ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...

ವಿಠ್ಠಲ್ ಪದಕೋಶ

ಇಮೇಜ್
ಬೆಳೆಸಿಕೊಳ್ಳಲು, ವಿಕಸಿಸಿಕೊಳ್ಳಲು, ಹಿಗ್ಗಿಸಲು ತನ್ನ ಕನ್ನಡ ಪದಗಳ ಭಂಡಾರ, ಖಜಾನೆ, ಕೋಶ, ಕೊಂಡನು, ಖರೀದಿಸಿದನು, ಕ್ರಯಕ್ಕೆ ತಂದನು ವಿಠಲ  ಕನ್ನಡ ಕನ್ನಡ ಸಮಾನಾರ್ಥಕ ಪದಕೋಶ. ಇದಾದ ಕೆಲ ಕಾಲದಲ್ಲಿ, ನಂತರ, ತರುವಾಯ, ಅನಂತರ, ಇರಲೇ ಇಲ್ಲ ಅವನಿಗೆ ಪದಗಳಿಗೆ ದುರ್ಭಿಕ್ಷ, ಕ್ಷಾಮ, ಬರ  ಮನಸ್ಸಿಗೆ ತೋರಿದ್ದನ್ನು, ಅನ್ನಿಸಿದ್ದನ್ನು, ತೋಚಿದ್ದನ್ನು ಪ್ರಕಟಿಸಲು, ಆಡಲು, ಪ್ರದರ್ಶಿಸಲು ಪದಗಳ ತತ್ವಾರ ಇದೆಲ್ಲಾ ಸರಿಯೇ, ಒಳ್ಳೆಯದೇ, ಚೆನ್ನವೇ, ಲಾಯಕ್ಕಾದುದೇ, ಮಂಗಳವೇ, ಮೆಚ್ಚುವಂಥದ್ದೇ, ಸ್ತುತ್ಯರ್ಹವೇ, ಆದರೆ ಅವನ ಗೆಳೆಯರಿಗೆ ಪಾಪ ಬೋರಾಗತೊಡಗಿತು, ಬೈರಿಗೆಯಾಯಿತು, ಕೊರೆತ ಎನ್ನಿಸತೊಡಗಿತು ವಿಠಲನನ್ನು ಕಂಡರೆ  ನಿಮಗೆ ಇದು ಆಗಲಿ ಪಾಠ, ಒಂದು ನಿದರ್ಶನ, ಒಂದು ಕಲಿಕೆ, ಒಂದು ಉದಾಹರಣೆ, ಒಂದು ಜೀವನ ಶಿಕ್ಷಣ: ಕಲಿತದ್ದನ್ನು, ಪಡೆದ ಶಿಕ್ಷಣವನ್ನು, ಗಳಿಸಿದ ಪಾಂಡಿತ್ಯವನ್ನು  ಮೆರೆಸಬಹುದು, ತೋರಬಹುದು, ಮಾಡಬಹುದು ಪ್ರದರ್ಶನ  ಆದರೆ ದಯವಿಟ್ಟು, ಕೃಪೆ ಮಾಡಿ, ನಿಮ್ಮ ದಮ್ಮಯ್ಯ, ಕೇಳಿಸಿಕೊಳ್ಳಿ ನನ್ನದೊಂದು ಸಲಹೆ, ಕಿವಿಮಾತು, ಬುದ್ಧಿವಾದ, ಹಿತವಚನ: ಎಂದೂ ಮರೆಯದಿರಿ ಸಂಕ್ಷಿಪ್ತ, ಸಾರಾಂಶ, ರುಚಿಗೆ ತಕ್ಕಷ್ಟು, ಹೃಸ್ವ, ಅಡಕ, ಸಂಗ್ರಹ ಎಂಬ ಪದಗಳನ್ನ. .... Brian Bilston  ಅವರ Roger's Thesaurus ಎಂಬ ಕವಿತೆಯ ಕನ್ನಡ ರೂಪ,  ಭಾವಾನುವಾದ, ರೂಪಾಂತರ. ಇದನ್ನು ಮಾಡಿದ್ದು ನಾನು, ನಿಮ್ಮ ವಿಶ್...

ಪರಿಚಿತೆ (ಕಥೆ)

ಇಮೇಜ್
 ‘ಸಂಯುಕ್ತ ಕರ್ನಾಟಕ’ ‘ಸಾಪ್ತಾಹಿಕ ಸೌರಭ’ದಲ್ಲಿ 17 ಆಗಸ್ಟ್‌ 2025 ಪ್ರಕಟವಾದ ಕಥೆ ( ಸಿ. ಪಿ. ರವಿಕುಮಾರ್) https://epaper.samyukthakarnataka.com/editionname/Bangalore/SMYK_BANG/page/9/article/SMYK_BANG_20250817_09_6 ಅವಳು ಮೇಕಪ್ ಮಾಡಿಕೊಳ್ಳದೆ ಮನೆಯಿಂದ ಹೊರಟುನಿಂತಳು. ಇದು ಬಹಳ ದಿಟ್ಟ ನಿರ್ಧಾರವಾಯಿತೇನೋ ಎಂಬ ಅಳುಕು ಮನಸ್ಸನ್ನು ಕಾಡಿತು. ಬಾಗಿಲ ಹತ್ತಿರ ಇದ್ದ ಚಪ್ಪಲಿ ಕಪಾಟಿನಲ್ಲಿ ಇಣುಕಿದಳು. ಹೈಹೀಲ್ಡ್ ಶೂಗಳನ್ನು ಬಿಟ್ಟು ಹಗುರವಾದ ಚಪ್ಪಲಿಯನ್ನು ಆರಿಸಿಕೊಂಡು ಬಾಗಿಲು ತೆರೆದು ಹೊರಟಾಗ ಎದುರು ದಿಕ್ಕಿನಿಂದ ಬಂದವಳನ್ನು ಕಂಡು ಅವಾಕ್ಕಾಗಿ ನಿಂತಳು. ಕೊನೆಗೂ ಸಾವರಿಸಿಕೊಂಡು ‘ಓಹ್! ನೀನು!’ ಎಂದು ಕರೆದಳು. ಅವಳ ಧ್ವನಿಯಲ್ಲಿ ಸಂಭ್ರಮವಿತ್ತು. ಬಂದವಳು ನಕ್ಕಳು. ಅವಳ ನಗುವಿನಲ್ಲೂ ಸಂಭ್ರಮವಿತ್ತು. ಇವಳು ಬಂದವಳನ್ನು ಆಲಂಗಿಸಿಕೊಂಡು ಒಳಗೆ ಕರೆದೊಯ್ದಳು. ಒಳಗೆ ಬಂದ ಅತಿಥಿಯೇ ಇವಳನ್ನು ಒಳಗೆ ಕರೆದುಕೊಂಡು ಹೋದಂತೆ ಇವಳಿಗೆ ಭಾಸವಾಯಿತು. ತನ್ನ ಮನೆಯ ಪರಿಚಯ ಅವಳಿಗೆ ಇಷ್ಟು ಚೆನ್ನಾಗಿರುವುದು ಹೇಗೆಂದು ಇವಳು ಯೋಚಿಸಿದಳು. ‘ಇಲ್ಲಿ ಕೂತುಕೋ!’ ಎಂದು ಇವಳು ಹೇಳಿದಾಗ ಅವಳೂ ಅದೇ ಮಾತನ್ನು ಹೇಳಿದ್ದು ಕೇಳಿ ಇವಳಿಗೆ ನಗು ಬಂತು. ಇಬ್ಬರೂ ನಕ್ಕರು. ‘ನಿನ್ನ ಸೀರೆ ಚೆನ್ನಾಗಿದೆ. ನಾವಿಬ್ಬರೂ ಅದನ್ನು ಒಂದೇ ಅಂಗಡಿಯಿಂದ ಖರೀದಿ ಮಾಡಿರಬೇಕು. ಲಾವಣ್ಯ ಸಿಲ್ಕ್ಸ್ ತಾನೇ?’ ಅವಳು ಹೌದೆಂದು ತಲೆಯಾಡಿಸಿದಳು. ‘ತಾ...

ಭಜಿಸುತಿರು ಕೃಷ್ಣನಾಮ!

ಇಮೇಜ್
ಓ ಮನ! ಭಜಿಸುತಿರು ಕೃಷ್ಣನಾಮ! ದಾಟದಿರು ಗುರುವು ಹಾಕಿದ ಗೆರೆ, ಸಲ್ಲಿಸು ಸಂತರಿಗೆ ಪ್ರಣಾಮ! ಓದಿ ಅರ್ಥೈಸು ಭಾಗವತದ ಕಥೆ, ಪಡೆದುಕೋ ಪುಣ್ಯಾರಾಮ! ಏಕೆ ಕೃಷ್ಣನ ನಾಮದ ಸ್ಮರಣೆ ಇಲ್ಲದೇ, ವ್ಯರ್ಥಗೊಳಿಸುವೆ ಜನುಮ! ಹರಿದುಹೋಗುತಿದೆ ಕೃಷ್ಣನಾಮಸುಧೆ,  ತೃಷೆ ಇದ್ದವರಿಗೆ  ಸೂರದಾಸ ಶ್ರೀಹರಿಯ ಚರಣವೇ ಸಾಫಲ್ಯ ಪರಂಧಾಮ! रे मन कृष्ण नाम कहि लीजै गुरु के बचन अटल करि मानहिं, साधु समागम कीजै पढिए गुनिए भगति भागवत, और कथा कहि लीजै कृष्ण नाम बिनु जनम बादिही, बिरथा काहे जीजै कृष्ण नाम रस बह्यो जात है, तृषावंत है पीजै सूरदास हरिसरन ताकिए, जन्म सफल करी लीजै

ಬೆಳಗಿನ ಹಾಡು

ಇಮೇಜ್
  ಮೂಲ: ಸಾರಾ ಟೀಸ್‌ಡೇಲ್ ಅನುವಾದ: ಸಿ ಪಿ ರವಿಕುಮಾರ್ ವಜ್ರದಂತಹ ಬೆಳಗು ಕೂಗಿ ಎಬ್ಬಿಸಿತು ನನ್ನನ್ನು ಏಕೋ ಒಂದು ಗಂಟೆ ಮುಂಚೆಯೇ ಇಂದು. ನಸುಕು ಕೊಂಡೊಯ್ದಿತ್ತು ತಾರೆಗಳನ್ನು ತನ್ನೊಂದಿಗೆ ಬಿಟ್ಟು ಹೋಗಿತ್ತು ಬಾನಲ್ಲಿ ಬೆಳ್ಳನೆಯ ಬಿಂದು. ಓಹ್ ಇಂದು! ನೀನು ಏಕಾಂಗಿನಿ! ಇರಲಿ ಬಿಡು, ನಿನ್ನಂತೆಯೇ ಒಂಟಿ ನಾನು ಕೂಡಾ. ಆದರೆ ನಮಗಿದೆ ಸುತ್ತಾಡಲು ಇಡೀ ಜಗತ್ತು, ಒಂಟಿಯಾದವರಿಗೆ ಮಾತ್ರ ಈ ಸ್ವಾತಂತ್ರ್ಯ.

ಏಕಾಕಿ

ಇಮೇಜ್
 ಮೂಲ ಕವಿತೆ: ಎಲ್ಲಾ ವ್ಹೀಲರ್ ವಿಲ್ ಕಾಕ್ಸ್ ಅನುವಾದ: ಸಿ ಪಿ ರವಿಕುಮಾರ್  ನೀನು ನಕ್ಕರೆ ನಗುವುದು ಜೊತೆಗೆ ಜಗತ್ತು, ಅತ್ತರೆ ನೀನು ಅಳಬೇಕು ಏಕಾಂಗಿಯಾಗಿ. ಕಷ್ಟಗಳು ಸಾಕಷ್ಟಿವೆ ಜಗತ್ತಿನಲ್ಲಿ ಹೀಗಾಗಿ ಹೀರುವುದದು ಸಂತಸವನ್ನು ಬಿಡದೆ ತೊಟ್ಟೂ. ನೀನು ಹಾಡಿದರೆ ಬೆಟ್ಟಗಳೂ ಹಾಡುತ್ತವೆ ಜೊತೆಗೆ, ಗಾಳಿಯಲ್ಲಿ ಕಳೆದುಹೋಗುವುದು ನಿನ್ನ ನಿಟ್ಟುಸಿರು. ಪ್ರತಿಧ್ವನಿ ಉಕ್ಕುವುದು ನಗುಮೊಗದ ಕತೆಗೆ, ಗೋಳುಕತೆಗೆ ಮೌನವೇ ಏಕೈಕ ಶ್ರೋತೃ. ಸಂಭ್ರಮಿಸಿದಾಗ ಜನ ಬರುವರು ಹುಡುಕುತ್ತ, ಮರಳುವರು ನೀನು ಬಿಕ್ಕಿದರೆ ಅತ್ತು. ಬೇಕು ಎಲ್ಲರಿಗೂ ನಿನ್ನ ಸುಖದ ಪೂರ್ಣ ಮೊತ್ತ, ಯಾರಿಗೂ ಬೇಡ ನಿನ್ನ ದುಃಖ ಕಿಂಚಿತ್ತೂ. ನಗುತ್ತಿದ್ದರೆ ನಿನಗೆ ನೂರಾರು ಗೆಳೆಯರು, ಅತ್ತಾಗ ನಿಲ್ಲುವುದಿಲ್ಲ ಯಾರೂ ಒಂದು ನಿಮಿಷ. ಬೇಡ ಎನ್ನುವುದಿಲ್ಲ ನೀನಿತ್ತ ಸಿಹಿ ಜೇನು ಯಾರೂ, ನೀನೇ ಕುಡಿಯಬೇಕು ಜೀವನದ ಕಹಿವಿಷ. ಜನ ಹುಡುಕಿ ಬರುವರು ಏರ್ಪಡಿಸಿದರೆ ಔತಣಕೂಟ, ಯಾರೂ ನೋಡುವುದಿಲ್ಲ ಹಿಡಿದಾಗ ಉಪವಾಸ ವೃತ.  ವಿಜಯಿಯಾಗಿ ನೀಡು ಕೊಡುಗೆ, ಜೀವಿಸಲು ಇದು ಮಾರ್ಗ, ಯಾರೂ ಜೊತೆ ಬರುವುದಿಲ್ಲ ನೀನು ಎಲ್ಲಾ ಬಿಟ್ಟು ಹೊರಟಾಗ. ಬೃಹತ್ ಬಂಡಿಯೂ ಸಾಗುವಷ್ಟು ಸುಖದ ಹಾದಿಯ ಗಾತ್ರ, ನೋವಿನ ಇಕ್ಕಟ್ಟು ಓಣಿಯಲ್ಲಿ ಸಾಗಲು ಒಬ್ಬರಿಗೆ ಮಾತ್ರ 

