ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪತಿತೆ

ಇಮೇಜ್
  ಮೂಲ: ಥಾಮಸ್ ಹಾರ್ಡಿ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ “ಓಹ್ ಅಮೀಲಿಯಾ! ಇದಕ್ಕಿಂತಲೂ ಹೇಳು ವೈಚಿತ್ರ್ಯ ಇದ್ದೀತೆ ಒಂದು! ಕನಸಿನಲ್ಲೂ ಎಣಿಸಿರಲಿಲ್ಲ ಪಟ್ಟಣದಲ್ಲಿ ನಿನ್ನನ್ನು ಭೇಟಿಯಾಗುವೆನೆಂದು! ಎಷ್ಟು ಬೆಲೆ ಬಾಳುವ ಬಟ್ಟೆ ಧರಿಸಿರುವೆ, ಏನು ಕತೆ!” “ಗೊತ್ತಿರಲಿಲ್ಲವೇ ನಿನಗೆ ನಾನೊಬ್ಬ ಪತಿತೆ.” “ಹಳ್ಳಿ ಬಿಟ್ಟು ಹೊರಟೆ ಬರಿಗಾಲಲ್ಲಿ, ಚಿಂದಿ ತೊಟ್ಟು. ಹೊಲದಲ್ಲಿ ಕೆಲಸ ಮಾಡಿ ಮಾಡಿ ಕಂಗೆಟ್ಟು. ಈಗ ಕೈಗೆ ಬಳೆ, ಕಿವಿಗೆ ಲೋಲಾಕು, ಚೈನು ಕುತ್ತಿಗೆಗೆ.” “ಹೌದು, ಪತಿತರು ತೊಡುವುದು ಇಂಥದ್ದೇ ಉಡುಗೆ.” “ಐತೆ, ಪೈತೆ ಎಂದೆಲ್ಲ ಮಾತಾಡುತ್ತಿದ್ದೆ. ಪಿಸಪಿಸ ಏನೋ ಹೇಳಿ ಕಿಸಿಕಿಸಿ ನಗುತ್ತಿದ್ದೆ! ಈಗೆಷ್ಟು ಸುಧಾರಿಸಿದೆ ನಿನ್ನ ಭಾಷೆ, ನಡತೆ!” “ನಾಜೂಕು ಕಲಿಯುವಳು ಪ್ರತಿಯೊಬ್ಬ ಪತಿತೆ” “ನಿನ್ನ ಕೈಗಳು ಎಷ್ಟು ಒರಟಾಗಿದ್ದವು ಹೆಣ್ಣೇ! ಮುಖದಲ್ಲೋ ಸುರಿಯುತ್ತಿರುತ್ತಿತ್ತು ಎಣ್ಣೆ! ಈಗಲೋ ಕಾಣುತ್ತಿರುವೆ ಬಿಂಕದ ಸಿಂಗಾರಿಯಂತೆ.” “ಪತಿತೆಗೆ ಇರದು ಯಾವ ಕೆಲಸಬೊಗಸೆಗಳ ತಂಟೆ.” “ಮನೆಗೆಲಸವೆಂದರೆ ಕೆಟ್ಟ ಕನಸೆನ್ನುತ್ತಿದ್ದೆ. ದೂರುತ್ತಿದ್ದೆ ದುರ್ವಿಧಿ ಎಂದು, ನಿಡುಸುಯ್ಯುತ್ತಿದ್ದೆ. ಈಗ ಪಡೆದಿರುವಂತಿದೆ ನೀನು ನಿಶ್ಚಿಂತೆ.” “ನಿಜ! ಉಲ್ಲಾಸದಿಂದಿರುವಳು ಪ್ರತಿಯೊಬ್ಬ ಪತಿತೆ.” “ನನಗೂ ಬೇಕೆನಿಸುವುದು ಇಂಥ ಮಕಮಲ್ ಪೋಷಾಕು. ತೊಟ್ಟು ಪಟ್ಟಣದಲ್ಲಿ ಓಡಾಡಬೇಕು!” “ಇಲ್ಲ, ನೀನೊಬ್ಬ ಹಳ್ಳಿಯ ಅಮಾಯಕ ಹೆಣ್ಣು, ಪತಿತೆಯಲ್ಲದವಳು ಅಪೇಕ್ಷಿಸುವ...

ಚಿಕ್ಕಮ್ಮಂದಿರು

ಇಮೇಜ್
ಮೂಲ ಹಿಂದಿ ಕವಿತೆ - ಅನಾಮಿಕಾ  ಕವಿಕಾವ್ಯ ಪರಿಚಯ - ಬಿಹಾರದ ಮುಜಫ್ಫುರ್ ಪುರದವರಾಡ ಅನಾಮಿಕಾ (1961-) ಹಿಂದಿಯ ಜನಪ್ರಿಯ ಕವಯಿತ್ರಿ.  ಇವರ ಹಲವಾರು ಕವನಸಂಗ್ರಹಗಳು ಪ್ರಕಟವಾಗಿವೆ.  ಇಂಗ್ಲಿಷ್ ಭಾಷೆಯಿಂದ ಹಿಂದಿಗೆ ಕವಿತೆಗಳನ್ನು ಅನುವಾದಿಸಿದ್ದಾರೆ. ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ.  L ಕನ್ನಡಕ್ಕೆ - ಸಿ ಪಿ ರವಿಕುಮಾರ್  ಮಳೆಯ ನಡುವೆ ಬಿಸಿಲಿನ ಹಾಗೆ ಬರುತ್ತಾರೆ ಇವರು ಒಂದಿಷ್ಟು ಹೊತ್ತು, ಒಮ್ಮೆಲೇ ಕೈಯಲ್ಲಿ ಹೆಣೆದ ಸ್ವೆಟರ್, ಕಾಮನಬಿಲ್ಲು, ಎಳ್ಳುಂಡೆ,  ಭಾರೀಸೀರೆ  ಹೊತ್ತುಕೊಂಡು ಬರುತ್ತಾರೆ ಉಡುಗೊರೆ  ಉಯ್ಯಾಲೆ ತೂಗಲು. ವಾಕರಿಸಿದ ಸದ್ದು  ಹೇಗೋ ಪತ್ತೆಹಚ್ಚಿ  ಹೊಟ್ಟೆಯ ಮೇಲೆ ಕೈಯಾಡಿಸಿ  ಪಡೆದುಕೊಳ್ಳುತ್ತಾರೆ ಇಲ್ಲಿಯವರೆಗಿನ ವರದಿ  ಋತುಚಕ್ರ, ಹಾಸಿಗೆ ಅನಂತರ ಚಿಲ್ಲರೆ ಖಿನ್ನತೆಗಳ ಸರದಿ.  ಗುಡಿಸುತ್ತಾರೆ ಜೇಡರ ಬಲೆ, ಓರೆಯಾಗಿಡುತ್ತಾರೆ ಡಬ್ಬಿ, ಸಿಕ್ಕಟ್ಟಿಗೆಯಿಂದ  ಸಿಕ್ಕುಗಳನ್ನು ತೀಡಿ  ಬಿಡಿಸುತ್ತಾರೆ  ಹೆಣೆಯುತ್ತಾರೆ ಜಡೆ-ಗಿಡೆ  ಬೈಯುತ್ತಾರೆ - ನೀನೊಬ್ಬಳು  ನಿನಗೆ ಯಾವಾಗಲೂ ಏನೋ ಖಯಾಲಿ  ಕೂದಲಿನ ಸಿಕ್ಕು ಕೂಡಾ ಬಿಡಿಸಿಕೊಳ್ಳವಲ್ಲಿ.  ಕೂದಲಿನ ನೆಪದಲ್ಲಿ   ಜೀವನದ ಗಂಟುಗಳನ್ನು ಬಿಡಿಸುತ್ತಾರೆ  ಪರಿಹಾಸ್ಯ ಮಾಡುತ್ತಲೇ ಹೇಳುತ್ತಾರೆ ಕಥೆಗಳು  ನಗುತ್ತಾ ...

ಒಂದು ಹಳೆಯ ನೀತಿಕಥೆ

ಇಮೇಜ್
 ಮೂಲ : ರಾಲ್ಫ್ ವಾಲ್ಡೋ ಎಮರ್ಸನ್ ಅನುವಾದ: ಸಿ. ಪಿ. ರವಿಕುಮಾರ್ ಬೆಟ್ಟಕ್ಕೂ ಅಳಿಲಿಗೂ ಜಗಳವಾಯಿತು ಒಮ್ಮೆ, ವಿಷಯ ಇಷ್ಟೇ ಪುಟ್ಟದಾದರೂ ನಿನಗೆ ಎಷ್ಟೋ ದುರಹಂಕಾರ ಎಂದಿತಂತೆ ಬೆಟ್ಟ. ಅಳಿಲು ನೀಡಿತು ಮಾರುತ್ತರ: ನೀನೇನೋ ಮಹಾಕಾಯ, ದಿಟ, ಹಲವು ಋತು ಹೇಗೋ ವರ್ಷದಲ್ಲಿ, ಹಲವು ಬಗೆ ವಸ್ತು ಭೂಮಿಯ ಸುತ್ತ. ನನ್ನ ಸ್ಥಾನದಲ್ಲಿ ನಾನಿರುವೆ, ನನಗೇನೂ ಕೀಳೆಂದು ಅನ್ನಿಸದು. ನಾನಿಲ್ಲದೇ ಇರಬಹುದು ನಿನ್ನಷ್ಟು ಅಗಾಧ, ನೀನೂ ಅಲ್ಲ ನನ್ನಷ್ಟು ಪುಟ್ಟ. ನನ್ನಷ್ಟು ಚುರುಕಂತೂ ಇಲ್ಲವೇ ಇಲ್ಲ, ಚಲಿಸಲೂ ಆಗದು ಅತ್ತಿತ್ತ. ನಿಸ್ಸಂಶಯ ನೀನು ಒಳ್ಳೆಯ ಆಡುಂಬೊಲ ಅಳಿಲುಗಳಿಗೆ ಓಡಾಡಲು ಸುತ್ತ. ಎಲ್ಲರೂ ಚೆನ್ನ ಅವರವರ ಸ್ಥಳದಲ್ಲಿ, ಎಲ್ಲರಿಗೂ ಅವರವರ ಪ್ರತಿಭೆ, ದೈವಚಿತ್ತ. ನಿನ್ನಂತೆ ನಾನು ಹೊರಲಾರೆ ಕಾನು, ನನ್ನಂತೆ ಕಾಯಿ ಹೊರಲಾರೆ ನೀನು.

ವನಸುಮ

ಇಮೇಜ್
ವನಸುಮ ಮೂಲ: ರಾಲ್ಫ್ ವಾಲ್ಡೋ ಎಮರ್ಸನ್ ಅನುವಾದ: ಸಿ.ಪಿ. ರವಿಕುಮಾರ್ ನನ್ನೆದೆಯ ಶಾಂತಿಯನ್ನು ಕದಡಿದಾಗ ಮೇ ತಿಂಗಳ ಕಡಲುಗಾಳಿ ಕಣ್ಣಿಗೆ ಬಿತ್ತು ಹೊಸದಾಗಿ ಅರಳಿದ ರೊಡೋರಾ ಕಾಡಿನಲ್ಲಿ, ಎಲೆಗಳೇ ಇಲ್ಲ, ದಳಗಳೇ ಎಲ್ಲಾ, ಅರಳಿದೆ ತೇವವುಳ್ಳ ಮೂಲೆಯಲ್ಲಿ, ಯಾರನ್ನು ಮೆಚ್ಚಿಸಲು? ಮೆಲ್ಲನೆ ಹರಿವ ತೊರೆಯೊಂದೇ ನಿರ್ಜನ ವನದಲ್ಲಿ. ಕೆನ್ನೀಲಿ ಬಣ್ಣದ ಹೂದಳಗಳು ಉದುರಿ ಕೆಳಗೆ ಬಿದ್ದಿವೆ, ಕಡುಗಪ್ಪು ನೀರಿಗೆ ತಂದಿತ್ತಿವೆ ಅಪೂರ್ವ ಶೋಭೆ, ದಾಹ ತಣಿಸಲು ಇಲ್ಲಿಗೆ ಬಂದ ಕೆಂಪು ಹಕ್ಕಿಯ ಪುಕ್ಕ ಶ್ರೀಮಂತಿಕೆಯನ್ನು ಕಳೆದುಕೊಳ್ಳದೇ ಹೂವಿನ ಪಕ್ಕ? ರೊಡೋರಾ! ಕೇಳಿದರೆ ನಿನ್ನನ್ನು ಯಾರಾದರೂ  ವಿವೇಕಮತಿಗಳು  ಹೀಗೇಕೆ ವ್ಯರ್ಥವಾಗಿದೆ ನಿನ್ನ  ಚೆಲುವೆಂದು ಹೀಗೆ ಹೇಳು: ನೋಡುವ ಕೆಲಸ ಕೊಟ್ಟಿದೆಯೋ ಹೇಗೆ ಸೃಷ್ಟಿ ಕಂಗಳಿಗೆ ಚೆಲುವಾಗಿರುವ ಕೆಲಸ ಕೊಟ್ಟಿದೆ ಚೆಲ್ವಿಕೆಗೆ ಹಾಗೇ. ಅಂದೇಕೆ ನೀನು ನನ್ನ ಕಣ್ಣಿಗೆ ಬಿದ್ದೆ? ತಿಳಿಯದೆ ಬುದ್ಧಿ ಕೇಳಲು ಮರೆತೆನಲ್ಲ  ಓ ಗುಲಾಬಿಯ ಪ್ರತಿಸ್ಪರ್ಧಿ! ನನ್ನ ಅಲ್ಪಮತಿಗೆ ತೋರುವುದು ಇಷ್ಟೇ: ನ ನ್ನನ್ನು ಅಲ್ಲಿಗೆ  ಕೊಂಡೊಯ್ದ ಶಕ್ತಿಯೇ ನಿನ್ನನ್ನು ಕರೆತಂದಿರಬಹುದು ಇಲ್ಲಿಗೆ.

