ಚಿಕ್ಕಮ್ಮಂದಿರು

ಮೂಲ ಹಿಂದಿ ಕವಿತೆ - ಅನಾಮಿಕಾ 


ಕವಿಕಾವ್ಯ ಪರಿಚಯ - ಬಿಹಾರದ ಮುಜಫ್ಫುರ್ ಪುರದವರಾಡ ಅನಾಮಿಕಾ (1961-) ಹಿಂದಿಯ ಜನಪ್ರಿಯ ಕವಯಿತ್ರಿ.  ಇವರ ಹಲವಾರು ಕವನಸಂಗ್ರಹಗಳು ಪ್ರಕಟವಾಗಿವೆ.  ಇಂಗ್ಲಿಷ್ ಭಾಷೆಯಿಂದ ಹಿಂದಿಗೆ ಕವಿತೆಗಳನ್ನು ಅನುವಾದಿಸಿದ್ದಾರೆ. ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. 
L

ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ಮಳೆಯ ನಡುವೆ ಬಿಸಿಲಿನ ಹಾಗೆ ಬರುತ್ತಾರೆ ಇವರು
ಒಂದಿಷ್ಟು ಹೊತ್ತು, ಒಮ್ಮೆಲೇ
ಕೈಯಲ್ಲಿ ಹೆಣೆದ ಸ್ವೆಟರ್, ಕಾಮನಬಿಲ್ಲು, ಎಳ್ಳುಂಡೆ, ಭಾರೀಸೀರೆ 
ಹೊತ್ತುಕೊಂಡು ಬರುತ್ತಾರೆ ಉಡುಗೊರೆ 
ಉಯ್ಯಾಲೆ ತೂಗಲು.
ವಾಕರಿಸಿದ ಸದ್ದು ಹೇಗೋ ಪತ್ತೆಹಚ್ಚಿ 
ಹೊಟ್ಟೆಯ ಮೇಲೆ ಕೈಯಾಡಿಸಿ 
ಪಡೆದುಕೊಳ್ಳುತ್ತಾರೆ ಇಲ್ಲಿಯವರೆಗಿನ ವರದಿ 
ಋತುಚಕ್ರ, ಹಾಸಿಗೆ ಅನಂತರ ಚಿಲ್ಲರೆ ಖಿನ್ನತೆಗಳ ಸರದಿ. 
ಗುಡಿಸುತ್ತಾರೆ ಜೇಡರ ಬಲೆ, ಓರೆಯಾಗಿಡುತ್ತಾರೆ ಡಬ್ಬಿ,
ಸಿಕ್ಕಟ್ಟಿಗೆಯಿಂದ ಸಿಕ್ಕುಗಳನ್ನು ತೀಡಿ  ಬಿಡಿಸುತ್ತಾರೆ 
ಹೆಣೆಯುತ್ತಾರೆ ಜಡೆ-ಗಿಡೆ 
ಬೈಯುತ್ತಾರೆ - ನೀನೊಬ್ಬಳು 
ನಿನಗೆ ಯಾವಾಗಲೂ ಏನೋ ಖಯಾಲಿ 
ಕೂದಲಿನ ಸಿಕ್ಕು ಕೂಡಾ ಬಿಡಿಸಿಕೊಳ್ಳವಲ್ಲಿ. 
ಕೂದಲಿನ ನೆಪದಲ್ಲಿ  
ಜೀವನದ ಗಂಟುಗಳನ್ನು ಬಿಡಿಸುತ್ತಾರೆ 
ಪರಿಹಾಸ್ಯ ಮಾಡುತ್ತಲೇ ಹೇಳುತ್ತಾರೆ ಕಥೆಗಳು 
ನಗುತ್ತಾ ನಗಿಸುತ್ತಾ 
ತಗ್ಗಿದ ಧ್ವನಿಯಲ್ಲಿ ಹೇಳುತ್ತಾ ಹೋಗುತ್ತಾರೆ  
ಚಟ್ನಿ, ಉಪ್ಪಿನಕಾಯಿ, ಹೆಸರುಬೇಳೆ ವಡೆಯ ಜೊತೆಗೇ 
ಸಪ್ಪೆಯಾದ ಸಂಬಂಧಗಳನ್ನು 
ರುಚಿಕಟ್ಟಾಗಿ ಮಾಡುವ ವಿಧಾನ 
ಮತ್ತು ಬೇರಾರಿಗೂ ಕಾಣದ ಸಮಸ್ಯೆಗಳಿಗೆ 
ಗುಪ್ತ ಸಮಾಧಾನ 
ಕಣ್ಣಿನ ಕೆಳಗೆ ಯಾವುದರ ನೆರಳು 
ಮೆಲ್ಲಮೆಲ್ಲಗೆ ಹರಡುತ್ತದೋ 
ತಿಂಗಳುಗಟ್ಟಲೆ ಗರ್ಭದೊಳಗೆ  
ರಕ್ತದ ಕಣ್ಣೀರಾಗಿ 
ಮೌನವಾಗಿ ಹರಿಯುತ್ತದೋ  
ನಲವತ್ತರ ಆಸುಪಾಸಿನ ಒಂಟಿತನದ 
ಆ ಕಪ್ಪು ಕಲೆಗಳಿಗೆ 
ಚಿಕ್ಕಮ್ಮಂದಿರ ವೈದ್ಯವೆಂದರೆ 
ನಗು, ದುರ್ಗಾಪೂಜೆ, ಮತ್ತು 
ಇಡೀ ವಠಾರಕ್ಕೆ ಬಾಗಿನ ಇತ್ಯಾದಿ ತಾಯ್ತನ 
ಇಪ್ಪತ್ತನೇ ಶತಮಾನದ ಕಸದ ಗಾಡಿ 
ಹೊಲಗಳಿಂದ  ಬಾಚಿಕೊಂಡು 
ಹೊರಟುಹೋಯಿತು ನೋಡಿ 
ನಮ್ಮ ಜೀವನಕ್ಕೆ ಬೇಕಾದ ಹಲವು ಅಗತ್ಯ ವಸ್ತುಗಳನ್ನು -
ಚಿಕ್ಕಮ್ಮತನ, ಅತ್ತೆತನ, ಕಕ್ಕಿತನ 
ಇಡೀ ಭುವನದ ತಾಯ್ತ 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)