ರೊಟ್ಟಿ ಮತ್ತು ತೊವ್ವೆ

ಇಮೇಜ್
 ರೊಟ್ಟಿ ಮತ್ತು ತೊವ್ವೆ ಮೂಲ: ಡೇವಿಡ್ ವೈಟ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಯಾರೆಂದರು ಇದು ಮಾಹಿತಿ ಯುಗವೆಂದು ಇದು ಮಾಹಿತಿ ಯುಗವಲ್ಲ. ಬಿಡಿ ಸುದ್ದಿವಾಹಿನಿ ಪತ್ರಿಕೆ  ಮತ್ತು ಸ್ಕ್ರೀನ್ ತುಂಬ  ಕೆಂಪು Mಬಣ್ಣದ ಬ್ರೇಕಿಂಗ್ ನ್ಯೂಸ್. ಇದು ರೊಟ್ಟಿ ಮತ್ತು ತೊವ್ವೆಯ ಯುಗ. ಜನ ಹಸಿದಿದ್ದಾರೆ  ಮತ್ತು ಒಂದು ಒಳ್ಳೆಯ ಮಾತು ತಣಿಸಬಲ್ಲದು ಸಾವಿರ ಮಂದಿಯ ಹಸಿವು.

ಸೂರ್ಯಾಸ್ತ

ಇಮೇಜ್
   ಮೂಲ: ಎಲ್ಲಿಸ್ ನೈಟಿಂಗೇಲ್  ಕನ್ನಡಕ್ಕೆ : ಸಿ ಪಿ ರವಿಕುಮಾರ್ ಕುಳಿತಿರುವೆ ಒಂದು ಹಳೆಯ ಕಲ್ಲುಗೋಡೆಯ ಮೇಲೆ ನೀವು ಅಂದುಕೊಂಡಷ್ಟೇನೂ ಕೊರೆಯುತ್ತಿಲ್ಲ ತಣ್ಣಗೆ ಇಲ್ಲಿಂದ ಕಾಣುತ್ತಿದೆ ಗುಲಾಬಿ ಬಣ್ಣದ ಗಗನ ಮತ್ತು ಅಲ್ಲಿ ಸೂರ್ಯನು ಮುಳುಗುತ್ತಿರುವುದು ಮೆಲ್ಲಗೆ. ಶಾಂತ ಸಾಗರದಂತೆ ಗಾಳಿ ತೊನೆಯುತ್ತಿದೆ ಮೆಲ್ಲಗೆ ತುಂಬಿಕೊಂಡು ತನ್ನಲ್ಲಿ ಮೃದುವಾದ ಕಲಕಲ ನನಗಂತೂ ಹೊಳೆಯುತ್ತಿಲ್ಲ ಇದಕ್ಕಿಂತ ಉತ್ತಮ ಮಾರ್ಗ ವ್ಯರ್ಥಗೊಳಿಸಲು ನನಗೆ ಸಿಕ್ಕ ಕಾಲ.

ಬೆಂಕಿ ಮತ್ತು ಪತಂಗ

ಇಮೇಜ್
  ಅದು ಯಾರ ತಪ್ಪೂ ಆಗಿರಲಿಲ್ಲ ಅದು ಎಲ್ಲರ ತಪ್ಪೂ ಆಗಿತ್ತು. ಕ್ಯಾಮೆರಾ ಇದೆಯೆಂದು ಸೆಲ್ಫೀ ತೆಗೆಯುವ ಖಯಾಲಿ ಜಲಪಾತದ ಎದುರು ಮೊಬೈಲ್ ಫೋನ್ ಹಿಡಿದು ನಿಂತವಳು ತನ್ನನ್ನೇ ನೋಡುತ್ತಾ ನೋಡುತ್ತಾ ಹಿಂಜರಿದು ಜಲಸಮಾಧಿಯಾದಳು. ಅಪ್ಪನ ಕಾರ್ ಕೀ ಸಿಕ್ಕ ಸಂಭ್ರಮದಲ್ಲಿ ಹುಡುಗ ಹೊರಟ  ಸ್ನೇಹಿತರ ಜೊತೆಗೆ ಗಾಳಿಯೊಂದಿಗೆ ಮಾತಾಡುತ್ತಾ ಗಾಳಿಯೇ ನಾನು ಚಲಿಸಬಲ್ಲೆ ನಿನಗಿಂತ ವೇಗವಾಗಿ ಎನ್ನುತ್ತಾ ಸಾಗಿ ಯಾವುದೋ ಕ್ಷಣದಲ್ಲಿ ಹಾರಿದ ವಾಯುವಿನಲ್ಲೇ ವಿಲೀನವಾಗಿ. ಹೀರೋ ಎಂದರೆ ಹೀಗಿರಬೇಕು. ಗಾಡಿಯನ್ನು ಹತ್ತಿಸಬೇಕು ಮೆಟ್ಟಿಲುಗಳ ಮೇಲೆ ಮೇಲಿಂದ ಹಾರಿ ಸ್ಲೋ ಮೋಷನ್ನಲ್ಲಿ ವಿಲನ್ ಎದೆಗೆ ಒದೆಯಬೇಕು. ಅಪ್ಪಾ ಹೇಳಬೇಡ ಹಳ್ಳಿಯನ್ನು ಉದ್ಧಾರ ಮಾಡಿದ ಬಂಗಾರದ ಮನುಷ್ಯನ ಕತೆ. ಅವೆಲ್ಲ ಬರೀ ಸುಳ್ಳು. ಯಾರಿಂದಲೂ ಸಾಧ್ಯವಿಲ್ಲ ಹಳ್ಳಿಯನ್ನು  ಉದ್ಧಾರ ಮಾಡುವುದು. ಅಮ್ಮಾ ಹೇಳಬೇಡ ಉಪವಾಸ ಮಾಡಿ ಸರಕಾರವನ್ನು ಬಗ್ಗಿಸಿದ ಮಹಾತ್ಮನ ಕತೆ. ಅದೆಲ್ಲಾ ಯಾರೋ ಕಟ್ಟಿದ ಫೇಕ್ ನ್ಯೂಸ್. ನೂರಾರು ವರ್ಷ ಬೇಕಾಯಿತಾ  ಸ್ವಾತಂತ್ರ್ಯ ಸಂಗ್ರಾಮಕ್ಕೆ! ಮೈ ಗಾಡ್ ಎಷ್ಟು ಬೋರಿಂಗ್. ಏನು ಪ್ರಯೋಜನ ಹಾಗೆ ಬದುಕಿ! ಫಾಸ್ಟ್ ಫಾರ್ವರ್ಡ್ ಮಾಡಬೇಕು. ಫಾಸ್ಟ್ ಮಾಡುತ್ತಾ ಕೂಡುವುದು ಬ್ಯಾಕ್ವರ್ಡ್ ಥಿಂಕಿಂಗ್. ನುಗ್ಗಬೇಕು. ಕಸಿದುಕೊಳ್ಳಬೇಕು. ಬೆಂಕಿಯ ಹತ್ತಿರ ಹೋಗುತ್ತಿತ್ತು ಪತಂಗ. ಬೆಂಕಿಯ ತಪ್ಪೂ ಆಗಿರಲಿಲ್ಲ. ಸುಡುವ ಗುಣವನ್ನು ಕೊಟ್ಟದ್ದು ಪ್ರಕೃತಿ. ಪತಂಗದ ತಪ್ಪ...

ಧೂಳು

ಇಮೇಜ್
 ಮೂಲ: ಡೋರಿಯನ್ ಲಾ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಯಾರೋ ನೆನ್ನೆ ರಾತ್ರಿ ಆಡಿದ ಮಾತು ತಟ್ಟಿತು.  ಆಡಿದ್ದು ಒಂದೆರಡೇ ಆದರೂ ನಿಜ ಹೇಳುತ್ತಿದ್ದರು ಎಂದು ನಾನು ಗುರುತಿಸಿದೆ. ಕೂಡಲೇ ಮೇಲೆದ್ದು ಬರೆದಿಟ್ಟುಕೊಳ್ಳಬೇಕು ಎನ್ನಿಸಿತು ಆದರೆ ತುಂಬಾ ತಡವಾಗಿತ್ತು, ದಣಿವಾಗಿತ್ತು ದುಡಿದು ಇಡೀ ದಿವಸ ತೋಟದಲ್ಲಿ ಕಲ್ಲುಗಳನ್ನು ಜರುಗಿಸುತ್ತಾ. ಈಗ ನನಗೆ ನೆನಪಿರುವುದು ಅದರ ಘಮ ಮಾತ್ರ ಇಲ್ಲ, ಊಟದ ವ್ಯಂಜನದಂತಲ್ಲ,  ಘಾಟು ಅಥವಾ ಸಿಹಿಯಲ್ಲ, ಸಣ್ಣ ಪುಡಿಯಂತೆ, ಧೂಳಿನ ಹಾಗೆ. ಕೇಳಿ ನಾನೇನೂ ಉಬ್ಬಲಿಲ್ಲ ಅಥವಾ ಹೆದರಿ ಕೊಳ್ಳಲಿಲ್ಲ. ನಾನು ಸಂಪೂರ್ಣ ಎಚ್ಚೆತ್ತುಕೊಂಡು  ಗಮನವಿಟ್ಟು ಕೇಳುತ್ತಿದ್ದೆ. ಕೆಲವು ಸಲ ಹಾಗೇ. ದೇವರು ಕಪ್ಪು ರೆಕ್ಕೆಯನ್ನು ತೊಟ್ಟು, ಬೆಳಕಿನಂತೆ ಜಗಜಗಿಸುತ್ತಾ ನಿಮ್ಮ ಕಿಟಕಿಯ ಎದುರು ಬಂದು ನಿಲ್ಲುತ್ತಾನೆ. ಆದರೆ ತೆರೆಯಲು ನಿಮಗೆ ವಿಪರೀತ ದಣಿವು.

ಟೆಲಿಫೋನ್

ಇಮೇಜ್
ಮೂಲ: ಮೆಲ್ ಮೆಕ್ ಮಾಒನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ೧ ಬೆಳ್ಳಗೆ, ಬೃಹದಾಕಾರ, ಆನೆಯೊಂದು ನಿಲ್ಲಬಹುದಾದಷ್ಟು ದೊಡ್ಡ ಸಂಖ್ಯೆಗಳುಳ್ಳ ಅಪ್ಪನ ಕಡೆಯ ಫೋನ್. ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ ತಾನು ಮಾತಾಡಬೇಕಾದಾಗ ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ. ಯಾರೋ ಫೋನ್ ಮಾಡಿದಾಗ ಟಿವಿ ಮೇಲೆ ಕುದುರೆ ರೇಸ್ ನೋಡುತ್ತಾ ಕುಳಿತಿರುತ್ತಿದ್ದ.  ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ. ಫ್ರಾನ್ಸ್ ನಲ್ಲಿ ಒಂದು ಸಂಜೆ  ಇದೇ ಫೋನ್ ಬಳಸಿ ಒಮ್ಮೆಲೇ ಕರೆ ಮಾಡಿದ ಸಾಯುವ ಮೂರು ದಿವಸಗಳ ಮುನ್ನ. ನಾನು ಬೇಸಗೆ ರಜಕ್ಕೆ ಬಂದಾಗ ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ ಮಾತಾಡಿದ, ಮುಚ್ಚಿಡಲಾಗದೆ ಉತ್ಸಾಹವನ್ನ. ಈಗ ಅದೇ ಫೋನಿನ ರಿಸೀವರ್ ಹಿಡಿದು ಕೇಳಿಸಿಕೊಂಡಾಗ: ಸ್ಮಶಾನ ಮೌನ. ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.  ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ. ನೀವು ಕರೆ ಮಾಡಿದ ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ ಎನ್ನುತ್ತದೆ ಅಶರೀರವಾಣಿ. ೨ ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ  ಪತ್ರ ಬರೆಯುವುದೇ ಸರಿ ಎಂದು ಸಿಡಿಮಿಡಿಗೊಳ್ಳುತ್ತಿದ್ದ. ನಾವು ಹದಿಹರೆಯದಲ್ಲಿದ್ದಾಗ ಅವನ ಸಿಡಿಮಿಡಿಗೆ ಹೆದರಿ ಜಗಳವೇತಕ್ಕೆ ವ್ಯರ್ಥ ಎಂದು ನಮ್ಮ ಫೋನ್ ಕರೆಗಳು  ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ. ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ  ಬ...