ಪರಸ್ಪರರಿಗೆ ಓದಬೇಕಾದ ಸಂಪ್ರದಾಯದ ಓಲೆ

ಇಮೇಜ್
 ಮೂಲ ಕವಿತೆ: ವಿಲಿಯಂ ಸ್ಟಾಫರ್ಡ್ ಅನುವಾದ: ಸಿ. ಪಿ. ರವಿಕುಮಾರ್ ನಾನೆಂಥ ವ್ಯಕ್ತಿಯೆಂದು ಗೊತ್ತಿಲ್ಲದಿದ್ದರೆ ನಿನಗೆ ಮತ್ತು ನನಗೆ ಗೊತ್ತಿಲ್ಲದಿದ್ದರೆ ನೀನೆಂಥ ವ್ಯಕ್ತಿ ಎಂದು ತೋರುತ್ತವೆ ದಾರಿಯನ್ನು ಬೇರೆ ಯಾರೋ ಹಾಕಿದ ಗೆರೆ, ಹಾಗಾಗಿ ತಪ್ಪು ದೇವರನ್ನು ನಂಬಿಕೊಂಡು ನಾವು ಕಳೆದುಕೊಳ್ಳಬಹುದು ನಮ್ಮ ತಾರೆ. ಏಕೆಂದರೆ ಮನದಾಳದಲ್ಲಿ ಇರುತ್ತವೆ ಸಣ್ಣಪುಟ್ಟ ಮೋಸಗಳು, ಭುಜ ಕುಣಿಸಿದರೂ ಮುರಿಯುತ್ತದೆ ನಾಜೂಕು ಎಳೆ; ಬಾಲ್ಯದ ತಪ್ಪುಗಳು ಚೀತ್ಕರಿಸುತ್ತಾ ಹೊರನುಗ್ಗುತ್ತವೆ ಓಡಿಬಿಡುತ್ತೇವೆ ಭದ್ರಕೋಟೆಯ ಶಿಥಿಲ ಬಾಗಿಲಿನ ಆಚೆ. ಸಾಗುತ್ತವಲ್ಲ ಮೆರವಣಿಗೆ ಆನೆಗಳು ಒಂದರ ಬಾಲವನ್ನು ಇನ್ನೊಂದು ಹಿಡಿದು ತಪ್ಪಿದರೂ ಒಂದು ಹೋಗಿ ಮುಟ್ಟಲಾರವು ಸರ್ಕಸ್ ಡೇರೆ. ಏನು ನಡೆಯುತ್ತಿದೆ ಎಂದಷ್ಟೇ ಹೇಳಿ ಸರಿಸದಿರುವುದು ಏಕೆನ್ನುವ ತೆರೆ ನನಗೆ ಕ್ರೌರ್ಯ ಎನ್ನಿಸುತ್ತದೆ, ಎಲ್ಲಾ ಕ್ರೌರ್ಯದ ತಾಯಿಬೇರು ಅದೇ. ಹೀಗಾಗಿ ವಾಕ್ಕಿಗೆ ನನ್ನದೊಂದು ಕೋರಿಕೆ, ಅಸ್ಪಷ್ಟ ನೆರಳಿನಂಥ ಆ ವಸ್ತುವಿಗೆ, ಮಾತಾಡುವ ಎಲ್ಲರಲ್ಲೂ ಇರುವ ಆ ಮುಖ್ಯ ಪ್ರದೇಶಕ್ಕೆ: ಮರುಳು ಮಾಡುವುದೇನು ದೊಡ್ದದಲ್ಲ ಪರಸ್ಪರರನ್ನು, ಆದರೂ ವಹಿಸಿ ಜಾಗರೂಕತೆ ಇಲ್ಲದಿದ್ದರೆ ಕತ್ತಲಲ್ಲಿ ಕಳೆದುಹೋದೀತು ನಮ್ಮ ಸಹಬಾಳ್ವೆ ಎಂಬ ಮೆರವಣಿಗೆ. ಏಕೆಂದರೆ ಎಚ್ಚರವಾಗಿರುವುದು ಮುಖ್ಯ ಎಚ್ಚರವಿರುವ ಮಂದಿ, ಸಾಲು ಮುರಿದರೆ ಅವರು ನಿದ್ದೆಗೆ ಜಾರಬಹುದು ಅಧೀರರಾಗಿ; ನಾವು ನೀಡುವ ಸಂಕೇತಗಳು - ಹೌದು, ಇಲ್ಲ, ಬಹು...

ನನ್ನಲ್ಲಿದ್ದಾಗ ಯೌವನಧನ ಮತ್ತು ಚೆಲುವು

ಇಮೇಜ್
 ಮೂಲ: ರಾಣಿ ಎಲಿಜಬೆತ್ ೧ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನನ್ನಲ್ಲಿ ಇದ್ದಾಗ ಯೌವ್ವನಧನ ಮತ್ತು ಚೆಲುವು ಕಣ್ಣುಗಳು ತಿರುಗುತ್ತಿದ್ದವು ನನ್ನೆಡೆ ಒಂದಲ್ಲ ಹಲವು ನೋಟದಲ್ಲಿ ನನ್ನವಳಾಗುವೆಯಾ ಎಂಬ ಯಾಚನೆ ಮಾಟಕ್ಕೆ ಮರುಳಾದವರಿಗೆಲ್ಲ ನನ್ನದೊಂದೇ ಸೂಚನೆ: ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು! ಎಷ್ಟು ಕಣ್ಣುಗಳಲ್ಲಿ  ಹರಿಸಿದೆನೋ ಅಶ್ರುಧಾರೆ ಒಡೆದೆನೋ ಎಷ್ಟು ಹೃದಯಗಳನ್ನು, ಹೇಳಲಾರೆ ಒಲವನ್ನು ಬೇಡಿ ಬಳಿಸಾರಿ ಬಂದವರಿಗೆಲ್ಲ ಗರ್ವದಿಂದ ಹೀಗೆ ಹೇಳಿ ಕಳಿಸಿದೆನಲ್ಲ: ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು! ನಂತರ ನನ್ನನ್ನು ನೋಡಲು ಬಂದನೊಬ್ಬ ಚೆಲುವ ಶುಕ್ರದೇವನ ಪುತ್ರ, ಮುಖದಲ್ಲಿ ಸೂಸುತ್ತಾ ಗೆಲುವ ಓ ನಾಜೂಕು ಪುತ್ಥಳಿಯೇ ಸಾಕು ಈ ಬಿನ್ನಾಣ, ಈ ಸೋಗು, ಕಿತ್ತುಬಿಡುವೆನು ನಿನ್ನ ಪುಕ್ಕ, ಈಗ ಹೇಳಿಕೋ ಹೋಗು ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು! ಅವನು ಈ ಮಾತುಗಳ ಪೂರೈಸಿದ ಕೂಡಲೇ ನನ್ನೆದೆಯಲ್ಲಿ ಏನೋ ಉಂಟಾಯ್ತು ಪರಿವರ್ತನೆ ಪಶ್ಚಾತ್ತಾಪದಲ್ಲಿ ಹೊರಳಾಡಿದೆ ಬಾರದೇ ನಿದ್ದೆ ಹಿಂದೆಷ್ಟು ಜನರನ್ನು ತಿರಸ್ಕರಿಸಿ ಕಳಿಸಿದ್ದೆ ನಡೆ, ನಡೆ, ನಡೆ, ಬೇಡು ಬೇರೆ ಯಾರನ್ನಾದರೂ ಕಾಡುತ್ತಾ ನಿಲ್ಲದಿರು ಹೀಗೆ ನನ್ನೆದುರು!

ನೀಲಿಹಕ್ಕಿ

ಇಮೇಜ್
 ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ ಹೊರಬರಲು ಅದಕ್ಕೆ ತವಕ ನಾನು ಅವನಿಗಿಂತ ಬಲಿಷ್ಠ ಸೆರೆ ಹಿಡಿದಿಟ್ಟಿರುವೆ  ಇದ್ದಲ್ಲೇ ಇರು ಎಂದು ಗದರಿಸುವೆ ಯಾರಿಗೂ ತಿಳಿಯಕೂಡದು ನೀನಿಲ್ಲಿ ಇರುವ ವಿಷಯ. ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ ಹೊರಬರಲು ಅದಕ್ಕೆ ತವಕ ಅವನ ಮೇಲೆ ವ್ಹಿಸ್ಕಿ ಸುರಿದು ನಾನು ಎಳೆದುಕೊಳ್ಳುವೆ ಸಿಗರೆಟ್ ದಮ್ಮು. ವೇಶ್ಯೆಯರಿಗೆ, ಬಾರಿನಲ್ಲಿ ಮದ್ಯ ಸುರಿದು ಕೊಡುವವರಿಗೆ, ಕಿರಾಣಿ ಅಂಗಡಿಯ ಕಾರಕೂನರಿಗೆ ಯಾರಿಗೂ ತಿಳಿಯದು ನೀಲಿಹಕ್ಕಿಯ ವಿಷಯ.  ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ ಹೊರಬರಲು ಅದಕ್ಕೆ ತವಕ ನಾನು ಅವನಿಗಿಂತ ಬಲಿಷ್ಠ ಸೆರೆ ಹಿಡಿದಿಟ್ಟಿರುವೆ  ಅವನನ್ನು ಕೇಳುವೆ ನನ್ನನ್ನು ಹಾಳು ಮಾಡುವುದು ನಿನ್ನ ಉದ್ದೇಶವೇ? ಯೂರೋಪ್ ದೇಶದಲ್ಲಿ ನನ್ನ ಪುಸ್ತಕ ಮಾರಾಟ ಠಪ್ ಎನ್ನಿಸಿಬಿಡುತ್ತೀಯೋ ಹೇಗೆ? ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ ಹೊರಬರಲು ಅದಕ್ಕೆ ತವಕ ನಾನು ಅವನಿಗಿಂತ ಕಿಲಾಡಿ ರಾತ್ರಿ ಎಲ್ಲರೂ ನಿದ್ರಿಸುವಾಗ ಮಾತ್ರ ಕೆಲವೊಮ್ಮೆ ಹೊರಬರಲು ಬಿಡುವೆ. ದುಃಖಿಸಬೇಡ ಅಲ್ಲಿ ನೀನಿರುವುದು ನನಗೆ ಗೊತ್ತು ಎನ್ನುತ್ತಾ ಮತ್ತೆ ಒಳಕ್ಕೆ ಸೇರಿಸುವೆ. ಅವನು ಅಲ್ಲಿ ಒಳಗೆ  ಏನೋ ಹಾಡುತ್ತಿದ್ದಾನೆ. ಅವನನ್ನು ನಾನು ಸಾಯಲು ಬಿಟ್ಟಿಲ್ಲ. ನಾವು ಹೀಗೆ ಮಲಗುತ್ತೇವೆ ಒಟ್ಟಿಗೆ ನಮ್ಮ ರಹಸ್ಯ ಒಪ್ಪಂದ ಯಾರಿಗಾದರೂ ತರಿಸಬಹ...

ಮುಖಾಮುಖಿ

ಇಮೇಜ್
 ಮೂಲ: ಥಾಮಸ್ ಹಾರ್ಡಿ ಅನುವಾದ: ಸಿ. ಪಿ. ರವಿಕುಮಾರ್ ಯಾವುದೋ ಪುರಾತನ ತಂಗುದಾಣದಲ್ಲಿ ಮುಖಾಮುಖಿಯಾಗಿದ್ದಿದ್ದರೆ ನಾವಿಬ್ಬರೂ ಕುಳಿತು ಎದುರುಬದುರು ಖಂಡಿತಾ ಹೀರುತ್ತಿದ್ದೆವು ಹೂಜಿ ಒಂದಲ್ಲ ಎರಡು! ಆದರೆ ನಾವಿಬ್ಬರೂ ಭೇಟಿಯಾದಾಗ ನಾನು ತೊಟ್ಟಿದ್ದೆನು ಸೈನಿಕನ ಉಡುಪು, ಬಂದೂಕು; ಹಾರಿಸಿದೆವು ಇಬ್ಬರೂ ಗುಂಡು ಪರಸ್ಪರರತ್ತ ನನ್ನ ನಿಶಾನೆಗೆ ಬಲಿಯಾಯ್ತು ಅವನ ಬದುಕು. ನಾನೇಕೆ ಕೊಂದೆ ಅವನನ್ನು, ಏಕೆಂದರೆ - ಏಕೆಂದರೆ ಅವನು ನನ್ನ ಶತ್ರುವಾಗಿದ್ದ ಅಷ್ಟೇ ಕಾರಣ: ಅವನು ಶತ್ರುಪಡೆಯಲ್ಲಿದ್ದ! ಇದಕ್ಕಿಂತಲೂ ಬೇಕೆ ಕಾರಣ ಶತಸಿದ್ಧ? ಸೈನ್ಯ ಸೇರಲು ಅವನು ಏನಿರಬಹುದು ಕಾರಣ? ಬೇರೇನು ಇದ್ದೀತು? ನನ್ನಂತೆಯೇ ಅವನು ಕೆಲಸ ಇಲ್ಲದೆ ಇದ್ದಬದ್ದದ್ದೆಲ್ಲಾ ಮಾರಿ ಬರೆಸಿಕೊಂಡಿರಬಹುದು ತನ್ನ ಹೆಸರನ್ನು. ಯುದ್ಧವೆಂದರೆ ಅರ್ಥವಾಗದ ವಿಚಿತ್ರ!  ಹೊಡೆದು ಕೊಲ್ಲುವಿರಿ  ಎದುರಾಳಿಯನ್ನು ಯಾವ ಎದುರಾಳಿ ಎದುರಾದರೆ ಮಧುಶಾಲೆಯಲ್ಲಿ ತಣಿಸುವಿರೋ ದಾಹ ತೆತ್ತು ನಿಮ್ಮ ಹೊನ್ನು.

