ಅಮೀರ್ ಖುಸ್ರೋನ ಒಗಟುಗಳು

Red and Black Wooden Chest on White Sand
ಮೂಲ - ಅಮೀರ್ ಖುಸ್ರೋ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

रात समय वह मेरे आवे। भोर भये वह घर उठि जावे॥
यह अचरज है सबसे न्यारा। ऐ सखि साजन? ना सखि तारा॥


ಸರಿರಾತ್ರಿ ನನ್ನ ಮನೆಗೆ ಬರುತಾರೆ | ಬೆಳಗಾಗ ಮೇಲೆದ್ದು ಹೊರಟುಬಿಡುತಾರೆ ||
ಜಾಣರಾದವರು ಈ ರಹಸ್ಯ ಬಿಡಿಸುತಾರೆ  | ಗೆಳೆಯನೇನೇ ಸಖೀ? ಅಲ್ಲವೇ, ತಾರೆ||

नंगे पाँव फिरन नहिं देत। पाँव से मिट्टी लगन नहिं देत॥पाँव का चूमा लेत निपूता। ऐ सखि साजन? ना सखि जूता॥

ಬರಿಗಾಲಿನಲ್ಲಿ ನಡೆಯಲು ಬಿಡುವುದಿಲ್ಲ | ಮಣ್ಣು ಕಾಲಿಗೆ ಹತ್ತಲು ಬಿಡುವುದಿಲ್ಲ ||
ಮಾತುಮಾತಿಗೆ ಪಾದ ಚುಂಬಿಸುವ ಮತ್ತು | ಗೆಳೆಯನೇನೇ ಸಖೀ? ಅಲ್ಲ, ಮುಳ್ಳೊತ್ತು ||

वह आवे तब शादी होय। उस बिन दूजा और न कोय॥मीठे लागें वाके बोल। ऐ सखि साजन? ना सखि ढोल॥

ಬರುವನು ಅವನು ಮದುವೆಯ ದಿವಸ |  ಅಂದಿಲ್ಲ ಬೇರಾರಿಗೂ ಒಳಗೆ ಪ್ರವೇಶ ||
ಅವನು ನುಡಿದರೆ ಎಷ್ಟು ಸುಖಿಸುವನು ಕೇಳುಗ | ಗೆಳೆಯನೇನೇ ಸಖಿ? ಅಲ್ಲವೇ, ಓಲಗ ||

जब माँगू तब जल भरि लावे। मेरे मन की तपन बुझावे॥मन का भारी तन का छोटा। ऐ सखि साजन? ना सखि लोटा॥

ಕೇಳಿದಾಗ ನೀರು ತುಂಬಿ ತರುತಾರೆ | ಮನದ ಬೇಗೆಗೆ ತಂಪೆರೆಯುತಾರೆ ||
ಮನಸು ದೊಡ್ಡದು, ಅವರ ಮೂರ್ತಿಯಷ್ಟೆ ಚಿಕ್ಕದು  | ಗೆಳೆಯನೇನೇ ಸಖಿ? ಅಲ್ಲ, ಬಟ್ಟಲು||

बेर-बेर सोवतहिं जगावे। ना जागूँ तो काटे खावे॥व्याकुल हुई मैं हक्की बक्की। ऐ सखि साजन? ना सखि मक्खी॥

ಮಲಗಿರುವಾಗ ಬಂದೆಬ್ಬಿಸುತಾರೆ | ಏಳದಿದ್ದರೆ ಕಚ್ಚುತ್ತಾರೆ ||
ರಾತ್ರಿಯ ಕಾಟ ಸಾಕಾಗಿದೆಯಲ್ಲೇ  | ಇನಿಯನೇನೇ ಸಖಿ? ಅಲ್ಲವೇ, ಸೊಳ್ಳೆ ||

अति सुरंग है रंग रंगीलो। है गुणवंत बहुत चटकीलो॥राम भजन बिन कभी न सोता। क्यों सखि साजन? ना सखि तोता॥

ಏನು ಚಂದವೇ ಹಸಿರು ಷರಾಯಿ | ತಾಂಬೂಲದಂತೆ ಕೆಂಪಾಗಿದೆ ಬಾಯಿ ||
ಮಲಗುವಾಗಲೂ ರಾಮನ ನಾಮ || ಇನಿಯನೇನೇ ಸಖಿ? ಅಲ್ಲ, ಗಿಳಿರಾಮ || 

अर्ध निशा वह आया भौन। सुंदरता बरने कवि कौन॥निरखत ही मन भयो अनंद। क्यों सखि साजन? ना सखि चंद॥

ನಡುರಾತ್ರಿ ಅವನು ಬಂದ ಬಹುಮೆಲ್ಲನೆ | ಕವಿಯೂ ಮಾಡಲಾರ ಅವನ ವರ್ಣನೆ ||
ಆನಂದ ಹೊಂದಿದೆನು ನೋಡುತ್ತ ಇಂದು | ಇನಿಯನೇನೇ ಸಖಿ? ಅಲ್ಲವೇ, ಇಂದು ||



शोभा सदा बढ़ावन हारा। आँखिन से छिन होत न न्यारा॥
आठ पहर मेरो मनरंजन। क्यों सखि साजन? ना सखि अंजन॥

ನನ್ನ ಶೋಭೆಯನ್ನೇರಿಸುವನವನು | ಒಂದು ಕ್ಷಣವೂ ಬಿಟ್ಟಿರದು ಕಣ್ಣು ||
ಬಿಡಲಾರೆನು ಅಟ್ಟಿದರೂ ಕಾಡಿಗೆ | ಗೆಳೆಯನೇನೇ ಸಖಿ? ಅಲ್ಲವೇ, ಕಾಡಿಗೆ ||

जीवन सब जग जासों कहै। वा बिनु नेक न धीरज रहै॥
हरै छिनक में हिय की पीर। क्यों सखि साजन? ना सखि नीर॥

ಅವನಿಗೆ ಜೀವನ ಎಂದೇ ಹೆಸರು |  ನಿಲ್ಲದು ಅವನಿಲ್ಲದೆ ನನ್ನುಸಿರು ||
ಎದೆಯ ಬೇಗೆ ನೀಗುವರಿನ್ನಾರು | ಇನಿಯನೇನೇ ಸಖಿ? ಅಲ್ಲವೇ, ನೀರು ||

बिन आये सबहीं सुख भूले। आये ते अँग-अँग सब फूले॥
सीरी भई लगावत छाती। क्यों सखि साजन? ना सखि पाति॥

ಅವನು ಬಾರದಿದ್ದರೆ ಬಾಳಲ್ಲಿ ರುಚಿಯಿಲ್ಲ | ಬಂದರೆ ತನುಮನವೆಲ್ಲ ಪ್ರಫುಲ್ಲ ||
ಕಂಡಾಗ ಎದೆಗವಚಿ ಕರೆಯುವೆನು ಹತ್ತಿರ | ಗೆಳೆಯನೇನೇ ಸಖಿ? ಅಲ್ಲವೇ, ಪತ್ರ ||


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)