ಮಂಕುತಮ್ಮನ ಕಗ್ಗ!

 (ಡಿ.ವಿ.ಜಿ. ಕ್ಷಮೆ ಬೇಡಿ) 

ಸಿ.ಪಿ. ರವಿಕುಮಾರ್ 


(ನನ್ನ ಸೋಷಿಯಲ್ ಮೀಡಿಯಾ ಮಿತ್ರರೊಂದಿಗೆ ನಾನು ಆಗಾಗ ಹಂಚಿಕೊಳ್ಳುವ ಕಗ್ಗಗಳನ್ನು ಇಲ್ಲಿ ಸಂಕಲಿಸಿದ್ದೇನೆ. ಮುಂದೆ ಬರೆಯುವುದನ್ನು ಇಲ್ಲೇ ಅಗ್ರಸ್ಥಾನದಲ್ಲಿ ಜೋಡಿಸುತ್ತಾ ಹೋಗುವುದು ನನ್ನ ಯೋಜನೆ.) 


ಕಸ ಬಿಸಾಡಿದವರ ಚಿತ್ರ ಕ್ಲಿಕ್ ಮಾಡಿ ಕಳಿಸಿದರೆ
ಬಿಸುಟವರ ಮೇಲೆ ಕ್ರಮ ತೆಗೆದುಕೊಳ್ಳುವರಂತೆ |
ಎಸೆದು ಹೋಗುವರಲ್ಲ ಎಲ್ಲ ಮಾಧ್ಯಮದಲ್ಲೂ
ವಿಷವ! ಕ್ರಮವೆಲ್ಲಿಹುದು? ಮಂಕುತಮ್ಮ ||


ಎಳ್ಳುಬೆಲ್ಲವ ತಿಂದು ಒಳ್ಳೆ ಮಾತಾಡಬೇಕಂತೆ
ಎಲ್ಲೆಂದು ಹುಡುಕಿದೆ ವಾರ್ತಾ ಪತ್ರಿಕೆಯ ತುಂಬಾ |
ಕಳ್ಳಕಾಕರ ಮಾತು, ಸುಳ್ಳುಬಾಕರ ಮಾತು
ಜೊಳ್ಳುತನ ತುಂಬಿಹವು ಮಂಕುತಮ್ಮ ||



ಗುರಿಯ ಮುಟ್ಟುವವರೆಗೂ ನಿಲ್ಲದಿರು ನೀನೆಂದು 
ಸಿರಿನುಡಿಯ ಹೇಳಿ ಹೋದರು ವಿವೇಕ ।
ಗುರಿಯನೆಂದೂ ಮುಟ್ಟದಿರು ಎಂದು ಪುಟ್ಟಪ್ಪ!
ಗಿರಿಗಿರಿ ಸುತ್ತಿದ್ದೇ ಬಂತಲ್ಲ ಮಂಕುತಮ್ಮ ।।


ಏಳು, ನಿಲ್ಲದಿರು ಗುರಿಯ ಮುಟ್ಟುವವರೆಗೆಂದು
ಹೇಳಿಹೋದರು ನೋಡಿ ವಿವೇಕಾನಂದ ಪುಣ್ಯಾತ್ಮ|
ತಾಳದೆ ರಸ್ತೆ ದಾಟುವ ಬಡಪಾಯಿ ಅಜ್ಜಿಗೂ
ಸಾಲು ಸಾಲಾಗಿ ಸಾಗುತಿವೆ ಕಾರ್, ಮಂಕುತಮ್ಮ

ಲಗ್ನವಾಗದೆ ಉಳಿದ ವಿಘ್ನನಾಶಕನೇಕೆ?
ಮಗ್ನನಾದನೆ ಓದು ಬರಹಗಳಲ್ಲಿ? ಉದ-
ರಾಗ್ನಿ ಭುಗಿಲೆದ್ದಾಗ ಕಡುಬು ನೀಡುವರಾರು?
ಭಗ್ನವಾಗದೆ ಕಾನ್ಸೆಂಟ್ರೇಶನ್ನು ಮಂಕುತಮ್ಮ।।

ಚಟ್ನಿಯನ್ನೇ ತಿಂದಿರೋ ಬ್ರೇಕ್ ಫಾಸ್ಟಿಗೆ ಅಥವಾ
ಪತ್ನಿಯೊಂದಿಗೆ ಯುದ್ಧ ಕಾದಾಡಿ ಸೋತಿರೋ? ।
ಕತ್ನೋವಾಗಿದ್ದೀರಿ ಎಲ್ಲದಕ್ಕೂ ನಂಜು ಕಾರುತ್ತ! ಪ್ರ-
ಯತ್ನಿಸಿದರೆ ನಗಬಹುದು ಮಂಕುತಮ್ಮ ।।

