ಏರು ಎತ್ತರಕ್ಕೆ!

ಏರು ಎತ್ತರಕ್ಕೆ! 

ಮೂಲ ಹಿಂದಿ ಕವಿತೆ: ದ್ವಾರಕಾ ಪ್ರಸಾದ್ ಮಹೇಶ್ವರಿ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಏರು ಎತ್ತರಕ್ಕೆ! ಎಷ್ಟೆಂದರೆ ಎಷ್ಟು ಎತ್ತರವೋ ಗಗನ!

ನೋಡು ಇಡೀ ವಿಶ್ವವನ್ನು ಒಂದೇ ದೃಷ್ಟಿಯಿಂದ 
ಸಿಂಚಿಸು ಧರೆಯನ್ನು ಸಮತಾವೃಷ್ಟಿಯಿಂದ 
ಜಾತಿ ದ್ವೇಷಗಳ, ಧರ್ಮ ವೇಷಗಳ 
ಕಪ್ಪು-ಬಿಳುಪು ರಾಗ ರೋಷಗಳ 
ಜ್ವಾಲೆಯಲ್ಲಿ ಹೊತ್ತುರಿಯುವ ಜಗದಲ್ಲಿ 
ಹರಿದು ಬಾ ತಣ್ಣಗೆ! ಹೇಗೆಂದರೆ ಹೇಗೆ ಹರಿಯುವುದೋ ಮಲಯ ಪವನ!

ಹೊಸ ಕೈಗಳಿಂದ ರೂಪಿಸು ವರ್ತಮಾನವನ್ನು 

ತುಂಬಿಸು ಹೊಸ ಕುಂಚದಿಂದ ಚಿತ್ರಗಳಿಗೆ ಬಣ್ಣ 
ಹೊಸರಾಗಕ್ಕೆ ನವಸ್ವರವನ್ನಿತ್ತು 
ಭಾಷೆಗೆ ಹೊಸ ಅಕ್ಷರವನ್ನಿತ್ತು 
ಯುಗದ ಹೊಸ ರೂಪರಚನೆಯಲ್ಲಿ 
ಮೌಲಿಕವಾಗು! ಎಷ್ಟೆಂದರೆ ಎಷ್ಟು ಮೌಲಿಕವಾಗಿದೆಯೋ ಸೃಜನ!

ಅತೀತದಿಂದ ಅಷ್ಟೇ ತೆಗೆದುಕೋ ಎಷ್ಟು ಪೋಷಕವೋ

ಜೀರ್ಣ ಶೀರ್ಣದ ಮೋಹ ಮೃತ್ಯುವಿನದೇ ದ್ಯೋತಕವೋ!
ಮುರಿದು ಹಾಕು ಬಂಧನ 
ನಿಲ್ಲದಿರಲಿ ಚಿಂತನ 
ಶಾಶ್ವತ ಜೀವನದ ಚಿರಂತನ ಪ್ರವಾಹದಲ್ಲಿ 
ಗತಿಮಯವಾಗು! ಎಷ್ಟೆಂದರೆ ಎಷ್ಟು ಗತಿಮಯವಾಗಿದೆಯೋ ಪರಿವರ್ತನ!

ಧರೆಯನ್ನು ಸ್ವರ್ಗಸಮಾನ ಮಾಡಲು ಹೊರಟಿದ್ದೇವೆ 
ಕಟ್ಟಲು ಹೊರಟಿದ್ದೇವೆ ಸ್ವರ್ಗಕ್ಕೂ ಧರೆಗೂ ಸೇತುವೆ 
ಸೂರ್ಯ ಚಂದ್ರ ಬೆಳದಿಂಗಳು ತಾರೆ 
ನಮಗೆ ಪ್ರತಿಕ್ಷಣವೂ ಆಸರೆ 
ನೀಡು  ಕುರೂಪಕ್ಕೂ ಸ್ಫುರದ್ರೂಪವನ್ನು 
ಸುಂದರನಾಗು! ಎಷ್ಟೆಂದರೆ ಎಷ್ಟು ಸುಂದರವೋ ಆಕರ್ಷಣ! 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)