ಕಾಡುಜೀವಿಗಳ ಶಾಂತಿ

ಇಮೇಜ್
  ಮೂಲ: ವೆಂಡೆಲ್ ಬೆರಿ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಜಗತ್ತಿಗಾಗಿ ಹತಾಶೆ ಬೆಳೆಬೆಳೆದು ಆಕ್ರಮಿಸಿಕೊಂಡಾಗ ಮನವನ್ನು ಏನಾದೀತೋ ನನ್ನ ಬದುಕು, ಮಕ್ಕಳ ಬದುಕೆಂಬ ಭಯಕ್ಕೆ ಇರುಳಿನಲ್ಲಿ ಸಣ್ಣ ಸದ್ದಿಗೂ ಎಚ್ಚರವಾದಾಗ ನಾನು ಮೇಲೆದ್ದು ಹೋಗಿ ಅಡ್ಡಾಗುತ್ತೇನೆ  ಕಾಡು ಬಾತುಕೋಳಿ ತನ್ನ ಚೆಲುವನ್ನು ಹೊದ್ದು ಮಲಗಿರುತ್ತದಲ್ಲ ನೀರಿನಲ್ಲಿ ಮತ್ತು  ಕೊಕ್ಕರೆ ಮೀನು ಹಿಡಿಯುತ್ತದಲ್ಲ, ಅಲ್ಲಿ. ಅಲ್ಲಿ ನಾನು ಅನುಭವಿಸುತ್ತೇನೆ ಕಾಡುಜೀವಿಗಳ ಶಾಂತಿ. ಮುಂಬರುವ ಶೋಕವನ್ನು ನೆನೆದು  ತಳಮಳಗೊಳ್ಳದ ಅವುಗಳ ಸ್ಥಿತಿ. ಸ್ತಬ್ಧ ನೀರಿನ ಉಪಸ್ಥಿತಿಯಲ್ಲಿ ಅರಿವಾಗುತ್ತದೆ ಹಗಲುಗುರುಡು ನಕ್ಷತ್ರಗಳು ಬೆಳಕು ಹಿಡಿದು ಕಾಯುತ್ತಿರುವುದು. ಒಂದಿಷ್ಟು ಹೊತ್ತು  ಜಗತ್ತಿನ ಕೃಪೆಯಲ್ಲಿ ವಿಶ್ರಮಿಸಿದಾಗ ನನಗೆ ದೊರೆಯುತ್ತದೆ ಮುಕ್ತಿ. (ಮುಂದಿನ ಕ್ಷಣವೇ  ಹುಲಿ ಸಿಂಹ ತೋಳ ನರಿ ಮುಂತಾದ ಯಾವುದೋ ಪ್ರಾಣಿ ತನ್ನನ್ನು ಕೊಂದು ತಿನ್ನಬಹುದೆಂಬ ಅರಿವಿದ್ದರೂ ಶಾಂತಿಯಿಂದ ಬದುಕುವ ಜಿಂಕೆ ಮುಂತಾದ ಪ್ರಾಣಿಗಳಿಗೆ ಯಾವ ಆತಂಕವೂ ಇಲ್ಲ. ಅದನ್ನೇ ಕವಿ ಕಾಡು ಜೀವಿಗಳ ಶಾಂತಿ ಎನ್ನುತ್ತಾನೆ.)

ಭರವಸೆ

ಇಮೇಜ್
 ಮೂಲ: ರೋಸ್ ಮೆರಿ ವಾಹ್ತೋಲಾ ಟ್ರಾಮರ್ ಅನುವಾದ: ಸಿ ಪಿ ರವಿಕುಮಾರ್  ಭರವಸೆಯ ಕಿಸೆಗಳಲ್ಲಿವೆ ಸಣ್ಣ ರಂಧ್ರಗಳು ಕೆಳಗೆ ಉದುರುವ  ತುಣುಕುಗಳು ಮೂಡಿಸುತ್ತವೆ ನಮಗೆ ಆತಂಕವಾದಾಗ ಅನುಸರಿಸಲು ದಾರಿ. ಭರವಸೆಯ ಗುಟ್ಟು ಏನೆಂದರೆ ಅದಕ್ಕೆ ಗೊತ್ತೇ ಇಲ್ಲ ಯಾವುದು ಗುರಿ. ಅದಕ್ಕೆ ಗೊತ್ತಿರುವುದು ಇಷ್ಟೇ, ಪ್ರತಿಯೊಂದು ದಾರಿಯ ಪ್ರಾರಂಭವೂ ಒಂದು ಹೆಜ್ಜೆಯ ಮುಂದೆ  ಇನ್ನೊಂದನ್ನು ಇಟ್ಟಾಗ ಎಂದಷ್ಟೇ.

ಹೂರಣದ ಹೋಳಿಗೆ

ಇಮೇಜ್
  ಮೂಲ: ಪಾದ್ರಾಗ್ ಡ್ಯಾಲಿ ಭಾವಾನುವಾದ: ಸಿ ಪಿ ರವಿಕುಮಾರ್ ನಾವು ಏಳುವ ಮುನ್ನವೇ ನೀನು  ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು. ಇಡೀ ಬೆಳಗ್ಗೆ  ನಾವು ನೋಡಿದೆವು ನೀನು ಕಣಕ ನಾದುವುದನ್ನು  ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು. ನಾವು ಕೆಳಗೆ ಇಳಿದು ಬಂದಾಗ ಎಲ್ಲಿ  ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು ಮೆಲ್ಲನೆ ನಡೆದು ಬಂದೆವು. ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು ಲಟ್ಟಿಸುವುದು ಕಂಡಿತು ಕಪ್ಪು ಕಲ್ಲಿನ ಮೇಲೆ ತೆಳ್ಳಗೆ. ಅಂಚು ಬರಬಾರದು,  ತೆಳ್ಳಗೆ ಇರಬೇಕು ಹರಿಯಬಾರದು, ನಾಜೂಕು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು. ತುಪ್ಪ, ಹಾಲು, ಸೀಕರಣೆ ಇತ್ಯಾದಿ ಮೊದಲೇ ತಯಾರಾಗಿ ಕಾದಿದ್ದವು. ನಿನ್ನ ಹೊಳೆಯುವ ಕಣ್ಣುಗಳ  ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.

ಕೆಲವರಿಗೆ ಇಷ್ಟ ಕವಿತೆ

ಇಮೇಜ್
ಮೂಲ: ವಿಸ್ಲವಾ ಸಿಂಬೋರ್ಸ್ಕಾ ಅನುವಾದ: ಸಿ ಪಿ ರವಿಕುಮಾರ್  ಕೆಲವರಿಗೆ - ಅರ್ಥಾತ್ ಎಲ್ಲರಿಗೂ ಅಲ್ಲ,  ಬಹುಜನರಿಗೂ ಅಲ್ಲ, ಅಲ್ಪ ಸಂಖ್ಯಾತರು. ಶಾಲಾ ಮಕ್ಕಳನ್ನು ಹೊರತು ಪಡಿಸಿ ಏಕೆಂದರೆ ಅವರಿಗೆ ಅದು ಕಡ್ಡಾಯ ಕವಿಗಳನ್ನು ಎಣಿಸಬೇಡಿ, ಹೆಚ್ಚೆಂದರೆ ಸಾವಿರದಲ್ಲಿ ಇಬ್ಬರು. ಇಷ್ಟ - ಇಷ್ಟವೆಂದರೆ ಹೆಚ್ಚೇನೂ ಹೇಳಿದಂತಲ್ಲ ಇಷ್ಟವಾಗುತ್ತದೆ ದಾಳಿಂಬೆ ಹಾಕಿದ ಮೊಸರನ್ನ ಇಷ್ಟವಾಗುವುದು ಹೊಗಳಿಕೆ ಮತ್ತು ನೀಲಿ ಬಣ್ಣ ಇಷ್ಟವಾಗುತ್ತದೆ ಹಳೆಯ ಕಾಲದ ಆಭರಣ ಇಷ್ಟ ಪಡುತ್ತೇವೆ ಮೇಲುಗೈ ಪಡೆದ ಕ್ಷಣ ಮತ್ತು ನಾಯಿಯ ತಲೆಯನ್ನು ನೇವರಿಸುವುದನ್ನ. ಕವಿತೆ - ಆದರೆ ಕವಿತೆ ಎಂದರೆ ಏನು? ಈ ಪ್ರಶ್ನೆಗೆ ಸಿಕ್ಕಿವೆ ಅನೇಕ ಅರೆಬೆಂದ ಉತ್ತರಗಳು ನನಗೂ ಗೊತ್ತಿಲ್ಲ ಸರಿಯಾಗಿ ಗೊತ್ತಿಲ್ಲ ಆದರೂ ಹಿಡಿದುಕೊಂಡಿದ್ದೇನೆ ಹಿಡಿದುಕೊಳ್ಳುವರಲ್ಲ ಮುಗ್ಗರಿಸದ ಹಾಗೆ ಕೈಪಿಡಿಯನ್ನು ಆಸರೆಯಾಗಿ, ಹಾಗೆ.

ಇಷ್ಟರ ನಡುವೆ

ಇಮೇಜ್
 ಇಷ್ಟರ ನಡುವೆ ಮೂಲ: ಟಾಮ್ ಹಿರಾನ್ಸ್ ಇಷ್ಟರ ನಡುವೆ ಅರಳುತ್ತವೆ ಹೂ ಯಥಾಪ್ರಕಾರ ಚಂದ್ರೋದಯ ಸೂರ್ಯೋದಯಕ್ಕಿಲ್ಲ ಸಂಚಕಾರ ಮಕ್ಕಳು ಮುಗುಳ್ನಗುತ್ತವೆ ದೊಡ್ಡದಾಗಿ ನಿಷ್ಕಾರಣ ಮತ್ತು ಅಸಂಭವ ದಾಟಿ ಎರಡು ಹೃದಯಗಳ ಮಿಲನ ಅಪರಿಚಿತರು ಹಂಚಿಕೊಳ್ಳುತ್ತಾರೆ ಕಡ್ಡಿಪೆಟ್ಟಿಗೆ, ನಗೆ  ನೀರಿನ ಮೇಲೆ ಆಡುತ್ತವೆ ಬೆಳಕಿನ ಕೋಲುಗಳು ಮೆಲ್ಲಗೆ ಅನಿರೀಕ್ಷಿತ ಬೀದಿಗಳಲ್ಲಿ ಅರಳುತ್ತದೆ ಔದಾರ್ಯ  ನೆರೆ, ಭೂಕಂಪನಗಳ ನಡುವೆ  ಪುನರ್ವಸತಿ ಕಾರ್ಯ ಬದುಕಿನ ಕಡೆಗೆ ವಾಲುತ್ತದೆ ಜೀವನ ಎಲ್ಲವನ್ನೂ ಸಾವು ತೆಗೆದುಕೊಂಡರೂ ಆಫೋಷನ ನಡುವೆ ಇದ್ದವು ಎಷ್ಟೊಂದು ಅಮೂಲ್ಯ ಕ್ಷಣ ಎಲ್ಲವೂ ಪ್ರಕಾಶಮಾನವಾಗಿ ಜಗಮಗ ನಾವು ಮತ್ತೊಮ್ಮೆ  ನಮ್ಮ ಈ ಜಗ ವನ್ನು ಪ್ರೀತಿಸುವಂತೆ ಇತ್ತು ಜೀವನ.

ಆಲೋಚನೆಗಳು

ಇಮೇಜ್
 ಆಲೋಚನೆಗಳು ಮೂಲ ಕವಿತೆ: ಹೆನ್ರಿ ವಾನ್ ಡೈಕ್  ಅನುವಾದ: ಸಿ ಪಿ ರವಿಕುಮಾರ್ ನಮ್ಮ  ಆಲೋಚನೆಗಳಿಗಿದೆ ಶರೀರ, ರೆಕ್ಕೆ ಮತ್ತು ಶ್ವಾಸ ಅವು ವಸ್ತುಗಳೇ ಎಂಬುದು ನನ್ನ ವಿಶ್ವಾಸ ಕಳಿಸಿದಾಗ ಆಲೋಚನೆಗಳನ್ನು ಜಗತ್ತಿಗೆ ನಾವು ಪರಿಣಾಮಗಳು ಎರಡು: ನಲಿವು ಇಲ್ಲವೆ ನೋವು. ನಮ್ಮ ಮನದಾಳದಲ್ಲಿ ಹುಟ್ಟಿದ ರಹಸ್ಯ ಆಲೋಚನೆ ಹೋಗಿ ಮುಟ್ಟುವುದು ಜಗತ್ತಿನ ದೂರದ ಕೊನೆ ಹೋದ ಕಡೆಗೆಲ್ಲಾ ಅದರ ಹೆಜ್ಜೆ ಗುರುತಿನ ಹಾಗೆ ಶುಭೇಚ್ಛೆಯ ವೃಷ್ಟಿ  ಅಥವಾ ಶಾಪದ ಸುಡುಬೇಗೆ. ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತೇವೆ ಅರಿವಿಲ್ಲದೆ ಇಡುತ್ತಾ ಒಂದೊಂದೇ ಆಲೋಚನೆಯ ಇಟ್ಟಿಗೆ ವಿಶ್ವದ ನಿರ್ಮಾಣವಾಗಿದ್ದೂ  ಹೀಗೇ  ವಿಧಿ ಎಂಬುದು ಇನ್ನೊಂದು ಹೆಸರು ಆಲೋಚನೆಗೆ. ನಿನ್ನ ಭವಿಷ್ಯವನ್ನು ಆಯ್ದುಕೋ. ಅನಂತರ ನಿರೀಕ್ಷಿಸುವುದಷ್ಟೇ ಕೆಲಸ. ಪ್ರೇಮ ಕರೆತರುವುದು ಪ್ರೇಮ, ಕರೆತರುವುದು ದ್ವೇಷವನ್ನು ದ್ವೇಷ 

ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ

 ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ ಮೂಲ: ಜೋಸೆಫ್ ಫಸಾನೋ ಅನುವಾದ: ಸಿ ಪಿ ರವಿಕುಮಾರ್ ಇಗೋ ನಿನಗೆ ವಾಪಸು ಕಳಿಸುತ್ತಿರುವೆ ನಿನ್ನ ಲೇಖನ. ನನಗೆ ಕೇಳಿಸುತ್ತಿದೆ ನಿನ್ನ ಒದ್ದಾಟ. ಜೀವನ ನಿನಗೆ ಬಹಳ ಕಷ್ಟವಾಗಿರಬೇಕು. ಅಮೂಲ್ಯವಾಗಿದೆ ನಿನಗೆ ಭೂಮಿಯ ಮೇಲಿನ ಒಂದೊಂದೂ ಕ್ಷಣ. ಆದರೆ ನಿನಗೆ ಮುಕ್ತಿ ಬೇಕಾಗಿರುವುದು  ಯಾವುದರಿಂದ ಹೇಳು.  ಜೀವಿಸುವುದರಿಂದಲೇ? ಬದುಕೆಂಬ ಪವಾಡದಿಂದಲೇ? ನೆನಪಿಡು. ಯಾರು ಕೆಲಸವನ್ನು ಪ್ರೀತಿಸುತ್ತಾರೋ ಅವರು ಮಾತ್ರ ಪ್ರೀತಿಗೆ ಅರ್ಹರು.