ನಗಬೇಕೋ ಅಳಬೇಕೋ ತಿಳಿಯದಾಗಿದೆ ಏನೂ
ಹಗರಣವು ಹೊಸಹೊಸದು ದಿನದಿನವು ಕೇಳಿ |
ಈಗ ಉದ್ಯೋಗ ಹಗರಣವದೊಂದು ವ್ಯಾಪಕವಾಗಿ
ಹಗರಣವೇ ಒಂದುದ್ಯೋಗ ಮಂಕುತಮ್ಮ ||

ನಿದ್ದೆ ಬಾರದೆಂದೊಬ್ಬ ಪೊಲಿಟಿಕಲ್ ಲೀಡರ್
ಸಿದ್ಧಯೋಗದಲ್ಲಿ ಪಡೆದರಂತೆ ಸಿದ್ಧಿ |
ಎದ್ದರೆ ಅದೇ `ಭಾಗ್ಯ’ ಎನ್ನುವಂತಾಗಿದೆ ಈಗ
ಸಿದ್ಧವಾಗಿದೆ ಯೋಗದ ಮಹತ್ತು ಮಂಕುತಮ್ಮ ||

ತೀರ ಉದ್ದವಾಯ್ತು ನಮ್ಮ ನಾಡಗೀತೆಯು ಎಂದು
ಹೊರಟಿತ್ತು ಸಮಿತಿ ಸರಕಾರದ ಕತ್ತರಿಯ ಹಿಡಿದು   ।
ಅರೆರೆ ಈಗ ಸಮಿತಿಯ ನಿರ್ಧಾರಕ್ಕೆ ಕತ್ತರಿಯಂತೆ
ಇರಬಹುದು ಎಲ್ಲೋ some ಮಿತಿಯು ಮಂಕುತಮ್ಮ ।।

ಚಿಕ್ಕದೆಂಬ ಕಾರಣಕ್ಕೆ ನಿರ್ಲಕ್ಷಿಸದಿರು ಏನನ್ನೂ
ಫಕ್ಕನೆ ಉರುಳಿದಾಗ ಅತಿಚಿಕ್ಕ ಡಾಮಿನೋ | 
ಪಕ್ಕದಲ್ಲಿರುವ ದೊಡ್ಡ-ಅತಿದೊಡ್ಡದೂ ಉರುಳುತ್ತ
ಧಕ್ಕೆಯಾಗುವುದು ಹಿರಿದು ಮಂಕುತಮ್ಮ

ಕೇಕ್ ಬಳಕೊಂಡು ಮುಖಮೂತಿ ಮೇಲೆಲ್ಲಾ
ಕ್ಲಿಕ್ ಮಾಡಿ ಕಳಿಸಿರುವೆಯಲ್ಲ ಸ್ವಚಿತ್ರ!
ಯಾಕೆ ಜಾರುತ್ತಿರುವೆ ನಗುವವರ ಮುಂದೆ?
ಸಾಕು ಈ ಅವತಾರ ಮಂಕುತಮ್ಮ ||

ಬದನವಾಳಿನ ಕೂಗು ಕೇಳಿಸಿಕೋ ಕಿವಿತೆರೆದು
ಬದಲಾಗು ಎನ್ನುತಿದೆ ಭೂಮಿ ಕೈಮುಗಿದು
ಕದಿಯದಿರು ಅವರಿವರ ಪಾಲಿನದು, ಮುಂಬರುವ
ಬದುಕಿಗೂ ಉಳಿಸೊಂದಿಷ್ಟು ಮಂಕುತಮ್ಮ ||

ಕೆಲವೊಮ್ಮೆ ಫೇಸ್ಬುಕ್ ಕೆಲವೊಮ್ಮೆ ವಾಟ್ಸಪ್
ಕೆಲವೊಮ್ಮೆ ಟ್ವಿಟ್ಟರ್, ಈ-ಮೇಲು ಕೆಲವೊಮ್ಮೆ |
ಕೆಳಗಿಟ್ಟು ನಿನ್ನ ಸಾಧನವ ತಲೆ ಮೇಲೆತ್ತು
ಬಾಳು ನಿಜಬಾಳನ್ನು ಮಂಕುತಮ್ಮ || 