ನನ್ನನ್ನು ಕೇಳು

ಇಮೇಜ್
 ಮೂಲ: ವಿಲಿಯಂ ಸ್ಟಾಫರ್ಡ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನದಿಯು ಹಿಮಗಡ್ಡೆಯಾಗಿ ಬದಲಾದಾಗ ಎಂದಾದರೂ ನೀನು ಕೇಳು ಏನೇನು ತಪ್ಪುಗಳನ್ನು ಮಾಡಿರುವೆ ನಾನು. ಕೇಳು ನಾನು ಮಾಡಿದ್ದೆಲ್ಲವೂ ಕೂಡಿ  ನನ್ನ ಬದುಕಾಯಿತೇ ಎಂದು. ನುಸುಳಿ ಬಂದಿದ್ದಾರೆ ಮೆಲ್ಲನೆ ನನ್ನ ಆಲೋಚನೆಗಳಲ್ಲಿ ಹಲವರು ಕೆಲವರು ನೋಯಿಸಲು, ಕೆಲವರು ನೆರವಾಗಲು: ಕೇಳು ಅವರ ಕಡುದ್ವೇಷ ಮತ್ತು ಉತ್ಕಟಪ್ರೇಮ ಬೀರಿವೆಯೇ ಏನಾದರೂ ಪರಿಣಾಮ. ನೀನು ಹೇಳಿದ್ದನ್ನು ಕೇಳಿಸಿಕೊಳ್ಳುವೆ ನಾನು. ನೀನು ಮತ್ತು ನಾನು ಇಬ್ಬರೂ ತಿರುಗಿ ನೋಡೋಣ ಮೌನವಾಗಿರುವ ನದಿಯ ಕಡೆಗೆ ಮತ್ತು ಕಾಯೋಣ. ನಮಗೆ ಗೊತ್ತು ಅಲ್ಲಿ ಗುಪ್ತ ಹರಿವಿದೆ ಎಂದು.  ಮೈಲುಗಟ್ಟಲೆ ದೂರದಲ್ಲಿ ನಡೆವ ಆಗುಹೋಗುಗಳು ಹಿಡಿದಿಡುತ್ತವೆ ಯಥಾವತ್ ಮುಂದಿನ ಅಚಲತೆ. ನದಿಯು ಏನು ಹೇಳುತ್ತದೋ ನನ್ನ ಉತ್ತರವೂ ಅದೇ.

ಕುಳಿತಲ್ಲೇ ನನಗೆ ಕಾಣುತ್ತದೆ

ಇಮೇಜ್
 ಮೂಲ: ವಾಲ್ಟ್ ವ್ಹಿಟ್ಮನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಕುಳಿತಲ್ಲೇ ನನಗೆ ಕಾಣುತ್ತದೆ ಜಗತ್ತಿನ ಎಲ್ಲ ದುಃಖದುಮ್ಮಾನ, ಶೋಷಣೆ ಮತ್ತು ನಾಚಿಕೆಗೇಡಿತನ; ಪಶ್ಚಾತ್ತಪದ ನೋವಿನಲ್ಲಿ ಯುವಕರು ರಹಸ್ಯವಾಗಿ ಬಿಕ್ಕುವುದು ಕೇಳುತ್ತದೆ; ಮಕ್ಕಳಿಂದಲೇ ಜುಲುಮೆಗೊಳಗಾದ ತಾಯಿ ಶಿಥಿಲಳಾಗಿ ಹಪಹಪಿಸಿ ಸಾಯುವುದು ಕಾಣುತ್ತದೆ; ಪತಿಯಿಂದ ಜುಲುಮೆಗೆ ಒಳಗಾದ ಪತ್ನಿಯ ನೋವು, ಹೆಣ್ಣುಗಳತ್ತ ಕಾಮುಕನ ದೃಷ್ಟಿಯ ಕಾವು ಕಾಣುತ್ತವೆ; ಪ್ರತಿಸ್ಪಂದನೆಯಿಲ್ಲದ ಪ್ರೀತಿಯ ಹತಾಶೆ,  ಬಚ್ಚಿಟ್ಟ ಅಸೂಯೆಯ ಪರಿತಾಪಗಳು ಗೋಚರಿಸುತ್ತವೆ; ಯುದ್ದದ ಕಾರ್ಯಾಚರಣೆಗಳು, ಮಹಾಮಾರಿ, ದಬ್ಬಾಳಿಕೆಗಳು ಬರುತ್ತವೆ ಕಣ್ಮುಂದೆ; ಜೀವತೆತ್ತ ಹುತಾತ್ಮರು, ಕಾರಾಗೃಹದ ಬಂದಿಗಳು ಕಾಣಿಸಿಕೊಳ್ಳುತ್ತಾರೆ; ಪಯಣ ಹೊರಟ ಹಡಗಿನಲ್ಲಿ ಉಂಟಾಗಿ ಕ್ಷಾಮ ಯಾರನ್ನು  ಕೊಲ್ಲಬೇಕು ಉಳಿದವರನ್ನು ರಕ್ಷಿಸಲು ನಿರ್ಧರಿಸಲು ಚೀಟಿ ಎತ್ತುವ ನಾವಿಕರ ದೃಶ್ಯ ಕಾಣುತ್ತದೆ; ಊಳಿಗ ಮಾಡುವ ಜನರ ಮೇಲೆ, ಬಡವರ ಮೇಲೆ ನೀಗ್ರೋ ಜನಾಂಗದ ಮೇಲೆ ಅಪಮಾನದ ಕೆಂಡ ಕಾರುವ ಜನರು ಕಾಣುತ್ತಾರೆ; ಇವೆಲ್ಲಾ, ಕೊನೆಯಿಲ್ಲದ ಈ ಗೋಳು, ಈ ನೀಚತನ ಎಲ್ಲವನ್ನೂ ನಾನು ನೋಡುತ್ತೇನೆ, ಕೇಳುತ್ತೇನೆ, ಮತ್ತು ವಹಿಸುತ್ತೇನೆ ಮೌನ.

ವಿರಮಿಸುವ ಹದ್ದು

ಇಮೇಜ್
 ವಿರಮಿಸುವ ಹದ್ದು ಮೂಲ: ಟೆಡ್ ಹ್ಯೂಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕೂತಿರುವೆ ಕಾಡಿನ ಪರಮ ಉತ್ತುಂಗದಲ್ಲಿ ಕಣ್ಮುಚ್ಚಿ. ಏನೂ ಕೆಲಸವಿಲ್ಲ, ಯಾವ ಕನಸುಗಳ ಅಡೆತಡೆಯಿಲ್ಲ ನನ್ನ ಬಾಗಿದ ತಲೆಯಿಂದ ಹಿಡಿದು ಬಾಗಿದ ಕಾಲಿನವರೆಗೂ. ನುರಿತ ಬೇಟೆಯ ನಂತರದ ಭೋಜನದ ತಾಲೀಮು ನಿದ್ದೆಯಲ್ಲಿ. ಎತ್ತರದ ಮರಗಳ ಅನುಕೂಲವೇ ಅನುಕೂಲ! ಗಾಳಿಯ ಇಂಬು ಮತ್ತು ಸೂರ್ಯನ ಬೆಳಕು ಎರಡೂ ನನ್ನ ಪರವಾಗಿವೆ; ಭೂಮಿಯ ಮುಖ ನನ್ನತ್ತ ತಿರುಗಿದೆ ತಕ್ಕಂತೆ ನನ್ನ ಅವಗಾಹನೆಗೆ. ಮರದ ಒರಟು ತೊಗಟೆಗೆ ತೆಕ್ಕೆ ಹಾಕಿಕೊಂಡಿವೆ ಪಾದ. ಸೃಷ್ಟಿಯ ಸಕಲ ಶಕ್ತಿಯೂ ವ್ಯಯವಾಯಿತು  ನನ್ನ ಪಾದದ, ನನ್ನ ಒಂದೊಂದೂ ಗರಿಯ ನಿರ್ಮಾಣಕ್ಕೆ. ಈಗ ಸೃಷ್ಟಿಯು ಬಿದ್ದಿದೆ ನನ್ನ ಪದತಲದಲ್ಲಿ. ಬೇಕೆಂದರೆ ಹಾರುವೆ ಮೇಲೆ, ತಿರುಗಿಸುವೆ ಸೃಷ್ಟಿಯನ್ನು ಮೆಲ್ಲನೆ. ನನಗೆ ಬೇಕಾದಲ್ಲಿ ಕೊಲ್ಲುವೆ, ಏಕೆಂದರೆ ಇವೆಲ್ಲ ನನ್ನದೇ. ಯಾವ ನಯನಾಜೂಕು ಇಲ್ಲ ನನ್ನ ದೇಹದಲ್ಲಿ: ತಲೆಗಳನ್ನು ಕಿತ್ತುಬಿಡುವುದು ನನ್ನ ಸಭ್ಯತೆ, ಮೃತ್ಯುದಂಡನೆ ನೀಡುವುದು ನನ್ನ ಅಧಿಕಾರ. ಜೀವಿಯ ಮೂಳೆಗಳ ಮೂಲಕವೇ ಹೋಗುವುದು ನೇರವಾಗಿ ನನ್ನ ಹಾರಾಟದ ರೇಖೆ. ಯಾವ ಪ್ರತಿವಾದವೂ ಇಲ್ಲದೆ ಸಿದ್ಧವಾಗಿದೆ ನನ್ನ ಹಕ್ಕು: ಸೂರ್ಯ ನಿಂತಿದ್ದಾನೆ ನನ್ನ  ಬೆಂಬಲಕ್ಕೆ. ನಾನು ಬಂದಲಾಗಾಯ್ತು ಏನೂ ಬದಲಾಗಿಲ್ಲ. ಏನೂ ಬದಲಾಗಲು ಬಿಟ್ಟಿಲ್ಲ ನನ್ನ ಕಣ್ಣುಗಳು. ಹೀಗೇ ಇಟ್ಟುಕೊಂಡಿರುವೆ ಮುಂದೆಯೂ ಎಲ್ಲ.

ಇಲ್ಲಿ ಯುದ್ಧವು ಸರಳ

ಇಮೇಜ್
 ಮೂಲ: ಡಬ್ಲ್ಯು. ಎಚ್. ಆಡೆನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಯುದ್ಧವು ಇಲ್ಲಿ ಸ್ಮಾರಕದಷ್ಟೇ ಸರಳ: ಟೆಲಿಫೋನ್ ಮಾತಾಡುತ್ತಿದೆ ಒಬ್ಬ  ಮನುಷ್ಯನ ಜೊತೆ ಭೂಪಟದ ಮೇಲೆ ಜೋಡಿಸಿದ ಬಾವುಟಗಳು ಹೇಳುತ್ತವೆ ತುಕಡಿಗಳನ್ನು ಕಳಿಸಿದ ಕತೆ ಹುಡುಗನೊಬ್ಬ ತರುತ್ತಾನೆ ಬಟ್ಟಲುಗಳಲ್ಲಿ ಹಾಲು ಯೋಜನೆಯೊಂದು ಪಡೆಯುತ್ತಿದೆ ಕಾಲು - ಬದುಕಿ ಉಳಿದವರಿಗಾಗಿ.  ಸಾವಿನ  ಭಯದಲ್ಲಿ ಬದುಕು ನೂಕುತ್ತಿರುವ ಜನ, ಒಂಬತ್ತಕ್ಕೇ ಬಾಯಾರಿ ಚಡಪಡಿಸುವರು ಹನ್ನೆರಡಕ್ಕೆ ಬಾಯಾರಬೇಕಾದವರು. ಕಳೆದು ಹೋಗಬಲ್ಲವರು. ಕಳೆದು ಹೋದವರು. ಹೆಂಡತಿಯರನ್ನು ನೆನೆದು ಪರಿತಪಿಸುವವರು. ಆಲೋಚನೆಗಿಂತಲೂ ಬೇಗ ಸಾಯುವವರು. ಆಲೋಚನೆಯೊಂದು ಸತ್ಯವೇ ಆಗಿರಬಹುದು ಮಾನವರು ತೆತ್ತರೂ ಜೀವದ ಬೆಲೆ ಮತ್ತು ಗಮನಿಸಿದರೆ ಕಾಣುವುದು ಒಂದು ಸುಳ್ಳು ಸೂಸುವುದು ಹೇಗೆ ಬೆಳಕನ್ನು ಸಹಸ್ರ ಮುಖಗಳ ಮೇಲೆ. ಭೂಪಟಗಳು ತೋರಬಲ್ಲವು ಎಲ್ಲೆಲ್ಲಿ ಕೇಡಾಗಿದೆ ಬದುಕು: ನ್ಯಾನ್ ಕಿಂಗ್ ಮತ್ತು ಡಾಶೌ.

ಭದ್ರತೆ

ಇಮೇಜ್
ಮೂಲ ಕವಿತೆ: ವಿಲಿಯಂ ಸ್ಟಾಫರ್ಡ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾಳೆಗೆ ಇರುವುದೊಂದು ದ್ವೀಪ.  ಸಿಕ್ಕುವುದು ನನಗೆ ಇರುಳು ಇಳಿಯುವ ಮುನ್ನವೇ, ಎಂದಿನಂತೆ. ತದನಂತರ ಹೊರಡುವೆ ಮತ್ತೊಂದನ್ನು ಅರಸಿ. ಈ ಸ್ಥಳಗಳು ಹಗಲಿನಲ್ಲಿ ಅಡಗಿಕೊಂಡಿರುತ್ತವೆ. ಕರೆದರೆ ಓಗೊಟ್ಟು ಬರುತ್ತವೆ ಕಳಚಿಕೊಂಡು. ಅವುಗಳ ಇರುವಿನ ಅರಿವು ಇರಬೇಕು ಅಷ್ಟೇ, ಅವು ಹುಟ್ಟುವ ಮುನ್ನವೇ. ಮುಂದೆ ಎಂದಾದರೂ ಬರಬಹುದೊಂದು ಯಾವ ದ್ವೀಪವೂ ಇಲ್ಲದ ನಾಳೆ ಇಂದಿನವರೆಗೂ ನಾನು ಹಾಗಾಗಲು ಬಿಟ್ಟಿಲ್ಲ. ಆದರೆ ನನ್ನ ತರುವಾಯ ಉಳಿದವರು ಬೆಳೆಸಿಕೊಳ್ಳಬಹುದು ಅಪನಂಬಿಕೆ ಮತ್ತು ಅಜಾಗರೂಕತೆ. ಅವರ ಮುಂದೆ ಭೋರ್ಗರೆಯುವುದು ವಿಶಾಲ ಅವಿಚ್ಛಿನ್ನ ಸಮುದ್ರ. ನೋಡುತ್ತಾ ನಿಲ್ಲುವರು ನೆಟ್ಟು ದಿಗಂತದತ್ತ ದೃಷ್ಟಿ ಅಭದ್ರ. ಹೀಗಾಗಿ, ಗೆಳೆಯಾ, ನಿನ್ನಲ್ಲಿ ನಾನು ಹೇಳಿಬಿಡುವೆ ನನ್ನ ರಹಸ್ಯ: ಶೋಧಕನಾಗಲು ನಿನಗೆ ಬೇಕಾದದ್ದು ಭದ್ರವಾಗಿ ಹಿಡಿದುಕೊಳ್ಳುವುದು ಸಿಕ್ಕಿದ್ದನ್ನು. ಅದೇನೆಂದು ನಿರ್ಧರಿಸಿ ಕಾಲಾಂತರದಲ್ಲಿ ಅನಂತರ ನೀನು ತೆರಳಿದ ಸ್ಥಳದ ಮೇಲೆ ಊರಿ ಭದ್ರವಾಗಿ ಕಾಲು ತೆರೆದ ಕಡಲಿನ ಕಡೆಗೆ ನೋಡಿ ಕೈ ಬಿಟ್ಟು ನಿಲ್ಲು.

