ಇಲ್ಲಿ ಯಾರೂ ಮುಖ್ಯರಲ್ಲ
ಸಿ ಪಿ ರವಿಕುಮಾರ್ ಇಲ್ಲಿ ಯಾರೂ ಮುಖ್ಯರಲ್ಲ! ಯಾರೂ ಅಮುಖ್ಯರಲ್ಲ! ಯಾವುದೂ ಯ:ಕಶ್ಚಿತವಲ್ಲ! ಹೀಗೆ ಕುವೆಂಪು ಬರೆದಿದ್ದನ್ನು "ಇಲ್ಲಿ ಯಾರೂ ಮುಖ್ಯರಿಲ್ಲ, ಯಾರೂ ಅಮುಖ್ಯರಿಲ್ಲ, ಯಾವುದೂ ಯಃಕಶ್ಚಿತವಲ್ಲ" ಎಂದು ತಿದ್ದಿಕೊಂಡರೆ ಅದು ಟ್ವಿಟ್ಟರಿಗೆ ಅನ್ವಯವಾಗುತ್ತದೆ. ನೋಡಿ, ಇಲಾನ್ ಮಸ್ಕ್ ಸುಮಾರು ನಲವತ್ತನಾಲ್ಕು ಬಿಲಿಯನ್ ಡಾಲರ್ ಕೊಟ್ಟು ಟ್ವಿಟ್ಟರನ್ನು ಕೊಂಡುಕೊಂಡರೂ ಅವರನ್ನು ಸೀಈಓ ಪದವಿಯಿಂದ ಕೆಳಗೆ ಇಳಿಸಿಯೇ ಬಿಟ್ಟರು. ಈಗ ಮುಂದಿನ ಸೀಈಓ ಯಾರು ಎಂಬುದಕ್ಕೆ ಎಲ್ಲರೂ ನಾಮುಂದು ತಾಮುಂದು ಎಂದು ನುಗ್ಗುತ್ತಿದ್ದಾರೆ. "ಇಲ್ಲಿ ಯಾರೂ ಅಮುಖ್ಯರಲ್ಲ" ಎಂದು ತಿಳಿದ ತಕ್ಷಣವೇ ನಾನೂ ಅರ್ಜಿ ಹಾಕಿದ್ದೇನೆ. ಇದನ್ನು ನಾನು ಎಷ್ಟೇ ಗುಟ್ಟಾಗಿ ಇಟ್ಟರೂ ಅವರಿಗೆ ಹೇಗೋ ಗೊತ್ತಾಗಿ ನನ್ನ ಫ್ರೆಂಡ್ಸ್ ವೆಂಕ, ಸೀನ ಮತ್ತು ನಾಣ ಕೂಡಾ ಅರ್ಜಿ ಕಳಿಸಿದ್ದಾರೆ. ಅರ್ಜಿ ಹಾಕುವುದು ಕೂಡಾ ಈಗ ಕಷ್ಟವಲ್ಲ. ಟ್ವೀಟ್ ಮಾಡಿ ಅಲ್ಲಿ ಅಟ್ ಇಲಾನ್ ಮಸ್ಕ್ ಅಂತ ಹಾಕಿಬಿಟ್ಟರೆ ಸಾಕು. ಇಲಾನ್ ಮಸ್ಕ್ ತಮಗೆ ಬಂದ ನಲವತ್ತನಾಲ್ಕು ಬಿಲಿಯನ್ ಅರ್ಜಿಗಳನ್ನು "ಇಲ್ಲಿ ಯಾವುದೂ ಯಃಕಶ್ಚಿತವಲ್ಲ" ಎಂದು ನೋಡುತ್ತಾ ದಿನವಿಡೀ ಕೂತಿರುತ್ತಾರೆ. ಹೀಗಾಗಿ ಅವರು ತಮ್ಮ ಮಗು X Æ A-Xii ನೋಡಿಕೊಳ್ಳಲು ಏನೇನೂ ಸಹಾಯ ಮಾಡುತ್ತಿಲ್ಲ ಎಂದು ಅವರ ಹೆಂಡತಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ಯಾವುದಕ್ಕೂ ಮೊದಲಿಲ್ಲ! ಯಾವುದಕ್ಕೂ ತುದಿಯಿಲ್ಲ! ಯಾವುದೂ ಎಲ್ಲ...