ವ್ಯವಸ್ಥೆ ಬದಲಾಯಿಸುವುದು

Person Dropping Paper On Box

ಈ ವ್ಯವಸ್ಥೆಯನ್ನು ಶಾಸಕ ಬದಲಾಯಿಸುವನೆ?
ಅವನು ನನ್ನ ವೋಟಿನಿಂದಲೇ ಗೆದ್ದು ಬಂದು
ನನ್ನ ಕನಸುಗಳಿಗೇ ತೆರಿಗೆ ಹಾಕುತ್ತಾನೆ.

ಬಂಡವಾಳಕೋರ ಬದಲಾಯಿಸುವನೆ ಈ ವ್ಯವಸ್ಥೆ ?
ಅವನು ನನ್ನಿಂದ ಹನ್ನೆರಡು ಗಂಟೆ ದುಡಿಸಿ
ಎಂಟು ಗಂಟೆಯ ಸಂಬಳದಲ್ಲೂ ಕಡಿತ ಮಾಡುವವನು.

ಬುದ್ದಿಜೀವಿ ಬದಲಾಯಿಸಬಲ್ಲನೇ?
ಅವನು ಒಂದು ಸೈಟು ಅಥವಾ ವಿದೇಶಪ್ರವಾಸಕ್ಕಾಗಿ
ಆಡಳಿತದಲ್ಲಿರುವವರ ಗುಣಗಾನ ಮಾಡಲು
ಶಬ್ದಗಳನ್ನು ಸಂಗ್ರಹಿಸುತ್ತಿರುತ್ತಾನೆ.

ವ್ಯವಸ್ಥೆಯನ್ನು ವರ್ತಕ ಹೇಗೆ ಬದಲಾಯಿಸಬಲ್ಲ?
ಬಜೆಟ್ ಬಂದ ಕೂಡಲೇ
ಅದರ ರಿಯಾಯಿತಿಯೆಲ್ಲಾ ತಾನು ಕಬಳಿಸಿ
ನನ್ನ ಖಾತೆಗೆ ಬೆಲೆಯೇರಿಕೆಯನ್ನು ಜಮೆ ಮಾಡುವವನು?

ಇನ್ನು ಪುಡಾರಿ ವ್ಯವಸ್ಥೆಯನ್ನು ಕಾಪಾಡದೆ ಏನು ಮಾಡಿಯಾನು?
ಅದರ ಕೃಪೆಯಿಂದಲ್ಲವೇ ಅವನು
ಸರಕಾರಿ ಶಾಲೆ ಡಿಸ್ಪೆನ್ಸರಿಗಳಲ್ಲಿ ತನ್ನ ಆಕಳು ಎಮ್ಮೆ ಕಟ್ಟಿ
ಸರ್ಕಾರದ್ದಲ್ಲದ ಮರದ ನೆರಳಲ್ಲಿ ಪಾಠ ಹೇಳುವ ಹಠಮಾರಿ ಶಿಕ್ಷಕನಿಗೆ
ಜೀಪ್ ಹಿಂದಕ್ಕೆ ಕಟ್ಟಿ ಎಳೆದೊಯ್ಯುವ
ಬೆದರಿಕೆ ಹಾಕಬಲ್ಲ?

ನಾನು ಪತ್ರಕರ್ತನನ್ನು ವ್ಯವಸ್ಥೆ ಬದಲಾಯಿಸಲು ಕೋರಿದೆ.
ಅವನು ಗುಮಾಸ್ತೆಯ ಜೊತೆ ಕುಳಿತು
ಚಹಾ ಹೀರುವುದರಲ್ಲೇ ಮಗ್ನನಾಗಿದ್ದ.

ಇದೆಲ್ಲಾ ತಿಳಿದೇ ನಾನು ನನ್ನ ಚಹರೆಯನ್ನು
ಮುಂದಿನ ಐದು ವರ್ಷಗಳವರೆಗೆ
ಗ್ರಾಮಲೆಕ್ಕಿಗನಿಗೆ ಕೊಟ್ಟುಬಿಡುತ್ತೇನೆ.
ಅವನು ಅದನ್ನು ಚಿತ್ರಪುಸ್ತಕದಲ್ಲಿ ಸುತ್ತಿಟ್ಟುಕೊಂಡು
ವೋಟಿನ ಚೀಟಿಯಲ್ಲಿ ನನ್ನ ಹೆಬ್ಬೆರಳಿನ ಗುರುತನ್ನು
ತಾನೇ ಹಾಕಿಬಿಡುತ್ತಾನೆ

ಮೂಲ ಉರ್ದೂ: ಜಾಹಿದ್ ಮಸೂದ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)