ಆಂಟಿ ಕಾಗೆ

ಇಮೇಜ್
 ಆಂಟಿ ಕಾಗೆ ಸಿ. ಪಿ. ರವಿಕುಮಾರ್ ಕಾಗಕ್ಕ ಕಾಗಕ್ಕ, ಏನು ತಿನ್ನುತ್ತಿರುವೆ ಕಾಣುತ್ತಿಲ್ಲವೇ, ಕೆಂಪಿರುವೆ. ಕೆಂಪಿರುವೆ ತಿನ್ನುತ್ತಿರುವೆ ಏತಕ್ಕೆ? ಮೈಯಲ್ಲಿ ಹುಷಾರಿಲ್ಲ ಅದಕ್ಕೇ. ಕೆಂಪಿರುವೆ ಏನು ನಿನಗೆ ಔಷಧವೆ?  ನಮಗೆ "ಆಂಟ್" ಇ ಬಯಾಟಿಕ್ ಇದುವೆ. ಏನೋ ತುಂಬಾ ರಹಸ್ಯಮಯವಾಗಿದೆಯಲ್ಲ! ರಹಸ್ಯ: ಇರುವೆಯಲ್ಲಿರುವ ಫಾರ್ಮಿಕ್ ಆಮ್ಲ. ಏನಾಗುತ್ತದೆ ಆಮ್ಲ ಸೇರಿದರೆ ಹೊಟ್ಟೆಯೊಳಗೆ? ಕ್ರಿಮಿ ನಾಶವಾಗಿ ನನಗೆ ಪುನಃ ಚೇತರಿಕೆ. ಕಾಗಕ್ಕ "ಆಂಟಿ" ಅನ್ನಬಹುದೇ ನಿನಗೆ? ನಿನ್ನ ಜೋಕಿಗೆ ನಗು ಬರಲಿಲ್ಲ ನನಗೆ. (ಚಿತ್ರ ಮತ್ತು ಮಾಹಿತಿ ಎರಡೂ ಫೇಸ್ಬುಕ್ ಕೃಪೆ. ಇದನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡಬಹುದು. ಐದು ನಿಮಿಷದ ನಾಟಕ ಕೂಡಾ ಮಾಡಬಹುದು.)

ನಮ್ಮ ಮಕ್ಕಳು

ನಮ್ಮ ಮಕ್ಕಳು ಮೂಲ: ನಿಕೊಲೆಟ್ ಸೌಡರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಹೇಗಿರಲಿ ನಮ್ಮ ಮಕ್ಕಳ ಪಾಲನೆ  ಅಂದರೆ ಅವರು ಪ್ರೀತಿಸಲಿ ಯಾರೂ ಪ್ರೀತಿಸದ ವಸ್ತುಗಳನ್ನು ಕೂಡಾ. ಉದಾಹರಣೆಗೆ ಕಾಡು ಸೇವಂತಿಗೆ ಹೂವುಗಳು, ಹರಿದಾಡುವ ಹುಳಹುಪ್ಪಟೆ ಮತ್ತು ಜೇಡ. ಅವರಿಗಿರಲಿ ಗುಲಾಬಿಗೆ ಮುಳ್ಳಿನ ಅಗತ್ಯವಿದೆ ಎಂಬ ಪರಿಜ್ಞಾನ, ಮಳೆಗಾಲದ ದಿನಗಳನ್ನೂ ಬೇಸಗೆಯ ದಿನಗಳಷ್ಟೇ ಆನಂದದಿಂದ ಸ್ವೀಕರಿಸುವ ಸ್ವಭಾವ. ಬೆಳೆದು ದೊಡ್ದವರಾದ ನಂತರ  ಬಂದಾಗ ಒಂದು ದಿನ ಧ್ವನಿ ಇಲ್ಲದವರ ಪರವಾಗಿ ಮಾರಾಡುವ ಸರದಿ ಬರಲಿ ಅವರಿಗೆ ಎಳೆಯ ವಸ್ತುಗಳನ್ನು  ಕಾಪಾಡಿದ ನೆನಪು ಮತ್ತು ಮಾತಾಡಲು ತಾವೇ ತೆರೆಯಲಿ ತುಟಿ.

ಹಕ್ಕುಗಳು

 ಹಕ್ಕುಗಳು  ಮೂಲ: ನಿಕ್ಕಿ ಜಿಯೋವನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್ ನಾನೊಂದು ಜೇಡವನ್ನು ಕೊಂದುಹಾಕಿದೆ. ಅದೇನೂ ಕಂದುಬಣ್ಣದ ವಿಷಮಯ ಜೇಡವಾಗಿರಲಿಲ್ಲ ಅಥವಾ ಕಪ್ಪು ಬಣ್ಣದ ಬ್ಲಾಕ್ ವಿಡೋ ಕೂಡಾ ಆಗಿರಲಿಲ್ಲ. ನಿಜ ಹೇಳಬೇಕೆಂದರೆ ಅದೊಂದು  ಯಕಶ್ಚಿತ್  ಕಾಗದದಂಥ ಜೇಡವಾಗಿತ್ತು. ನಾನು ಕೈಯಲ್ಲಿ ಪುಸ್ತಕ ಎತ್ತಿಕೊಂಡಾಗ ಅದು ಓಡಿಹೋಗಬೇಕಾಗಿತ್ತು. ಹಾಗೆ ಅವಳು ಓಡಲಿಲ್ಲ  ಹೀಗಾಗಿ ನನಗೆ ಗಾಬರಿಯಾಗಿ ಅವಳನ್ನು ಅಪ್ಪಚ್ಚಿ ಮಾಡಿದೆ. ನನಗೆ ಭಯವಾಯ್ತೆಂದು ಜೀವಿಯೊಂದನ್ನು ಹೊಸಕಿ ಹಾಕುವ ಹಕ್ಕು ನನಗಿಲ್ಲ ಎಂದು ತೋರುತ್ತದೆ.

ಹಿಂದೆ ಬಂದರೆ ಹಾಯಬೇಡಿ

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ  ಅಂತೆಲ್ಲಾ ಹಾಡುಗಳು ಪ್ರಸಾರವಾಗುತ್ತಿದ್ದವು ಹಿಂದೆ. ಅದನ್ನೆಲ್ಲ ಕೇಳಿ ಜನರಿಗೆ  ಮುಂದೆ ಹೋಗೋಣ ಅನ್ನಿಸುತ್ತಿತ್ತು.  ಬಹಳ ಜನರಿಗೆ ಸಿನಿಮಾದಲ್ಲಿ ಮುಂದಿನ ಸೀಟ್  ಆಪ್ಯಾಯವಾಗಿತ್ತು. ಉಳಿದ ದುಡ್ಡಿನಲ್ಲಿ ಗಾಂಧಿಯಂತೆ ಕಳ್ಳೇಕಾಯಿ  ತಿನ್ನಬಹುದಾಗಿತ್ತು. ಬಸ್ಸುಗಳಲ್ಲಿ ತುಂಬಿರುತ್ತಿದ್ದರು ಜನ ಗಿಜಿಗಿಜಿ. ಕಂಡಕ್ಟರ್  ರೇಗುತ್ತಿದ್ದ ಮುಂದೆ ಹೋಗ್ರೀ! ಅವನಿಗೂ ಇತ್ತು ನೀವು ಮುಂದೆ ಬರಬೇಕೆಂಬ ಕಾಳಜಿ. ಈಗ ಮುಂದೆ ಬರಲು ಹಿಂದೇಟು. ಮಕ್ಕಳು ಹಿಡಿಯುತ್ತಾರೆ ಹಿಂದಿನ ಸೀಟು. ಹಿಂದಿದ್ದವರಿಗೆ ಕಾಣುತ್ತಿದೆ ಗಿಲೀಟು. ದಾಟಲು ಹೆದರುತ್ತಿದ್ದಾರೆ ಗೀಟು. ಹಿಂದಿದ್ದುಕೊಂಡು ಮುಂದೆ ಬಂದವರು ಮಾಡಿಕೊಳ್ಳುತ್ತಿದ್ದಾರೆ ತಮ್ಮ ಮಕ್ಕಳಿಗೂ  ಮೊಮ್ಮಕ್ಕಳಿಗೂ  ಮರಿಮಕ್ಕಳಿಗೂ ಹಿಂದಿನ ಸೀಟು ಪರ್ಮನೆಂಟು. ಸಿ ಪಿ ರವಿಕುಮಾರ್

ಶೋಧ

ಇಮೇಜ್
 ಶೋಧ  ಮೂಲ: ವ್ಯಾಲೆರಿ  ವೇಟ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಕಾಣೆಯಾದಳು ಅಜ್ಜಿ ಕಂಪ್ಯೂಟರ್ ಒಳಗೆ ಸುಳ್ಳು ಹೇಳುತ್ತೇನಾ ನಿಜವಾಗಿ, ನನ್ನಾಣೆ, ಕಂಟ್ರೋಲ್ ಎಂಟರ್ ಒತ್ತಿದಳು ನೋಡಿ ಒಮ್ಮೆಲೇ ಕಣ್ನೋಟಕ್ಕೆ ಆಗಿಬಿಟ್ಟಳು ಕಾಣೆ ನುಂಗಿಬಿಟ್ಟಿತು ಇಡಿಇಡಿಯಾಗಿ ಸಂಪೂರ್ಣ ನೆನೆಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಅಂಟಿಕೊಂಡಿರಬಹುದು ಒಳಗಿರುವ ವೈರಸ್ ಅಥವಾ ವರ್ಮ್ ಯಾವುದಾದರು, ಕೆಡುಕ ಹುಡುಕಿ ನೋಡಿದೆ ರೀಸೈಕಲ್ ಬಿನ್ ಒಳಗೆ ಮತ್ತು ಜಾಲಾಡಿದೆ ಎಲ್ಲಾ ಬಗೆಯ ಕಡತ ಇಂಟರ್ ನೆಟ್ ಕೂಡಾ ಬಳಸಿ ನೋಡಿದ್ದೇನೆ ಕಣ್ಣಿಗೆ ಬೀಳಲಿಲ್ಲ, ಬರೀ ನಿರರ್ಥಕ ದುಡಿತ. ವಿಹ್ವಲ ಸ್ಥಿತಿಯಲ್ಲಿ ನೆನಪಾದನು ಜೀವ್ಸ್  ಇಮೇಲ್ ಕಳಿಸಿದೆ ತಕ್ಷಣ : ಹೇಳು ಮಹರಾಯ ಹೇಗೆ ಶೋಧಿಸಿದರೆ ಸಿಕ್ಕಬಹುದೆಂದು ಆದರೆ ಅವನೂ ತಲೆ ಕೊಡವಿದನು, ಏನು ಅನ್ಯಾಯ ಆನ್ಲೈನ್ ಎಲ್ಲೂ ಕಾಣುತ್ತಿಲ್ಲವೆ? ಹಾಗಾದರೆ  ನೋಡು ಇನ್ ಬಾಕ್ಸ್ ಒಳಗೆ ಇರುವಳೇ ಅಜ್ಜಿ ಕಂಡರೆ ಕಂಟ್ರೋಲ್ ಸಿ ಕಂಟ್ರೋಲ್ ವಿ ಮಾಡಿ  ಕಳಿಸಿಬಿಡು ಮಾರೋಲೆ  ಆಟಾಚ್ಮೆಂಟ್ ಹಚ್ಚಿ.

