ಕಬೀರನ ಹತ್ತು ದ್ವಿಪದಿಗಳು (೫೧ - ೬೦)

ಮೂಲ: ಮಹಾತ್ಮಾ ಕಬೀರ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಶೀಲವಂತ ದೊಡ್ಡವನು ಎಲ್ಲರಿಗಿಂತ; ಸಕಲ ರತ್ನಗಳ ಗಣಿ 
ಕಬೀರ! ಮೂರು ಲೋಕಗಳ ಸಂಪತ್ತೂ ನೆಲಸಿಹುದು ಶೀಲದಲ್ಲಿ  ೫೧॥ 

ರಾಜನಾದರೇನು ಫಕೀರನಾದರೇನು ಬಂದವರು ಹೋಗಲೇ ಬೇಕೊಂದು ದಿವಸ 
ಸಿಂಹಾಸನದ ಮೇಲೋ ಸರಪಳಿಗೆ ಬಿಗಿದೋ ಅಷ್ಟು ಮಾತ್ರ ವ್ಯತ್ಯಾಸ  ॥೫೨ ॥ 

ಕಂಬಳಿ ಹೊದ್ದು ಮಲಗಿರುವೆಯಲ್ಲ ಬಂದ ಕೆಲಸ ಮರೆತು 
ಕನ್ನಡಿಯಲ್ಲಿ ಮುಖ ದರ್ಶನ ಸಾಕೆ? ಹಿಡಿಯೋ ನಿನ್ನ ಗುರುತು ॥೫೩॥ 

ಮಾಯೆಯೂ ಛಾಯೆಯೂ ಒಂದೇ ವಿಧ - ಇದು ಬಲ್ಲವರು ಬಲ್ಲ ಗುಟ್ಟು 
ಓಡಿದವರನ್ನು ಹಿಂಬಾಲಿಸಿ ಓಡುವುದು; ಎದುರಿಸಲು ಹೋಗುವುದು ಬಿಟ್ಟು  ॥೫೪॥ 

ಅಹಂಕಾರವೆಲ್ಲೋ ಅಲ್ಲಿ ಆಪತ್ತು ಸಂಶಯವೆಲ್ಲೋ ಅಲ್ಲಿ ರೋಗ 
ಕಬೀರ!  ಇವು ನಾಲ್ಕಕ್ಕೂ ಪರಿಹಾರವೊಂದೇ - ಧೈರ್ಯವೆಂಬ ಯೋಗ  ॥ ೫೫॥ 

ಕಬೀರ! ಗರ್ವ ನಿನಗೆ ತಕ್ಕುದಲ್ಲ; ಹೊಂಚು ಹಾಕುತ್ತಿದೆ ಕಾಲ 
ನಿನ್ನ ಕತೆಯನ್ನು ಎಲ್ಲಿ ಮುಗಿಸುವುದೋ? ಯಾರಿಗೆ ಗೊತ್ತು ಯಾವಾಗ?  ॥೫೬॥ 

ಮಾನವ ಜನ್ಮ ದುರ್ಲಭ ಕಬೀರ! ಈ ದೇಹ ದೊರಕದು ಮತ್ತೆ ಮತ್ತೆ 
ಉದುರಿ ಬಿದ್ದ ಎಲೆ ಮರಳಿ ಸೇರುವುದೇ ಎಂದಾದರೂ ರೆಂಬೆಗೆ? ॥೫೭॥ 

ನಿದ್ರಿಸುವೆಯಲ್ಲೋ ಕಬೀರ! ಎಚ್ಚೆತ್ತು ಹಾಳು ಕೆಲಸ ಮುಗಿಸು 
ಯಾವ ಮಾರ್ಗವನ್ನಾರಿಸಿಕೊಂಡೆಯೋ ಅದನ್ನೇ ಮುಂದುವರೆಸು ॥೫೮॥ 

ಕಬೀರ ನಿನ್ನ ಗುಡಿಸಲು ಕಟುಕನಂಗಡಿ ಪಕ್ಕಕ್ಕೆ 
ಮಾಡಿದಂತೆ ಪಡೆವರೆಲ್ಲ; ಅಂಜಿಕೆ ಏತಕ್ಕೆ? ॥೫೯॥ 

ಕಬೀರ! ಮನಸ್ಸಿನೊಂದಿಗೆ ಹೋರಾಡಿದವನು ಶೂರ 
ಐದು ಕವಚ ಮುರಿದು ತಳ್ಳುವನು ದ್ವಂದ್ವವನ್ನು ದೂರ  ॥೬೦॥ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)