ಏನೇ ಮಾಡಿದರೂ

ಇಮೇಜ್
 ಏನೇ ಮಾಡಿದರೂ  ಮೂಲ: ಮ್ಯಾಕ್ಸ್ ಏರ್ಮನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಏನೇ ಮಾಡಿದರೂ ಮಾಡದಿದ್ದರೂ ನೀನು ಅನುಸರಿಸಬೇಕಾದ ವ್ರತವೊಂದಿದೆ: ಸಂತೋಷ. ಆಗಾಗ ಒಮ್ಮೆ ಯಾವ ಭಿಡೆಯೂ ಇಲ್ಲದೆ ಮಾಡು ಜೋರಾಗಿ ನಕ್ಕುಬಿಡುವ ಕೆಲಸ. ಎಷ್ಟೇ ಶಪಿಸಿದರೂ ಜಗತ್ತಿನ ಕೆಡುಕನ್ನು ನೀನು, ನೆನಪಿರಲಿ ಜಗತ್ತು ಕೆಟ್ಟುಹೋಗಿಲ್ಲ ಪೂರ್ತಿ; ಎಲ್ಲೋ ಮಕ್ಕಳು ಇನ್ನೂ ಆಟವಾಡುತ್ತಿವೆ ನಿನ್ನ ವೃದ್ಧಾಪ್ಯವೂ ಮಕ್ಕಳಾಟಗಳ ಕಲಿಯಲಿ; ನೆನಪಿರಲಿ ಹೆಣ್ಣುಗಳು ಇನ್ನೂ ನಲಿಯುತ್ತವೆ ಗಂಡುಗಳ ಧೀರೋದಾತ್ತ ಹೃದಯಗಳಲ್ಲಿ. ನೆನಪಿರಲಿ ಎಷ್ಟೇ ಅಲೆದಾಡಿದರೂ ಮಾನವ ಎಲ್ಲೆಲ್ಲೂ ತುಳಿಯುತ್ತಾ ಅವಿಶ್ರಾಂತ ಹೆಜ್ಜೆ ಜಗದ ಬಿರುಗಾಳಿ ಮಳೆ ಸಿಡಿಲು ಮಿಂಚುಗಳಿಂದ ನೀಡುವುದು ಒಲವೆಂಬ ಮನೆ ನಿನಗೆ ರಕ್ಷೆ.

ವೆಸ್ಟ್ ಮಿನ್ಸ್ಟರ್ ಆಬೀ ಚರ್ಚ್ ಮೇಲೆ ರಚಿಸಿದ್ದು

ಇಮೇಜ್
ಮೂಲ: ವಿಲಿಯಂ ವರ್ಡ್ಸ್ವರ್ತ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಧರೆಯ ಮೇಲಿರಲಾರದು ಇದನ್ನು ಮೀರಿದ ಚೆಲುವು! ಅ ರಸಿಕನೇ ಆಗಿರಬೇಕು ಇತ್ತ ಬೆಳೆಸಿದರೂ ಪಾದ ಅರೆತಾಸು ನಿಂತು ಬೆರಗಾಗದವನು ಈ ನೋಟಕ್ಕೆ! ಪುರವು ಹೊದ್ದಿರುವುದು ನಸುಕಿನ ಚೆಲುವನ್ನೀಗ ಜರತಾರಿಯ ಮೇಲುದೆಯಂತೆ; ಮೌನ ಹಬ್ಬಿದೆ. ಗೋ ಪುರಗಳು, ಮಂದಿರ, ರಂಗಸ್ಥಳ, ದೋಣಿಗಳು, ಎಲ್ಲವೂ ತೆರೆದುಕೊಂಡಿವೆ ಮುಖಮಾಡಿ ಹೊಲಗಳಿಗೆ ಮೇಣ್ ಗಗನಕ್ಕೆ! ಕೋರೈಸುತ್ತಿವೆ ಜಾಜ್ವಲ್ಯಮಾನವಾಗಿ ನಿಷ್ಕಲ್ಮಶ ಗಾಳಿಯಲ್ಲಿ. ವಿರಮಿಸಿರಲಾರ ಹಿಂದೆಂದೂ ಹೀಗೆ ಬಾಲರವಿ ಗಿರಿಗಳಲ್ಲಿ, ಕಣಿವೆಗಳಲ್ಲಿ, ಕಲ್ಲುಬಂಡೆಗಳ ಮೇಲೆ, ಎಲ್ಲೂ! ಅರಿಯೆ ನಾನೂ ಅನುಭವಿಸಿ ಇಷ್ಟು ಆಳದ ಶಾಂತಿ! ತೊರೆಯು ಹರಿಯುತ್ತಿದೆ ತನ್ನದೇ ಮಧುರಗತಿಯಲ್ಲಿ: ಮೈ ಮರೆತು ಮಲಗಿದಂತೆ ತೋರುತ್ತಿವೆ ಮನೆಗಳ ಸಾಲುಗಳು; ಧೀರೋದಾತ್ತ ಆ ಹೃದಯವೂ ಮಲಗಿಹುದು ಸ್ತಬ್ಧವಾಗಿ!

ಜೀವನ

ಇಮೇಜ್
 ಜೀವನ ಮೂಲ ಕವಿತೆ: ಹೆನ್ರಿ ವ್ಯಾನ್ ಡೈಕ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ವರುಷದಿಂದ ವರುಷಕ್ಕೆ ಬದುಕಬಯಸುವುದೆನ್ನ ಚಿತ್ತ ಸದಾ ಮುಂದಕ್ಕೆ ನೋಡುತ್ತಾ, ಆತ್ಮ ಪಶ್ಚಾತ್ತಾಪರಹಿತ, ಮುನ್ನುಗ್ಗದೇ ಗುರಿಯತ್ತ, ಗುರಿಯಿಂದ ಎಂದೂ ಆಗದೆ ವಿಮುಖ, ಭೂತದ ಕತ್ತಲಲ್ಲಿ ಕಳೆದುಹೋದದ್ದಕ್ಕೆ ಪಡದೆ ದುಃಖ, ಮೇಲೇಳುವ ಮುನ್ನವೇ ಭವಿಷ್ಯದ ಪರದೆ ಮುಂದೇನು ಎಂದು ಇಂದೇ ಭೀತನಾಗಿರದೆ, ಸಂತಸದಿಂದ  ಕಟ್ಟುತ್ತಾ ವಯೋಮಾನಕ್ಕೆ ತೆರಬೇಕಾದ ತೆರಿಗೆ ಲಗುಬಗೆಯ ಹೆಜ್ಜೆ ಇಡುತ್ತಾ ಬರುವ ವರುಷದ ಕಡೆಗೆ. ಮೇಲ್ಮುಖವೋ ನತಶಿರವೋ ಮುಂದಿರುವ ಪಥ  ಒರಟೋ ನಯವೋ! ಪಯಣ ಹೇಗಿದ್ದರೂ ಸುಖ! ಹುಡುಕುತ್ತ ಸಾಗುವೆ ನಾನು ಬಾಲ್ಯದಿಂದಲೂ ಬಯಸಿದ್ದನ್ನೇ, ಹೊಸಮೈತ್ರಿ, ಉತ್ತುಂಗ ಸಾಹಸ, ಮತ್ತೊಂದು ಮುಕುಟ! ಹುಡುಕಾಟದ ಕೆಚ್ಚು  ಹೃದಯದಲ್ಲಿರುವುದು ಎಂದೆಂದಿಗೂ. ಆಶಿಸುವೆ ಅತ್ಯುತ್ತಮವಾಗಿರಲಿ ಪಯಣದ ಕೊನೆಯ ತಿರುವು

ಜೋಗುಳ

ಇಮೇಜ್
 ಮೂಲ ಕವಿತೆ: ಸರೋಜಿನಿ ನಾಯ್ಡು ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಜೀರಿಗೆಯ ಹೊಲದಿಂದ ಬತ್ತದ ಗದ್ದೆಯ ಹಾದು ಸುಳಿದಾಡಿ ತಾವರೆಕೆರೆ ಮೇಲೆ  ತಂದಿರುವೆ ನಿನಗೆಂದು ಇಬ್ಬನಿ ಹೊಳೆಯುವ ಒಂದು ಸುಂದರ ಕನಸುಗಳ ಸರಮಾಲೆ ಕಣ್ಮುಚ್ಚು ನನ್ನೊಲವೇ ಕಾಣಿಸುವುದು ನೋಡು  ಕಾಡಿನಲಿ ನರ್ತಿಸುವ ಮಿಂಚುಳ್ಳಿ ಕದ್ದು ತಂದಿರುವೆನು ನಿದ್ರಿಸಿದರೆ ಕೊಡುವೆ ಕನಸುಗಳ ಸರಮಾಲೆ ಕೈಯಲ್ಲಿ ಕಣ್ಮುಚ್ಚು ನನ್ನೊಲವೇ ತಾರೆಗಳು ಮಿನುಗುತಿವೆ ಚಂದಿರಮುಖದ ಸುತ್ತಾಮುತ್ತಾ ನಿನ್ನ ಕಣ್ಣಿನ ಮೇಲೆ ಕನಸುಗಳ ಸರಮಾಲೆ ಏರಿಸಿ ನಾನಿಡುವೆ ಹೂಮುತ್ತ

ಶಿಶಿರಗಾನ

ಇಮೇಜ್
  ಮೂಲ: ಸರೋಜಿನಿ ನಾಯ್ಡು ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದುಃಖಿಸುವ ಹೃದಯದೊಳಿರುವ ಒಂಟಿ ಸಂತಸದಂತೆ ಸಿಕ್ಕಿಸಿದೆ  ಮೋಡದ ಮೇಲೆ ಸೂರ್ಯಾಸ್ತ; ಸುಕ್ಕು ತರಗೆಲೆ  ಕೆಳಗುದುರಿ ಚಿನ್ನದ ರೇಕುಗಳಂತೆ  ಸಿಕ್ಕಿ ಬಿರುಗಾಳಿಗೆ ಮೇಲೆದ್ದು ಅಸ್ತವ್ಯಸ್ತ, ರೆಕ್ಕೆ ಬಂದಂತೆ ಹಾರುತ್ತಿವೆ ಸುತ್ತಮುತ್ತ. ಕರೆಯುತ್ತಿಹರು ದೂರದಲ್ಲಾರೋ ಕೇಳಿಸಿತೇ! ಯಾರವರು ಕೂಗುವರು ಗಾಳಿಯ ದನಿಯಲ್ಲಿ? ಬರಿದಾಗಿದೆ ಹೃದಯ, ತುಂಬುತ್ತಿದೆ ಖಿನ್ನತೆ ತರಗೆಲೆಯಂತೆ ಉದುರಿ ಕನಸುಗಳು, ಒಣಬಳ್ಳಿ ಮರುಗುತ್ತಿದೆ ನಾನೇಕಿನ್ನೂ ನಿಂತಿರುವೆನಿಲ್ಲಿ?

ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ

ಇಮೇಜ್
 ಮೂಲ ಕವಿತೆ: ಶೆಲ್ ಸಿಲ್ವ್ವರ್ಸ್ಟೀನ್ ಅನುವಾದ: ಸಿ. ಪಿ. ರವಿಕುಮಾರ್ ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ ಚಿಟ್ಟೆಹುಳು ಹೇಳಿದ್ದೆಲ್ಲ ಅರ್ಥವಾಗುತ್ತಿತ್ತು ನನಗೆ ಕಾಜಾಣಗಳ ಹರಟೆಗೆ ಸೂಸುತ್ತಿದ್ದೆ ಗುಪ್ತನಗೆ ಮಲಗಿದ್ದಲ್ಲೇ ಹರಟುತ್ತಿದ್ದೆ ನೋಣವೊಂದರ ಜೊತೆಗೆ. ಜೀರುಂಡೆಯ ಎಲ್ಲ ಪ್ರಶ್ನೆಗಳಿಗೂ ಉತ್ತರವಿತ್ತು ನನ್ನಲ್ಲಿ ದನಿಗೂಡಿಸುತ್ತಿದ್ದೆ ಬೀಳುವ ಹಿಮಕಣಗಳ ಆರ್ತನಾದಕ್ಕೆ  ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ ಹೇಗಿತ್ತಪ್ಪ ಅದು, ಹೇಗಿತ್ತಪ್ಪ, ಮರೆತೇಹೋಯ್ತಲ್ಲ ಛೇ!

ಯಾರದು ಈ ಕೋಣೆ?