ಬರಲಿರುವ ಪೀಳಿಗೆಯು ಕ್ಷಮಿಸುವುದೆ ನಮ್ಮನ್ನು?
ಮರ ಕಡಿದು ಸೃಷ್ಟಿಸಿದೆವು ಮರಳುಗಾಡನ್ನು|
ತೀರದ ಧನದಾಹಕ್ಕೆ ತೀರಿ ನೀರಿನ ಒರತೆ
'ಸಾರಿ' ಹೇಳಿದರೇನು ಮಂಕುತಮ್ಮ?||


ನೂರೆಂಟು ವಿವರಣೆ ತತ್ವಮಸಿ ಎಂಬ ಉದ್ಗಾರಕ್ಕೆ 
ಬೇರೊಂದ ಹೇಳುವರು ಯಾರ ಕೇಳಿದರೂ |
ಅರೆ! ತತ್ವಕ್ಕೆ ಮಸಿಬಳಿವ  ಮೀಡಿಯಾ ನೋಡು 
ಸರಿಯಾಗಿ ತಿಳಿದಿಹುದು ಮಂಕುತಿಮ್ಮ
"ಲೌಕಿಕರ ಕಂಡು ಆಡುವೆ, ಹಾಡುವೆ.
ತಾರ್ಕಿಕರ ಕಂಡು ಆಡುವೆ, ಹಾಡುವೆ.
ಸಹಜಗುಣವೆನ್ನಲಿಲ್ಲಯ್ಯಾ, ನಿಜಭಕ್ತಿಯೆನಗಿಲ್ಲ, ತಂದೆ.
ಏಕೋಭಾವ ಎನಗುಳ್ಳಡೆ, ಏಕೆ ನೀ ಕರುಣಿಸೆ
ಕೂಡಲಸಂಗಮದೇವಾ."

ಮೀಡಿಯಾ ಬಗ್ಗೆ ಬರೆದಂತಿದೆ ಬಸವಣ್ಣ
ನೋಡಿ ಹಾಡುವರು ಲೌಕಿಕವ ಹೊಗಳಿ |
ಆಡಿಕೊಳ್ಳುವರು ತಾರ್ಕಿಕರ ಲೇವಡಿ ಮಾಡಿ
ಮಾಡುವರು ಗೊಂದಲವ ಮಂಕುತಮ್ಮ ||


ತರಕಾರಿ ತರಲು ಹೊರಟಾಗ ಮನೆಯಿಂದ 
ಮರೆಯುವೆಯಾ ಹಣವನ್ನು ಜೋಬಿನಲ್ಲಿಡಲು? ।
ತರಲೇಕೆ ಮರೆತೆ ಕೈಚೀಲ? ಪ್ಲಾಸ್ಟಿಕ್ ಬಳಕೆ 
ತರವೇನು ಜಾಣರಿಗೆ ಮಂಕುತಮ್ಮ? ।।

ಮುಖತಃ ಕಂಡಾಗ ಮಾತಾಡಿಸದೆ ಮುಖಕೊಟ್ಟು
ಪಕ್ಕದಲ್ಲಿರುವ ಇನ್ನೊಬ್ಬರ ಕಡೆ ದೇಶಾವರಿ ನಗೆ |
ನಕ್ಕವರು ಕಳಿಸಿದಾಗ ಲಿಂಕ್ಡ್ ಇನ್ ಕೋರಿಕೆಯನ್ನು
ದಿಕ್ಕೇ ತೋಚದು ನನಗೆ ಮಂಕುತಮ್ಮ ||


ಮೂರೂ ಬಿಟ್ಟವರೆಂದು ಹಳಿಯುತ್ತ ಬಾಯೊಳಗೆ
ಮರುದಿನವೂ ಮತ್ತೆ ಏಕೆ ನೋಡುವೆ ಟೀವಿ?
ಕರಿದ ತಿಂಡಿಗಳಲ್ಲಿ ಕೊಲೆಸ್ಟರಾಲ್ ಇದೆಯೆಂದು
ಕುರುಕುರು ತಿನ್ನುವೆಯಲ್ಲ ಮಂಕುತಮ್ಮ||

