ವೆಸ್ಟ್ ಮಿನ್ಸ್ಟರ್ ಆಬೀ ಚರ್ಚ್ ಮೇಲೆ ರಚಿಸಿದ್ದು
ಮೂಲ: ವಿಲಿಯಂ ವರ್ಡ್ಸ್ವರ್ತ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಧರೆಯ ಮೇಲಿರಲಾರದು ಇದನ್ನು ಮೀರಿದ ಚೆಲುವು!
ಅರಸಿಕನೇ ಆಗಿರಬೇಕು ಇತ್ತ ಬೆಳೆಸಿದರೂ ಪಾದ
ಅರೆತಾಸು ನಿಂತು ಬೆರಗಾಗದವನು ಈ ನೋಟಕ್ಕೆ!
ಪುರವು ಹೊದ್ದಿರುವುದು ನಸುಕಿನ ಚೆಲುವನ್ನೀಗ
ಜರತಾರಿಯ ಮೇಲುದೆಯಂತೆ; ಮೌನ ಹಬ್ಬಿದೆ. ಗೋ
ಪುರಗಳು, ಮಂದಿರ, ರಂಗಸ್ಥಳ, ದೋಣಿಗಳು, ಎಲ್ಲವೂ
ತೆರೆದುಕೊಂಡಿವೆ ಮುಖಮಾಡಿ ಹೊಲಗಳಿಗೆ ಮೇಣ್ ಗಗನಕ್ಕೆ!
ಕೋರೈಸುತ್ತಿವೆ ಜಾಜ್ವಲ್ಯಮಾನವಾಗಿ ನಿಷ್ಕಲ್ಮಶ ಗಾಳಿಯಲ್ಲಿ.
ವಿರಮಿಸಿರಲಾರ ಹಿಂದೆಂದೂ ಹೀಗೆ ಬಾಲರವಿ
ಗಿರಿಗಳಲ್ಲಿ, ಕಣಿವೆಗಳಲ್ಲಿ, ಕಲ್ಲುಬಂಡೆಗಳ ಮೇಲೆ, ಎಲ್ಲೂ!
ಅರಿಯೆ ನಾನೂ ಅನುಭವಿಸಿ ಇಷ್ಟು ಆಳದ ಶಾಂತಿ!
ತೊರೆಯು ಹರಿಯುತ್ತಿದೆ ತನ್ನದೇ ಮಧುರಗತಿಯಲ್ಲಿ: ಮೈ
ಮರೆತು ಮಲಗಿದಂತೆ ತೋರುತ್ತಿವೆ ಮನೆಗಳ ಸಾಲುಗಳು;
ಧೀರೋದಾತ್ತ ಆ ಹೃದಯವೂ ಮಲಗಿಹುದು ಸ್ತಬ್ಧವಾಗಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