ಇಮೇಜ್
 ಯಾರದು ಈ ಕೋಣೆ? ಮೂಲ: ಶೆಲ್ ಸಿಲ್ವರ್ಸ್ಟೀನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಯಾರದ್ದು ಈ ಕೋಣೆ? ಅವರಿಗೆ ನಾಚಿಕೆಯಾಗಬೇಕು ಒಳಉಡುಪು ನೇತುಹಾಕಿದೆ ಎಲೆಕ್ಟ್ರಿಕ್ ದೀಪಕ್ಕೆ ಮಳೆಕೋಟು ಮೂರ್ಛೆ ಹೋಗಿದೆ ಸೋಫಾ ಮೇಲೆ ಶಾಪಕ್ಕೆ ಸೋಫಾ ಮೇಲೆ ತೇವಕ್ಕೆ ಹತ್ತಿಕೊಂಡಿದೆ ಜೌಗು. ಸಿಕ್ಕಿಸಿದ್ದಾರೆ ಕಿಟಕಿ ಸರಳಿನಲ್ಲಿ ನೋಟ್ ಪುಸ್ತಕ ಸ್ವೆಟರ್ ಬಿದ್ದಿದೆ ನೆಲದ ಮೇಲೆ ಅನಾಥ ಟೊಪ್ಪಿಗೆ ಮಲಗಿದೆ ಟಿವಿ ಕೆಳಗೆ ಅಂಗಾತ ಜೋತಾಡುತ್ತಿದೆ ಬಾಗಿಲಿಗೆ ಪ್ಯಾಂಟ್ ತಳಪಳಕ. ಹೇಗೆ ಉಗ್ರಾಣದಲ್ಲಿ ಪುಸ್ತಕಗಳನ್ನು ತುರುಕಿದ್ದಾನೆ ನೆಲದ ಮೇಲೆಲ್ಲಾ ಬಿದ್ದಿವೆ ವಸ್ತು ಚೆಲ್ಲಾಪಿಲ್ಲಿ ಹಾಸಿಗೆಯ ಮೇಲೆ ನಿದ್ರಿಸುತ್ತಿದೆ ಒಂದು ಹಲ್ಲಿ ಗೋಡೆಗಂಟಿಸಿದ ಕಾಲುಚೀಲಕ್ಕೆ ಗಬ್ಬು ವಾಸನೆ! ಯಾರದು ಈ ಕೋಣೆ? ಅವರಿಗೆ ನಾಚಿಕೆಯಾಗಬೇಕು ಶಾಮನದೇ? ಗೋಪಿಯದೇ? ಅಥವಾ ... ಏನು? ಇದು ನನ್ನದೇ ಕೋಣೆಯೇ? ದೇವಾ! ಹೌದಲ್ಲ, ಎಲ್ಲೋ ನೋಡಿದಂತೆ ನೆನಪು ಮಸುಕುಮಸುಕು.

ನಾನು ನೋಡಿದೆ ಲೂಯಿಸಿಯಾನಾದಲ್ಲೊಂದು ಓಕ್ ಮರ

ಇಮೇಜ್
ಮೂಲ: ವಾಲ್ಟ್ ವ್ಹಿಟ್ಮನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನಾನು ನೋಡಿದೆ ಲೂಯಿಸಿಯಾನಾದಲ್ಲೊಂದು ಓಕ್ ಮರ, ಒಂಟಿಯಾಗಿ ನಿಂತ ಮರದ ರೆಂಬೆಗಳ ಮೇಲೆ ತೂಗುತ್ತಿದ್ದ ಬಿಳಿಗೂದಲಿನಂಥ ಹಾವಸೆ, ಯಾವ ಒಡನಾಡಿ ಇಲ್ಲದೆ  ಒಬ್ಬಂಟಿಯಾಗಿ ಬೆಳೆದುನಿಂತ ಮರ ಕಡುಹಸಿರು ಬಣ್ಣದ ಸಂತಸಮಯ ಎಲೆಗಳನ್ನು ಉಚ್ಚರಿಸುತ್ತಿತ್ತು.  ಅದರ ನಿಲುಮೆಯಲ್ಲಿದ್ದ ಒರಟುತನ,  ಬಾಗಲಾರೆ ಎಂಬ ಧಾರ್ಷ್ಟ್ಯ, ಗಟ್ಟಿಮುಟ್ಟುತನ ನೋಡಿ ನನಗೆ ನನ್ನದೇ ನೆನಪಾಯಿತು. ಯೋಚಿಸಿದೆ,  ಒಬ್ಬಂಟಿಯಾಗಿ ಯಾವ ಸ್ನೇಹಿತರೂ ಜೊತೆಗಿಲ್ಲದೆ ಹೇಗೆ ಉಚ್ಚರಿಸುತ್ತಿದೆ ಮರ ಸಂತಸದ ಎಲೆಗಳನ್ನು? ನನ್ನಿಂದಾಗದು. ಮರದಿಂದ ಮುರಿದುಕೊಂಡೆ ಒಂದಿಷ್ಟು ಎಲೆಗಳಿದ್ದ ಒಂದು ಟೊಂಗೆ ಅದಕ್ಕೆ ಸುತ್ತಿಕೊಂಡೆ ಒಂದಿಷ್ಟು ಬಿಳಿ ಹಾವಸೆ ಮತ್ತು ಅದನ್ನು ತಂದು ಸ್ಥಾಪಿಸಿದೆ ನನ್ನ ಕೋಣೆಯಲ್ಲಿ ನನಗೆ ಕಾಣುವ ಸ್ಥಳದಲ್ಲಿ. ನನ್ನ ಆಪ್ತಮಿತ್ರರನ್ನು ನೆನಪಿಸಲು ನನಗಿದರ ಅಗತ್ಯವಿಲ್ಲ ಈನಡುವೆ ಮಿತ್ರರಲ್ಲದೆ ನನ್ನ ಮನದಲ್ಲಿ ಅಂತಹ ಹೇಳಿಕೊಳ್ಳುವ ಯೋಚನೆಗಳಿಲ್ಲ ಆದರೂ ಈ ಟೊಂಗೆ ನನಗೊಂದು ಸಂಕೇತವಾಗಿ ತೋರುತ್ತದೆ. ಮನುಷ್ಯನ ಪ್ರೇಮದ ಸಂಕೇತ, ಲೂಯಿಸಿಯಾನಾದ ಬಟಾಬಯಲಲ್ಲಿ  ಓಕ್ ಮರವು ಯಾವ ಒಡನಾಡಿ ಯಾವ ಪ್ರೇಮಿಯೂ ಬಳಿಯಲ್ಲಿ ಇರದಿದ್ದರೂ ನಳನಳಿಸುತ್ತಿರಬಹುದು ಉಚ್ಚರಿಸುತ್ತಿರಬಹುದು ಸಂತಸಮಯ ಚಿಗುರು, ನನಗೆ ಗೊತ್ತು ಅದು ನನ್ನಿಂದಾಗದು.

ಎಲ್ಲಿ ಮುಗಿಯುವುದೋ ಕಾಲ್ದಾರಿ

ಇಮೇಜ್
 ಮೂಲ ಕವಿತೆ: ಶೆಲ್ ಸಿಲ್ವರ್ಸ್ಟೀನ್ ಅನುವಾದ : ಸಿ. ಪಿ. ರವಿಕುಮಾರ್ ಎಲ್ಲಿ ಮುಗಿಯುವುದೋ ಕಾಲ್ದಾರಿ  ಮತ್ತು ಎಲ್ಲಿ ಮೊದಲಾಗುವುದೋ ಹೆದ್ದಾರಿ ಬೆಳೆವುದು ಮಕಮಲ್ ಹುಲ್ಲು ಅವುಗಳ ನಡುವಣ ಸ್ಥಳದಲ್ಲಿ ಸೂರ್ಯನು ಕೆಂಪಗೆ ಬೆಳಗುವನು ಆ ಸ್ಥಳದಲ್ಲಿ ಅಲ್ಲಿ ಸುಳಿದಾಡುವ ಮಲ್ಲಿಗೆಯ ಗಾಳಿಯಲ್ಲಿ  ಚಕ್ರವಾಕವು ನಿಂತು ದಣಿವಾರಿಸಿಕೊಳ್ಳುವುದು. ಕಪ್ಪು ಹೊಗೆ ಬುಸುಗುಡುವ ಈ ಸ್ಥಳವನ್ನು ಬಿಟ್ಟು ಹಾವಿನಂತೆ ಸುತ್ತುವ ಕತ್ತಲುದಾರಿಯನ್ನು ತೊರೆದು ಸಿಮೆಂಟ್ ಹೂಗಳು ಬೆಳೆವ ಹಳ್ಳಕೊಳ್ಳಗಳ ದಾಟಿ ನಡೆಯೋಣ ಮೆಲ್ಲಮೆಲ್ಲಗೆ ಹೆಜ್ಜೆಗಳನ್ನು ಊರುತ್ತಾ ಅಳೆದು ಗಮನಿಸುತ್ತಾ ಯಾವ ದಿಕ್ಕಿನ ಕಡೆಗೆ ಬೆರಳನ್ನು ತೋರುತ್ತಿವೆ  ಬಿಳಿ ಸೀಮೆಸುಣ್ಣದ ಬಾಣಗಳು ಕಾಲ್ದಾರಿ ಕೊನೆಗೊಳ್ಳುವ ಸ್ಥಳದ ಕಡೆಗೆ. ಹೌದು, ನಡೆವೆವು ನಾವು  ಹೆಜ್ಜೆಗಳನ್ನು  ಅಳೆದು ಇಡುತ್ತಾ ಮೆಲ್ಲಗೆ ಹೋಗುವೆವು ಬಿಳಿ ಸೀಮೆಸುಣ್ಣದ ಗೆರೆಗಳು ಹೋಗುವ ಕಡೆಗೆ ಏಕೆಂದರೆ ಮಕ್ಕಳು ಎಳೆಯುವರು ಗೆರೆ ಏಕೆಂದರೆ ಮಕ್ಕಳಿಗೆ ಗೊತ್ತು  ಎಲ್ಲಿ ಮುಗಿಯುವುದೋ ಕಾಲ್ದಾರಿ ಎಂದು.

ರೆಡ್ ಇಂಡಿಯನ್ ಜನಾಂಗದ ಥ್ಯಾಂಕ್ಸ್ ಗಿವಿಂಗ್ ಪ್ರಾರ್ಥನೆ.

ಇಮೇಜ್
 ಇದು ರೆಡ್ ಇಂಡಿಯನ್ ಜನಾಂಗದ ಥ್ಯಾಂಕ್ಸ್ ಗಿವಿಂಗ್ ಪ್ರಾರ್ಥನೆ. ಭೂಮಿತಾಯಿಗೆ ನಮ್ಮ ವಂದನೆಗಳು ಕೊಡುವಳು ನಮಗೆ ಬೇಕಾದುದೆಲ್ಲ ನದಿತೊರೆಗಳಿಗೆ ನಮ್ಮ ಧನ್ಯವಾದ ನೀಡುತ್ತವೆ ನಮಗೆ ಜೀವಜಲ ಗಿಡಮೂಲಿಕೆಗಳಿಗೆ ನಮ್ಮ ಧನ್ಯವಾದ ನಮ್ಮ ರೋಗರುಜಿನಗಳಿಗೆ ನೀಡುತ್ತವೆ ಔಷಧ ಚಂದ್ರತಾರೆಗಳಿಗೆ ನಮ್ಮ ಧನ್ಯವಾದ ಸೂರ್ಯ ಮುಳುಗಿದ ಮೇಲೂ ಬೆಳಗುತ್ತವೆ ಪಥ ಸೂರ್ಯನಿಗೆ ನಮ್ಮ ಧನ್ಯವಾದಗಳು ಭೂಮಿಯ ಕಡೆಗೆ ಬೀರುವನು ಶುಭದೃಷ್ಟಿ ಕಟ್ಟಕಡೆಗೆ ಮಹಾನ್ ಆತ್ಮಕ್ಕೆ ನಮ್ಮ ವಂದನೆ ಎಲ್ಲ ಒಳ್ಳೆಯದನ್ನೂ ತನ್ನೊಳಗೆ ಬಂಧಿಸಿ ಸಮಷ್ಟಿ ತನ್ನ ಮಕ್ಕಳ ಒಳ್ಳೆಯದಕ್ಕಾಗಿ ಸದಾ ನಿಗ್ರಹಿಸುವನು ತನ್ನ ಪ್ರತಿಯೊಂದೂ ಸೃಷ್ಟಿ. (ಅನುವಾದ: ಸಿ ಪಿ ರವಿಕುಮಾರ್)

ಕವಿತಾವಾಚನಗಳು (ಚಾರ್ಲ್ಸ್ ಬ್ಯುಕೋವ್ಸ್ಕಿ)