ನುಡಿಸಿದರೆ ಸಂಗೀತ ಗಿಡದೆದುರು ಪ್ರತಿನಿತ್ಯ
ಕೊಡದಿರದು ಫಲಪುಷ್ಪ - ಇದು ಹಳೆಯ ಕತೆಯಾಯ್ತು ।
ರೇಡಿಯೋ ಎಫ್ ಎಮ್ ಓಡಿಸಿತಂತೆ ಮೃಗಗಳನು
ಬೆದರುಬೊಂಬೆ ಇದು ಹೊಸದು ಮಂಕುತಮ್ಮ।।

ಜೂಲು ಜೂಲಾದ ಇದರ ಕೆಂಗೂದಲನು ನೋಡಿ
ಜೂಲು ನಾಯಿ ಎಂದಿದನು ಕರೆದರೇನೋ ಇಲ್ಲ ॥
ಮೇಲೆ ಹಾರುವ ಇದರ ಚೈತನ್ಯವನ್ನು ಕಂಡು
Joule ನಾಯಿ ಎಂದರೋ ನಾನರಿಯೆ ಮಂಕುತಮ್ಮ ।।


ತೂಕ ಹೆಚ್ಚಾಗುತಿದೆ ಕಡಿಮೆ ಮಾಡಿರಿ ಎಂದು
ಹಾಕಿರುವ ರಿಡಕ್ಷನ್ ಯೋಜನೆಗಳು ಫಲಿಸಿ ॥
ಸಾಕಷ್ಟು ಇಳಿದಿದೆ ತೂಕ ಆಡುವ ಮಾತಿನಲ್ಲಿ!
ಬೇಕೇ ಪ್ರೂಫು ನೋಡು ಮೀಡಿಯಾದಲ್ಲಿ ಮಂಕುತಮ್ಮ ॥

ಮಾಡಿಕೊಳ್ಳಲೇ ಬೇಕೆ ಅಷ್ಟೂ ಅಷ್ಟಾಲಂಕಾರ?

ತಡವಾಗುವುದು ಹೊರಡು ಬೇಗೆಂದು ಗೊಣಗದಿರಿ |
ಹೆಂಡತಿಯ ಮೇಲೆ! ಒಡನೆಯೇ ಸಿಡಿದೀತು ಆಸ್ಫೋಟಕ!
ಲೇಡಿಯ ಇನ್ನೊಂದು ಮುಖವೇ ಡಿಲೇ ಮಂಕುತಮ್ಮ ॥

ಹಚ್ಚಿದರೆ ಟಿವಿ ಅಲ್ಲಿ ರಿಯಾಲಿಟಿಯೇ ಮನರಂಜನೆ! ಸಾಕಾಗಿ
ಸ್ವಿಚ್ಚೊತ್ತಿದರೆ ಗಣಕದಲ್ಲೂ ತ್ರೀ ಡೀ ಬಹುಮಾಧ್ಯಮ
ವರ್ಚುಅಲ್ ರಿಯಾಲಿಟೀ ನಟನೆ! ನೈಜತೆಗೆ ಗೂಗಲಿನ
ಸರ್ಚು ಕೂಡಾ ವಿಫಲ ಮಂಕುತಮ್ಮ ॥

ನೆಟ್ಟು ಬೆಳೆಸುವುದೆಷ್ಟು ಕಷ್ಟ! ಉತ್ತು ನೆಲವನ್ನು ಬೀಜವ
ಬಿತ್ತಿ ನೀರೆರೆದು ಕಾಪಾಡಿದರೆ ಮೊಳಕೆ ಮೂಡಬಹುದು
ಹತ್ತೆಲೆ ಚಿಗುರಬಹುದು, ಎಲ್ಲವೂ ಬಹುದು, ಬಹುದು! ಇಂಟರ
ನೆಟ್ಟು ನೋಡು! ಕಾಡಾಗಿದೆ ಬೆಳೆಬೆಳೆದು ಮಂಕುತಮ್ಮ ॥

ಇರುಳು ಬಿದ್ದ ಆಲಿಕಲ್ಲು ಮಳೆ ರಭಸ ಹೇಗಿತ್ತು! ಮರುಳಾಗಿ
ಮಾರಾಟ ಸಂಸ್ಕೃತಿಗೆ ಮತಿಗೆಟ್ಟು ಬೆರೆಸುತ್ತಿರುವೆಯಲ್ಲ ವಿಷ
ಹರಿವ ನೀರಿಗೆ, ಮಣ್ಣಿಗೆ, ಗಾಳಿಗೆ! ಎಂದು ಮೇಲಿಂದ
ಯಾರೋ ಕೋಪಕ್ಕೆ ಕಲ್ಲು ಹೊಡೆದಂತಿತ್ತು ಮಂಕುತಮ್ಮ ॥

