ಸಾಲದಲ್ಲಿ ಸ್ವರ್ಗ
ಮೂಲ .. ನಂದ್ ಸಾರಸ್ವತ್ ಹೇಮಾಸರ್
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್

ನಡೆಯುತ್ತಿದೆ ಅಪ್ಪನ ಹನ್ನೆರಡನೇ ದಿನದ ಕಾರ್ಯ
ನಡೆಯುತ್ತಿದೆ ಸ್ವರ್ಗದ ಬಾಗಿಲು ತೆರೆಸುವ ಕಾರ್ಯ
ಇನ್ನಷ್ಟು ದಿನ ಬದುಕಿರುತ್ತಿದ್ದನೇನೋ ನಡೆಸಿದ್ದರೆ ಚಿಕಿತ್ಸೆ
ಹಿತ್ತಲಲ್ಲಿ ನಡೆಯುತ್ತಿದೆ ವಡೆ ಪಾಯಸ ಕಾರ್ಯ
ಚಳಿಗೆ ನಡುಗುತ್ತಿದ್ದ ಅಪ್ಪ ನಿದ್ದೆ ಹತ್ತದೆ ಕಣ್ಣಿಗೆ
ಅವನ ನೆನಪಿನಲ್ಲೀಗ ಶಾಲು ವಿತರಿಸುವ ಕಾರ್ಯ
ಮಾತಾಡುತ್ತಿರಲಿಲ್ಲ ಅವನ ಮುಖಕ್ಕೆ ಮುಖಕೊಟ್ಟು
ಈಗ ಅವನ ಗುಣಗಾನ ಗುಣುಗುಣಿಸುವ ಕಾರ್ಯ
ವಿಚಿತ್ರವಾದವು ನೋಡಿ ಈ ಜಗದ ರೀತಿನೀತಿಗಳು
ಸಾಲ ಮಾಡಿ ಋಣದ ಭಾರ ಇಳಿಸುವ ಕಾರ್ಯ
ಸ್ವರ್ಗ ಪಡೆಯಲು ಅದೆಷ್ಟೋ ವಸ್ತು ವಿಶೇಷಗಳು
ಗೋದಾನ ಮಾಡಿ ಗಂಗೆಯನು ದಾಟಿಸುವ ಕಾರ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