ಅಮ್ಮಾ ಹೇಳೊಂದು ಕಥೆ!


ಅಮ್ಮಾ ಹೇಳೊಂದು ಕಥೆ!

ಮೂಲ ಹಿಂದಿ ಕವಿತೆ: ಮೈಥಿಲಿಶರಣ ಗುಪ್ತ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

(ಹಿಂದಿಯಲ್ಲಿ ಮೈಥಿಲಿಶರಣ ಗುಪ್ತ ಅವರದ್ದು ದೊಡ್ಡ ಹೆಸರು. ಗೌತಮ ಬುದ್ಧನ ಜೀವನದಲ್ಲಿ ಬರುವ ಕಥೆಯನ್ನು ಆಧರಿಸಿದ ಈ ಕಥನ ಕವನ ಅವರ ಪ್ರಸಿದ್ಧ ರಚನೆ. ಗೌತಮನ ಮಗ ರಾಹುಲ ತನ್ನ ತಾಯಿ ಯಶೋಧರೆಯನ್ನು ಕಥೆಗಾಗಿ ಪೀಡಿಸುತ್ತಾನೆ. ಅಮ್ಮಾ ಹೇಳೊಂದು ಕತೆ! ಈ ಕವಿತೆಯ ಛಂದಸ್ಸು ವಿಶಿಷ್ಟವಾಗಿದೆ.)


"ಅಮ್ಮಾ ಹೇಳೊಂದು ಕತೆ!"

ಅಜ್ಜಿ ಎಂದುಕೊಂಡೆಯೋ ಏನು ಕತೆ?

"ಅಜ್ಜಿಯಲ್ಲ! ಅಜ್ಜಿಯ ಮಗಳು!
 ದಾದಿಯೇ ಈ ಸಂಗತಿ ಹೇಳಿದಳು!
 ತಲೆದಿಂಬಾಗಿದೆ ನಿನ್ನಯ ತೋಳು 
 ಹೀಗೇ ಮಲಗಿರುವಾಗಲೆ ಹೇಳು 
 ರಾಜನದೋ ರಾಣಿಯದೋ ಗಾಥೆ!
 ಅಮ್ಮಾ ಹೇಳೊಂದು ಕತೆ!"

ನಿನ್ನ ಹಠವೇ ನಡೆಯಲಿ ಇಂದು!
ಉಪವನದಲ್ಲಿ ಬೆಳಗಾಗಂದು 
ನಿನ್ನ ತಂದೆ ಹೊರಟಿದ್ದರು ಮಿಂದು 
ಬೆಳಗಿನ ವಾಯುಭ್ರಮಣಕ್ಕೆಂದು ... 
ಎಲ್ಲೆಡೆ ಹೂ-ಪರಿಮಳ-ಮಾದಕತೆ!

"ಹರಡಿದ ಹೂ-ಪರಿಮಳ-ಮಾದಕತೆ!
ಮನೋಹರವಾಗಿದೆ  ನಿನ್ನ ಕತೆ!"

ಬಣ್ಣಬಣ್ಣಗಳ ಹೂಗಳು ಅರಳಿ 
ಹಿಮಬಿಂದುಗಳಿವೆ ಕುಸುಮಗಳಲ್ಲಿ
ಮೆಲ್ಲನೆ ಬೀಸುತ್ತಿದೆ ತಂಗಾಳಿ 
ಹರಿಯುತ್ತಿದೆ ತೊರೆ, ಜುಳುಜುಳು ವಾಣಿ!
ಬಣ್ಣಿಸಲಾರೆನು ಮೋಹಕತೆ!

"ಓಹೋ! ಹರಿಯುವ ತೊರೆಯಂತೆ!
 ನನಗಾಗಲೇ ಇಷ್ಟವಾಯ್ತು ಕತೆ!"

ನಭದಲಿ ಖಗಗಳ ಕಲರವವಿತ್ತು
ಒಮ್ಮೆಲೇ ಮೇಲಿಂದೇನೋ ಬಿತ್ತು!
ಶ್ವೇತಹಂಸ! ಹಾ! ಬಾಣಕೆ ತುತ್ತು!
ಅಯ್ಯೋ ಕೊಂಡೊಯ್ಯುವುದೇ ಮಿತ್ತು!
ಪಕ್ಷಿಯು ವಿಲಿವಿಲಿ ಒದ್ದಾಡುತಿದೆ!