ಅಯ್ಯೋ ಹೀಗೇಕೆ ಬಯ್ಯುವರು ನಮ್ಮ ಅಧ್ಯಾಪಕರು
ತೊಯ್ಯಿಸುವ ಮುಂಗಾರು ಮಳೆಯಂತೆ ರಪರಪನೆ
ಹೊಯ್ಯುತಿಹುದೇಕೆ ನಾಮಾರ್ಚನೆ ವಿವಿಧ ಭಾಷೆಗಳಲ್ಲಿ? ಓ!
ಬಯೋ ಡೈವರ್ಸಿಟಿ ದಿನವಿಂದು ಮಂಕುತಮ್ಮ ॥

ಚಿತ್ರದಲಿ ಆಗಸಕೆ ನೀಲಿ ಬಣ್ಣವು ಸಹಜ, ಬತ್ತ ಬೆಳೆಯುವ ಭೂಮಿ-
ಗಿತ್ತ ಹಸಿರು ಸಹಜ! ಮತ್ತೇಕೆ ಸಿನಿಮಾ ಗೀತೆ ಹಾಡುತ್ತಿದೆ
ಗಟ್ಟಿಯಾಗಿ: ಗಗನವು Yellow! ಭೂಮಿಯು Yellow! ವೈ-
ಚಿತ್ರ್ಯ ಒಂದೂ ಅರಿಯೆ ನಾ ಮಂಕುತಮ್ಮ ॥


ನೋಡಲು ಲಾಯಕ್ಕಾದ್ದು ಸಿಕ್ಕುವುದಿಲ್ಲ ಎನ್ನುತ್ತಲೇ
ಬಿಡದೆ ನೋಡುವರು ಜನರು ಟೀವಿ! ಹೆಚ್ಚಿ ಕಾರ್ಯಕ್ರಮದ
ರೇಟಿಂಗ್ ಮತ್ತದೇ ಬಗೆಯ ಹತ್ತಾರು ಹುಟ್ಟಿಕೊಳ್ಳುವುವು!
ಮಾಡಿದ್ದನ್ನು ಉಣ್ಣಲೇ ಬೇಕಲ್ಲ ನಾವೇ ಮಂಕುತಮ್ಮ ॥

ಸರ್ವರಿಗೆ ಸಮಪಾಲು ಎಂದು ಕವಿ ಬಯಸಿದನೇಕೆ?
ಸರ್ವರಿಗೆ ಎಷ್ಟೋ ಕ್ಲಯಂಟುಗಳ ನಂಟಿಹುದು; ಅವರಲ್ಲಿ
ಒಬ್ಬರಿಗೆ ಬೆಣ್ಣೆ ಇನ್ನೊಬ್ಬರಿಗೆ ಸುಣ್ಣ ಮಾಡದಿರು!
ಸರ್ವೀಸಿನಲಿ ತರತಮವು ಸರಿಯಲ್ಲ ಮಂಕುತಮ್ಮ ॥

ತೆಗಳುವಿರಿ ಯಾತಕ್ಕೆ ಫಿಕ್ಸಾಗಿದೆ ಎಂದು ಪಂದ್ಯವನು! ನವದಂಪತಿ-
ಗಳ ನೋಡಿ ಹೊಗಳುವಿರಲ್ಲ ಫಿಕ್ಸಾಗಿದೆ ಜೋಡಿ ಸ್ವರ್ಗದಲ್ಲೆಂದು!
ಖಳರೆಂದು ಬೈದು ಬುಕಿಗಳನು ಬಂಧಿಸುವಿರಿ! ಬ್ರಹ್ಮ ಬರೆದದ್ದೆಂದು
ಹಣೆಗೆ ವಿಧಿಯ ಪಟ್ಟಿ ಫಿಕ್ಸ್ ಮಾಡಿಕೊಳ್ಳುವಿರಿ ಮಂಕುತಮ್ಮ ॥

