ನನ್ನಲ್ಲಿದ್ದಾಗ ಯೌವನಧನ ಮತ್ತು ಚೆಲುವು

 ಮೂಲ: ರಾಣಿ ಎಲಿಜಬೆತ್ ೧
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ನನ್ನಲ್ಲಿ ಇದ್ದಾಗ ಯೌವ್ವನಧನ ಮತ್ತು ಚೆಲುವು
ಕಣ್ಣುಗಳು ತಿರುಗುತ್ತಿದ್ದವು ನನ್ನೆಡೆ ಒಂದಲ್ಲ ಹಲವು
ನೋಟದಲ್ಲಿ ನನ್ನವಳಾಗುವೆಯಾ ಎಂಬ ಯಾಚನೆ
ಮಾಟಕ್ಕೆ ಮರುಳಾದವರಿಗೆಲ್ಲ ನನ್ನದೊಂದೇ ಸೂಚನೆ:
ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ
ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು!

ಎಷ್ಟು ಕಣ್ಣುಗಳಲ್ಲಿ  ಹರಿಸಿದೆನೋ ಅಶ್ರುಧಾರೆ
ಒಡೆದೆನೋ ಎಷ್ಟು ಹೃದಯಗಳನ್ನು, ಹೇಳಲಾರೆ
ಒಲವನ್ನು ಬೇಡಿ ಬಳಿಸಾರಿ ಬಂದವರಿಗೆಲ್ಲ
ಗರ್ವದಿಂದ ಹೀಗೆ ಹೇಳಿ ಕಳಿಸಿದೆನಲ್ಲ:
ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ
ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು!

ನಂತರ ನನ್ನನ್ನು ನೋಡಲು ಬಂದನೊಬ್ಬ ಚೆಲುವ
ಶುಕ್ರದೇವನ ಪುತ್ರ, ಮುಖದಲ್ಲಿ ಸೂಸುತ್ತಾ ಗೆಲುವ
ಓ ನಾಜೂಕು ಪುತ್ಥಳಿಯೇ ಸಾಕು ಈ ಬಿನ್ನಾಣ, ಈ ಸೋಗು,
ಕಿತ್ತುಬಿಡುವೆನು ನಿನ್ನ ಪುಕ್ಕ, ಈಗ ಹೇಳಿಕೋ ಹೋಗು
ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ
ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು!

ಅವನು ಈ ಮಾತುಗಳ ಪೂರೈಸಿದ ಕೂಡಲೇ
ನನ್ನೆದೆಯಲ್ಲಿ ಏನೋ ಉಂಟಾಯ್ತು ಪರಿವರ್ತನೆ
ಪಶ್ಚಾತ್ತಾಪದಲ್ಲಿ ಹೊರಳಾಡಿದೆ ಬಾರದೇ ನಿದ್ದೆ
ಹಿಂದೆಷ್ಟು ಜನರನ್ನು ತಿರಸ್ಕರಿಸಿ ಕಳಿಸಿದ್ದೆ
ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ
ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)