ಬೆರಳೆಣಿಕೆಯಷ್ಟು

ಇಮೇಜ್
 ಬೆರಳೆಣಿಕೆಯಷ್ಟು ಮೂಲ: ಎಡ್ಗರ್ ಆಲ್ಬರ್ಟ್ ಗೆಸ್ಟ್  ಕನ್ನಡ ಅನುವಾದ : ಸಿ ಪಿ ರವಿಕುಮಾರ್  ಕಿಕ್ಕಿರಿದಿವೆ ಸುಲಭಮಾರ್ಗಗಳೆಲ್ಲ ಸಾಫಾದ ದಾರಿಗಳು ಜನನಿಬಿಡವಾಗಿವೆ ಆಳವಿಲ್ಲದ ಸಣ್ಣಪುಟ್ಟತೊರೆಗಳೆಲ್ಲ  ಕೊಡಮಡಕೆಕುಡಿಕೆ ತುಂಬಿ ಬಡವಾಗಿವೆ  ದೂರದಲ್ಲಿದೆಯಲ್ಲ ಕಲ್ಲು ಬಂಡೆಯದಾರಿ ಏರಿದರೆ ಕಾಣುವುದಲ್ಲ ದೂರದೂರದ ನೋಟ ಅಲ್ಲಿ ಹೋಗುವ ಜನರು ಬೆರಳೆಣಿಕೆಯಷ್ಟು  ಸಿಕ್ಕಲಾರದು ದಾರಿ ಶೋಧಿಸಿದರೂ ಭೂಪಟ. ಸುಗಮವಾಗಿದೆಯೋ ಎಲ್ಲಿ ನಡೆಯುವ ದಾರಿ ಅಲ್ಲಿಗೇ ಮುಗಿಬೀಳುವುದು ಜನತೆ ಸುಲಭ ಒಬ್ಬರ ಹಿಂದಿನ್ನೊಬ್ಬರು  ಸಾಗುವುದು ಜನಪ್ರಿಯ ಹಾದಿಗೆ ಇನ್ನಷ್ಟು ಜನಪ್ರಿಯತೆ. ದಾರಿ ದುರ್ಗಮ ಅಲ್ಲಿ ಹೆಜ್ಜೆ ಇಡಲೂ ಧೈರ್ಯ ಬೇಕೋ ಮಾಡಲು ಕಷ್ಟವೋ ಯಾವ ಕಾರ್ಯ ಪೂರೈಸಿದಾಗ ಅದುವೇ ತಂದುಕೊಡುವುದು ಕೀರ್ತಿ ಯಾರಿಗಿದೆಯೋ ಹಿಂಜರಿಯದೆ ಮುನ್ನಡೆವ ಸ್ಥೈರ್ಯ

ಮರಗಳು

ಇಮೇಜ್
ಮರಗಳು ಮೂಲ: ಫಿಲಿಪ್ ಲಾರ್ಕಿನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮರಗಳಲ್ಲಿ ಮತ್ತೆ ಒಡೆಯುತ್ತಿವೆ ಎಲೆ ಏನೋ ಹೇಳಲು ಬಾಯ್ತೆರೆದಂತೆ ತರು. ಕಣ್ತೆರೆದು ಅರಳುತ್ತವೆ ಹೊಸಚಿಗುರು ಅವುಗಳ ಹಸಿರಿನಲ್ಲಿದೆ ನೋವಿನ ಸೆಲೆ  ಮರುವುಟ್ಟು ಪಡೆದು ಅಮರವಾಗುವವೇ ವೃಕ್ಷ? ಜರೆ ಮತ್ತು ಸಾವು ನಮಗೆ ಮಾತ್ರವೇ? ಇಲ್ಲ, ಅವೂ ಸಾಯುತ್ತವೆ! ಬೇಕೇ ಪುರಾವೆ? ಮರದ ಉಂಗುರಗಳಲ್ಲಿದೆ ಅದರ ಆಯುಷ್ಯ ರಹಸ್ಯ. ಇಷ್ಟಾದರೂ ವೈಶಾಖ ಕಾಲಿಟ್ಟಾಗ ಮೈತುಂಬಾ ಹಸಿರು ಹೊದ್ದು ಸಂಭ್ರಮಿಸುವಳು ವೃಕ್ಷಸ್ತ್ರೀ ಪ್ರತಿವರ್ಷ "ಸತ್ತುಹೋಯಿತು ಹಳೆಯ ಸಂವತ್ಸರ!" ಅವಳ ಸಂದೇಶ, "ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿ ಶುರು!" (ಫಿಲಿಪ್ ಲಾರ್ಕಿನ್ ಒಬ್ಬ ಇಂಗ್ಲಿಷ್ ಕವಿ (೧೯೨೨-೨೦೦೧). ಇವನ ಕವಿತೆಗೂ ಬೇಂದ್ರೆ ಅವರ ಯುಗಾದಿ ಕವಿತೆಗೂ ಇರುವ ಸಾಮ್ಯ ಗಮನಿಸಿ. ಹೊಂಗೆ ಹೂವಿನ ಟೊಂಗೆಯಲ್ಲಿ ಪ್ರತಿವರ್ಷವೂ ವಸಂತದಲ್ಲಿ ಕೇಳಿ ಬರುವ ಸಂಗೀತವನ್ನು ಕೇಳಿದಾಗ, ಬೇವಿನ ಮರದಲ್ಲೂ ಹೂಗಳು ಚಿಗುರಿದಾಗ ಕವಿಯ ಮನಸ್ಸು ಯುಗಾದಿಯ ಚಮತ್ಕಾರದ ಕಡೆಗೆ ಹೊರಳುತ್ತದೆ. ಮರಗಳು ಹೀಗೆ ಮರುವುಟ್ಟು  ಪಡೆದುಕೊಳ್ಳುವುದು ಕವಿಗೆ ಆಶ್ಚರ್ಯ ಎನ್ನಿಸುತ್ತದೆ.  ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ! ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೆ? ಎಂಬ ಬೇಂದ್ರೆ ಅವರ ಪ್ರಶ್ನೆ ಮತ್ತು ಫಿಲಿಪ್ ಲಾರ್ಕಿನ್ ಅವರ "ಮರಗಳು ಹೀಗೆ ಪ್ರತಿವರ್...

ವೃದ್ಧ ನಿರುದ್ವೇಗಿಯ ಪ್ರಾರ್ಥನೆ

ಇಮೇಜ್
  ಮೂಲ: ಎಮಿಲಿ ಬ್ರಾಂಟಿ ಕನ್ನಡಕ್ಕೆ:  ಸಿ ಪಿ ರವಿಕುಮಾರ್  ಸಂಪತ್ತನ್ನು ಕಂಡರೆ ನನಗೆ ಅಷ್ಟಕ್ಕಷ್ಟೇ ಪ್ರೇಮವೆಂದರೆ ನಗುವೆ ತಿರಸ್ಕಾರದ ನಗೆ ಕೀರ್ತಿಗಾಗಿ ಕಾಮಿಸಿದೆನಾದರೂ ಅದು  ಬೆಳಗಾಗ ಲಯವಾಗುವ ಕನಸಿನ ಹಾಗೆ ಈಗ ನಾನು ಪ್ರಾರ್ಥಿಸಲೆಂದು ಬಾಯ್ತೆರೆದರೆ ಆಗ ತುಟಿಗಳ ಮೇಲೆ ಬರುವ ಮಾತೊಂದೇ : ನನಗೀಗ ಕೇಳುವುದೋ ಯಾವ ಹೃದಯದ ತುಡಿತ ಅದನ್ನು ಹಾಗೇ ಉಳಿಸಿ ನೀಡು ಮುಕ್ತಿ ನನಗೆ! ಬಿರುಸಾಗಿ ಉರುಳುತ್ತ ನನ್ನ ದಿನಗಳು ತಮ್ಮ ಗುರಿಯತ್ತ ಧಾವಿಸುತ್ತಿರಲು ನಾನು ಬೇಡುವುದು ಇಷ್ಟೇ ಬದುಕು ಸಾವುಗಳಲ್ಲಿ ನಾನು ಮುಕ್ತಳಾಗಿರುವಂತೆ ಮತ್ತು ಸಹಿಸುವ ಶಕ್ತಿ ನನಗೆ ನೀಡು ಎಂದಷ್ಟೇ.

ಅವರಂತೆ

ಇಮೇಜ್
ಮೂಲ: ಜೆನ್ನಿ ಆಸ್ಬಾರ್ನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಇದೆ ನನ್ನಾತ್ಮದ ಒಳಗೆ ಎಲ್ಲೋ ಒಂದು ಕಡೆ ನಾನು ತುಂಬಲಾರದ ಖಾಲೀ ಸ್ಥಳವೊಂದು ಕಿಟಕಿ ಪಕ್ಕದಲ್ಲಿಟ್ಟ ಖಾಲಿ ಹೂದಾನಿಯ ಹಾಗೆ ಸುಂದರ, ಆದರೆ ತುಂಬಲಾಗದು ಅಲ್ಲಿ ಹೂವನೆಂದೂ ನಾನು ಕಾಯುತ್ತೇನೆ ಕುಳಿತಲ್ಲೇ ಗಮನಿಸುತ್ತಾ ಹಾದುಹೋಗುವ ಪ್ರತಿಯೊಬ್ಬರ ತೂಕ ನನ್ನ ಮನದಲ್ಲಿದೆ ಅವರನ್ನು ಸೇರಿಕೊಳ್ಳುವ ಆಸೆ ತಡೆಯುವುದು ಅವರಂತೆ ಆಗಿಬಿಡುವ ಆತಂಕ

ಫ್ರೊ ಮೆಲ್ವಿನ್ ಬ್ರೂವರ್

 ನಾನು ಪಿಎಚ್ ಡಿ ಮಾಡುತ್ತಿದ್ದಾಗ ಅನೇಕ ಶ್ರೇಷ್ಠ ಅಧ್ಯಾಪಕರ ಪಾಠ ಕೇಳುವ ಮತ್ತು ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ವಿದ್ಯಾರ್ಥಿಯಾಗಿ ಸೇರಿದ್ದು ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಲ್ಲಿ ಮತ್ತು  ಕಂಪ್ಯೂಟರ್ ಇಂಜಿನಿಯರಿಂಗ್ ಎಂಬ ಶಾಖೆಯಲ್ಲಿ.  ಶಾಖೆಯಲ್ಲಿದ್ದ ಎಲ್ಲ ಪ್ರಾಧ್ಯಾಪಕರೂ ತಮ್ಮ ತಮ್ಮ ಸಂಶೋಧನಾ ರಂಗಗಳಲ್ಲಿ ಪ್ರಸಿದ್ಧರು. ಪ್ರೊ ಮೆಲ್ವಿನ್ ಬ್ರೂವರ್ ಅವರ ಸಂಶೋಧನಾ ಲೇಖನಗಳನ್ನು ನಾನು ಎಂ ಈ ಅಧ್ಯಯನದ ಸಂದರ್ಭದಲ್ಲಿ ಓದಿಕೊಂಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕೆಂಬ ಇಚ್ಛೆ ನನ್ನಲ್ಲಿತ್ತು. ನಾನು ಅವರಿಗೆ ಪತ್ರ ಬರೆದು ವಿನಂತಿಸಿಕೊಂಡೆ. ಆಗ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಪ್ರಾಧ್ಯಾಪಕರು ಸದ್ಯ ಯಾವ ರಂಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಪ್ರೊ.ಬ್ರೂವರ್ ವಿಎಲ್ ಎಸ್ ಐ ರಂಗದಲ್ಲಿ ಫಿಸಿಕಲ್ ಡಿಸೈನ್ ಎಂಬ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ನನಗೆ ತಿಳಿದಿತ್ತು. ಆದರೆ ನಾನು ಅವರಿಗೆ ಪತ್ರ ಬರೆದಾಗ ಅವರು ಈ ಕ್ಷೇತ್ರದಿಂದ ಮುಂದುವರಿದು ಟೆಸ್ಟಿಂಗ್ ಎಂಬ ಕ್ಷೇತ್ರವನ್ನು  ಪ್ರವೇಶಿಸಿ ಅಲ್ಲಿ ಸಕ್ರಿಯರಾಗಿದ್ದರು! ಹೀಗಾಗಿ ಅವರು ನನಗೆ ಮಾರೋಲೆ ಕಳಿಸಿ "ನಾನು ಈಗ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯನಾಗಿಲ್ಲ.  ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಶಾಸ್ತ್ರಿ ಎಂಬುವರಿಗೆ ನಿಮ್ಮ...

ಭಜಿಸೋ ಮನುಜ, ರಾಮ ಗೋವಿಂದ ಹರಿ

ಮೂಲ - ಸಂತ ಕಬೀರ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಭಜಿಸು ಮನುಜ, ರಾಮ ಗೋವಿಂದ ಹರಿ ಜಪ ತಪ ಸಾಧನ ಏನೂ ಬೇಡದು, ಬೇಡದು ನಿನ್ನ ಸಿರಿ ಸಂತತಿ ಸಂಪದ ಲೋಲುಪನಾಗಿ ಮರೆತು ಹೋದೆ ಗುರಿ ಸ್ಮರಿಸು ರಾಮನನ್ನು ಬರುವ ಮುನ್ನ ಮೃತ್ಯು ಹಾರಿ ಕೇಳಿ ಹೇಳುತಿಹನು ಸಂತ ಕಬೀರ ಸಾರಿ ಸಾರಿ ರಾಮನಾಮ ಹೇಳದ ನಾಲಗೆಗೆ ಮಣ್ಣುಧೂಳೆ ದಾರಿ

ಪುಟ್ಟ ಪುಟ್ಟ ವಸ್ತು

ಇಮೇಜ್
 ಮೂಲ: ಜೂಲಿಯಾ ಫ್ಲೆಚರ್ ಕಾರ್ನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಪುಟ್ಟ ಪುಟ್ಟ ಹನಿಗಳು ಪುಟ್ಟ ಪುಟ್ಟ ಕಣಗಳು ಕೂಡಿ ಕಡಲು ಆಳ  ಮತ್ತು ನೆಲ ವಿಶಾಲ ಎಣಿಸುತ್ತಿವೆ ಟಿಕಿಟಿಕಿಸುತ  ಗಡಿಯಾರದ ದಂತ  ಕ್ಷಣಕ್ಷಣಗಳು ಸೇರಿಕೊಂಡು ಅಪ್ರಮೇಯ ಅನಂತ!