ಕಾಳಿದಾಸನಿಗೆ ಅನ್ಯಾಯವಾಗಿದೆ ಕೇಳಿ! ಅವನದಲ್ಲವೇ ಆವಿಷ್ಕಾರ
ಹೇಳಿ, ಕ್ಲೌಡ್ ಕಂಪ್ಯೂಟಿಂಗ್! ಮೇಘ ಕೊಂಡೊಯ್ಯಲಿಲ್ಲವೇ ಆಷಾಢದ
ಗಾಳಿ ಸಿಡಿಲು ಮಿಂಚುಗಳ ಲೆಕ್ಕಿಸದೆ ವಿರಹಿಗಳ ಸಂದೇಶಗಳನ್ನು?
ಬಳಸುತಿಲ್ಲವೆ ಮಾಡರ್ನ್ ವಿರಹಿಗಳಿದೇ ಟೆಕ್ನಾಲಜಿಯ ಮಂಕುತಮ್ಮ ॥

ವಡೋದರ ಎಂಬುದರ ಸಂಧಿ ಬಿಡಿಸೆಂದು ಬಿಸಿ ವಡೆಗಳಂ
ಉಡಾಯಿಸುವ ಬಡೇ ಮನುಷ್ಯನಂ ಕೋಳ್ದೊಡೆ
ಬಡಾಯಿಸಿದರೇನಿದರ ದರ? ಬಡಾಗಳಂ ಉದರಕ್ಕೆ ಸೇರಿಸು-
ವುದೇ ಗುಣಂ! ಗುಣಸಂಧಿ ಎಂದು ಪಾಸಾದ ಮಂಕುತಮ್ಮ ॥

ನರ ಎಂಬ ಪದದ ಸ್ತ್ರೀಲಿಂಗವೇನೆಂದು
ಅರವಿಂದನನು ಪ್ರಶ್ನಿಸಲು ನರಿ ಎಂದುತ್ತರಿಸಿದನಯ್ಯೋ
ಮರಿ ಪಾಣಿನಿ! ಗೃಹಿಣಿ ಪದದ ಪುಲ್ಲಿಂಗ ಕೇಳಿದರೆ ತಲೆ
ಕೆರೆದು ಗ್ರಹಣ ಎಂದೆನಬೇಕೆ ಮಂಕುತಮ್ಮ ॥

ಮುರಿಯುತ್ತಿವೆ ದೂರದರ್ಶನದ ತೆರೆ ಮೇಲೆ ಪ್ರತಿನಿತ್ಯ
ತರತರದ ಸುದ್ದಿ; ಹೊರಳುತ್ತಿದೆ ಸರಸರ ಬ್ರೇಕಿಲ್ಲದೇ
ವರದಿಗಾರನ ನಾಲಗೆ! ಕೊಲೆಸುಲಿಗೆ ಮೋಸ ಅತ್ಯಾಚಾರ!
ನರರ ಹಾರ್ಟ್ ಬ್ರೇಕಿಂಗ್ ವಾರ್ತೆಗಳು ಮಂಕುತಮ್ಮ ॥

ಕನಕ ಶೈಲ ವಿಹಾರಿಣಿ! ಎಂದು ಹಾಡಿದರು ಶಂಕರರು
ಕನಕವೂ ಶೈಲಗಳೂ ಕಾಣೆಯಾಗುತ್ತಿವೆ ಇಂದು
ಗಣಕವನು ಹಿಡಿದು ಸ್ಟೈಲಾಗಿ ವಿಹರಿಸುವ ರಮಣಿಯನು
ಗಣಕ ಸ್ಟೈಲ ವಿಹಾರಿಣಿ ಎನಬಹುದೆ? ಮಂಕುತಮ್ಮ ॥

ಮುನಿಸಿಕೊಂಡಿಹಳೇಕೋ ಮನೆಗೆಲಸದವಳಿಂದು
ಮನಸ್ಸು ಮಾಡಿದ್ದಾಳೆ ಮಾಡುವುದಿಲ್ಲ ಮತದಾನ
ಹಣ ಹಂಚಿದವರು ಗುಳುಂ ಮಾಡಿದರು ಪಾಲನ್ನು
ತನಿಖೆಯಿಲ್ಲವೆ ಈ ಅನ್ಯಾಯಕ್ಕೆ? ಮಂಕುತಮ್ಮ ॥

ಮತವನ್ನು ಯಾಚಿಸಲು ಬಂದ ಖಾದೀಧಾರಿ
ಅತಿವಿನಯ ತೋರುತ್ತ ನಿಂತ ಗಗನವಿಹಾರಿ
ಜೊತೆಯಲ್ಲಿ ಬಂದ ಹೈಕಮಾಂಡ್ ಮೆಚ್ಚಿಸಲು
ಮತ ದೋ ಎಂದ ಹಿಂದಿಯಲಿ ಮಂಕುತಮ್ಮ ॥