ಇಮೇಜ್
 ಕವಿತಾವಾಚನಗಳು ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ಕವಿತಾವಾಚನಗಳಿಗಿಂತಲೂ ಹ್ಯಾಪಮೋರೆಯ ವಸ್ತುಗಳು ಇಲ್ಲವೇನೋ. ಗುಂಪಣ್ಣ ಮತ್ತು ಗುಂಪಕ್ಕಗಳು ಒಂದೆಡೆ ಸೇರಿ ವಾರವಾರವೂ ತಿಂಗಳು ತಿಂಗಳೂ ವರ್ಷವರ್ಷವೂ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಸಣ್ಣ ಸಭಿಕಸಮೂಹಕ್ಕೆ ಓದುತ್ತಾ ತಮ್ಮ ಮೇಧಾವೀ ವ್ಯಕ್ತಿತ್ವವನ್ನು ಒಂದುದಿನ  ಗುರುತಿಸಲಾಗುವುದೆಂದು ಇನ್ನೂ ಆಸೆ ಇಟ್ಟುಕೊಂಡವರು ಧ್ವನಿಮುದ್ರಿಕೆ ಕ್ಯಾಸೆಟ್ ಇತ್ಯಾದಿ ಮಾಡುತ್ತಾ ಚಪ್ಪಾಳೆಗಾಗಿ ಕಾಯುತ್ತಾ ಇವರು ಓದುವುದು ಪರಸ್ಪರರಿಗಾಗಿ ಇವರು ಯಾರಿಗೂ ಸಿಕ್ಕಿಲ್ಲ ನ್ಯೂಯಾರ್ಕಿನ ಯಾವ ಪ್ರಕಾಶಕ ಅಥವಾ ಮೈಲುಗಳ ದೂರದಲ್ಲೂ ಬೇರೊಬ್ಬ. ಆದರೂ ಅವರು ಓದಿದ್ದೂ ಓದಿದ್ದೇ ಅಮೆರಿಕದ ಕಾವ್ಯಬಿಲಗಳಲ್ಲಿ ಎಂದೂ ಧೃತಿಗೆಡದೆ. ಅವರಿಗೆ ಎಂದೂ ಸಂದೇಹ ಬಂದಿಲ್ಲ ತಮ್ಮ ಪ್ರತಿಭೆ ತೀರಾ ತೆಳುವಿರಬಹುದು ಕಣ್ಣಿಗೆ ಕಾಣಿಸದಷ್ಟು ಎಂದು. ಓದಿಯೇ ಓದುವರು ಅಮ್ಮಂದಿರ ಮುಂದೆ ಅಕ್ಕಂದಿರ ಮುಂದೆ ಗಂಡಂದಿರ ಮುಂದೆ ಹೆಂಡತಿಯರ ಮುಂದೆ ಗೆಳೆಯಗೆಳತಿಯರ ಮುಂದೆ ಒಡನಾಡಿ ಕವಿಗಳ ಮುಂದೆ ಮತ್ತು ಎಲ್ಲಿಂದಲೋ ಹೇಗೋ ಇತ್ತ ಅಡ್ಡಾಡುತ್ತಾ ಬಂದ ಒಂದಿಬ್ಬರು ಅಡನಾಡಿಗಳ ಮುಂದೆ. ನನಗೆ ನಾಚಿಕೆಯಾಗುತ್ತದೆ ಇವರನ್ನು ಕಂಡು ಇವರು ಒಬ್ಬರಿನ್ನೊಬ್ಬರ ಬೆನ್ನು ತಟ್ಟುವುದನ್ನು ಕಂಡು ಇವರ ತೊದಲುವ ಅಸ್ಮಿತೆಯನ್ನು ಕಂಡು ಇವರ ಧೈರ್ಯಗೇಡಿತನವನ್ನು ಕಂಡು. ಇವರು ನಮ್ಮ ಸೃಜನಶೀಲರಾದರೆ ದಯವಿಟ್ಟು ಬೇರೆ ಯಾರಾದರನ್...

ಬರೆಯುವುದು (ಚಾರ್ಲ್ಸ್ ಬ್ಯುಕೋವ್ಸ್ಕಿ)

ಇಮೇಜ್
 ಬರೆಯುವುದು ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಅನುವಾದ: ಸಿ ಪಿ ರವಿಕುಮಾರ್ ಬಹಳ ಸಲ ಅದು ನಿನಗೂ ಮತ್ತು ಅಸಾಧ್ಯಕ್ಕೂ ನಡುವೆ ಇರುವ ವಸ್ತು. ಯಾವ ಮದಿರೆಯೂ ಹೆಣ್ಣಿನ ಪ್ರೀತಿಯೂ ಅದಕ್ಕೆ ಆಗಲಾರದು ಸಾಟಿ. ಬೇರೆ ಏನೂ ನಿನ್ನನ್ನು ಕಾಪಾಡಲಾರದು ಬರವಣಿಗೆಯ ವಿನಾ. ಗೋಡೆಗಳು ಕುಸಿಯವುದನ್ನು ಗುಂಪುಗಳು ಬಂದು ಸುತ್ತುವರೆಯುವುದನ್ನು ತಡೆಯಬಲ್ಲದಾದರೆ ಅದೇ. ಅದು ಕತ್ತಲನ್ನು ಸೀಳಬಲ್ಲದು. ಬರವಣಿಗೆಯು ಅತ್ಯುಚ್ಚ ಮನೋವೈದ್ಯ. ದೈವಗಳಲ್ಲಿ ಅತ್ಯಂತ ದಯಾಮಯಿ ದೈವ. ಸಾವನ್ನು ಹಿಂಬಾಲಿಸುತ್ತದೆ ಬರವಣಿಗೆ ಸೋತು ಕೈಚೆಲ್ಲದೆ ಎಂದೂ. ಮತ್ತು  ತನ್ನಕಡೆ ನೋಡುತ್ತಾ ನೋವನ್ನು ನೋಡುತ್ತಾ ಬರವಣಿಗೆ ನಗುತ್ತದೆ. ಅದು ಕೊಟ್ಟಕೊನೆಯ ಅಪೇಕ್ಷೆ ಮತ್ತು ಕಟ್ಟಕಡೆಯ ವಿವರಣೆ.  ಬರವಣಿಗೆ ಎಂದರೆ ಅದೇ.

ಓ ಬರಹಗಾರನಾಗಲು ಬಯಸುತ್ತೀಯೋ?

ಇಮೇಜ್
 ಓ ಬರಹಗಾರನಾಗಲು ಬಯಸುತ್ತೀಯೋ? ಮೂಲ ಕವಿತೆ: ಚಾರ್ಲ್ಸ್ ಬ್ಯುಕೋವ್ಸ್ಕಿ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನಿನ್ನೊಳಗಿನಿಂದ ಅದು ಒದ್ದುಕೊಂಡು ಹೊರಕ್ಕೆ ಬರದಿದ್ದರೆ ಬೇಡ, ಬಿಟ್ಟುಬಿಡು. ನಿನ್ನ ಹೃದಯ, ಮನಸ್ಸು, ಬಾಯಿ, ಕರುಳುಗಳ ಮೂಲಕ ಹಾದು ಮುಖವಾಡ ತೊಡದೆ ಹೊರಬರದಿದ್ದರೆ ಬೇಡ, ಬಿಟ್ಟುಬಿಡು. ಕಂಪ್ಯೂಟರ್ ತೆರೆಯ ಮುಂದೆ  ಅಥವಾ ಟೈಪ್ ರೈಟರ್ ಮುಂದೆ ಬೆನ್ನು ಬಗ್ಗಿಸಿ ಪದಗಳಾಗಿ ಹುಡುಕುತ್ತಾ ಗಂಟೆಗಟ್ಟಲೆ ಕೂಡಬೇಕೆಂದಾದರೆ  ಬೇಡ, ಬಿಟ್ಟುಬಿಡು. ಪ್ರಸಿದ್ಧಿಗಾಗಿ ಅಥವಾ ಹಣಕ್ಕಾಗಿ ಬರೆಯುತ್ತಿರುವೆಯಾದರೆ ಬೇಡ, ಬಿಟ್ಟುಬಿಡು. ಹೆಣ್ಣನ್ನು ಒಲಿಸಿಕೊಳ್ಳಲು ಬರೆಯುತ್ತಿರುವೆಯಾದರೆ ಬೇಡ, ಬಿಟ್ಟುಬಿಡು. ಬರೆದದ್ದನ್ನು ಮತ್ತೆ ಮತ್ತೆ ತಿದ್ದಬೇಕಾದರೆ ಬೇಡ, ಬಿಟ್ಟುಬಿಡು. ಬರೆಯುವ ಆಲೋಚನೆಯೇ ಕಷ್ಟ ಎನ್ನುವುದಾದರೆ ಬೇಡ, ಬಿಟ್ಟುಬಿಡು. ಬೇರೆ ಯಾರನ್ನೋ ಅನುಕರಿಸಿ ಬರೆಯಲು ಹೊರಟಿದ್ದರೆ ಬೇಡ, ಮರೆತುಬಿಡು. ನಿನ್ನೊಳಗಿನಿಂದ ಗರ್ಜಿಸುತ್ತಾ ಹೊರಬರಲು ಇನ್ನೂ ಕಾಯಬೇಕೆಂದಾದರೆ ತಾಳ್ಮೆಯಿಂದ ಕಾಯಿ. ಅದು ಗರ್ಜಿಸುತ್ತಾ ಎಂದೂ ಹೊರಬರಲೇ ಇಲ್ಲವೇ? ಬೇರೆ ಏನಾದರೂ ಮಾಡು ಬರೆದದ್ದನ್ನು ನಿನ್ನ ಹೆಂಡತಿಗೋ ಗೆಳತಿಗೋ ಗೆಳೆಯನಿಗೋ ಅಪ್ಪನಿಗೋ ಅಮ್ಮನಿಗೋ ಅಥವಾ ಬೇರೆ ಯಾರಿಗೋ ಓದಿ ಹೇಳಬೇಕೆಂದು ಅನ್ನಿಸಿದರೆ ನೀನಿನ್ನೂ ಸಿದ್ಧನಾಗಿಲ್ಲ. ಎಷ್ಟೋ ಜನ ಲೇಖಕರ ಹಾಗೆ ಆಗಬೇಡ. ತಮ್ಮನ್ನು ಲೇಖಕರು ಎಂದು ಕರೆದುಕೊಳ್ಳುವ ಎಷ್ಟೋ ಸಾವಿರಾರು ಜನರ ಹಾಗ...

ಅನ್ವೇಷಕರು (ಅನುವಾದಿತ ಕವಿತೆ)

ಇಮೇಜ್
 ಅನ್ವೇಷಕರು ಮೂಲ: ಪಾಬ್ಲೋ ನೆರುಡಾ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಉತ್ತರದಿಂದ ತಂದನು ಅಲ್ಮಾಗ್ರೋ ಗುಡುಗು ಮಿಂಚಿನ ವಂಕಿ. ಮತ್ತು ಭೂಪಟದ ಮೇಲೆ ಬಾಗಿದಂತೆ ಕುಳಿತನು ಹಗಲೂರಾತ್ರಿ ಅತ್ತ ಹಿನ್ನೆಲೆಯಲ್ಲಿ ಬೆಳಗುತ್ತಿದ್ದಾಗ ಆಗಸವನ್ನು ವಿಸ್ಫೋಟಗಳು. ದತ್ತೂರಿಯ ನೆರಳು ಅವನು, ಮುಳ್ಳುಗಿಡದ ಅಂಟಿನ ನೆರಳು ಐತಂದು ಸ್ಪೇನ್ ದೇಶದಿಂದ ಐಕ್ಯನಾದನು ಒಣಕಲು ಆಕೃತಿಯಲ್ಲಿ ಕತ್ತು ಬಾಗಿಸಿ ಗಮನಿಸುತ್ತಾ ಭೂಮಿಯ ವ್ರಣಿತ ಹುನ್ನಾರಗಳನ್ನು. ಕತ್ತಲರಾತ್ರಿ, ಹಿಮ ಮತ್ತು ಉಸುಕು ಇವುಗಳಿಂದ ಆದದ್ದು  ನನ್ನ ತೆಳ್ಳನೆಯ ಪಿತೃಭೂಮಿ,  ಮೌನ ಆವರಿಸಿದೆ ಅದರ ಉದ್ದನೆಯ ಅಂಚನ್ನು. ಅದರ  ಕಡಲಗಡ್ಡದಿಂದ ಉಕ್ಕುತ್ತದೆ ನೊರೆ ಅದರ ಒಡಲನ್ನು ತುಂಬಿದೆ ಇದ್ದಲು ರಹಸ್ಯಮಯ ಮುತ್ತುಗಳಂತೆ. ಚಿನ್ನ ಉರಿಯುವುದು ಅದರ ಕೈಬೆರಳಲ್ಲಿ ಕೆಂಡದಂತೆ. ಬೆಳ್ಳಿ ಬೀರುವುದು ನಸುಬೆಳಕು  ಹಸಿರುಚಂದ್ರಮನಂತೆ ಈ ಸ್ಮಶಾನಭೂಮಿಯ ನೆರಳ ಮೇಲೆ. ಸ್ಪೇನ್ ದೇಶದಿಂದ ಬಂದು  ಗುಲಾಬಿಯ ಬಳಿಯಲ್ಲಿ ತೈಲದ ಬಳಿಯಲ್ಲಿ, ದ್ರಾಕ್ಷಾರಸದ ಬಳಿಯಲ್ಲಿ,  ವೃದ್ಧ ಆಕಾಶದ ಬಳಿಯಲ್ಲಿ  ಕೂತವನಿಗೆ  ಅರಿವಿಲ್ಲ ಒಂದು  ದಿನ  ಕಡಲಹದ್ದಿನ ಲದ್ದಿಯಿಂದ ಮೇಲೆದ್ದು ಬರಬಹುದು ಇಂಥದ್ದೊಂದು ಕೋಪಾವಿಷ್ಟ ಶಿಲೆ ಎಂದು.

