ಪತಿತೆ

 ಮೂಲ: ಥಾಮಸ್ ಹಾರ್ಡಿ

ಕನ್ನಡಕ್ಕೆ: ಸಿ. ಪಿ. ರವಿಕುಮಾರ್


“ಓಹ್ ಅಮೀಲಿಯಾ! ಇದಕ್ಕಿಂತಲೂ ಹೇಳು ವೈಚಿತ್ರ್ಯ ಇದ್ದೀತೆ ಒಂದು!
ಕನಸಿನಲ್ಲೂ ಎಣಿಸಿರಲಿಲ್ಲ ಪಟ್ಟಣದಲ್ಲಿ ನಿನ್ನನ್ನು ಭೇಟಿಯಾಗುವೆನೆಂದು!
ಎಷ್ಟು ಬೆಲೆ ಬಾಳುವ ಬಟ್ಟೆ ಧರಿಸಿರುವೆ, ಏನು ಕತೆ!”
“ಗೊತ್ತಿರಲಿಲ್ಲವೇ ನಿನಗೆ ನಾನೊಬ್ಬ ಪತಿತೆ.”

“ಹಳ್ಳಿ ಬಿಟ್ಟು ಹೊರಟೆ ಬರಿಗಾಲಲ್ಲಿ, ಚಿಂದಿ ತೊಟ್ಟು.
ಹೊಲದಲ್ಲಿ ಕೆಲಸ ಮಾಡಿ ಮಾಡಿ ಕಂಗೆಟ್ಟು.
ಈಗ ಕೈಗೆ ಬಳೆ, ಕಿವಿಗೆ ಲೋಲಾಕು, ಚೈನು ಕುತ್ತಿಗೆಗೆ.”
“ಹೌದು, ಪತಿತರು ತೊಡುವುದು ಇಂಥದ್ದೇ ಉಡುಗೆ.”

“ಐತೆ, ಪೈತೆ ಎಂದೆಲ್ಲ ಮಾತಾಡುತ್ತಿದ್ದೆ.
ಪಿಸಪಿಸ ಏನೋ ಹೇಳಿ ಕಿಸಿಕಿಸಿ ನಗುತ್ತಿದ್ದೆ!
ಈಗೆಷ್ಟು ಸುಧಾರಿಸಿದೆ ನಿನ್ನ ಭಾಷೆ, ನಡತೆ!”
“ನಾಜೂಕು ಕಲಿಯುವಳು ಪ್ರತಿಯೊಬ್ಬ ಪತಿತೆ”

“ನಿನ್ನ ಕೈಗಳು ಎಷ್ಟು ಒರಟಾಗಿದ್ದವು ಹೆಣ್ಣೇ!
ಮುಖದಲ್ಲೋ ಸುರಿಯುತ್ತಿರುತ್ತಿತ್ತು ಎಣ್ಣೆ!
ಈಗಲೋ ಕಾಣುತ್ತಿರುವೆ ಬಿಂಕದ ಸಿಂಗಾರಿಯಂತೆ.”
“ಪತಿತೆಗೆ ಇರದು ಯಾವ ಕೆಲಸಬೊಗಸೆಗಳ ತಂಟೆ.”

“ಮನೆಗೆಲಸವೆಂದರೆ ಕೆಟ್ಟ ಕನಸೆನ್ನುತ್ತಿದ್ದೆ.
ದೂರುತ್ತಿದ್ದೆ ದುರ್ವಿಧಿ ಎಂದು, ನಿಡುಸುಯ್ಯುತ್ತಿದ್ದೆ.
ಈಗ ಪಡೆದಿರುವಂತಿದೆ ನೀನು ನಿಶ್ಚಿಂತೆ.”
“ನಿಜ! ಉಲ್ಲಾಸದಿಂದಿರುವಳು ಪ್ರತಿಯೊಬ್ಬ ಪತಿತೆ.”

“ನನಗೂ ಬೇಕೆನಿಸುವುದು ಇಂಥ ಮಕಮಲ್ ಪೋಷಾಕು.
ತೊಟ್ಟು ಪಟ್ಟಣದಲ್ಲಿ ಓಡಾಡಬೇಕು!”

“ಇಲ್ಲ, ನೀನೊಬ್ಬ ಹಳ್ಳಿಯ ಅಮಾಯಕ ಹೆಣ್ಣು,
ಪತಿತೆಯಲ್ಲದವಳು ಅಪೇಕ್ಷಿಸುವಂತಿಲ್ಲ ಇವನ್ನು."


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)