ಕಬೀರನ ಹತ್ತು ದ್ವಿಪದಿಗಳು (೪೧ - ೫೦)

ಮೂಲ: ಮಹಾತ್ಮಾ ಕಬೀರ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಐದು ಪ್ರಹರ ಹೋಯ್ತು ವ್ಯಾಪಾರದಲ್ಲಿ; ಮೂರು ನಿದ್ದೆಯಲ್ಲಿ ಕಳೆಯಿತು 
ಒಂದು ಪ್ರಹರವೂ ಹರಿಚಿಂತನೆಯಿಲ್ಲ! ಮುಕ್ತಿಯು ಸಿಕ್ಕುವುದೆಂತು? ॥೪೧॥ 

ನಿದ್ದೆಯು ಸಾವಿನ ಲಕ್ಷಣ! ಕಬೀರ, ಮೇಲೆ ಎದ್ದೇಳು!
ಬೇರೆ ರಸಾಯನ ಬಿಟ್ಟು ಹಿಡಿಯಯ್ಯಾ ನಾಮ ರಸಾಯನ ಗೀಳು  ॥೪೨॥

ದುರ್ಬಲನನ್ನು ಪೀಡಿಸಬೇಡ! ಗಟ್ಟಿ ಅವನ ನಿಟ್ಟುಸಿರು 
ಬಿಸಿಯುಸಿರಿಂದಲೆ ಭಸ್ಮವಾಗುವುದು ಕುಲುಮೆಯಲ್ಲಿ ಅದಿರು  ॥೪೩॥ 

ದಾನದಿಂದ ಧನ ಕಡಿಮೆಯಾಗದು; ನೀರು ಕುಡಿದರೆ ನದಿಯಾರದು 
ನೋಡು ಇದನು ಕಣ್ಣಾರೆ ಕಬೀರ! ಇಷ್ಟರ ಮೇಲೆ ಮಾತು ಬಾರದು  ॥೪೪॥ 

ನವದ್ವಾರದ ಪಂಜರದೊಳಗೆ ಇರುವ ಹಕ್ಕಿ ಯಾವುದು?
ಅದು ಒಳಗಿದ್ದರೆ ಆಶ್ಚರ್ಯ; ಹಾರಿದರೆ ಏನಿಹುದು ಮೋಜು?॥೪೫॥ 

ತಣ್ಣಗಿಟ್ಟುಕೋ ಮನಸ್ಸನ್ನು! ಜಗದೊಳಗೆ ವೈರಿ ಇಲ್ಲ ನಿನಗಾರೂ 
ಅಹಂಕಾರ ಬಿಟ್ಟು ನೋಡು; ದಯೆ ಕಾಣುವುದೆಲ್ಲೆಡೆಗೂ ॥೪೬॥ 

ಮಂಗವಿದ್ದಂತೆ ಆಟದವನ ಬಳಿ ಜೀವ-ಮನಸುಗಳ ನಂಟು 
ನಾನಾ ಕುಣಿತವ ತೋರುತ್ತಲಿದೆ ತನ್ನೊಂದಿಗೆ ಇಟ್ಟುಕೊಂಡು ॥೪೭॥ 

ತಲೆ ಬೋಳಿಸಿಕೊಳ್ಳುತ ದಿನಗಳು ಕಳೆದವು! ದೊರಕಲಿಲ್ಲವೋ ರಾಮ 
ರಾಮನಾಮ ಜಪಿಸಿದರೇನು? ಮನದೊಳಗೆ ಬೇರೆ ವ್ಯಾಪಾರ ॥೪೮॥

ಕೇಶದಲ್ಲೇನಿತ್ತು ದೋಷ? ಬೋಳಿಸಿಕೊಂಡಿ ಒಂದು ನೂರು ಸಲ 
ಮನವನ್ನು ಬೋಳಿಸಿಕೊಳ್ಳಬಾರದೆ? ಅಲ್ಲಿದೆ ನೂರು ವಿಕಾರ ॥೪೯॥ 

ಇನ್ನೆಷ್ಟು ನಿದ್ದೆಯೋ ಕಬೀರ? ಎದ್ದಾಗಲೂ ಮಾಡಲೊಲ್ಲೆ ಭಗವಂತನ ಸ್ಮರಣೆ 
ಬಂದೊಯ್ದಾಗ ಯಮ ಖಡ್ಗದ ಹೊರಕವಚ ಬಿದ್ದಿರುವುದಿಲ್ಲೇ ॥೫೦॥ 


Kannada translation by C.P. Ravikumar of of ten couplets by the celebrated saint-poet Kabir.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)