ಸಾಕು ನಿವೃತ್ತನಾಗೆoದು ಸಚಿನ ತೆಂಡೂಲ್ಕರಗೆ
ಯಾಕೆ ಹೇಳುತ್ತಿದೆ ಮೀಡಿಯಾ ಗೊತ್ತೇ? ಸಚಿನ್
ರಾಕ್ಸ್ ಇತ್ಯಾದಿ ಕೂಗಿ ದಣಿದವರಿಗೆ ಏಕೆ
ಬೇಕು ಪರ್ವತ? ರಾಕೇ ಸಾಕು ಮಂಕುತಮ್ಮ ॥


ಮಾಲಿನಲಿ ಕಂಡ ಮಾಲನೆಲ್ಲಾ ಕೊಂಡು
ಕೇಳಿದ್ದೆಲ್ಲಾ ಕೊಡಿಸಿ ಜೊತೆಗೆ ತಾನೂ ತಿಂದು
ಕಾಲು ಚಾಚುತ್ತ ಸ್ಯಾಲರಿಯ ಹಾಸಿಗೆಯಾಚೆ
ಸಾಲ ರೀ ಎಂದು ಕೈಚಾಚದಿರು ಮಂಕುತಮ್ಮ ॥


ಹಿಡಿದು ಮೌಸನ್ನು ಎಲ್ಲಿ ಕೊಂಡೊಯ್ದರೂ ಉದ್ಭವಿಸಿ
ಎಡೆಬಿಡದೆ ಅಸಂಗತ ವಿಷಯಗಳ ನಿನಗೊರೆವ
ಕಿಟಕಿಗಳಿಗೆ ಅನ್ವರ್ಥ ಹೆಸರಲ್ಲವೆ ಪಾಪಪ್! ಮಾಹಿತಿಯ
ಜಡಿಮಳೆಯ ಕಾಟವಿದು ಮಂಕುತಮ್ಮ ॥


ಬದಲಿಸುವೆ ಪ್ರತಿದಿವಸ ವದನಪುಸ್ತಕದಲ್ಲಿ
ವಿಧವಿವಿಧ ಬಗೆಯಲ್ಲಿ ನಿನ್ನ ಪ್ರೊಫೈಲ್ ಚಿತ್ರ!
ಭೇದವೇನಿದು ಹೇಳು ಈ ಬಹುಕೃತ ವೇಷಕ್ಕೆ ಯಾ-
ಉದರ ನಿಮಿತ್ತವೋ ಮoಕುತಮ್ಮ? ॥


ಕೊಂಡಿಹೆನು ಕ್ವಾಡ್ ಕೋರುಳ್ಳ ಸಿಪಿಯೂ! ಇನ್ನೇನು
ಧಂಡಿಯಾಗಿರುತ್ತದೆ ಬಂಡಿಯ ಸ್ಪೀಡು ಎಂದು-
ಕೊಂಡಿದ್ದೆಯಾ! ಹೊಸ ಆಪ್ಲಿಕೇಶನಿನ ಭಾರಕ್ಕೆ
ಥಂಡವಾಗಿದೆ ಕ್ವಾಡ್ ಕೋರು ಮಂಕುತಮ್ಮ ॥


ಫಲಾಹಾರಮಂದಿರಕ್ಕೆ ದರ್ಶಿನಿಯ ಹೆಸರೇಕೆ?
ಎಲಾ! ಇಡ್ಲಿವಡೆದೋಸೆಗಳು ಬರಿ ದರ್ಶನಕ್ಕೇ?
ಮೇಲೇರುತ್ತಿರುವ ಬೆಲೆಯನ್ನು ನೋಡಿದರೆ
ಹೊಳೆಯುವುದು ಇದರರ್ಥ ಮಂಕುತಮ್ಮ ॥

ಐದು ಪತಿಗಳು ನೋಡು ಮಾಡರ್ನ್ ದ್ರೌಪತಿಗೆ
ಮೊದಲಿನವ ಆಲೋಪತಿ ನಂತರ ಹೋಮಿಯೋ
ತದನಂತರ ನ್ಯಾಚುರೋಪತಿ ಆಸ್ತಿಯೋಪತಿ ಮತ್ತೆ 
ಕಡೆಗೆ ಬರುವನು ಸಿಂಪತಿಯು ಮಂಕುತಮ್ಮ ||