ಕಥೆ ಮತ್ತು ಕಥೆಗಾರ

ಇಮೇಜ್
ನಾನು ಪಿಎಚ್ ಡಿ ಮಾಡುತ್ತಿದ್ದಾಗ ಕೊನೆಯ ಎರಡು ವರ್ಷ ನನಗೆ ಯಾವ ಕೋರ್ಸ್ ಮಾಡುವ ಅಗತ್ಯ ಇರಲಿಲ್ಲ.  ಎಷ್ಟು ಕೋರ್ಸ್ ವರ್ಕ್ ಮಾಡಬೇಕಾಗಿತ್ತೋ ಅಷ್ಟನ್ನು ಮಾಡಿ ಮುಗಿಸಿದ್ದಾಗಿತ್ತು.  ಕೊನೆಯ ವರ್ಷದಲ್ಲಿ ಒಂದು ಘಟನೆ ನಡೆಯಿತು. ನನ್ನ ಪಿಎಚ್ ಡಿ ಮಾರ್ಗದರ್ಶಕರಾದ ಪ್ರೊಫೆಸರ್ ನನ್ನನ್ನು ಕರೆದು "ನಿನಗೆ ರಿಸರ್ಚ್ ಅಸಿಸ್ಟೆಂಟ್ಶಿಪ್ ಕೊಡಲು ನನ್ನ ಬಳಿ ಈ ಸೆಮಿಸ್ಟರ್ ಹಣ ಇಲ್ಲ" ಎಂದು ತಿಳಿಸಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ನೋವಿತ್ತು. ಅವರ ಅಸಹಾಯಕತೆ ಕಂಡು ನಾನು ಅವರಿಗೆ ಸಮಾಧಾನ ಹೇಳಿ "ಪರವಾಗಿಲ್ಲ, ನೀವು ಯೋಚಿಸಬೇಡಿ" ಎಂದು ಹೇಳಿದರೂ ಮುಂದೆ ಹೇಗೆಂದು ಯೋಚನೆಯಾಯಿತು.  ಆಗ ಯೂನಿವರ್ಸಿಟಿಯಲ್ಲಿ ಗ್ರಾಜುಯೇಟ್ ಅಡ್ವೈಸರ್ ಹುದ್ದೆಯಲ್ಲಿದ್ದ ಬಿಲ್ ಬೇಟ್ಸ್  ನನಗೆ ಪರಿಚಿತರು. ನನ್ನನ್ನು ಅಭಿಮಾನದಿಂದ.ಕಾಣುತ್ತಿದ್ದ ಮನುಷ್ಯ.  ನಾನು ಟೀಚಿಂಗ್ ಅಸಿಸ್ಟೆಂಟ್ ಆಗಿದ್ದಾಗ ನನ್ನ ಬಗ್ಗೆ ಒಳ್ಳೆಯ ಮಾತುಗಳು ವಿದ್ಯಾರ್ಥಿಗಳಿಂದ. ಬರುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಬಿಲ್ ಹಾಸ್ಯಪ್ರಿಯ. ಅವರಿಗೆ ಆಗ ಅರವತ್ತು ದಾಟಿದ ಪ್ರಾಯ ಎಂದು ನನ್ನ ಅಂದಾಜು. ಮಿಲಿಟರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ಈಗ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು.  ಎಲ್ಲರೊಂದಿಗೆ ಬಹಳ ಕಡಿಮೆ ಮಾತು. ಎಷ್ಟು ಬೇಕೋ ಅಷ್ಟು. ಆದರೆ ನನಗೆ ಅವರ ಆಫೀಸಿನಲ್ಲಿ ಸದಾ ಸ್ವಾಗತ! ಹೌ ಆರ್ ಯೂ ಮೈ ಫ್ರೆಂಡ್, ವಾಟ್ ಕ್ಯಾನ್ ಐ ಡೂ...

ತನು ನಿನ್ನದು ಜೀವನ ನಿನ್ನದು - ಎರಡು ರಚನೆಗಳು

ಇಮೇಜ್
"ತನುವು ನಿನ್ನದು ಮನವು ನಿನ್ನದು" ಎಂಬುದು ಕುವೆಂಪು ಅವರ ಕವಿತೆ. ಇದನ್ನು ಅನೇಕ ಗಾಯಕರು ಹಾಡಿದ್ದಾರೆ. ತನು ನಿನ್ನದು ಜೀವನ ನಿನ್ನದೋ ರಂಗ ಎಂಬುದು ಕನಕದಾಸರ ರಚನೆ. ಇದನ್ನೂ ಅನೇಕ ಗಾಯಕರು ಹಾಡಿದ್ದಾರೆ. ವಿಕಿಸೋರ್ಸ್ ಸಂಗ್ರಹದಲ್ಲಿ ಕುವೆಂಪು ಅವರ ಕವಿತೆ ಸಿಕ್ಕಿತು. ಪಾಠದಲ್ಲಿ ಒಂದೂ ತಪ್ಪಿಲ್ಲದೆ ಸಂಗ್ರಹಿಸಿಟ್ಟ ಕನ್ನಡ ಬರಹಗಳು ಅಪರೂಪ. ಕನಕದಾಸರ ಕೃತಿಯನ್ನೂ ಯಾರೋ ಸಂಗ್ರಹಿಸಿದ್ದಾರೆ. ಇದನ್ನು ಟೈಪ್ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗಿತ್ತು. ದ್ವಿತೀಯಾಕ್ಷರ ಪ್ರಾಸ ಸರಿಯಾಗಿ ಹೊಂದುವಂತೆ ಸಾಲುಗಳನ್ನು ಮುರಿಯಬೇಕಾಗಿತ್ತು.  ಪಂಚೇಂದ್ರಿಯಗಳ ಮೂಲಕವೇ ನಮಗೆ ಜೀವನಾನುಭವ ದೊರಕುವುದು. ಐದು ಇಂದ್ರಿಯಗಳ ಜೊತೆಗೆ ಮನಸ್ಸು ಎಂಬ ಆರನೇ ಇಂದ್ರಿಯವೂ ಇದೆ. ಅದು ನಮಗೆ ಬಾಹ್ಯದಲ್ಲಿ ತೋರುವುದಕ್ಕೂ ಮೀರಿ ಏನನ್ನೋ ತೋರಿಸುತ್ತದೆ.  ನಮ್ಮ ಇಂದ್ರಿಯಾನುಭವಗಳೆಲ್ಲ ದೈವವು ನಮಗೆ ನೀಡಿದ ಉಡುಗೊರೆ ಎಂಬ ಅನುಭೂತಿ ಕೂಡಾ ಇಂಥದ್ದೇ. ಕಾಯಜಪಿತ ಎಂದು ತಮ್ಮ ದೈವ ಕಾಗಿನೆಲೆ ಆದಿಕೇಶವನನ್ನು ಕನಕದಾಸರು ಸಂಬೋಧಿಸುತ್ತಿರುವುದು ಯಾಕೆ? ನಮ್ಮ ಪೂಜಾವಿಧಾನಗಳ ಬಗ್ಗೆ ಅವರು ಹೇಳುತ್ತಿರಬಹುದು. ದೇವರಿಗೆ ಬಣ್ಣಬಣ್ಣದ ಹೂವು, ಘಮಘಮಿಸುವ ಗಂಧ, ರುಚಿಯಾದ ಹಣ್ಣು ಪಕ್ವಾನ್ನಗಳ ನೈವೇದ್ಯ, ಘಂಟಾನಾದ/ಮಂತ್ರಘೋಷ  ಇವೆಲ್ಲ ಅರ್ಪಿಸಿ ಧನ್ಯತೆಯ ಭಾವ ಪಡೆಯುವ ಕಾರಣದಿಂದ ಅವರಿಗೆ ದೇವರು ಕಾಯಜಪಿತ ಎನ್ನಿಸುತ್ತಿರಬಹುದು. ನಮ್ಮ ಆರನೇ ಇಂದ್ರಿಯದಿಂದ...

ಮೊನ್ನೆ ಓದಿದ ಹುಚ್ಚುಚ್ಚಾರ ಕವಿತೆ

ಇಮೇಜ್
ಮೊನ್ನೆ ಓದಿದ ಹುಚ್ಚುಚ್ಚಾರ ಕವಿತೆ ಮೂಲ: ಕೆನ್ ನೆಸ್ಬಿಟ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಒಂದು ಕವಿತೆ  ಓದುತ್ತಾ ಇದ್ದೆ ಮೊನ್ನೆ ಕವಿ ಗೀಚಿದ್ದಾನೆ ತೋಚಿದ ಪದಗಳನ್ನೇ ಒಂದು ಬಾಳೆಕಾಯಿ ಪದವೂ ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟೆ ತಲೆಗೆ ಪೆನ್ಸಿಲ್ ಹೋಗದೆ ಒಂದೊಂದು ಜಿಲೇಬಿ ಸಾಲಿನಲ್ಲೂ ಕೂಡಾ ಸೇರಿಸಿದ್ದಾನೆ ಸಾಲಿಗೆ ಸೇರದ ಒಂದು ಪದ ಇಂಥ ಕವಿತೆಯನ್ನು ನಾನು ಬೆಕ್ಕು ಯಾವತ್ತೂ ಕಾಲ್ಚೆಂಡು ಓದಿರಲಿಲ್ಲ ನಿಮ್ಮಲ್ಲೇನು ಗುಟ್ಟು ಯಾವ ಕವಿ ಬರೆದಿರಬಹುದು ಈ ಕವಿತೆ ಮತ್ಸ್ಯ ಈ ಕವಿಗೆ ಚಮಚ ಏನಾದರೂ ಹುಚ್ಚುಗಿಚ್ಚಾ  ಯಾವ ಉಪ್ಪಿನಕಾಯಿ ವ್ಯಕ್ತಿಗೆ ಇಂಥ ಮಿದುಳು ಇದ್ದೀತು ಸೌಟು ಎಂದು ಯೋಚಿಸಿ ಬಂತು ಅಳು  ಓದುತ್ತಾ ಓದುತ್ತಾ ಮಟರ್ ಪನೀರ್ ಅವರೆಕಾಳು  ಹುಚ್ಚು ಹುಚ್ಚಾಗಿತ್ತು ಉಪ್ಪಿಟ್ಟು ಕವಿತೆಯ ಸಾಲು ಇನ್ನಷ್ಟು ಗೋಳಿಬಜೆ ಕೋಡುಬಳೆ ಗೋಜಲು ಆಗುತ್ತಿತ್ತು ಕವ್ವಾಲಿ ಗಜಲ್ ಗುರುರಾಜುಲು  ಕೊನೆಗೂ ಕಬಡ್ಡಿ ಹಂಚಿಕಡ್ಡಿ ಇನ್ವೆಸ್ಟ್ಮೆಂಟ್ ಬಡ್ಡಿ  ಮುಗಿಸಿದೆ ಓದಿ  ಪ್ಯಾರಸಿಟಮಾಲ್  ಆರ್ಗಾನಿಕ್ ಟೆಡ್ಡಿ ಕೊಡಬೇಕು ಅಗ್ಗಿಷ್ಟಿಕೆ ಚುಚ್ಚುಕ ಕೆಂಪು ಹಣಿಗೆ  ಬರೆ ಬುಡಕ್ಕೆ ಬುಡಬುಡಕೆ ಬೀಡಾ ಬರೆದವನಿಗೆ

ತೆಗೆದೆಸೆಯಿರಿ ಅಲಾರಂ ಗಡಿಯಾರ

ಇಮೇಜ್
 ತೆಗೆದೆಸೆಯಿರಿ ಅಲಾರಂ ಗಡಿಯಾರ ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಅನುವಾದ: ಸಿ ಪಿ ರವಿಕುಮಾರ್  ನನ್ನ ಅಪ್ಪನದು ಯಾವಾಗಲೂ ಒಂದೇ ಹಾಡು "ಯಾರು ಬೇಗ ಮಲಗಿ ಬೇಗ ಏಳುವರೋ ಅವರು ಆರೋಗ್ಯ ಹೊಂದುವರು, ಸಂಪತ್ತು ಗಳಿಸುವರು, ಜಾಣರಾಗುವರು." ರಾತ್ರಿ ಎಂಟಕ್ಕೆಲ್ಲ ದೀಪ ನಂದಿಸಿಬಿಡುತ್ತಿದ್ದರು  ನಮ್ಮ ಮನೆಯಲ್ಲಿ ಯಾವತ್ತೂ ಬೆಳಗ್ಗೆ ಎದ್ದಾಗ ಕಾಫಿ-ಉಪಾಹಾರದ  ಘಮಘಮ ಹರಡಿರುತ್ತಿತ್ತು.  ಈ ನಿಯಮವನ್ನು ಉದ್ದಕ್ಕೂ ಪಾಲಿಸುತ್ತಿದ್ದ ಅಪ್ಪ ಸತ್ತಾಗ ಅವನಿಗಿನ್ನೂ ಚಿಕ್ಕ ವಯಸ್ಸು, ಹಣ ಆಸ್ತಿ ಏನಿಲ್ಲ,ತುಸ್ಸು, ಮತ್ತು ಜಾಣ್ಮೆಯ ಲೆಕ್ಕಾಚಾರದಲ್ಲೂ ಕಮ್ಮಿ ಮಾರ್ಕ್ಸು. ಹೀಗಾಗಿ ನಾನು ಅವನ ಸಲಹೆಯನ್ನು ನಿರ್ಲಕ್ಷಿಸಿದ್ದೇನೆ. ತಡವಾಗಿ ಮಲಗಿ ತಡವಾಗಿ ಏಳುತ್ತೇನೆ. ಹಾಗೆಂದು ನಾನೇನೂ ಜಗತ್ತನ್ನೇ ಗೆದ್ದುಬಿಟ್ಟಿಲ್ಲ, ಆದರೆ ಪಾರಾಗಿರುವೆ ಅದೆಷ್ಟೋ ಟ್ರಾಫಿಕ್ ದಟ್ಟಣೆಗಳಿಂದ ಮತ್ತು ಸಾಧಾರಣವಾಗಿ ಜನರು ಜಾರಿ ಬೀಳುವ ಸಂದರ್ಭಗಳಿಂದ. ಹಾಗೂ ಪರಿಚಯ ಮಾಡಿಕೊಂಡಿದ್ದೇನೆ ಎಷ್ಟೋ ಜನ ವಿಚಿತ್ರ ಮತ್ತು ವಿಸ್ಮಯಕಾರಿ ವ್ಯಕ್ತಿಗಳನ್ನು. ಅವರಲ್ಲಿ ಒಬ್ಬ  ನಾನು. ನನ್ನ ಅಪ್ಪ ಎಂದೂ ಭೇಟಿಯಾಗದವನು.

