ಕುಳಿತಲ್ಲೇ ನನಗೆ ಕಾಣುತ್ತದೆ

 ಮೂಲ: ವಾಲ್ಟ್ ವ್ಹಿಟ್ಮನ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್




ಕುಳಿತಲ್ಲೇ ನನಗೆ ಕಾಣುತ್ತದೆ ಜಗತ್ತಿನ ಎಲ್ಲ ದುಃಖದುಮ್ಮಾನ, ಶೋಷಣೆ ಮತ್ತು ನಾಚಿಕೆಗೇಡಿತನ;
ಪಶ್ಚಾತ್ತಪದ ನೋವಿನಲ್ಲಿ ಯುವಕರು ರಹಸ್ಯವಾಗಿ ಬಿಕ್ಕುವುದು ಕೇಳುತ್ತದೆ;
ಮಕ್ಕಳಿಂದಲೇ ಜುಲುಮೆಗೊಳಗಾದ ತಾಯಿ ಶಿಥಿಲಳಾಗಿ ಹಪಹಪಿಸಿ ಸಾಯುವುದು ಕಾಣುತ್ತದೆ;
ಪತಿಯಿಂದ ಜುಲುಮೆಗೆ ಒಳಗಾದ ಪತ್ನಿಯ ನೋವು, ಹೆಣ್ಣುಗಳತ್ತ ಕಾಮುಕನ ದೃಷ್ಟಿಯ ಕಾವು ಕಾಣುತ್ತವೆ;
ಪ್ರತಿಸ್ಪಂದನೆಯಿಲ್ಲದ ಪ್ರೀತಿಯ ಹತಾಶೆ,  ಬಚ್ಚಿಟ್ಟ ಅಸೂಯೆಯ ಪರಿತಾಪಗಳು ಗೋಚರಿಸುತ್ತವೆ;
ಯುದ್ದದ ಕಾರ್ಯಾಚರಣೆಗಳು, ಮಹಾಮಾರಿ, ದಬ್ಬಾಳಿಕೆಗಳು ಬರುತ್ತವೆ ಕಣ್ಮುಂದೆ;
ಜೀವತೆತ್ತ ಹುತಾತ್ಮರು, ಕಾರಾಗೃಹದ ಬಂದಿಗಳು ಕಾಣಿಸಿಕೊಳ್ಳುತ್ತಾರೆ;
ಪಯಣ ಹೊರಟ ಹಡಗಿನಲ್ಲಿ ಉಂಟಾಗಿ ಕ್ಷಾಮ
ಯಾರನ್ನು  ಕೊಲ್ಲಬೇಕು ಉಳಿದವರನ್ನು ರಕ್ಷಿಸಲು
ನಿರ್ಧರಿಸಲು ಚೀಟಿ ಎತ್ತುವ ನಾವಿಕರ ದೃಶ್ಯ ಕಾಣುತ್ತದೆ;
ಊಳಿಗ ಮಾಡುವ ಜನರ ಮೇಲೆ, ಬಡವರ ಮೇಲೆ ನೀಗ್ರೋ ಜನಾಂಗದ ಮೇಲೆ
ಅಪಮಾನದ ಕೆಂಡ ಕಾರುವ ಜನರು ಕಾಣುತ್ತಾರೆ;
ಇವೆಲ್ಲಾ, ಕೊನೆಯಿಲ್ಲದ ಈ ಗೋಳು, ಈ ನೀಚತನ
ಎಲ್ಲವನ್ನೂ ನಾನು ನೋಡುತ್ತೇನೆ, ಕೇಳುತ್ತೇನೆ, ಮತ್ತು ವಹಿಸುತ್ತೇನೆ ಮೌನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)