾಸ ॥೨॥ 

ರಾಮನಾಮ ಒಂದಂಕಿ; ಪಕ್ಕದಲ್ಲಿ ಸಾಧನೆಗಳೆಲ್ಲ ಶೂನ್ಯ 

ಏನೂ ಬೆಲೆಯಿಲ್ಲ ಅಂಕಿ ಇಲ್ಲದೆ! ಇದ್ದರೋ ಹತ್ತುಗುಣ ಮೌಲ್ಯ ॥೩॥ 

ಸೇವಕ ಕಪಿಗಳು ವೃಕ್ಷದ ಮೇಲೆ! ಕೆಳಗೆ ಕುಳಿತಿಹನು ಶ್ರೀರಾಮ 

ಜಗದೊಳು ರಾಮನಿಗಿಂತಲೂ ತುಲಸಿ! ಸಿಗುವನೇನು ಗುಣಧಾಮ?॥೪॥ 

ಚಿಗುರಿದ್ದರೆ ಪಶುಗಳು, ಫಲವಿದ್ದರೆ ಕೈ ಚಾಚುವ ಜನ, ಒಣಗಿದರೆ ಒಲೆಗೆ ಗ್ರಾಸ
ತುಲಸಿ! ಸ್ವಾರ್ಥದ ಮಿತ್ರರು ಎಲ್ಲರೂ; ಪರಮಾರ್ಥದ ಮಿತ್ರನೊಬ್ಬ ರಘುನಾಥ  ॥೫॥ 

ರಾಮನಿಂದ ದೂರವಿರಲು ಬೆಳೆದು, ಬಳಿಸಾರಲು ಇಳಿವುದು ಮಾಯೆ 

ಸೂರ್ಯ ದೂರವಿರಲು ಬೆಳೆದು, ತಲೆಯ ಮೇಲಿರಲು ಅಳಿವಂತೆ ಛಾಯೆ  ॥೬॥ 

ಆಕರ

[೧] ಇಂಗ್ಲಿಷ್ ವಿಕಿಪೀಡಿಯಾ 







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)