ಕಷ್ಟವೆನ್ನಿಸಿದರೂ ಬೀಳ್ಕೊಡು

ಇಮೇಜ್
ಕಷ್ಟವೆನ್ನಿಸಿದರೂ ಬೀಳ್ಕೊಡು  ಮೂಲ: ಕ್ರಿಸ್ಟಿನಾ ರೊಸೆಟ್ಟಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನನ್ನ ದಾರಿಯ ಕೊನೆಗೆ ತಲುಪಿದಾಗ ನಾನು ಮುಳುಗಿದಾಗ ನನ್ನ ಬಾಳಿನ ಮೇಲೆ ಭಾನು ದುಗುಡ ತುಂಬಿದ ಕೋಣೆಯಲ್ಲಿ ಸಲ್ಲಿಸದಿರಾವ ವಿಧಿವಿಧಾನ ಆತ್ಮವೊಂದು ಮುಕ್ತವಾಗಿದ್ದಕ್ಕೆ ಏತಕ್ಕೆ ರೋದನ? ನಿನ್ನ ಅನುಭವಕ್ಕೆ ಬರಲಿ ನನ್ನ ಅನುಪಸ್ಥಿತಿ, ಆದರೆ ಸ್ವಲ್ಪ ದಿನ ಮಾತ್ರ, ಅದೂ ಹಾಕದೇ ಅಳುಮೋರೆ. ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ನೆನೆದು ಕಷ್ಟವೆನ್ನಿಸಿದರೂ ನನ್ನನ್ನು ಬೀಳ್ಕೊಡು  ಏಕೆಂದರೆ ಇದು ಎಲ್ಲರೂ ಕೈಗೊಳ್ಳಲೇಬೇಕಾದ ಪಯಣ ಮತ್ತು ಎಲ್ಲರೂ ಒಬ್ಬಂಟಿಯಾಗೇ ಕೈಗೊಳ್ಳಬೇಕು ಇದನ್ನ ಇದೆಲ್ಲವೂ ಪೂರ್ವಯೋಜನೆಯ ಒಂದು ಅಂಗ ಮನೆಯತ್ತ ಮತ್ತೊಂದು ಹೆಜ್ಜೆ ಹಾಕುವ ಪ್ರಸಂಗ ತಾಳಿಕೊಳ್ಳಲಾರದಷ್ಟು ಹೃದಯವಾದರೆ ಭಾರ ತೆಗೆದುಕೋ ನಮ್ಮ ಸ್ನೇಹಿತರ ಆಧಾರ ನಮ್ಮ ಹುಚ್ಚುತನವನ್ನೆಲ್ಲಾ ನೆನೆದು ನಕ್ಕು ಕಷ್ಟವೆನ್ನಿಸಿದರೂ ಬಿಡಿಸು ಬಂಧನದ ಸಿಕ್ಕು.

ನನ್ನೊಳಗೇ

ಇಮೇಜ್
   ಮೂಲ: ಆಲ್ಬರ್ಟ್ ಕಾಮು ಅನುವಾದ: ಸಿ ಪಿ ರವಿಕುಮಾರ್ ದ್ವೇಷದ ನಡುವೆ ಕಂಡುಕೊಂಡೆನು ನಾನು ಇರುವುದು ಅಪರಾಜಿತ ಪ್ರೀತಿ ನನ್ನೊಳಗೆ ಕಂಬನಿಯ ನಡುವೆ ಕಂಡುಕೊಂಡೆನು ನಾನು ನನ್ನೊಳಗಿದೆ ಸೋಲೊಪ್ಪದ ಮುಗುಳ್ನಗೆ  ಗೊಂದಲದ ನಡುವೆ ಕಂಡುಕೊಂಡೆನು ನಾನು ಸೋಲಿಲ್ಲದ ಶಾಂತಿ ನನ್ನೊಳಗಿರುವುದನ್ನು ನನಗಿದು ಸಂತೋಷದ ವಿಷಯ, ಏಕೆಂದರೆ ಜಗತ್ತು ಎಷ್ಟೇ ಬಲವಾಗಿ ನೂಕಿದರೂ ನನ್ನನ್ನು ನನ್ನೊಳಗೇ ಇದೆ ಅದಕ್ಕಿಂತಲೂ ಬಲಶಾಲಿ, ಅದಕ್ಕಿಂತಲೂ ಸಮರ್ಥವಾದ ಎದುರಾಳಿ.

ನನ್ನ ಬದುಕಿದೆಯಲ್ಲ

ಇಮೇಜ್
ನನ್ನ ಬದುಕಿದೆಯಲ್ಲ ಮೂಲ.: ಲಿಯೋ ಮಾರ್ಕ್ಸ್ ಅನುವಾದ: ಸಿ ಪಿ ರವಿಕುಮಾರ್ ನನ್ನ ಈ ಬದುಕಿದೆಯಲ್ಲ ಅದೊಂದೇ ನನ್ನದೆಂಬುದು, ಮತ್ತು ಆ ಬದುಕು ನಿನ್ನದು. ಈ ಬದುಕಿನ ಬಗ್ಗೆ ನನಗಿರುವ ಆಸೆ ನಿನ್ನದು, ನಿನ್ನದು ನಿನ್ನದು! ನಾನು ನಿದ್ರಿಸಬಹುದು ನಾನು ವಿರಮಿಸಬಹುದು ಸಾವು ಕೂಡಾ ಒಂದು ಮಧ್ಯಂತರ ವಿರಾಮ. ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ  ಬೆರೆತ ನನ್ನ ಮನಃಶಾಂತಿ ನಿನ್ನದು, ನಿನ್ನದು, ನಿನ್ನದು!

ಒಬ್ಬಂಟಿ

ಇಮೇಜ್
 ಒಬ್ಬಂಟಿ ಮೂಲ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬಾಲ್ಯದಿಂದಲೂ ನಾನು ಇತರಿರಿಗಿಂತ ಭಿನ್ನ ನನ್ನ ಕಣ್ಣು ಕಾಣಲಿಲ್ಲ ಅವರು ಕಂಡದ್ದನ್ನ ತರಲಿಲ್ಲ ನಾನು ನನ್ನ ಭಾವಬಂಧ ಸಾರ್ವಜನಿಕ ಸರೋವರದಿಂದ  ನನ್ನ ದುಃಖಗಳ ಮೂಲ ಹುಡುಕಿದರೆ ಅದು ಸಾಮಾನ್ಯ ಸ್ರೋತಕ್ಕಿಂತ ಬೇರೆ ಎಲ್ಲರ ಮನಕ್ಕೂ ಮುದ ತರುವ ಇಂಚರ ನನ್ನೆದೆಯಲ್ಲಿ ತರದು ಯಾವುದೇ ಸಂಚಾರ ಮತ್ತು ಯಾವುದಕ್ಕೆ ಒಲಿಯಿತೋ ನನ್ನ ಮನ ಅಲ್ಲಿ ನನ್ನನ್ನುಳಿದು ಇರಲಿಲ್ಲ ಬೇರೆ ಜನ. ಎಂದೋ ಒಂದು ದಿನ ನನ್ನ ಬಾಲ್ಯದಲ್ಲಿ ಗುಡುಗುಮಳೆ ಜೀವನದ ಮುಂಬೆಳಗಿನಲ್ಲಿ ಒಳಿತು ಕೆಡಕುಗಳ ಆಳಗಳಿಂದೆದ್ದು ಬಂದ ರಹಸ್ಯಮಯ ಬಳ್ಳಿಯದೇ ಇಂದಿಗೂ ಬಂಧ: ಹಿಂಬಾಲಿಸುತ್ತದೆ ನನ್ನನ್ನು ಹೋದಲ್ಲೆಲ್ಲ ಇಣುಕುತ್ತದೆ ಮಳೆಯಲ್ಲಿ, ಇಣುಕುತ್ತದೆ ಹೊಳೆಯಲ್ಲಿ, ಕೆಂಪಾದ ಬೆಟ್ಟಗಳ ತುತ್ತತುದಿಯಲ್ಲಿ ಶಿಶಿರದ ಹೊಂಬೆಳಕಿನಲ್ಲಿ ಮಿಂದೆದ್ದ ಸೂರ್ಯ ಪೂರೈಸಿದಾಗ ನನ್ನನ್ನು ಸುತ್ತುವ ಕಾರ್ಯ ಮಳೆಯ ರಾತ್ರಿ ನನ್ನ ಮೇಲೆ ಕಪ್ಪು ಆಗಸದಲ್ಲಿ ಮಿಂಚಾಗಿ ಹೊಳೆಯುವುದು ಹಿನ್ನೆಲೆಯಲ್ಲಿ ಅಲ್ಲೊಂದು ಕಾರ್ಮೋಡ  ಉರುಳುತ್ತ ಬಂದು ನಿಂತಲ್ಲಿ ಕೋರೆ ದಾಡೆಗಳ ಬಾಯ್ತೆರೆದು ಸ್ವರ್ಗದಲ್ಲಿ ಬೇರೆಲ್ಲವೂ ನೀಲಿಯಾಗಿದ್ದರೂ ಕೂಡಾ ರಾಕ್ಷಸನಂತೆ ನನಗೆ ತೋರುತ್ತದೆ ಮೋಡ.

ಐಸ್ ಕ್ರೀಂ ಅಂಗಡಿಯಲ್ಲಿ

ಇಮೇಜ್
ಐಸ್ ಕ್ರೀಂ ಅಂಗಡಿಯಲ್ಲಿ  ಮೂಲ: ಬ್ರಯಾನ್ ಬಿಲ್ಸ್ಟನ್  ಅನುವಾದ: ಸಿಪಿ ರವಿಕುಮಾರ್ ಅವನೆಂದೂ ಸೇವಿಸದಿದ್ದರೂ ಅಜ್ಜನ ಬಳಿ ಇದ್ದೇ ಇರುತ್ತಿತ್ತು ಜೋಬಿನಲ್ಲಿ ಭದ್ರವಾಗಿ ತಂಬಾಕಿನ ಡಬ್ಬಿಯೊಂದು ಸದಾ ಅಲ್ಲಿ ಏನಿಟ್ಟುಕೊಂಡಿರುತ್ತೀಯಾ ಎಂದು ಅಣ್ಣ ಮತ್ತು ನಾನು ಕೇಳಿದಾಗ ಒಂದಿಷ್ಟು ಮರಳಿದೆ ಎಂದು ಉತ್ತರಿಸಿದ. ತಂಬಾಕಿನ ಡಬ್ಬಿಯಲ್ಲಿ ಯಾಕೆ ಮರಳು ಇಟ್ಟುಕೊಳ್ಳುತ್ತೀ ಎಂದು ಕೇಳಿದರೆ ಇನ್ನೆಲ್ಲಿ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸಿದ. ಹಾಗಲ್ಲ, ಮರಳನ್ನು ಯಾಕೆ ಇಟ್ಟುಕೊಳ್ಳುತ್ತೀ ಎಂದಾಗ  ಅದು ವಿಶೇಷ, ತಂದಿದ್ದೇನೆ ದೂರದ ಫ್ರಾನ್ಸ್ ದೇಶದಿಂದ. ನಾವು ಡಬ್ಬಿಯಲ್ಲಿ ಇಣುಕಿ ಎಷ್ಟು ದುರುಗುಟ್ಟಿ ನೋಡಿದರೂ ಏನೂ ವಿಶೇಷ ಅನ್ನಿಸಲಿಲ್ಲ ಫ್ರಾನ್ಸ್ ದೇಶದ ಮರಳು. ಅವನನ್ನೇ ಏನು ಇದರ ವಿಶೇಷವೆಂದು ಕೇಳಿದರೆ ಒಂದೊಂದು ಕಣವೂ ಒಬ್ಬ ಸ್ನೇಹಿತನ ಕುರುಹು. ಅಜ್ಜನಿಗೆ ಬಹಳ ಜನ ಇರಬಹುದು ಎಳೆತನದ ಸ್ನೇಹಿತರು, ಬಾಲ್ಯದಲ್ಲಿ ಅವರ ಜೊತೆ ಸಮುದ್ರಕ್ಕೆ ಹೋಗಿದ್ದೆಯಾ? ಹಾಗೇ ಅಂದುಕೊಳ್ಳಿ ಎಂದು ಅಜ್ಜ ಐಸ್ ಕ್ರೀಂ ಕೇಳಿದ ಒಂದು ಸಾದಾ, ಇನ್ನೆರಡರ ಮೇಲೆ ಕೆಂಪು ಸಕ್ಕರೆ ಪಾಕ.

