ಹಕ್ಕಿಹಾಡು


ಮೂಲ ಹಿಂದಿ ಕವಿತೆ: ಶಿವಮಂಗಲ್ ಸಿಂಗ್ ಸುಮನ್ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಮುಕ್ತ ಗಗನದ ಬಾನಾಡಿಗಳು 
ಪಂಜರದೊಳಗೆ ಬಾಳಲಾರೆವು! 
ಚಿನ್ನದ ಶರಗಳು ಮೃದು ಮೈತಾಕಿ 
ರೆಕ್ಕೆ ಪುಕ್ಕಗಳು ಕ್ಷತಗೊಳ್ಳುವುವು! 

ಹರಿವ ತಂಪು ಜಲ ಕುಡಿಯುವ ನಾವು
ಬಳಲಿ ಬಾಯಾರಿ ಸಾವುದೆ  ಮೇಲು
ಬೇವಿನ ಹಣ್ಣೇ ಸವಿಯೆನಿಸುವುದು
ಬೇಡ ಬೆಳ್ಳಿ ಬಟ್ಟಲಿನೊಳು ಹಾಲು!

ಚಿನ್ನದ ಬೇಡಿಯ ಬಂಧನದಲ್ಲಿ
ಹಾರಾಟದ ಸವಿ ಮರೆಯುತಿದೆ
ಸಿಕ್ಕದಿನ್ನು ಅಯ್ಯೋ! ಬರಿ ಕನಸು
ಸುಂದರ ಲತೆಗಳ ತೂಗುಯ್ಯಾಲೆ 

ಎಂಥ ಆಸೆಗಳು ಎದೆಯೊಳಗಿದ್ದವು!
ಬಾನಂಚನ್ನೇ ಹುಡುಕುವ ಹುಚ್ಚು!
ಕೆಂಪು ಕಿರಣದಂತೆಮ್ಮ ಕೊಕ್ಕಿನಲ್ಲಿ
ಹೊಳೆವ ಹೊನ್ನ ದಾಳಿಂಬೆಯ ಕುಚ್ಚು!

ಕ್ಷಿತಿಜವನ್ನು ಮೊದಲಾರು ಸೇರುವರು
ಒಬ್ಬರಿಗೊಬ್ಬರು ಪಂದ್ಯವ ಕಟ್ಟಿ
ಹಾರಿದೆವೆಂದರೆ ಹಠವೆಂತಹುದು
ನಿಂತರೆ ಕೊನೆಗೂ ಗುರಿಯನು ಮುಟ್ಟಿ

ರೆಂಬೆಗಳಾಶ್ರಯ ಬೇಡುವುದಿಲ್ಲ
ಮುರಿದು ಹಾಕು ಬೇಕಾದರೆ ಗೂಡು
ಕಸಿಯದಿರೋ ಹಾರಾಟದ ಆನಂದ
ಇರುತಿರೆ ಭುಜದೊಳು ರೆಕ್ಕೆಗಳೆರಡು 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)