ಬಾಟಲಿಯಲ್ಲೊಂದು ಸಂದೇಶ

ಸಿ. ಪಿ. ರವಿಕುಮಾರ್

Message Bottle on Sand

ಕೋಲಾ ಕಂಪನಿಯ ಮೇಲಧಿಕಾರಿಯೊಬ್ಬ
ರಜಾ ಕಳೆಯಲು ಬಂದಿದ್ದಾನೆ ಬೀಚ್ ರಿಸಾರ್ಟಿಗೆ.
ಅವನೊಂದಿಗೆ ಅವನ ಭಾವೀ ಮೂರನೇ ಮಡದಿ
ಬೀರುತ್ತಾಳೆ ಶಾಂಪೇನ್ ಚಪ್ಪರಿಸುತ್ತಾ ಮಾದಕನಗೆ.
ಅವನು ಮದುವೆಯ ಪ್ರಸ್ತಾಪ ಮಾಡಬಹುದು
ಪುಳಕಿತಳಾಗುತ್ತಾಳೆ ಈ ಯೋಚನೆಗೆ.

ಅವಳು ಕುಳಿತಿದ್ದಾಳೆ ಕಡಲಿಗೆ ಹತ್ತಿರದಲ್ಲೇ ಈಜುಡುಗೆಯಲ್ಲಿ.
ಸನ್ ಸ್ಕ್ರೀನ್ ಲೋಷನ್ ಬಾಟಲಿ ಹಿಡಿದು ಕೈಯಲ್ಲಿ.
ಸೆಲ್ ಫೋನ್ ಮೇಲೆ ಮಾತಾಡುತ್ತಾ
ಬಣ್ಣದ ಹವಾಯಿ ಶರ್ಟ್ ತೊಟ್ಟ ಅವನು
ಬಾರ್ ಬೆಂಚಿನ ಮೇಲಿಂದ ರಭಸದಿಂದ ಕೈಬೀಸುತ್ತಾನೆ ಅವಳತ್ತ.

ಅವಳಿಗೆ ಕಾಣುತ್ತದೆ ಒಂದು ಬಾಟಲ್ ತೇಲುತ್ತಾ
ಬರುತ್ತಿರುವುದು ದಂಡೆಯ ಕಡೆಗೆ.
ಕಾಲ ಬಳಿಗೇ ಬಂದು ಬಿದ್ದಾಗ ಕುತೂಹಲದಿಂದ ಮೇಲೆತ್ತಿಕೊಳ್ಳುತ್ತಾಳೆ.
ಅದರಲ್ಲೊಂದು ಕಾಗದವಿದೆ!

ಪ್ರಿಯತಮನು ಕಳಿಸಿರಬಹುದೇ ಮದುವೆಯ ಪ್ರಸ್ತಾಪ ನೂತನ ರೀತಿಯಲ್ಲಿ!
ಮತ್ತಷ್ಟು ಕೆಂಪಾಗುತ್ತದೆ ಅವಳ ಕೆನ್ನೆ.
ಬಾಟಲ್ ತೆರೆದಾಗ ಅದರಲ್ಲಿ ಒಂದು ಸಂದೇಶವಿದೆ.
ಕೋಲಾ ಕಂಪನಿಯ ಮಾಲೀಕರೇ ನಿಮಗೊಂದು ಆಗ್ರಹ.
ನಿಮ್ಮ ಪ್ಲಾಸ್ಟಿಕ್ ಬಾಟಲು ತುಟಿಯ ಮೇಲೆ ಒಂದೆರಡು ನಿಮಿಷ
ನಂತರ ಕಡಲಿನಲ್ಲಿ ಕಳೆಯುತ್ತದೆ ನೂರಾರು ವರ್ಷ.
ಆಮೆ, ಮೀನು, ಕಡಲಾನೆ ಇಂಥ ಎಷ್ಟೋ ಜೀವಗಳಿಗೆ ಸರ್ವನಾಶ.


ಅವಳು ಪೆಚ್ಚಾಗಿ ಅವನ ಕಡೆ ನೋಡುತ್ತಾಳೆ.
ಅವನು ಅವಳತ್ತ ಕೈಬೀಸಿ
ಗಾಳಿಚುಂಬನವನ್ನು ಅವಳಿಗೆ ರವಾನಿಸಿ
ಸಂಭಾಷಣೆ ಮುಂದುವರೆಸುತ್ತಾನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)