ಹೇಸರಗತ್ತೆ ಪ್ರಶ್ನೆ

ಇಮೇಜ್
ಹೇಸರಗತ್ತೆ ಪ್ರಶ್ನೆ ಮೂಲ: ಶೆಲ್ ಸಿಲ್ವರ್ಸ್ಟೀನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮೃಗಾಲಯದಲ್ಲಿ ಕಂಡಾಗ  ಹೇಸರಗತ್ತೆ  ಕೇಳಿದೆ ಯಾವ ಬಣ್ಣದ್ದು ನಿನ್ನ ಪಟ್ಟೆ  ಬಿಳಿಮೈ ಮೇಲೆ ಕರಿಬಣ್ಣದ ಪಟ್ಟೆಯೋ  ಕರಿಮೈ ಮೇಲೆ ಬಿಳಿಬಣ್ಣದ್ದು ತೊಟ್ಟೆಯೋ ಹೇಸದೆ ಕೇಳಿತು ಹೇಸರಗತ್ತೆ ನನಗೆ ಮರುಪ್ರಶ್ನೆ ಹೇಳು ನೀನು ದುರಭ್ಯಾಸವುಳ್ಳ ಒಳ್ಳೆ ಹುಡುಗನೆ ಅಥವಾ ಒಳ್ಳೆ ಅಭ್ಯಾಸವಿರುವ ದುಷ್ಟನೋ ಏನು! ಗಲಾಟೆ ಎಬ್ಬಿಸುವ ಹುಡುಗನೋ ಮೂಲತಃ ನೀನು ಶಾಂತವಾಗಿರುವೆಯೋ ಒಮ್ಮೊಮ್ಮೆ ಅಥವಾ ಆಗಾಗ ಗಲಾಟೆ ಮಾಡಿದರೂ ಹೊಂದಿರುವೆಯಾ ಶಾಂತಮೂರ್ತಿ ಎಂಬ ಹೆಮ್ಮೆ ಆಗಾಗ ನಗುವ ಅಳುಬುರುಕನೋ  ಒಮ್ಮೊಮ್ಮೆ ಅಳುವ ನಗೆಬುರುಕನೋ ಒಪ್ಪವಾಗಿಟ್ಟುಕೊಳ್ಳುವೆಯಾ ನಿನ್ನ ವಸ್ತುಗಳನ್ನು ಹರಡಿರುತ್ತೀಯ ಒಮ್ಮೊಮ್ಮೆ ಮಾತ್ರ? ಅಥವಾ ಹರಡಿಕೊಂಡೇ ಇರುವುದೋ ನಿನ್ನ ವಸ್ತುಗಳು ಓರಣಗೊಳಿಸುತ್ತೀಯೋ ಒಮ್ಮೊಮ್ಮೆ ಮಾತ್ರ? ಹೀಗೆ ಕೇಳುತ್ತಲೇ ಇತ್ತು ಹೇಸರಗತ್ತೆ ಒಂದಾದ ಮೇಲೊಂದು ಪ್ರಶ್ನೆ ಕೇಳುವುದಿಲ್ಲ ಇನ್ನುಮುಂದೆ ಹೇಸರಗತ್ತೆಯನ್ನು ಎಂದೂ!

ನನ್ನ ಪುಸ್ತಕಗಳು ಹೋದ ಕಡೆ

ಇಮೇಜ್
ನನ್ನ ಪುಸ್ತಕಗಳು ಹೋದ ಕಡೆ ಮೂಲ: ಡಬ್ಲ್ಯು ಬಿ ಯೇಟ್ಸ್ ಅನುವಾದ: ಸಿ ಪಿ ರವಿಕುಮಾರ್ ನಾನು ಆರಿಸಿಕೊಂಡ ಎಲ್ಲಾ ಪದ ಸಮುಚ್ಚಯ ಮತ್ತು ನಾನು ಬರೆದ ಸಮಸ್ತ ಪದಗಳು ಬಿಚ್ಚಿ ರೆಕ್ಕೆಗಳನ್ನು ಹಾರಬೇಕು ನಿರಾಯಾಸ ವಿರಮಿಸಕೂಡದು ಎಲ್ಲೂ ಹಾರಾಟದ ನಡುವೆ, ಸೇರುವವರೆಗೂ ನಿನ್ನ ದುಃಖಿ ಹೃದಯವನ್ನು. ಅಲ್ಲಿ ನಿನಗಾಗಿ ಹಾಡಬೇಕು ರಾತ್ರಿಯಲ್ಲಿ, ದೂರದಲ್ಲಿ ಎಲ್ಲಿ ಚಲಿಸುವುದೋ ನೀರು ಕಾರ್ಮೋಡದಿಂದ ಕಪ್ಪಾಗಿ ಅಥವಾ ನಕ್ಷತ್ರದೀಪ್ತವಾಗಿ.

ಕಡಲ ಕಿನಾರೆಯಲ್ಲಿ

ಇಮೇಜ್
 ಕಡಲ ಕಿನಾರೆಯಲ್ಲಿ ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್ ಅನುವಾದ: ಸಿ ಪಿ ರವಿಕುಮಾರ್ ಕಡಲ ಕಿನಾರೆಗೆ ಹೋಗಿದ್ದೆ ನಾನು ಮರದ ಚುಚ್ಚುಕವನನ್ನು ಕೈಯಲ್ಲಿ ಹಿಡಿದು ಮರಳನ್ನು ಅಗೆದಗೆದು ತೆಗೆದೆ ಹೊರಗೆ. ಅಗೆದಲ್ಲಿ ಒಂದೊಂದು ಮರಳಿನ ಬಟ್ಟಲು, ಒಂದೊಂದರಲ್ಲೂ ಬಂದುಬಿಟ್ಟಿತು  ಕಡಲು, ಇನ್ನು ಬಾರಲು ಸಾಧ್ಯವಾಗದವರೆಗೆ.

ಕಾಫಿ ಬಂತು ಕಾಫಿ

ಇಮೇಜ್
ಮೂಲ: ಈ ಎಲ್ ಸಿಲ್ವೆಸ್ಟರ್ ಅನುವಾದ: ಸಿ ಪಿ ರವಿಕುಮಾರ್ ಪರಿಮಳ ತರುವಳು ಕಾಫಿಯ ಕಿತ್ತಲಿ, ಹೊಮ್ಮುವ ಬಿಸಿಬಿಸಿ ಕಾಫಿ ಹೊಗೆ! ತರುವಳು ಹರಿಣಿ ಹಾಲಿನ ಗಿಂಡಿ, ನಗುತಿದೆ ನೊರೆಹಾಲು ಮುಗುಳುನಗೆ! ಗಾಜಿನ ಬಟ್ಟಲು ತಂದಳು ಕಮಲಾ ನೋಡಿರಿ ಕಿಣಿ ಕಿಣಿ ಎನಿಸುತ್ತಾ! ಫಳ ಫಳ ಹೊಳೆಯುವ ಚಮಚದ ಗೊಂಚಲು ತಂದಳು ನೋಡಿ ಚಾರುಲತಾ! ಎಲ್ಲರಿಗಿಂತ ಕೊನೆಗೆ ಬಂದಿತು ನಮ್ಮ ಪುಟ್ಟಿ ತೂರಾಡುತ್ತಾ ಸಿಹಿಯಲ್ಲವೇ  ನೀನೆಲ್ಲರಿಗಿಂತ, ಸಕ್ಕರೆ ತಂದೆಯಾ, ಬಾ ಪುಟ್ಟಾ !

ಕುಂಭದ ಹಲವು ಮುಖಗಳು

ಇಮೇಜ್
ಕುಂಭದ ಹಲವು ಮುಖಗಳು ಸಿ ಪಿ ರವಿಕುಮಾರ್ ೧ ಪ್ರತಿದಿನವೂ ಓದುತ್ತಾರೆ  ಪ್ರತಿದಿನವೂ ನೋಡುತ್ತಾರೆ  ಕೋಟ್ಯಂತರ ಜನ. ಮುದುಡಿದೆ ಮನ ತಾವು ಹೋಗಲಾರದ ಮಹಾಕುಂಭಕ್ಕೆ ತುಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ ಹೇಗೆ ಹೋಗುವುದು ಅಲ್ಲಿಗೆ ದೂರದ ದಿಲ್ಲಿಗೆ ಇರಲು ಎಲ್ಲಿ ಸ್ಥಳ ಯೋಚಿಸಿ ವ್ಯಾಕುಲ ಹೋಗಲಾರದು ಮಹಾಕುಂಭಕ್ಕೆಂದು ಮಿಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ. ಪುಣ್ಯವಂತರು ಹೋಗಿ ಬಂದರು ಅಲ್ಲಿಂದ ಗಂಗೆ ತಂದರು ಪಾಪಿಗೆ ಇಷ್ಟೇ ಪ್ರಾಪ್ತಿ ಇಷ್ಟೇ ನಮ್ಮ ವ್ಯಾಪ್ತಿ ಶಿವರಾತ್ರಿ ಜಾಗರಣೆ ಉಪವಾಸ ಪಾರಣೆ ಡೊಂಕು ಮಣ್ಣು ನೆಲಕ್ಕೆ ಸಗಣಿ ಸಾರಣೆ ಎಂದು ಹತಾಶರಾಗುತ್ತಾರೆ. ೨ ಮೇಳಕ್ಕೆ ಬಂದಿಳಿದ ಜನ ಭದ್ರಮಾಡುತ್ತಾರೆ ಜೋಬಿನ ಧನ ಕಳೆದುಹೋಗುವ ಭಯ ಭದ್ರವಾಗಿ ಹಿಡಿದು ಕೈಯ ಮುಳುಗಿ ಏಳುತ್ತಾರೆ ಮೂಗು ಮುಚ್ಚಿಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು ಗೆದ್ದೆವು ಎಂದು ಬೀಗುತ್ತಾರೆ ಇಲ್ಲಿ ನಿಲ್ಲಿ ಬಂದು ಹತ್ತಿರ ಸರಿಯಾಗಿ ಉಟ್ಟುಕೊಳ್ಳಿ ಧೋತರ ತೆಗೆಯುತ್ತೇನೆ ಚಿತ್ರ, ನಗಬೇಕು, ಹಾಗೇಕೆ ಗಂಭೀರವಾಗಿರಬೇಕು ಎಲ್ಲರಿಗೂ ಸಿಕ್ಕುವುದೇ ಇಂಥ ಮಹಾಪ್ರವಾಸ ವಿಮಾನದಲ್ಲಿ ಕೂತು ಹೀಗೆ ನಿರಾಯಾಸ ಎಂದು ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ ಅಷ್ಟೆಲ್ಲಾ ಕೋಟಿ ಹಣ  ಗಳಿಸಿ ಏನು ಪ್ರಯೋಜನ ಅಮೇರಿಕಾದಲ್ಲಿ ಸಿಕ್ಕುವುದೇ ಮಹಾಕುಂಭ ಡಿಸ್ನಿ ಲ್ಯಾಂಡ್, ಲೇಕ್ ಟಾಹೋ ಅಂತೆಲ್ಲಾ ಜಂ...

ಹಳದಿ ಇಟ್ಟಿಗೆಗಳ ರಸ್ತೆ

ಇಮೇಜ್
ಹಳದಿ ಇಟ್ಟಿಗೆಗಳ ರಸ್ತೆ ಮೂಲ ಹಾಡು: ಬರ್ನಾರ್ಡ್ ಟಾಪಿನ್ ಮತ್ತು ಎಲ್ಟನ್ ಜಾನ್ ನೀನು ಬರುವುದು ಯಾವಾಗ? ಯಾವಾಗ ನೀನು ಬಂದಿಳಿಯುವುದು? ನಾನು ಹೊಲದಲ್ಲೇ ಇರಬೇಕಾಗಿತ್ತು ಅಪ್ಪನ ಮಾತು ಕೇಳಬೇಕಾಗಿತ್ತು ನೀನು ನನ್ನನ್ನು ಸದಾಕಾಲ ಹಿಡಿದಿಡಲಾರೆ ನಾನೇನೂ ನಿನಗೆ ಬರೆದುಕೊಟ್ಟಿಲ್ಲ  ನಿನ್ನ ಗೆಳೆಯರು ತೆರೆದು ನೋಡಲು ನಾನೊಂದು ಉಡುಗೊರೆಯಲ್ಲ ಈ ಹುಡುಗನದು ಶೋಕಗೀತೆ ಹಾಡುತ್ತಾ  ಕೂಡುವ ವಯಸ್ಸಲ್ಲ ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ ನೀನು ಪೆಂಟ್ ಹೌಸಿನಲ್ಲಿ ನನ್ನನ್ನು ನೆಡಲಾರೆ ಇಗೋ ಮರಳುತ್ತಿರುವೆ ನನ್ನ ನೇಗಿಲಿಗೆ. ಮರಳುತ್ತಿರುವೆ ನಾನು ಗೂಬೆಗಳ ಗುಟುರಿಗೆ ಮರಳುತ್ತಿರುವೆ ನಾನು ಕಪ್ಪೆಗಳ ವಟರಿಗೆ  ಹಳದಿ ಇಟ್ಟಿಗೆಗಳ ರಸ್ತೆಗಳ ಆಚೆಗಿದೆ  ನನ್ನ ಭವಿಷ್ಯವೆಂದು ನಾನು ನಿರ್ಧರಿಸಿರುವೆ. ನೀನು ಏನು ಮಾಡಬಹುದೆಂದು ಯೋಚಿಸುತ್ತೇನೆ. ವಿಮಾನವನ್ನು ಹೊಡೆದು ಉರುಳಿಸುತ್ತೀಯ ತಾನೇ? ಒಂದೆರಡು ಪೆಗ್ ವೋಡ್ಕಾ ಮತ್ತು ಟಾನಿಕ್  ಮತ್ತೆ ಮೇಲೆದ್ದು ನಿಲ್ಲಲು ನಿನಗೆ ಇಷ್ಟು ಸಾಕು ನನ್ನ ಬದಲಿಗೆ ಹಾಕಿಕೊಳ್ಳುವೆ ಯಾರನ್ನೋ ಬೇರೆ ನನ್ನಂಥವರು ಬೇಕಾದಷ್ಟು ಜನ ಸಿಕ್ಕುತ್ತಾರೆ ಬಿಡಿಗಾಸಿಗೂ ಗತಿ ಇಲ್ಲದ ಬೀದಿನಾಯಿಗಳು ನೆಲದ ಮೇಲೆ ಬಿದ್ದ ನಿನ್ನಂಥ ಚೂರುಪಾರನ್ನು ಹುಡುಕುವವರು ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ...