ರಹೀಮನ ಹತ್ತು ದ್ವಿಪದಿಗಳು


ಮೂಲ (ಹಿಂದಿ) : ರಹೀಮ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಅಕ್ಬ್ಹರ್ ಬಾದಶಾಹನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ರಹೀಮನೂ ಒಬ್ಬ. ಅಕ್ಬರನ ಕಾಲದಲ್ಲಿ ಆಸ್ಥಾನದ ಕೆಲಸಗಳ ಮೇಲುಸ್ತುವಾರಿಕೆ ನೋಡಿಕೊಳ್ಳುತ್ತಿದ್ದ ಬೈರಾಮ್ ಖಾನ್ ಎಂಬುವನ ಮಗ ಅಬ್ದುಲ್ ರಹೀಮ್.  ಮುಂದೆ ಗುಜರಾತಿನಲ್ಲಿ ಬೈರಾಮ್ ಖಾನನ ಕೊಲೆಯಾದಾಗ ಅವನ ಹೆಂಡತಿಯನ್ನು ಅಕ್ಬರನೇ ಪತ್ನಿಯಾಗಿ ಸ್ವೀಕರಿಸಿದನಂತೆ. ಹೀಗಾಗಿ ರಹೀಮ ಅಕ್ಬರನ ಮಲಮಗ.

ಇಸ್ಲಾಂ ಧರ್ಮದ ಅನುಯಾಯಿಯಾದರೂ ರಹೀಮನು ಶ್ರೀಕೃಷ್ಣನ ಭಕ್ತನಾಗಿದ್ದ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಈ ಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ಎರಡು ಗ್ರಂಥಗಳನ್ನು ರಚಿಸಿದ್ದಾನೆ. ದಾನಶೂರನೆಂಬ ಹೆಸರನ್ನು ಪಡೆದುಕೊಂಡಿದ್ದ ರಹೀಮ ಯಾರಿಗಾದರೂ ದಾನ ನೀಡುವಾಗ ದಾನ ಪಡೆಯುವವರ ಕಡೆ ನೇರವಾಗಿ ನೋಡದೆ ದೃಷ್ಟಿಯನ್ನು ಕೆಳಗೆ ಹಾಕುತ್ತಿದ್ದನಂತೆ. ಇದನ್ನು ಅರಿತ ಶ್ರೀ ತುಲಸೀ ದಾಸರು ರಹೀಮನಿಗೆ ಹೀಗೆ ಬರೆದು ಕಳಿಸಿದರಂತೆ:

ಎಲ್ಲಿಂದ ಕಲಿತಿರಯ್ಯ ನೀವು ದಾನ ನೀಡುವ ಪರಿಯನ್ನು?
ಕೊಡಲೆಂದು ಮೇಲಕ್ಕೆ ಎತ್ತಿದ ಕೈ, ಕೆಳಗೆ ನೋಡುತ್ತಿವೆ ಕಣ್ಣು ॥

ತುಲಸೀದಾಸರಿಗೆ ಉತ್ತರ ಗೊತ್ತಿದ್ದರೂ ತನ್ನನ್ನು ಪರೀಕ್ಷಿಸುತ್ತಿದ್ದಾರೆಂದು ರಹೀಮನಿಗೆ ಗೊತ್ತಿತ್ತು. ಅವನು ಅವರಿಗೆ ಹೀಗೆ ಜವಾಬು ಕಳಿಸಿದನಂತೆ:

ಕೊಡುವವನು ಯಾರೋ ಬೇರೆ, ಕೊಡುತಿಹನು ಕೈ ತುಂಬ ದಾನ ಹಗಲಿರುಳೂ
ನಾ ಕೊಟ್ಟೆನೆಂದು ಜನರು ಭ್ರಮಿಸುವರೆಂಬ ಲಜ್ಜೆಯಲಿ ನೆಲವನ್ನು ನೋಡುವುದು ಕಣ್ಣು ॥

ಅಕ್ಬರನ ಮರಣದ ತರುವಾಯ ಜಹಾಂಗೀರ್ ಪಟ್ಟವೇರುವುದನ್ನು ರಹೀಮ ವಿರೋಧಿಸಿದ. ಈ ಕಾರಣಕ್ಕೆ ಜಹಾಂಗೀರ್ ರಹೀಮನ ಇಬ್ಬರು ಗಂಡು ಮಕ್ಕಳನ್ನು ಕೊಲ್ಲಿಸಿ ಅವರ ದೇಹಗಳನ್ನು ಖೂನೀ ದರ್ವಾಜಾ ಎಂಬ ಕಡೆ ಕೊಳೆಯಲು ಎಸೆದನೆಂಬ ಪ್ರತೀತಿ ಇದೆ.

ರಹೀಮನ ದ್ವಿಪದಿಗಳು ಇಂದಿಗೂ ಜನಪ್ರಿಯವಾಗಿವೆ. ಕೆಲವು ದ್ವಿಪದಿಗಳ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.


ಸಿಕ್ಕಿತೆಂದು ದೊಡ್ಡವರ ಸಂಗ ಬಿಡದಿರು ಸಣ್ಣವರನ್ನ 
ಖಡ್ಗವು ಮಾಡುವುದೇನೋ ರಹೀಮ ಸೂಜಿಯು ಮಾಡುವುದನ್ನ? ॥೧ ॥ 

ದೊಡ್ಡವರೆಂದೂ ಹೇಳಿಕೊಳ್ಳರು;  ಆಡರು ತಮ್ಮನ್ನು ಕುರಿತು 
ರಹೀಮ! ವಜ್ರವು ಹೇಳುತ ತಿರುಗುವುದೇ ಲಕ್ಷದ ಬೆಲೆ ತನದೆಂದು? ॥೨॥ 

ರಹೀಮ! ಜಗದೊಳಗೆ ಎಲ್ಲರನ್ನೂ ಆದರಿಸಿ ನಡೆ!

ಯಾವ ರೂಪದಲ್ಲಿ ನಾರಾಯಣ ಬರುವನೋ ಎದುರುಗಡೆ!  ॥೩॥ 

ಚಿಕ್ಕವರೆಂದರೆ ದೊಡ್ಡವರನ್ನು ಹಿರಿಮೆ ಕರಗದೊಂದಿಷ್ಟೂ 

ಗಿರಿಧರನನು ಮುರಲೀಧರನೆಂದರೆ ದುಃಖವಿಲ್ಲ ಕಿಂಚಿತ್ತೂ    ॥೪॥ 

ಪ್ರೇಮದ ಸೂತ್ರವು ಸೂಕ್ಷ್ಮ ರಹೀಮ!  ಕಡಿಯದಿರು ಅದನೆಂದೂ 
ಕಡಿದರೆ ಮತ್ತೆ ಜೋಡಿಸಲಾಗದು; ಜೋಡಿಸಿಟ್ಟರೂ ಗಂಟು! ॥೫॥ 

ಸೌತೆಯ ತುದಿಯನು ಕತ್ತರಿಸಿ ಉಪ್ಪು ಉಜ್ಜುವರು ನೋಡು 

ರಹೀಮ! ಕಹಿ ಮಾತಾಡುವ ನಾಲಗೆಗೂ ಅದೇ ಶಿಕ್ಷೆಯನು ನೀಡು  ॥೬॥ 

ಈ ಮನಸೊಂದು ಜರಡಿ ರಹೀಮ! ಮಿತ್ರರ ಆರಿಸಲಿದನ್ನು ಬಳಸು 

ಲಘುವಾದವರನು ತೂರಿಬಿಡು; ಇಟ್ಟುಕೋ ಬಳಿಯಲ್ಲಿ ಗಟ್ಟಿಕಾಳು  ॥೭॥ 

ಕೆಟ್ಟವರ ಸಂಗದೊಳು ಉತ್ತಮವು ಕೆಡುವುದೇ ?

ರಹೀಮ! ಶ್ರೀಗಂಧವನು ನೋಡು! ವಿಷಸರ್ಪ ಸುತ್ತಿದೆ! ॥೮॥ 

ಸಂಪತ್ತು ದೊರೆತಾಗ ಬರುವರು ಎಷ್ಟೋ ಜನ ಹತ್ತಿರ 

ರಹೀಮ! ವಿಪತ್ತಿನಲ್ಲೂ ಬಿಟ್ಟು ಹೋಗದವನು ನಿಜವಾದ ಮಿತ್ರ  ॥೯॥ 

ಸತ್ತನೆಂದೇ ತಿಳಿ ರಹೀಮ, ಬೇಡಲು ಹೊರಟವನು ತಿರುಪೆ 

ಇಲ್ಲವೆಂದು ಕೈಯಾಡಿಸಿದವನು ಸತ್ತ ಅವನಿಗೂ ಮೊದಲೇ  ॥೧೦॥ 

(c) ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)