ಹೆಣ್ಣು ಜಾತಿ (ಅನುವಾದಿತ ಕವಿತೆ)

ಇಮೇಜ್
  ಕೆಲವೊಮ್ಮೆ ನಿನಗೆ ಮಾತಾಡಬೇಕು ಎನ್ನಿಸುವುದು ಪ್ರೀತಿಯ ಕುರಿತು ಮತ್ತು ಹತಾಶೆಯ ಬಗ್ಗೆ ಹಾಗೂ ಮಕ್ಕಳ ಕೃತಘ್ನತೆಯ ವಿಷಯ. ಆಗ ಗಂಡಸರು ಏನೂ ಪ್ರಯೋಜನವಿಲ್ಲ. ನಿಮಗೆ ಬೇಕಾದದ್ದು ನಿಮ್ಮ ತಾಯಿ ಅಥವಾ ಸೋದರಿ ಅಥವಾ ಸ್ಕೂಲಿನಲ್ಲಿ ನಿಮ್ಮೊಂದಿಗೆ ಓದಿದ ಹುಡುಗಿ ನೀವು ಮೊದಲಸಲ ನಿಮ್ಮ ಹೃದಯವನ್ನು ಕೊಟ್ಟವಳು ಮತ್ತು ಅವಳ ಮೊದಲ ಮಗು - ಹೆಣ್ಣು - ಹಾಗೂ ನಿಮ್ಮ ಎರಡನೆಯದು. ಅವರೊಂದಿಗೆ ಕುಳಿತು ಮಾತಾಡುವಾಗ ಅವಳು ಹೊಲಿಗೆ ಹಾಕುವಾಗ ನೀವು ಕುಳಿತು ಗುಟುಕರಿಸುತ್ತಾ ಕೆದಕುವಿರಿ ಅಕ್ಕಿಯ ಧಾರಣೆ ಬಗ್ಗೆ ಚಹಾ ಬೆಲೆ ಕುರಿತು ಮತ್ತು ಗಿಣ್ಣು ಎಷ್ಟು ದುರ್ಲಭವೆಂಬ ವಿಷಯ. ನಿಮ್ಮಿಬ್ಬರಿಗೂ ಗೊತ್ತು ನಿಮ್ಮಿಬ್ಬರ ಈ  ಮಾತುಕತೆ ಪ್ರೇಮ ಮತ್ತು ಹತಾಶೆ ಕುರಿತು ಹಾಗೂ ಮಕ್ಕಳ ಕೃತಘ್ನತೆ.  ಮೂಲ: ಗೌರಿ ದೇಶಪಾಂಡೆ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ನನ್ನನ್ನಗಲಿ ಹೋಗದಿರು

ಇಮೇಜ್
 ಮೂಲ: ಪಾಬ್ಲೋ ನೆರುಡಾ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದೂರವೆಲ್ಲೂ ಹೋಗದಿರು ಒಂದೇ ದಿನವಾದರೂ ಏಕೆಂದರೆ ಹೇಗೆ ಹೇಳಲಿ ನಾನು ದಿನವೊಂದು ಸುದೀರ್ಘ ಕಾಲಮಾನ ನಾನು ಕಾಯುತ್ತಿರುವೆ ನಿನಗಾಗಿ, ಬೋಗಿಗಳು ಎಲ್ಲೋ ದೂರದಲ್ಲಿ ಮಲಗಿರುವ ಜನರಹಿತ ರೇಲ್ವೆ ನಿಲ್ದಾಣದಲ್ಲಿ  ಕಾದಂತೆ ದೂರವೆಲ್ಲೂ ಹೋಗದಿರು ಒಂದೇ ತಾಸಾದರೂ ಏಕೆಂದರೆ ಆತಂಕದ ಸಣ್ಣ.ಹನಿಗಳು ಒಗ್ಗೂಡಿ ಬಿಡುವುವು ಆಗ ಇರಲೊಂದು ಮನೆಗಾಗಿ ಅರಸುತ್ತಾ ಅಲೆಯುವ ಹೊಗೆ ಹೊಕ್ಕು ನನ್ನೊಳಗೆ, ಕಳೆದುಹೋದ ಹೃದಯ ಉಸಿರುಗಟ್ಟುವುದು ನಿನ್ನ ನೆರಳು ಎಂದೂ ಮರೆಯಾಗದಿ ರಲಿ ಕಡಲ ಕಿನಾರೆಯಲ್ಲಿ ಮೀಟದಿರಲಿ ನಿನ್ನ ಕಣ್ಣೆವೆ  ದೂರದ ಶೂನ್ಯದೊಳಗೆಂದೂ. ನನ್ನ ಪ್ರಿಯತಮೆಯೇ ಒಂದು ಕ್ಷಣವೂ ನನ್ನನ್ನು ಅಗಲದಿರು ಏಕೆಂದರೆ ಆ ಕ್ಷಣ ನೀನು ದಾಟಿಬಿಡುವೆ ಅದೆಷ್ಟು ದೂರ ಗೊತ್ತೇ, ನಾನು ನಿನ್ನನ್ನು ಅರಸುತ್ತಾ ಭೂಮಿಯ ಚಕ್ರವ್ಯೂಹದಲ್ಲಿ ಅಡ್ಡಾಡುತ್ತೇನೆ, ನೀನು ಮರಳಿ ಬರುವೆಯೋ ಇಲ್ಲ ನನ್ನನ್ನು ಸಾಯಲು ಬಿಟ್ಟು ಹೋದೆಯೋ ಎಂದು ಪ್ರಶ್ನಿಸಿಕೊಳ್ಳುತ್ತಾ.

ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ (ಪಾಬ್ಲೋ ನೆರುಡಾ)

ಇಮೇಜ್
 ಮೂಲ ಕವಿತೆ: ಪಾಬ್ಲೋ ನೆರುಡಾ ಅನುವಾದ: ಸಿ. ಪಿ. ರವಿಕುಮಾರ್ ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ ನನ್ನ ಮೃತ್ಯುವಿನ ಸಮಯದಲ್ಲಿ.   ನಿನ್ನ ಕೈಗಳ ಬೆಳಕು, ಗೋಧಿ ತೆನೆಯ ನವೋಲ್ಲಾಸ  ಇನ್ನೊಮ್ಮೆ ಹರಿದು ಬರಲಿ ನನ್ನತ್ತ.  ಮತ್ತೊಮ್ಮೆ ಅನುಭವಿಸುವೆನು ನನ್ನ ವಿಧಿಯನ್ನು ಬದಲಿಸಿದ ಅವುಗಳ ಮೃದುತ್ವ. ನಾನು ನಿದ್ರಿಸುವಾಗ ನಿನ್ನ ನಿರೀಕ್ಷೆಯಲ್ಲಿ  ನೀನು ಬದುಕಬೇಕೆಂದು ನನ್ನಾಸೆ.  ನಿನ್ನ ಕಿವಿಗಳಲ್ಲಿ ಮೊರೆಯುತ್ತಿರಲಿ ಸಮುದ್ರದ ಗಾಳಿ, ತೀಡುತ್ತಿರಲಿ ನಿನ್ನ ಬಳಿ ನಮಗಿಬ್ಬರಿಗೂ ಆಪ್ಯಾಯವಾಗಿದ್ದ ಕಡಲಿನ ಗಂಧ ನಾವಿಬ್ಬರೂ ನಡೆಯುತ್ತಿದ್ದ ಕಡಲತೀರದಲ್ಲಿ ಅಡ್ಡಾಡು ಎಂದಿನಂತೆ ಅನಂತಕಾಲವೂ ಜೀವಿಸಲಿ ನಾನು ಪ್ರೀತಿಸಿದ್ದೆಲ್ಲವೂ ಇನ್ನು ನೀನೋ ನನಗೆ ಪ್ರಿಯತಮ ನಿನ್ನನ್ನು ಪ್ರೀತಿಸಿದೆ ಎಲ್ಲಕ್ಕಿಂತಲೂ ಉತ್ಕಟವಾಗಿ ನಿನ್ನನ್ನು ಹಾಡಿದೆ ಅತ್ಯುಚ್ಚ ಕಂಠದಲ್ಲಿ ಹೀಗಾಗಿ ಸದಾ ಕುಸುಮಿಸುತ್ತಿರು ಓ ನನ್ನ ಕುಸುಮ! ನನ್ನ ಪ್ರೀತಿಯು ಆದೇಶಿಸಿದ್ದೆಲ್ಲವೂ ದೊರಕಲಿ ನಿನಗೆ ನನ್ನ ನೆರಳು ಹಾಯುತ್ತಿರಲಿ ನಿನ್ನ ಕುರುಳೊಳಗೆ ನನ್ನ ಹಾಡಿಗೆ ಕಾರಣ ತಿಳಿಯಲಿ ಅವರಿಗೆ ಹೀಗೆ.

ಮರೆಯದಿರು ನನ್ನನ್ನು (ಪಾಬ್ಲೋ ನೆರುಡಾ)

ಇಮೇಜ್
ಮರೆಯದಿರು ನನ್ನನ್ನು ಮೂಲ: ಪಾಬ್ಲೋ ನೆರುಡಾ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನನ್ನದೊಂದು ಅರಿಕೆ ಇದೆ ನಿನ್ನೊಳಗೆ. ನಿನಗೆ ಗೊತ್ತೇ ಇದೆ: ನಾನು  ದಿಟ್ಟಿಸಿದಾಗ ಸ್ಫಟಿಕಚಂದ್ರನನ್ನು ಅಥವಾ ನನ್ನ ಕಿಟಕಿಯ ಸರಕುಗಳ ಹೊರಗೆ ತೆವಳುವ ಶಿಶಿರದ ಕೆಂಪು ಟೊಂಗೆಯನ್ನು, ಮುಟ್ಟಿದಾಗ ಬೆಂಕಿಯ ಬಳಿ ಉದುರಿ  ಬೆರಳಿಗೆ ಸಿಕ್ಕಿದರೂ ಸಿಕ್ಕದ ಬೂದಿಯನ್ನು  ಅಥವಾ ನೇವರಿಸಿದಾಗ ಸುಕ್ಕುಗಟ್ಟಿದ ಮರದ ಕಾಂಡ, ಇವೆಲ್ಲವೂ  ಕರೆದೊಯ್ಯುವುದು ನನ್ನನ್ನು ನಿನ್ನ ಬಳಿಗೇ. ಸೃಷ್ಟಿಯ ಎಲ್ಲ ವಾಸನೆಗಳು, ಬೆಳಕು, ಲೋಹಗಳು,  ಎಲ್ಲವೂ ಪುಟ್ಟ ದೋಣಿಗಳಾಗಿ ಚಲಿಸುತ್ತವೆ  ನನಗಾಗಿ ಕಾದಿರುವ ನಿನ್ನ ದ್ವೀಪಗಳ ಕಡೆಗೆ.  ಆದರೆ  ಬತ್ತಿಹೋದರೆ ನನ್ನ ಕುರಿತಾದ  ನಿನ್ನ ಪ್ರೀತಿಯ ಒರತೆ ನಿಧಾನವಾಗಿ ಬತ್ತಿ ಹೋಗುವುದು ನನ್ನ ಪ್ರೀತಿಯ ಸೆಲೆ. ಮರೆತೆಯಾದರೆ ನನ್ನನ್ನು ಅರಸದಿರು ನನ್ನನ್ನು  ಮರೆತರೆ ನನ್ನನ್ನು ಅರಸಲು ಹೋಗದಿರು ಏಕೆಂದರೆ  ನಾನು ಆಗಲೇ ಮರೆತುಬಿಟ್ಟಿರುತ್ತೇನೆ ನಿನ್ನನ್ನು.  ನೀನು ದೀರ್ಘವಾಗಿ ಯೋಚಿಸಿ ನೋಡು : ಬಾವುಟಗಳನ್ನು ಹಾದು ಬಂದು ನನ್ನ ಬಾಳಲ್ಲಿ ಬೀಸುವ ಗಾಳಿಯೇ ತ್ಯಜಿಸುವೆಯಾದರೆ ನನ್ನನ್ನು  ನನ್ನ ಬೇರುಗಳಿರುವ ಹೃದಯದ ತೀರದಲ್ಲಿ ನೆನಪಿರಲಿ, ಅಂದೇ ಅದೇ ಘಳಿಗೆ ನಾನು ಮೇಲೆತ್ತುವೆನು ನನ್ನ ತೋಳುಗಳನ್ನು ಮತ್ತು ನನ್ನ ಬೇರುಗಳು ವಲಸೆ ಹೊರಡುತ್ತವೆ  ಬೇರೊಂದು ನಾಡನ್ನು...

ಪ್ರೀತಿ (ಪಾಬ್ಲೊ ನೆರೂಡಾ)

ಇಮೇಜ್
 ಪ್ರೀತಿ ಪಾಬ್ಲೋ ನೆರೂಡಾ ಅನುವಾದ: ಸಿ. ಪಿ. ರವಿಕುಮಾರ್ ನೀನೊಂದು ಉಪ್ಪಿನ ಗುಲಾಬಿಯೋ, ನೀಲಮಣಿಯೋ  ಬೆಂಕಿ ಪ್ರವಹಿಸುವ ಕಾರ್ನೇಷನ್ ಹೂಗಳ ಬಾಣವೋ ಎಂಬಂತೆ ನಿನ್ನನ್ನು ಪ್ರೀತಿಸುವುದಿಲ್ಲ ನಾನು.  ಹೇಗೆಂದರೆ ನಿನ್ನ ಕುರಿತಾದ ನನ್ನ ಪ್ರೀತಿ ನೆರಳು ಮತ್ತು ಆತ್ಮಗಳಂತೆ ಅಮೂರ್ತವಾದದ್ದನ್ನು ನಾವು ಗುಪ್ತವಾಗಿ ಪ್ರೀತಿಸುವುದಿಲ್ಲವೇ ಹಾಗೆ. ತಾನೇ ಅರಳದಿದ್ದರೂ ಗಿಡವು ಹೊರುವುದಿಲ್ಲವೇ ತನ್ನಲ್ಲಿ ಬಚ್ಚಿಟ್ಟುಕೊಂಡ ಹೂವುಗಳ ಬೆಳಕನ್ನು ಹಾಗಿದೆ ನಿನ್ನನ್ನು ಕುರಿತಾದ ನನ್ನ ಪ್ರೀತಿ. ಮಣ್ಣಿನಿಂದ ಎದ್ದ ಗಾಢ ಸುಗಂಧ ನನ್ನೊಳಗೆ ಎಲ್ಲೋ ಮಂಕಾಗಿ ಮನೆಮಾಡಿರಲು ಕಾರಣವೇ ನಿನ್ನ ಪ್ರೀತಿ. ನಿನ್ನನ್ನು ಕುರಿತಾದ ನನ್ನ ಪ್ರೀತಿ ಅರಿಯದು  ಹೇಗೆ ಯಾವಾಗ ಎಲ್ಲಿಂದ ಎಂಬ ಪ್ರಶ್ನೆಗಳ ಉತ್ತರ. ಗರ್ವವಿಲ್ಲ ಅದರಲ್ಲಿ ,ತೊಡಕಿಲ್ಲ, ಏನಿದ್ದರೂ ನೇರ ಪ್ರೀತಿ ಮಾತ್ರ. ಹೀಗೇಕೆ ಪ್ರೀತಿಸುವೆ ನಾನೆಂದು ಕೇಳಿದರೆ ಅರಿಯೆ ನಾನು ಬೇರಾವ ರೀತಿ. ಪ್ರೇಮದ ಈ ರೂಪದಲ್ಲಿ ಮಾತ್ರವೇ ನಾನು ಮತ್ತು ನೀನೂ ಕೂಡಾ ಇರಬಲ್ಲೆವು ತೀರಾ ಸನಿಹಕ್ಕೆ ಬಾರದಂತೆ ಎಷ್ಟು ಸನಿಹವೆಂದರೆ ನಿನ್ನ ಕೈಯಿದೆ ನನ್ನೆದೆಯ ಮೇಲೆ ಮತ್ತು ನನ್ನ ಕನಸುಗಳನ್ನು ಹೊತ್ತು ಮುಚ್ಚುವುವು ನಿನ್ನ ಕಣ್ಣೆವೆ.

