ನಾನು ನೋಡಿದೆ ಲೂಯಿಸಿಯಾನಾದಲ್ಲೊಂದು ಓಕ್ ಮರ

ಮೂಲ: ವಾಲ್ಟ್ ವ್ಹಿಟ್ಮನ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ನಾನು ನೋಡಿದೆ ಲೂಯಿಸಿಯಾನಾದಲ್ಲೊಂದು ಓಕ್ ಮರ,
ಒಂಟಿಯಾಗಿ ನಿಂತ ಮರದ ರೆಂಬೆಗಳ ಮೇಲೆ ತೂಗುತ್ತಿದ್ದ ಬಿಳಿಗೂದಲಿನಂಥ ಹಾವಸೆ,
ಯಾವ ಒಡನಾಡಿ ಇಲ್ಲದೆ ಒಬ್ಬಂಟಿಯಾಗಿ ಬೆಳೆದುನಿಂತ ಮರ
ಕಡುಹಸಿರು ಬಣ್ಣದ ಸಂತಸಮಯ ಎಲೆಗಳನ್ನು ಉಚ್ಚರಿಸುತ್ತಿತ್ತು. 
ಅದರ ನಿಲುಮೆಯಲ್ಲಿದ್ದ ಒರಟುತನ, 
ಬಾಗಲಾರೆ ಎಂಬ ಧಾರ್ಷ್ಟ್ಯ, ಗಟ್ಟಿಮುಟ್ಟುತನ
ನೋಡಿ ನನಗೆ ನನ್ನದೇ ನೆನಪಾಯಿತು.
ಯೋಚಿಸಿದೆ, ಒಬ್ಬಂಟಿಯಾಗಿ ಯಾವ ಸ್ನೇಹಿತರೂ ಜೊತೆಗಿಲ್ಲದೆ
ಹೇಗೆ ಉಚ್ಚರಿಸುತ್ತಿದೆ ಮರ ಸಂತಸದ ಎಲೆಗಳನ್ನು?
ನನ್ನಿಂದಾಗದು.
ಮರದಿಂದ ಮುರಿದುಕೊಂಡೆ ಒಂದಿಷ್ಟು ಎಲೆಗಳಿದ್ದ ಒಂದು ಟೊಂಗೆ
ಅದಕ್ಕೆ ಸುತ್ತಿಕೊಂಡೆ ಒಂದಿಷ್ಟು ಬಿಳಿ ಹಾವಸೆ
ಮತ್ತು ಅದನ್ನು ತಂದು ಸ್ಥಾಪಿಸಿದೆ ನನ್ನ ಕೋಣೆಯಲ್ಲಿ
ನನಗೆ ಕಾಣುವ ಸ್ಥಳದಲ್ಲಿ.
ನನ್ನ ಆಪ್ತಮಿತ್ರರನ್ನು ನೆನಪಿಸಲು ನನಗಿದರ ಅಗತ್ಯವಿಲ್ಲ
ಈನಡುವೆ ಮಿತ್ರರಲ್ಲದೆ ನನ್ನ ಮನದಲ್ಲಿ ಅಂತಹ ಹೇಳಿಕೊಳ್ಳುವ ಯೋಚನೆಗಳಿಲ್ಲ
ಆದರೂ ಈ ಟೊಂಗೆ ನನಗೊಂದು ಸಂಕೇತವಾಗಿ ತೋರುತ್ತದೆ.
ಮನುಷ್ಯನ ಪ್ರೇಮದ ಸಂಕೇತ,
ಲೂಯಿಸಿಯಾನಾದ ಬಟಾಬಯಲಲ್ಲಿ  ಓಕ್ ಮರವು
ಯಾವ ಒಡನಾಡಿ ಯಾವ ಪ್ರೇಮಿಯೂ ಬಳಿಯಲ್ಲಿ ಇರದಿದ್ದರೂ
ನಳನಳಿಸುತ್ತಿರಬಹುದು
ಉಚ್ಚರಿಸುತ್ತಿರಬಹುದು ಸಂತಸಮಯ ಚಿಗುರು,
ನನಗೆ ಗೊತ್ತು ಅದು ನನ್ನಿಂದಾಗದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)