ಖಾರಾಸೇವೆ ಅಂಗಡಿಯ ಮುಂದೆ ಸಂಜೆಯ ಮುನ್ನ
ಭಾರೀ ಜನಸಮೂಹವು ಸೇರಿ ಮಾಲೀಕ ಹರಿಯನ್ನ
ಕೋರುತಿದೆ 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ' ಹಾ!
ಹರಿಯೇಕೆ ಇಷ್ಟು ಸ್ಲೋ ಮoಕುತಮ್ಮ? ॥


ದಂಡವನು ಕೈಯಲ್ಲಿ ಹಿಡಿದು ಟಾಮ್ ಕೆಂಡಾಮಂಡಲವಾಗಿ
ಚಂಡಿಯವತಾರವನು ತಾಳಿ ಕಡುಕೋಪದಲಿ
ಕಂಡಕಂಡಲ್ಲಿ ಹುಡುಕಿದರೆ ದಂಡಿಸಲು ನಿರಾತಂಕ
ತಿಂಡಿ ತಿನ್ನುವ ಜೆರಿಯoತಿರಬೇಕು ಜೀವನದಿ ಮಂಕುತಮ್ಮ ॥




ನಡುರಾತ್ರಿ ಎಲ್ಲಿಂದಲೋ ಗುಡುಗಿನಂತಹ ಸ್ಫೋಟ!
ದಡಪಡಿಸಿ ಎದ್ದು ನೋಡಿದರೆ ಯಾರೋ
ಸಿಡಿಸುತ್ತಿರುವ ಪಟಾಕಿ! ಕ್ರಿಕೆಟ್ ಅಭಿಮಾನಿಗಳು
ಬಿಡಲೊಲ್ಲರು ನಿದ್ರಿಸಲು ಮ೦ಕುತಮ್ಮ ॥


ಕಡೆ ಪರೀಕ್ಷೆಯು ನಾಳೆ, ಇಂದು ಐಪಿಎಲ್ ಪಂದ್ಯ
ಕಡುವೈರಿ ಯಾರೋ ಹೂಡಿರುವ ಸಂಚೆ?
ನಡುರಾತ್ರಿ ಟಿ.ವಿ. ನೋಡುತ್ತ ಓದುವೆ ಟೆಸ್ಟ್ ಗೆ
ಜಡೆಜ ಬರುವನೆ ಉತ್ತರಿಸಲು? ಮ೦ಕುತಮ್ಮ ॥

ಜಲಪಾತದಂತೆ ಸುರಿಯುತ್ತಿರಲು ಸೋಷಿಯಲ್ ಮೀಡಿಯಾ
ಕೆಲವರಿಗೆ ದಿನಪತ್ರಿಕೆ ಇಷ್ಟವಾಗುವುದು  ಗೆಳೆಯಾ |
ಮೇಲೆ ಮಳೆ ಸುರಿಯುತ್ತಿದ್ದರೂ  ಮುಸಲಧಾರೆಯಂತೆ
ತಲೆಗೆ ಮಗ್ ಸ್ನಾನವೇ  ಆಪ್ಯಾಯಕರವಂತೆ  ಮಂಕುತಮ್ಮ||

ಹತ್ತುತ್ತ ಹೇಳಿಕೋ ಮನದಿ ಒಂದರ ಮಗ್ಗಿ
ಮೆಟ್ಟಿಲಿನ ತುದಿಯಲ್ಲಿ ಜಾಮೂನು ಸುಗ್ಗಿ |
ಬಿತ್ತರದಿ ಹೊಳೆವ ಜಾಮೂನುಸೂರ್ಯನಿಗೆ
ಕೆಟ್ಟನಲ್ಲವೆ ಹನುಮ ಮಂಕುತಮ್ಮ||

ಇಂದಿನ ಯುಗಾದಿಯ "ವಿಜಯ" ಸಂದಾಯ ತಂತ್ರಜ್ಞಾನಕ್ಕೆ
ಬಂಧು ಬಳಗವನೆಲ್ಲ ಬರಿದೆ ಬಾಯಲ್ಲುಪಚರಿಸಿ
ತಂದು ಕ್ಯಾಮೆರಾ ಅಪ್-ಲೋಡ್ ಮಾಡಿ ಹೋಳಿಗೆ ಚಿತ್ರ
ಉದರಕ್ಕೆ ಡೌನ್ ಲೋಡ್ ಮಾಡು ಒಬ್ಬಟ್ಟು ಮಂಕುತಮ್ಮ ॥


* * *


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)