ನಿಮ್ಮ ಪಿನ್ ಬದಲಾಯಿಸಿ

ಇಮೇಜ್
  ಇವತ್ತೊಂದು ಭಯಾನಕ ಅನುಭವ. ಒಂದೆರಡು ದಿನಗಳ ಹಿಂದೆ ನನ್ನ ಫೋನ್ "ನಿಮ್ಮ ಪಿನ್ ಬದಲಾಯಿಸಿ" ಅಂತ ಒಂದೇ ಸಮನೆ ಹೊಡಕೋತಿತ್ತು.  ಪಿನ್ನು ಪಿನ್ನೆಂದೇಕೆ ಗೋಳುಗರೆವರು ನನ್ನ ಪಾಡಿಗೆ ನನ್ನ ಬಿಡದ ಕಾವಲರು ಎಂದು ನಾನು ಕುಪಿತನಾದೆ. ಎಲ್ಲೆಡೆ ಈ ಕಾವಲರ ಅಥವಾ ಸೆಕ್ಯೂರಿಟಿಯವರದ್ದೆ ರಾಜ್ಯ.  ಪಿನ್ನು ಪಾಸ್ವರ್ಡ್ ಬಯೋಮೆಟ್ರಿಕ್ಸ್  ಕಾಪ್ಚ ನನ್ನದೇ ಫೋನ್ ಬಳಸಲು ನನಗೆಷ್ಟು ಕಷ್ಟ  ಎಂದು ನಾನು ದಾಸರ ಶೈಲಿಯಲ್ಲಿ  ಹಾಡುವ ಮುನ್ನ ಹಾಳಾಗಿ ಹೋಗಲಿ ಎಂದು ಪಿನ್ ಬದಲಾಯಿಸಿದೆ. ಹಳೆಯ ಪಿನ್ನನ್ನೇ ಏನೋ ಒಂದಿಷ್ಟು ಅದಲು ಬದಲು ಮಾಡಿ ಹೊಸ ಪಿನ್ ತಯಾರಿಸಿ ಪಿನ್ ಪೀಡೆಯಿಂದ ಪಾರಾದೆ.   ನನ್ನ  ಹೆಬ್ಬೆಟ್ಟು ಗುರುತಿನಿಂದ ಖುಲ್ ಜಾ ಸಿಮ್ ಸಿಮ್ ಎಂದು ಅಣತಿ ಮಾಡುತ್ತಿದ್ದ ನನಗೆ ಇವತ್ತು ಬೆಳಗ್ಗೆ ಫೋನ್ ಪಿನ್ ಹೇಳೆಂದು ಕೇಳಿತು. ಆಲಿಬಾಬಾನ ತಮ್ಮನಿಗೂ ಇಂಥದ್ದೇ ಏನೋ ಆಗಿರಬಹುದು. ನಿಮಗೆ ಈ ಆಲಿಬಾಬಾ ಕಥೆ ಗೊತ್ತು ತಾನೇ? ಕಳ್ಳರಿಂದ ಕಳ್ಳತನದ ಮಾಲನ್ನು ಕಳ್ಳತನ ಮಾಡಿದವನಿಗೆ ಬಾಬಾ ಎಂಬ ಹೆಸರು ಯಾಕೆ ಬಂತೋ ಎಂದು ನಾನು ಹಿಂದೆ ಯೋಚಿಸುತ್ತಿದ್ದೆ.  ನಮ್ಮ ಜೀವಮಾನದಲ್ಲಿ ಅದೆಷ್ಟೋ ಬಾಬಾಗಳು ಸ್ವಾಮಿಗಳು ಇಂಥದ್ದೇ ಸಾಧನೆಗಳನ್ನು ಮೆರೆದು ನನ್ನ ಅನುಮಾನ ಪರಿಹಾರವಾಗಿದೆ. ಈ ಆಲಿಬಾಬಾನ ತಮ್ಮನ ಹೆಂಡತಿಗೆ ತನ್ನ ಓರಗಿತ್ತಿ ಒಮ್ಮೆಲೇ ಒಳ್ಳೊಳ್ಳೆಯ ಉಡುಗೆ ತೊಟ್ಟು ಒಳ್ಳೊಳ್ಳೆಯ ಅಡುಗೆ ಮಾಡುವುದು ಇವೆಲ್ಲ ಕ...

ಬೇಲಿ ಚಾತಕ

 ಬೇಲಿ ದೀರ್ಘವಾದದ್ದೇನು ಬರೆಯಲಾದೀತು ನಿನ್ನನ್ನು ಕುರಿತು ಓ ಬೇಲಿ ಚಟಕ! ಬರೆಯಬಹುದೇನೋ ನಾಲ್ಕುಸಾಲಿನ ಚುಟಕ - ಬರೆಯಲೇನಿದೆ ಹೇಳು! ಭವ್ಯವಾದದ್ದುದೇನನ್ನೂ ಬ್ರಹ್ಮ ಬರೆಯಲಿಲ್ಲ ನಿನ್ನ ವಿಧಿಯಲ್ಲಿ!  ಬಣ್ಣ ಏಕಪ್ರಕಾರ, ಕಡುಗಪ್ಪು. ಸಾಧಾರಣ ಗಾತ್ರ. ಎಲ್ಲರಿಗೂ ಕೊಡಲಾದೀತೆ ಹೀರೋ ಪಾತ್ರ! ಕೊಡಲಿಲ್ಲ ಕೋಗಿಲೆಯ ಕೂಜನದ ಕಂಠಸಿರಿ ಗಿಳಿಯ ಬಣ್ಣ, ಹದ್ದಿನ ಕಣ್ಣು, ನವಿಲಿನ ಗರಿ ಹಾಕಿಬಿಡುತ್ತಾನೆ ವಿಧಿ ಹೀಗೆ ಬಾಳಿಗೆ ಬೇಲಿ ಚೂರೇ ಚಿನ್ನದಲ್ಲಿ ಎಳೆ ಹೊಸೆವಂತೆ ಅಕ್ಕಸಾಲಿ! ಆದರೂ ನಿನ್ನ ಭಾಗ್ಯವೇ! ಕ್ಯಾಮೆರಾ ಕಣ್ಣಿಗೆ ಬಿದ್ದು ಭಗವತಿಯ ಕೃಪೆಯಲ್ಲಿ ಮುಳುಗಿ ಮಿಂದೆದ್ದು ದಾಟಿರುವೆಯಲ್ಲ  ವಿಧಿಯ ಮುಳ್ಳುಬಳ್ಳಿಯಬೇಲಿ ನೀಡುತ್ತಿದೆ ಸಂದೇಶ ನಮ್ಮೆಲ್ಲರ ಬಾಳಲ್ಲಿ ಒಂದಾದರೂ ತಿರುವು, ಒಂದಾದರೂ ಭಾಗ್ಯರೇಖೆ ಬರೆದಿರುವನು, ಕಾಯೋಣ ಬರುವುದಮೃತಘಳಿಗೆ! ಸಿ.ಪಿ. ರವಿಕುಮಾರ್ (ಫೋಟೋಗ್ರಾಫರ್  ಭಗವತಿ ಅವರಿಗೆ)

ನಾಳೆ

ಇಮೇಜ್
 ಮೂಲ ಕವಿತೆ: ಸಾರಾ ಟೀಸ್ಡೇಲ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಹೊಯ್ಯುವುದು ಮೆಲ್ಲಗೆ ಮಳೆ, ನೆಲದ ಗಂಧ ಹರಡುವುದು ಗಾಳಿಯೊಳು ಸುತ್ತುವುವು ಸ್ವಾಲೋ ಹಕ್ಕಿಗಳು ಮಾಡುತ್ತ ಥಳಥಳ ಹೊಳೆವ ಸದ್ದು ಹಾಡುವುವು ಕೆರೆಬಾವಿಗಳಲ್ಲಿ ಕಪ್ಪೆಗಳು ಕವಿದಾಗ ಇರುಳು ಕಾಡು ಪ್ಲಮ್ ಮರಗಳು ನಡುಗುವುವು ಬಿಳಿಯ ಹೂ ತೊಟ್ಟು. ರಾಬಿನ್ ಹಕ್ಕಿಗಳು ಧರಿಸುವುವು ರೆಕ್ಕೆಗಳಲ್ಲಿ ಅಗ್ನಿಜ್ವಾಲೆ ಹಾಡುವವು ಬೇಲಿಯ ತಂತಿಯ ಮೇಲೆ ಸಿಳ್ಳೆ ಹೊಡೆಯುತ್ತ ಇವರಲ್ಲಿ ಯಾರಿಗೂ ತಿಳಿಯದು ಯಾಕೆ ನಡೆಯಿತು ಯುದ್ಧ ಯಃಕಶ್ಚಿತ್ ಕೌತುಕವಿಲ್ಲ ಮಗುಚಿದಾಗ ಇತಿಹಾಸದ ಹಾಳೆ ನಾಶವಾದರೂ ಸಂಪೂರ್ಣವಾಗಿ ಮನುವಂಶ ಇವರಾರಿಗೂ ಇಲ್ಲ ಯಃಕಶ್ಚಿತ್ ಪರಿವೆ ನಸುಕು ಕಣ್ತೆರೆದ ವಸಂತನಿಗೆ ಇರದು ಅರಿವೇ ನಾವೆಲ್ಲ ತೆರಳಿದೆವೆಂಬ ಇತಿಹಾಸದ ಅಂಶ.

ವಿಜ್ಞಾನ ಲಿಮರಿಕ್

 (1) ಹೆಚ್ಚು ಮರ ಸಿಕ್ಕಷ್ಟೂ ಹೆಚ್ಚು ಸಿಕ್ಕುವುದು O2 ಚುನಾವಣೆಗೆ ನಿಂತವರಿಗೆ ಹೇಳಿ ಈ  ಗುಟ್ಟು! ನೆಡಿಸಿ ಮರಗಳ ಸಾಲು ಕಡುಬೇಸಗೆಯಲ್ಲೂ ನೆಳಲು ಕೊಟ್ಟವರನ್ನು ಆರಿಸೋಣ ನಮ್ಮ ಮತ ಕೊಟ್ಟು (2) ಸಾಗರದ ಮೇಲೆ ಬಂದಾಗ ಸೂರ್ಯ ಪ್ರಾರಂಭ ಫೋಟೋಸಿಂಥೆಸಿಸ್ ಕಾರ್ಯ ಸಮುದ್ರದಲ್ಲಿರುವ ಅಸಂಖ್ಯ ಫೋಟೋಪ್ಲಾಂಕ್ಟನ್ ನೀಡುತ್ತವಲ್ಲ ಉಪಉತ್ಪನ್ನವಾಗಿ ಆಕ್ಸಿಜನ್! ಅರವತ್ತು ಪರ್ಸೆಂಟ್ O2 ಹಾಕಿದ್ದು ಇವರೇ, ಮರೆತೀಯ!! (3) ನೀನು ಮಾಡಿದ ದೋಸೆಯ ಘಮ ತೇಲಿ ಬಂದಾಗ, ಪ್ರಿಯೇ ಜೊಲ್ಲು ಸುರಿಯುವುದು ಒಂದು ಸಾಮಾನ್ಯ ಪ್ರತಿಕ್ರಿಯೆ! ಜೊಲ್ಲು ಇಲ್ಲದೆ ದೋಸೆಯ ರುಚಿ ಏನೇನೂ ತಿಳಿಯಲಾರದು ಪ್ರಿಯೇ ಮಾನವನ ಬ್ರೇನು ಆಹಾರ ಕರಗಿದಾಗ ಜೊಲ್ಲಿನಲ್ಲಿ ಪ್ರಾರಂಭ  ನಾಲಗೆಯ ಆಸ್ವಾದ ಪ್ರಕ್ರಿಯೆ! (4) ಹೀಲಿಯಮ್ಮನ್ನು ಮೈನಸ್ ೨೬೯ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಿರಿ ಬೀಕರಿನ ಗೋಡೆ ಹತ್ತಿ ಉಪದ್ರವ ಮಾಡಿ ಗುರುತ್ವವಿಲ್ಲದ ಸೂಪರ್ ದ್ರವ ಗಾಜಿನಣುಗಳ ಮೂಲಕವೂ ಸೋರುವುದು ಕಣ್ರೀ! (5) ಸಾಗರದ ಮೇಲೆ ನಗುವ ಅಸಂಖ್ಯ ನಕ್ಷತ್ರ ನೋಡುತ್ತಿವೆ ಪಯೋನಿಧಿ ಎಂಬ ಪುಣ್ಯಕ್ಷೇತ್ರ: ಅಲ್ಲಿ ಫೈಟೋಪ್ಲಾಂಕ್ಟನ್ ಎಂಬ ಅಸಂಖ್ಯ ಸೂಕ್ಷ್ಮಾಣು ದಿನವಿಡೀ ಮೌನವಾಗಿ ಮಾಡುತ್ತಿರುವ ತಪವೇನು? ಕಾರ್ಬನ್ ಡೈಯಾಕ್ಸೈಡ್ ಶೇಖರಿಸಿಟ್ಟು ನೀಡುತ್ತಿವೆ ಆಕ್ಸಿಜನ್ ಮಾತ್ರ! (6) ಚಂದ್ರ ಭೂಮಿಯ ಭಾಗವೇ ಆಗಿದ್ದನಂತೆ  ದುರ್ಘಟನೆಯೊಂದು ಪ್ರತ್ಯೇಕತೆ ತಂತಂತೆ  ಎಲ್ಲಿಂದಲೋ ಬಂದ ಮಹಾ...