ಜೀವಂತ
ಮೂಲ ... ಜಾಹೀದ್ ಮಸೂದ್
ಕನ್ನಡಕ್ಕೆ ... ಸಿ.ಪಿ.ರವಿಕುಮಾರ್
ದಿನಕ್ಕೆ ನೂರು ರೂಪಾಯಿ ನನ್ನ ಸಂಪಾದನೆ.
ಮಗನಿಗೆ ಟಯರ್ ಪಂಚರ್ ಅಂಗಡಿಯಲ್ಲಿ ಕೆಲಸ.
ಮಾಲೀಕನ ಬೈಗುಳ ಮತ್ತು ಏಟುಗಳಲ್ಲದೆ
ದಿನಕ್ಕೆ ಮೂವತ್ತು ರೂಪಾಯಿ ಗಳಿಸುತ್ತಾನೆ.
ಹೆಂಡತಿ ಮತ್ತು ಒಂಬತ್ತು ವರ್ಷದ ಮಗಳು
ನಾಲ್ಕು ಮನೆಯಲ್ಲಿ ಕಸಮುಸುರೆ ಮಾಡುತ್ತಾರೆ.
ಈ ನನ್ನ ದೊಡ್ಡ ಕುಟುಂಬದ ಎಲ್ಲರೂ
ಒಟ್ಟಿಗೆ ಕೂತು ನಾಷ್ಟಾ ಮಾಡಿದ್ದೋ
ರಾತ್ರಿ ಊಟದ ನಂತರ ಮಾತಾಡುತ್ತಾ ಕುಳಿತದ್ದೋ
ನನಗೆ ನೆನಪಿಲ್ಲ.
ನನ್ನ ಮಕ್ಕಳು ನನ್ನಿಂದ ಬೇಡುವುದಿಲ್ಲ ಈದ್ ಇನಾಮು.
ಹೆಂಡತಿ ಕೇಳುವುದಿಲ್ಲ ಕಿವಿಯೋಲೆ ಅಥವಾ ಹೂಮಾಲೆಯನ್ನು.
ನಾವು ಊಟ ಮಾಡುವುದಕ್ಕಾಗಿ ಸಾಯುತ್ತೇವೆ.
ಯೂಟಿಲಿಟಿ ಬಿಲ್ ತೆರಲು ಜೀವಂತವಾಗಿದ್ದೇವೆ.
ಪರಸ್ಪರ ಸಂಧಿಸುತ್ತೇವೆ ಅಪರಿಚಿತರಂತೆ.
ಬದುಕುತ್ತೇವೆ ಪೂರ್ವಜರ ಮನೆಯಲ್ಲಿ ಬಾಡಿಗೆದಾರರಂತೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