"ಅಯ್ಯೋ ಸಾವನ್ನಪ್ಪುವುದೇ?
 ಕರುಣಾರಸ ತುಂಬಿರುವ ಕತೆ!"

ಸಲಹಿದರೊಡನೆಯೆ ಕೈಯಲ್ಲೆತ್ತಿ 
ಮರುಜನ್ಮಕೆ ಕಣ್ತೆರೆಯಿತು ಹಕ್ಕಿ 
ಅಷ್ಟರಲ್ಲಿ ಬೇಡನು ದನಿಯೆತ್ತಿ 
ನಾ ಹೊಡೆದುದು! ಕೊಡು! ನನ್ನದು ಪಕ್ಷಿ! 
ಎನ್ನುತ ಬಂದನು ಹೊತ್ತು ತಗಾದೆ!

"ಬೇಡನು ಹಕ್ಕಿಯ ಬೇಡಿದನಂತೆ!
 ಅಬ್ಬಾ ಕೋಮಲ ಕಠಿನ ಕತೆ!"

ನಾನುರುಳಿಸಿದೆ! ನನ್ನಯ ಹಕ್ಕು!
ಎನ್ನುತ ಬೇಡನು ತೋರಿದ ಸೊಕ್ಕು!
ನಿನ್ನ ತಂದೆಯೂ ಬಿಡದೇ ಪಟ್ಟು 
ನಾನುಳಿಸಿದೆ! ಇದು ನನ್ನಯ ಸ್ವತ್ತು!
ಎನ್ನುತ ನಿಂತರು ರಕ್ಷಣೆಗೆ!

"ಬಾರಿಸುತ್ತಿಹುದು ಕದನದ ಗಂಟೆ!
 ಈಗ ಹಾರುವುದು ನೋಡು ಕತೆ!"

ಸೇರಿದ ಜನರೂ ಕಕ್ಕಾಬಿಕ್ಕಿ!
ಸೇರಬೇಕು ಯಾರಿಗೆ ಈ ಹಕ್ಕಿ?
ಸಿಗುವುದು ನ್ಯಾಯಾಲಯದಲಿ ಮುಕ್ತಿ!
ನಡೆಯಿರಿ ಇಬ್ಬರೂ ಕಟಕಟೆ ಹತ್ತಿ!
ಕರೆದೊಯ್ದರು ರಾಜನ ಬಳಿಗೆ!

"ಮಾತು ನ್ಯಾಯಾಲಯಕೆ ಹೋಯಿತೆ?
 ವ್ಯಾಪಕವಾಯಿತು ನಮ್ಮ ಕತೆ!"

 ರಾಹುಲ, ನೀನೇ ಮಾಡುವೆಯಾ ತೀರ್ಮಾನ?
 ಯಾರ ಪಕ್ಷ ವಹಿಸುವೆ ನೋಡೋಣ!

"ನನ್ನ ಮಾತು ನಡೆಯುವುದೇನು?
 ಕತೆ ಕೇಳುತ್ತಿಹ ಮುಗ್ಧನು ನಾನು!
 ನಿರಪರಾಧಿಯನು ಕೊಂದವರನ್ನು 
 ನ್ಯಾಯವೇಕೆ ರಕ್ಷಿಸುವುದು ಹೇಳು!
 ಕೊಡುವೆನು ಭಕ್ಷಕನಿಗೆ ಶಿಕ್ಷೆ!
 ಮತ್ತು ರಕ್ಷಕನಿಗೆ ಶ್ರೀರಕ್ಷೆ!"


 "ನ್ಯಾಯದ ಬುನಾದಿಶಿಲೆಯೇ ದಯೆ!
 ಮಗೂ! ನಿನಗೆ ಅರ್ಥವಾಯ್ತು ಕತೆ!"


(ಪದಗಳ ಅರ್ಥ: ಮಿತ್ತು = ಮೃತ್ಯು, ತಗಾದೆ: ಜಗಳ, ಬುನಾದಿ: ಅಡಿಪಾಯ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)